ನವದೆಹಲಿ: ‘ಯಾರದ್ದೋ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಸಿನಿಮಾ, ಸ್ಟ್ಯಾಂಡ್ ಅಪ್ ಕಾಮಿಡಿ ಅಥವಾ ಕವನ ವಾಚನಗಳಿಗೆ ತಡೆ ನೀಡಲಾಗದು’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ನಿರ್ಬಂಧ ಹೇರಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾ. ಉಜ್ಜಲ್ ಭುಯಾನ್ ಮತ್ತು ನ್ಯಾ. ಮನಮೋಹನ್ ಅವರಿದ್ದ ಪೀಠವು, ‘ಸಿನಿಮಾಗೆ ತಡೆಯೊಡ್ಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಿತು.
‘ಭಾರತದಲ್ಲಿ ಭಾವನೆಗಳಿಗೆ ಧಕ್ಕೆ ಉಂಟಾಗುವ ಪ್ರಸಂಗಗಳಿಗೆ ಕೊನೆಯಿಲ್ಲ. ಹಾಸ್ಯ ಕಲಾವಿದರು ಏನಾದರೂ ಹೇಳಿದರೆ ಕೆಲವರ ಭಾವನೆಗಳಿಗೆ ಧಕ್ಕೆಯುಂಟಾಗಿ ಪ್ರತಿಭಟನೆ ನಡೆಸಿ ವಿಧ್ವಂಸಕತೆ ಮೆರೆಯುತ್ತಾರೆ. ಹೀಗಾದರೆ ನಾವು ಎತ್ತ ಸಾಗುತ್ತಿದ್ದೇವೆ? ಒಂದು ಪ್ರತಿಭಟನೆಗಾಗಿ ಸಿನಿಮಾ ಪ್ರದರ್ಶನ ನಿಲ್ಲಿಸಬೇಕೇ ಅಥವಾ ಸ್ಟ್ಯಾಂಡ್ ಅಪ್ ಕಾಮಿಡಿಗೆ ತಡೆ ನೀಡಬೇಕೇ ಅಥವಾ ಕವನ ವಾಚನಕ್ಕೆ ತೆರೆ ಎಳೆಯಬೇಕೇ’ ಎಂದು ಖಡಕ್ ಪ್ರಶ್ನೆಗಳನ್ನು ಕೇಳಿದೆ.
‘ಪ್ರಕರಣ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಸಿನಿಮಾ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ. ನ್ಯಾಯದ ಹಿತಕ್ಕಾಗಿ ಈ ಪ್ರಕರಣವನ್ನು ಇತ್ಯರ್ಥಗೊಳಿಸುವುದು ಸೂಕ್ತ. ಮಾರ್ಗಸೂಚಿ ಸಿದ್ಧಪಡಿಸುವುದು ಮತ್ತು ದಂಡ ವಿಧಿಸುವುದು ಸಮರ್ಪಕ ಕ್ರಮ ಎಂದು ಭಾವಿಸುವುದಿಲ್ಲ. ಸಿನಿಮಾ ಬಿಡುಗಡೆಗೆ ತಡೆಯೊಡ್ಡಲು ಪ್ರತಿಭಟನೆ ನಡೆಸಿ ಅಶಾಂತಿ ಸೃಷ್ಟಿಸಿದಲ್ಲಿ ಅಂಥ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ರಾಜ್ಯಸರ್ಕಾರವು ಕ್ರಿಮಿನಲ್ ಹಾಗೂ ಸಿವಿಲ್ ಕಾನೂನಡಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಪೀಠ ಹೇಳಿದೆ.
ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಕೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳುವಂತೆ ಹಿರಿಯ ನಟ ಕಮಲ್ ಹಾಸನ್ ಅವರನ್ನು ಆಗ್ರಹಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
‘ನಟನಿಗೆ ಮಂಡಳಿಯು ಯಾವುದೇ ಬೆದರಿಕೆ ಒಡ್ಡಿಲ್ಲ. ಆದರೆ ಹೇಳಿಕೆ ಕುರಿತು ವ್ಯಾಪಕ ಪ್ರತಿಭಟನೆ ನಡೆದಿತ್ತು. ಮಂಡಳಿಯ ಕಚೇರಿಯನ್ನು ನುಗ್ಗಿದ ಗುಂಪು ಬೆದರಿಸಿದ ಬೆನ್ನಲ್ಲೇ ಕ್ಷಮೆ ಕೋರಿ ಎಂದು ಪತ್ರ ಬರೆಯಲಾಗಿತ್ತು’ ಎಂದು ಮಂಡಳಿ ಪರ ವಕೀಲರು ಪೀಠಕ್ಕೆ ತಿಳಿಸಿದರು.
‘ಈ ಕುರಿತು ಮಂಡಳಿಯು ಪೊಲೀಸರಿಗೆ ದೂರು ನೀಡಿದೆಯೇ? ಮಂಡಳಿಯು ನಿಜವಾಗಿಯೂ ಜನರ ಒತ್ತಡಕ್ಕೆ ಮಣಿಯಿತೇ? ನೀವು ದೂರು ನೀಡದೆ, ಪ್ರತಿಭಟನಾಕಾರರ ಹಿಂದೆ ಅವಿತುಕೊಂಡಿರಿ’ ಎಂದು ನ್ಯಾ. ಭುಯಾನ್ ಅವರು ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
‘ನ್ಯಾಯಾಲಯ ಹೊರಡಿಸುವ ಯಾವುದೇ ಆದೇಶಕ್ಕೆ ಮಂಡಳಿ ಬದ್ಧ’ ಎಂದು ಮಂಡಳಿ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಕಮಲ್ ಹಾಸನ್ ಅವರ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾನಷಲ್ ಸಂಸ್ಥೆಯ ಪರ ವಕೀಲರು ವಾದ ಮಂಡಿಸಿ, ‘ಈಗಾಗಲೇ ₹30 ಕೋಟಿ ನಷ್ಟವಾಗಿದೆ. ಚಿತ್ರ ಪ್ರದರ್ಶನಕ್ಕೆ ಕರ್ನಾಟಕ ಸರ್ಕಾರ ರಕ್ಷಣೆ ನೀಡಿದಲ್ಲಿ ನಮಗೆ ಯಾವುದೇ ಅಭ್ಯಂತರವಿಲ್ಲ’ ಎಂದರು.
ಕಮಲ್ ನಟನೆಯ ‘ಥಗ್ ಲೈಫ್’ ಚಿತ್ರವು ಜೂನ್ 5ರಂದು ಎಲ್ಲೆಡೆ ಬಿಡುಗಡೆಗೊಂಡರೂ ಕರ್ನಾಟಕದಲ್ಲಿ ಅವಕಾಶ ನೀಡದಿರುವುದನ್ನು ಪ್ರಶ್ನಿಸಿ ಎಂ. ಮಹೇಶ ರೆಡ್ಡಿ ಎಂಬುವವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.