
ಚಂದು ಗೌಡ, ನಟ ದರ್ಶನ್
ಚಿತ್ರ: ಇನ್‌ಸ್ಟಾಗ್ರಾಂ
ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದ ಇದೇ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ಹೀಗಾಗಿ ಡೆವಿಲ್ ಚಿತ್ರದ ಪ್ರಮೋಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿವೆ. ಅದರಂತೆ ನಾಳೆ (ಶುಕ್ರವಾರ) ಡಿಸೆಂಬರ್ 5ರಂದು ದಿ ಡೆವಿಲ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ವಿಶೇಷ ಏನೆಂದರೆ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ನಟ ಚಂದು ಗೌಡ ಅವರು ಡೆವಿಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ದರ್ಶನ್ ಅವರೊಟ್ಟಿಗೆ ಭಾಗಿಯಾಗಿದ್ದ ಚಂದು ಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಅದರ ಜೊತೆಗೆ ‘ದಿ ಡೆವಿಲ್ ಸಿನಿಮಾ ಸೆಟ್‌ಗಳಲ್ಲಿ ಮರೆಯಲಾಗದ ಕ್ಷಣಗಳು ಇವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಕೆಲಸ ಮಾಡಿದ್ದು ಜೀವಮಾನ ನೆನಪಿನಲ್ಲಿ ಉಳಿಯುತ್ತದೆ. ಡಿಸೆಂಬರ್ 11ರಂದು ಚಿತ್ರಮಂದಿರಗಳಲ್ಲಿ ‘ದಿ ಡೆವಿಲ್’ ಸಿನಿಮಾ ನೋಡಲು ತಪ್ಪಿಸಿಕೊಳ್ಳಬೇಡಿ’ ಎಂದು ಬರೆದುಕೊಂಡಿದ್ದಾರೆ.
ಇನ್ನು, ‘ಲಕ್ಷ್ಮೀ ಬಾರಮ್ಮ’, ‘ತ್ರಿನಯನಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟ ಚಂದು ಅವರು ಕೇವಲ ಕಿರುತೆರೆಯಲ್ಲಿ ಅಷ್ಟೇ ಅಲ್ಲದೇ ಹಿರಿತೆರೆಯಲ್ಲೂ ನಟಿಸಿದ್ದಾರೆ. ‘ಅಟೆಂಪ್ಟ್ ಟು ಮರ್ಡರ್’, ‘ಕೃಷ್ಣ ಗಾರ್ಮೆಂಟ್ಸ್’ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಬಹು ನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ದಿ ಡೆವಿಲ್ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.