ADVERTISEMENT

ಆರಂಭದಲ್ಲೇ ವಿಘ್ನ: ದಳಪತಿ ವಿಜಯ್ ನಟನೆಯ ಜನ ನಾಯಗನ್ ಬಿಡುಗಡೆ ದಿನಾಂಕ ಮುಂದೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2026, 5:48 IST
Last Updated 8 ಜನವರಿ 2026, 5:48 IST
<div class="paragraphs"><p>ದಳಪತಿ ವಿಜಯ್</p></div>

ದಳಪತಿ ವಿಜಯ್

   

ಚಿತ್ರ: ಇನ್‌ಸ್ಟಾಗ್ರಾಂ

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಕೊನೆ ಕ್ಷಣದಲ್ಲಿ ವಿಘ್ನ ಎದುರಾಗಿದೆ. ನಾಳೆ ಜ.9ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿದ್ದ ‘ಜನ ನಾಯಗನ್’ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ADVERTISEMENT

ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಕನ್ನಡದ ಪ್ರೊಡಕ್ಷನ್ ಸಂಸ್ಥೆ ಕೆವಿಎನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿರುವ ಸುದ್ದಿ ಕೇಳಿ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ. ಸೆನ್ಸಾರ್‌ ಪತ್ರ ಸಿಗದೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.

ಕೆವಿಎನ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?

‘ಕೆಲವು ತಾಂತ್ರಿಕ ಮತ್ತು ನಿರ್ಮಾಣ ಸಂಬಂಧಿತ ಕಾರಣಗಳಿಂದ ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಮುಂದೂಡಲಾಗಿದೆ. ಅಭಿಮಾನಿಗಳ ಉತ್ಸಾಹ ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೇವೆ. ಸಿನಿಮಾ ಬಿಡುಗಡೆಯ ಹೊಸ ದಿನಾಂಕವನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು. ಅಲ್ಲಿಯವರೆಗೆ, ತಾಳ್ಮೆಯಿಂದ ಇರಬೇಕೆಂದು ವಿನಂತಿಸುತ್ತೇವೆ. ನಿಮ್ಮ ಬೆಂಬಲವೇ ನಮ್ಮ ದೊಡ್ಡ ಶಕ್ತಿಯಾಗಿದೆ’ ಎಂದು ಉಲ್ಲೇಖಿಸಲಾಗಿದೆ.

‘ಜನ ನಾಯಗನ್’ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಬಹಳಷ್ಟು ಕಾತುರದಿಂದ ಕಾಯುತ್ತಿದ್ದರು. ವೆಂಕಟ್ ಕೆ.ನಾರಾಯಣ ನಿರ್ಮಾಣದ ಈ ದೊಡ್ಡ ಬಜೆಟ್ ಚಿತ್ರವನ್ನು ಎಚ್. ವಿನೋತ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಚಿತ್ರಗ್ರಹಣ, ಆನ್ಲ್ ಅರಸು ಸಾಹಸ, ಪ್ರದೀಪ್ ಇ. ರಾಘವ ಸಂಕಲನ, ಶೇಖರ್ ವಿ.ಜಿ., ಸುಧನ್ ನೃತ್ಯ ನಿರ್ದೇಶನವಿದೆ. ದಳಪತಿ ವಿಜಯ್ ನಟನೆಯ 69ನೇ ಚಿತ್ರ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.