
ಗಣೇಶ್ ನಟನೆಯ ‘ತಮ್ಮ ಸುಖಾಗಮನ ಬಯಸುವ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ವಿಭಿನ್ನ ಶೀರ್ಷಿಕೆ ಸಿನಿಮಾಗಳಿಂದಲೇ ಗಮನ ಸೆಳೆದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ಶಿಲ್ಪಾ ಗಣೇಶ್ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
‘ನನ್ನ ಸಿನಿಪಯಣದ ಗೋಲ್ಡನ್ ದಿನವಿದು. ನಾನು ಎಂಜಿನಿಯರಿಂಗ್ ಓದುತ್ತಿದ್ದಾಗ ಚಿತ್ರಮಂದಿರದಲ್ಲಿ ನೋಡಿದ ಸಿನಿಮಾ ‘ಮುಂಗಾರು ಮಳೆ’. ಅದೇ ರೀತಿಯ ಸಿನಿಮಾವೊಂದನ್ನು ಗಣೇಶ್ ಅವರಿಗೆ ಮಾಡಬೇಕೆಂಬ ಕನಸಿತ್ತು. ‘ಹೊಂದಿಸಿ ಬರೆಯಿರಿ’ ಚಿತ್ರದ ನಂತರ ಈ ಸಿನಿಮಾ ಮಾಡಬೇಕಿತ್ತು. ಈಗ ಕಾಲ ಕೂಡಿ ಬಂದಿದೆ. ಶೀರ್ಷಿಕೆ ಸಿನಿಮಾಗೆ ಆಹ್ವಾನ ಪತ್ರಿಕೆಯಾಗಿರಬೇಕು, ಜನರಿಗೆ ಆಪ್ತವಾಗಿರಬೇಕು ಎಂಬುದು ನನ್ನ ಭಾವನೆ. ಅದಕ್ಕೆ ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೇವೆ. ಅರ್ಜುನ್ ಜನ್ಯ ಸಂಗೀತವಿದೆ. ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ’ ಎಂದರು ನಿರ್ದೇಶಕ.
ವೈಷ್ಣವಿ ಸಿನಿಮಾಸ್ ಮೂಲಕ ಲೋಹಿತ್ ಬಂಡವಾಳ ಹೂಡುತ್ತಿದ್ದಾರೆ. ‘ಇದು ನನ್ನ 45ನೇ ಸಿನಿಮಾ. ಬೆಂಗಳೂರಿಗೆ ಬಂದಾಗ 19 ವರ್ಷವಾಗಿತ್ತು. 2006ರಲ್ಲಿ ‘ಮುಂಗಾರು ಮಳೆ’ ಆಗಿದ್ದು. ಅಲ್ಲಿಂದ 20 ವರ್ಷ ಕಳೆದಿದ್ದು ಗೊತ್ತೇ ಆಗಲಲಿಲ್ಲ. ಗೆಲುವಾಗಲಿ, ಸೋಲಾಗಲಿ, ಯಾವುದನ್ನೂ ತಲೆಮೇಲೆ ಹೊತ್ತುಕೊಂಡು ಹೋಗುವುದಿಲ್ಲ. ಎಲ್ಲವನ್ನೂ ಒಂದೇ ರೀತಿ ಸ್ವೀಕರಿಸುತ್ತೇನೆ. ಒಂದು ಸಿನಿಮಾವನ್ನು ಯಾರೂ ಸೂಪರ್ ಹಿಟ್ ಮಾಡಲು ಸಾಧ್ಯವಿಲ್ಲ. ಅದು ತಾನಾಗಿಯೇ ಆಗಬೇಕು. ಶ್ರಮವಷ್ಟೆ ನಮ್ಮದು ಎಂದು ನಂಬಿರುವೆ. ಈ 20 ವರ್ಷಗಳ ಪಯಣದಲ್ಲಿ ಸಾಕಷ್ಟು ನೆನಪುಗಳಿವೆ. ಇದು ಒಂದು ಹೆಜ್ಜೆಯಷ್ಟೆ. ಇಡಬೇಕಾದ ಹೆಜ್ಜೆಗಳು ಸಾಕಷ್ಟಿವೆ. ಮನುಷ್ಯನ ಭಾವನೆಗಳನ್ನು ತುಂಬ ಚೆನ್ನಾಗಿ ಹಿಡಿದಿಡುವ ನಿರ್ದೇಶಕ ಜಗನ್ನಾಥ್. ಅವರ ಸಿನಿಮಾಗಳ ಶೀರ್ಷಿಕೆ ಬಹಳ ಚೆನ್ನಾಗಿರುತ್ತವೆ. ಅದೇ ರೀತಿ ಈ ಚಿತ್ರಕ್ಕೂ ಒಳ್ಳೆಯ ಶೀರ್ಷಿಕೆ ನೀಡಿದ್ದಾರೆ. ಒಂದು ಭಾವನಾತ್ಮಕ ಚಿತ್ರವಿದು. ನಗುವಿನಲ್ಲಿಯೇ ಅಳು ತರಿಸುವ ಸಿನಿಮಾ. ಹಾಸ್ಯಕ್ಕೂ ಸಾಕಷ್ಟು ಒತ್ತು ನೀಡಿದ್ದೇವೆ’ ಎಂದರು ಗಣೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.