ADVERTISEMENT

‘ಕಾಂತಾರ’ ವಿರುದ್ಧ ಕೃತಿಚೌರ್ಯ ಆರೋಪ: ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಸಂಸ್ಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2022, 3:16 IST
Last Updated 25 ಅಕ್ಟೋಬರ್ 2022, 3:16 IST
   

ಬೆಂಗಳೂರು: ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ‘ಕಾಂತಾರ’ ಚಿತ್ರದ ಹಾಡೊಂದಕ್ಕೆ ಆಕ್ಷೇಪಣೆ ಎತ್ತಿದ್ದು, ಕೃತಿಚೌರ್ಯದ ಆರೋಪ ಮಾಡಿದೆ. ಈ ವಿಷಯವಾಗಿ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.

‘ಕಾಂತಾರ’ ಚಿತ್ರತಂಡದಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ‘ಥೈಕ್ಕುಡಮ್ ಬ್ರಿಡ್ಜ್’ ಈ ಬಗ್ಗೆ ಪ್ರಚಾರ ಮಾಡುವಂತೆ ಬೆಂಬಲಿಗರನ್ನು ಉದ್ದೇಶಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸೋಮವಾರ ಪೋಸ್ಟ್ ಹಾಕಿದೆ.

‘ತೈಕ್ಕುಡಂ ಬ್ರಿಡ್ಜ್‌’ಗೂ ‘ಕಾಂತಾರ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ನಮ್ಮ ಕೇಳುಗರು ತಿಳಿದುಕೊಳ್ಳಬೇಕು. ನಮ್ಮ ‘ನವರಸಂ’ ಮತ್ತು ಕಾಂತಾರದ ‘ವರಾಹ ರೂಪಂ’ ಹಾಡಿನ ನಡುವೆ ಸ್ಪಷ್ಟ ಹೋಲಿಕೆಗಳು ಕಂಡು ಬಂದಿವೆ. ಆದ್ದರಿಂದ ಇದು ಹಕ್ಕುಸ್ವಾಮ್ಯ ಕಾನೂನುಗಳ ಉಲ್ಲಂಘನೆಯಾಗಿದೆ’ ಎಂದು ‘ಥೈಕ್ಕುಡಮ್ ಬ್ರಿಡ್ಜ್‌’ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.

‘ನಮ್ಮ ದೃಷ್ಟಿಕೋದಲ್ಲಿ ‘ಸ್ಫೂರ್ತಿ’ ಮತ್ತು ‘ಚೌರ್ಯ’ ಎರಡೂ ವಿಭಿನ್ನ ಮತ್ತು ನಿರ್ವಿವಾದ. ಆದ್ದರಿಂದ ನಾವು ಇದಕ್ಕೆ ಕಾರಣವಾದ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಯಸುತ್ತೇವೆ’ ಎಂದು ಅದು ಹೇಳಿದೆ.

‘ಈ ವಿಷಯದಲ್ಲಿ ನಾವು ನಮ್ಮ ಕೇಳುಗರ ಬೆಂಬಲವನ್ನು ಅಪೇಕ್ಷಿಸುತ್ತೇವೆ. ಈ ಬಗ್ಗೆ ಪ್ರಚಾರ ಮಾಡಲು ನಿಮ್ಮನ್ನು ನಾವು ಕೋರುತ್ತೇವೆ. ಅಲ್ಲದೆ, ಸಂಗೀತದ ಹಕ್ಕುಸ್ವಾಮ್ಯವನ್ನು ರಕ್ಷಿಸುವ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಹ ಕಲಾವಿದರನ್ನು ನಾವು ವಿನಂತಿಸುತ್ತೇವೆ’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದು, ಉತ್ತಮ ಗಳಿಕೆಯ ಮಾಡಿದೆ. ‘ತೈಕ್ಕುಡಂ ಬ್ರಿಡ್ಜ್’ ಆಕ್ಷೇಪಣೆ ಎತ್ತಿರುವ ಹಾಡಿಗೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.