
2023ರಲ್ಲಿ ತೆರೆಕಂಡ ‘ದಿ ಕೇರಳ ಸ್ಟೋರಿ’ ವಿವಾದಗಳ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿತ್ತು. ಅದರ ಮುಂದುವರಿದ ಕಥೆ ‘ದಿ ಬಿಯಾಂಡ್ ದಿ ಕೇರಳ ಸ್ಟೋರಿ’ ಚಿತ್ರ ಫೆ.27ರಂದು ತೆರೆಗೆ ಬರಲಿದೆ ಎಂದು ಸನ್‌ಶೈನ್ ಪಿಕ್ಚರ್ಸ್ ಹೇಳಿದೆ.
‘ದಿ ಬಿಯಾಂಡ್ ದಿ ಕೇರಳ ಸ್ಟೋರಿ’ಗೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಕಮಖ್ಯ ನಾರಾಯಣ ಸಿಂಗ್ ನಿರ್ದೇಶನವಿದೆ. ವಿಪುಲ್ ಅಮೃತ್‌ಲಾಲ್ ಹಾಗೂ ಸನ್‌ಶೈನ್ ಪಿಕ್ಚರ್ಸ್ ನಿರ್ಮಾಣವಿದೆ. ಚಿತ್ರದ ಚಿತ್ರೀಕರಣ, ತಾರಾಗಣ ಹಾಗೂ ಇನ್ನಿತರ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ‘ಇನ್ನಷ್ಟು ನೈಜ ಸಂತ್ರಸ್ತರ ಕಥೆಯನ್ನು ಈ ಭಾಗದಲ್ಲಿ ಹೇಳಿದ್ದೇವೆ. ಇದು ನಮ್ಮದೇ ನೆರೆಹೊರೆಯವರ ಕಥೆ’ ಎಂದು ನಿರ್ಮಾಣ ಸಂಸ್ಥೆ ಹೇಳಿದೆ. ಚಿತ್ರ ಬಿಡುಗಡೆ ದಿನಾಂಕ ಘೋಷಿಸುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
ಸುದಿಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ಯಲ್ಲಿ ಕೇರಳವು ಲವ್ ಜಿಹಾದ್‌ನ ಕೇಂದ್ರವಾಗಿದೆ. ಅವರ ಧರ್ಮಕ್ಕೆ ಮತಾಂತರಗೊಳಿಸಲು ಸಿರಿಯಾಕ್ಕೆ ಕರೆದೊಯ್ಯಲಾಗುತ್ತದೆ ಎಂದು ತೋರಿಸಲಾಗಿತ್ತು. ಇದಕ್ಕೆ ಕೇರಳ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕೇರಳಕ್ಕೆ ಕಳಂಕ ತರುವ ವ್ಯವಸ್ಥಿತ ಹುನ್ನಾರವಿದು ಎಂದು ಆರೋಪಿಸಿತ್ತು. ಇವುಗಳೆಲ್ಲದರ ನಡುವೆ ₹300 ಕೋಟಿ ಬಾಚಿದ ಚಿತ್ರ ಎರಡು ರಾಷ್ಟ್ರಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.