ADVERTISEMENT

ನಿರ್ದೇಶನದಲ್ಲಿ ಜವಾಬ್ದಾರಿ ಹೆಚ್ಚು: ರಂಜನಿ ರಾಘವನ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 13:51 IST
Last Updated 20 ಏಪ್ರಿಲ್ 2025, 13:51 IST
ರಂಜನಿ ರಾಘವನ್‌
ರಂಜನಿ ರಾಘವನ್‌   

ನಟಿ, ಬರಹಗಾರ್ತಿ ರಂಜನಿ ರಾಘವನ್‌ ಈಗ ನಿರ್ದೇಶಕಿ ಕ್ಯಾಪ್‌ ತೊಟ್ಟಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ‘ಡಿಡಿ ಡಿಕ್ಕಿ’ ಚಿತ್ರದ ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಿರ್ದೇಶನದಲ್ಲಿ ಇರುವ ಸವಾಲುಗಳ ಬಗ್ಗೆ ಅವರು ಮಾತನಾಡಿದ್ದಾರೆ...

‘ಕಳೆದ ಆರು–ಏಳು ವರ್ಷಗಳಿಂದ ನಟನೆ ಜೊತೆಗೆ ಕಥೆ, ಚಿತ್ರಕಥೆ ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಂಡಿರುವೆ. ಬರೆಯುವಾಗ ಚಿತ್ರದ ಸನ್ನಿವೇಶಗಳು ಕಣ್ಮುಂದೆ ಬರುತ್ತಿತ್ತು. ಆಗಲೇ ನನಗೆ ನಿರ್ದೇಶಕಿಯಾಗಬೇಕೆಂಬ ಕನಸು ಶುರುವಾಗಿದ್ದು. ಯೋಗರಾಜ್‌ ಭಟ್‌, ತರುಣ್‌ ಸುಧೀರ್‌ ಮೊದಲಾದವರ ತಂಡದಲ್ಲಿ ಕೆಲಸ ಮಾಡಿದ್ದೇನೆ. ಕೆಲ ಸಿನಿಮಾಗಳಿಗೆ ಘೋಸ್ಟ್‌ ರೈಟರ್‌ ಆಗಿದ್ದೆ. ಇದರಿಂದಾಗಿ ಎರಡು ವರ್ಷಗಳ ಹಿಂದೆ ನಿರ್ದೇಶಕಿಯಾಗಬೇಕೆಂಬ ಹಂಬಲ ಹೆಚ್ಚಾಯಿತು’ ಎಂದು ಮಾತು ಪ್ರಾರಂಭಿಸಿದರು ರಂಜನಿ.

‘ಪುಟ್ಟಗೌರಿ ಮದುವೆ’ ಧಾರವಾಹಿಯಿಂದ ಮನೆಮಾತದ ರಂಜನಿ, ‘ಕನ್ನಡತಿ’ ನಟನೆ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು. ‘ಇಷ್ಟದೇವತೆ’ ಮೂಲಕ ಕಿರುತೆರೆ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡರು. ‘ರಾಜಹಂಸ’ ನಾಯಕಿಯಾಗಿ ಮೊದಲ ಸಿನಿಮಾ. ‘ಕನ್ನಡತಿ’ ಬಳಿಕ ಕಿರುತೆರೆಯಿಂದ ಹೊರಬಂದ ಅವರು ತಮ್ಮ ಈ ಚಿತ್ರದ ಕೆಲಸ ಪ್ರಾರಂಭಿಸಿದರು. 

ADVERTISEMENT

‘ನನಗಾಗಿ ಬಹಳಷ್ಟು ಕಥೆಗಳನ್ನು ಬರೆದುಕೊಂಡಿದ್ದೆ. ಆದರೆ ಯಾವುದೂ ಸಿನಿಮಾವಾಗುವ ಮಟ್ಟಕ್ಕೆ ಹೋಗಲಿಲ್ಲ. ಈ ಚಿತ್ರದ ಕಥೆಯನ್ನು ನನ್ನ ಸಂಬಂಧಿಯೊಬ್ಬರಿಗೆ ಹೇಳಿದಾಗ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದರು. ಅಲ್ಲಿಂದ ಪಯಣ ಪ್ರಾರಂಭವಾಯಿತು. ರಂಗಭೂಮಿಯಲ್ಲಿ ನಾಟಕವೊಂದು ‍ಶುರುವಾಗುವಂತೆ ಪ್ರಾರಂಭಗೊಂಡ ಜರ್ನಿಯಿದು. ಸಾಗುತ್ತ ದಾರಿಯಲ್ಲಿ ಒಬ್ಬೊಬ್ಬರೇ ಸೇರಿಕೊಂಡು ಇಲ್ಲಿಗೆ ಬಂದು ನಿಂತಿದೆ’ ಎನ್ನುತ್ತಾರೆ ಅವರು.

ಈ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್‌ ಮುಖ್ಯಪಾತ್ರಧಾರಿ. ಅವರ ಮಗನಾಗಿ ನಟ ಗಣೇಶ್‌ ಪುತ್ರ ವಿಹಾನ್‌ ಬಣ್ಣ ಹಚ್ಚಿದ್ದಾರೆ. ನಿರ್ದೇಶಕರಾದ ತರುಣ್‌ ಸುಧೀರ್‌ ಹಾಗೂ ಜಡೇಶ್‌ ಹಂಪಿ ತಾಂತ್ರಿಕವಾಗಿ ಈ ಚಿತ್ರತಂಡದ ನೆರವಿಗೆ ನಿಂತು ಚಿತ್ರದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇಳಯ ರಾಜ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

‘ಶೇ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಪ್ರತಿ ಮನೆಯಲ್ಲಿ ನಡೆಯುವ ಘಟನೆಗಳೇ ಚಿತ್ರವಾಗಿದೆ. ಕೌಟಂಬಿಕ, ಹಾಸ್ಯಮಯ ಕಥಾಹಂದರವಿದೆ. ಈ ವರ್ಷದ ಅಂತ್ಯಕ್ಕೆ ಚಿತ್ರ ತೆರೆಗೆ ತರುವ ಆಲೋಚನೆಯಿದೆ. ನಿರ್ದೇಶಕಿಯಾಗಿ ಎಲ್ಲರಿಗೂ ನಾನೇ ಉತ್ತರ ನೀಡಬೇಕು. ತಂಡವನ್ನು ಮುನ್ನಡೆಸಬೇಕು. ನಾವು ಸರಳವಾಗಿ, ಖುಷಿಯಾಗಿ ಇದ್ದಾಗ ತಂಡವೂ ಉತ್ತಮವಾಗಿರುತ್ತದೆ. ನಟನೆಗಿಂತ ನಿರ್ದೇಶನದಲ್ಲಿ ಜವಾಬ್ದಾರಿ ಹೆಚ್ಚು. ಚಿತ್ರದ ಕಥೆ ತನಗೆ ಬೇಕಾಗಿದ್ದೆಲ್ಲವನ್ನೂ ಪಡೆದುಕೊಳ್ಳುತ್ತಿದೆ. ಎಲ್ಲವೂ ತಾನಾಗಿಯೇ ಕೂಡಬರುತ್ತಿದೆ. ಉತ್ತಮ ಚಿತ್ರ ನೀಡುತ್ತೇವೆ ಎಂಬ ಭರವಸೆಯಿದೆ’ ಎಂದರು.

ಅಂದಹಾಗೆ ಈ ಚಿತ್ರದಲ್ಲಿ ಅವರು ಕೂಡ ನಟಿಸುತ್ತಿದ್ದಾರಾ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ‘ಹೊರ ಊರಿನಿಂದ ಬೆಂಗಳೂರಿಗೆ ಬಂದು ಊರಿನ ಬಗ್ಗೆ ಹಪಹಪಿಸುವ ಪಾತ್ರ ಪ್ರೇಮ್‌ ಅವರದ್ದು. ಹಾಗಂತ ಇದೇ ಪೂರ್ತಿ ಕಥೆಯಲ್ಲ. ಮಿಕ್ಕ ಮಾಹಿತಿಗಳನ್ನು ಹಂತಹಂತವಾಗಿ ನೀಡುತ್ತೇವೆ. ಸಿನಿಮಾ ಪೂರ್ಣಗೊಳಿಸುವುದು ಸದ್ಯದ ಗುರಿ’ ಎಂದು ಮಾತಿಗೆ ವಿರಾಮವಿತ್ತರು. 

ಪ್ರೇಮ್‌ ವಿಹಾನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.