ADVERTISEMENT

ಕಂಗನಾ ದಿಟ್ಟತನವನ್ನು ಭಗತ್‌ ಸಿಂಗ್‌ಗೆ ಹೋಲಿಸಿದ ನಟ ವಿಶಾಲ್‌

ಏಜೆನ್ಸೀಸ್
Published 10 ಸೆಪ್ಟೆಂಬರ್ 2020, 16:30 IST
Last Updated 10 ಸೆಪ್ಟೆಂಬರ್ 2020, 16:30 IST
ಬಾಲಿವುಡ್‌ ನಟಿ ಕಂಗನಾ ರನೋಟ್‌
ಬಾಲಿವುಡ್‌ ನಟಿ ಕಂಗನಾ ರನೋಟ್‌   

ಚೆನ್ನೈ: ನಟ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಬಾಲಿವುಡ್‌ ನಟಿ ಕಂಗನಾ ರನೋಟ್‌ ನಡುವಿನ ವಾದ–ವಿವಾದಗಳು ಈಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ತಮಿಳು ನಟ ವಿಶಾಲ್‌, ಕಂಗನಾ ತೋರಿರುವ ದಿಟ್ಟ ವರ್ತನೆಯನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ಗೆ ಹೋಲಿಸಿದ್ದಾರೆ.

'ತಪ್ಪು ನಡೆದಾಗ ಸರ್ಕಾರದ ವಿರುದ್ಧ ಮಾತನಾಡುವ ದಿಟ್ಟತನದ ಉದಾಹರಣೆಯನ್ನು ಜನರಿಗೆ ತೋರಿದಿರಿ. ನಿಮ್ಮ ವೈಯಕ್ತಿಕವಾದುದು ಅಲ್ಲವಾದರೂ ಸರ್ಕಾರದಿಂದ ಕ್ರೋಧದ ಕ್ರಮಗಳನ್ನು ಎದುರಿಸಿದಿರಿ, ನೀವು ಗಟ್ಟಿಯಾಗಿ ನಿಲ್ಲುವ ಮೂಲಕ ದೊಡ್ಡ ಉದಾಹರಣೆಯಾಗಿದ್ದೀರಿ. ಭಗತ್‌ ಸಿಂಗ್‌ 1920ರಲ್ಲಿ ಮಾಡಿದ್ದಂತೆಯೇ ಇದು ಕಾಣುತ್ತಿದೆ. ವಾಕ್‌ ಸ್ವಾತಂತ್ರ (ಆರ್ಟಿಕಲ್‌ 19)...' ಎಂದು ನಟ ಮತ್ತು ನಿರ್ಮಾಪಕ ವಿಶಾಲ್‌ ಟ್ವೀಟ್‌ ಮಾಡಿದ್ದಾರೆ.

ಕಂಗನಾ ಶಿವ ಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸುವ ಜೊತೆಗೆ 'ಮುಂಬೈ ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ' ಎಂದಿದ್ದರು. ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸಿಬ್ಬಂದಿ ಬುಧವಾರ ಬಾಂದ್ರಾದಲ್ಲಿನ ಬಂಗಲೆಯ ಮುಂಭಾಗದ ಕಚೇರಿಯನ್ನು ಕೆಡವಿದರು. ಬಾಂಬೆ ಹೈಕೋರ್ಟ್‌ ಬಂಗಲೆ ಕೆಡವದಂತೆ ತಡೆಯಾಜ್ಞೆ ನೀಡಿತು. ಬಿಎಂಸಿ ನಡೆಸಿದ ಕಾರ್ಯಾಚರಣೆ ವಿಡಿಯೊಗಳನ್ನು ಹಂಚಿಕೊಂಡಿದ್ದ ಕಂಗನಾ, ಸಿಎಂ ಉದ್ಧವ್ ಠಾಕ್ರೆ ಅವರನ್ನು ಉದ್ದೇಶಿ 'ಕಟ್ಟಡ ಕೆಡವಿದಂತೆ ಅಹಂಕಾರವೂ ಉರುಳಿ ಹೋಗಲಿದೆ' ಎಂದಿದ್ದರು.

ADVERTISEMENT

ಕಂಗನಾ ಅನುಮತಿ ಪಡೆಯದೆಯೇ ಕಟ್ಟಡದಲ್ಲಿ ಕಾನೂನು ಬಾಹಿರವಾಗಿ ಮಾರ್ಡುಗಳನ್ನು ಮಾಡಿಕೊಂಡಿದ್ದಾರೆ ಎಂದು ಬಿಎಂಸಿ ಆರೋಪಿಸಿ ನೋಟಿಸ್‌ ಜಾರಿ ಮಾಡಿತ್ತು. ಕಂಗನಾ ವಿಡಿಯೊದಲ್ಲಿ ಸಿಎಂ ಉದ್ಧವ್ ಠಾಕ್ರೆ ಅವರನ್ನು 'ತುಜೆ ಕ್ಯಾ ಲಗ್ತಾ ಹೈ' ಎಂದು ಏಕವಚನ ಬಳಕೆ ಮಾಡಿದ್ದಾರೆ ಹಾಗೂ ಅಸಭ್ಯ ಭಾಷೆಯ ಬಳಕೆ ಮಾಡಿರುವುದಾಗಿ ಕಂಗನಾ ವಿರುದ್ಧ ಎರಡು ದೂರುಗಳು ದಾಖಲಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯ ರಾಮದಾಸ್ ಆಠವಲೆ ಅವರು ಗುರುವಾರ ಕಂಗನಾ ಅವರ ನಿವಾಸದಲ್ಲಿಯೇ ಅವರನ್ನು ಭೇಟಿ ಮಾಡಿ, ಘಟನೆಯ ಕುರಿತು ವಿವರ ಪಡೆದುಕೊಂಡರು. 'ಮುಂಬೈ ದೇಶದ ವಾಣಿಜ್ಯ ನಗರಿ, ಇಲ್ಲಿ ಇರಲು ಯಾವುದೇ ಭಯವಿಲ್ಲ. ಇಲ್ಲಿ ಬದುಕಲು ಎಲ್ಲರಿಗೂ ಹಕ್ಕಿದೆ...ನನ್ನ ಪಕ್ಷ (ಆಪಿಐ) ಅವರೊಂದಿಗೆ ಇದೆ' ಎಂದು ಕಂಗನಾ ಅವರಿಗೆ ತಿಳಿಸಿರುವುದಾಗಿ ಹೇಳಿದರು.

ಇದು ಮುಜುಗರದ ಘಟನೆಯಾಗಿದೆ ಹಾಗೂ ನಷ್ಟಕ್ಕೆ ಪರಿಹಾರ ಸಿಗಲೇ ಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.