ADVERTISEMENT

ಪುಟ್ಟಣ್ಣ ಕಣಗಾಲ್‌ ಮನೆ ಸ್ಮಾರಕವಾಗಿ ಅಭಿವೃದ್ಧಿ

ಚಲನಚಿತ್ರ ಅಕಾಡೆಮಿಯಿಂದ ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 9:00 IST
Last Updated 21 ಫೆಬ್ರುವರಿ 2022, 9:00 IST
ಪುಟ್ಟಣ್ಣ ಕಣಗಾಲ್‌
ಪುಟ್ಟಣ್ಣ ಕಣಗಾಲ್‌   

ಬೆಂಗಳೂರು: ಖ್ಯಾತ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್‌ ಅವರ ಮನೆಯನ್ನು ಸ್ಮಾರಕ ಮತ್ತು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರ್ಧರಿಸಿದೆ.

ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್‌ ಗ್ರಾಮದಲ್ಲಿರುವ ಈ ಮನೆ ಶಿತಿಲಾವಸ್ಥೆಗೊಂಡಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅಕಾಡೆಮಿ ಈ ಕುರಿತು ನಿರ್ಧಾರ ಕೈಗೊಂಡಿದೆ.

ಸುನೀಲ್‌ ಪುರಾಣಿಕ್‌

‘ಇತ್ತೀಚೆಗೆ ನಡೆದ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ, ಸದಸ್ಯರೊಬ್ಬರು ಮೈಸೂರಿನ ಪಿರಿಯಾಪಟ್ಟಣದಲ್ಲಿರುವ ಪುಟ್ಟಣ್ಣ ಕಣಗಾಲ್‌ ಅವರ ಮನೆಯ ದುಃಸ್ಥಿತಿಯ ಬಗ್ಗೆ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಈ ಕುರಿತು ಪ್ರಸ್ತಾಪ ಮಾಡಿದ್ದರು. ಈ ಸಂದರ್ಭದಲ್ಲಿ, ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಮನೆ ಹಾಗೂ ಧಾರವಾಡದಲ್ಲಿರುವ ಬೇಂದ್ರೆ ಅವರ ಸ್ಮಾರಕದಂತೆ, ಪುಟ್ಟಣ್ಣ ಕಣಗಾಲ್‌ ಅವರ ಮನೆಯನ್ನು ಅಭಿವೃದ್ಧಿಗೊಳಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು’ ಎಂದು ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪುಟ್ಟಣ್ಣ ಕಣಗಾಲ್‌ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ, ಅವರ ಚಿತ್ರಗಳ ಪೋಸ್ಟರ್‌, ಚಿತ್ರೀಕರಣದ ದೃಶ್ಯಾವಳಿಗಳು ಜೊತೆಗೆ ಸಾಧನೆಗಳನ್ನು ಬಿಂಬಿಸುವ ಸ್ಮಾರಕ, ಗ್ರಂಥಾಲಯವನ್ನು ಒಳಗೊಂಡ ವಸ್ತು ಸಂಗ್ರಹಾಲಯದಂತೆ ಮನೆಯನ್ನು ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ಕಲಾವಿದರ ಸಂಘ, ನಿರ್ಮಾಪಕರ ಸಂಘ ಹೀಗೆ ಎಲ್ಲ ಒಕ್ಕೂಟಗಳ ಬೆಂಬಲವನ್ನು ಕೋರಲಾಗಿದೆ. ಇದಕ್ಕೆ ಎಲ್ಲರೂ ಒಕ್ಕೊರಲಿನಿಂದ ಬೆಂಬಲ ನೀಡಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲು ಒಪ್ಪಿದ್ದಾರೆ. ಪ್ರಸ್ತುತ ನಾವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಈ ಕಾರ್ಯಕ್ರಮ ಆದ ಬಳಿಕ ಅಥವಾ ಚಿತ್ರೋತ್ಸವದ ಸಂದರ್ಭದಲ್ಲೇ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದ್ದೇವೆ’ ಎಂದರು ಪುರಾಣಿಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.