ಉಪೇಂದ್ರ ಮತ್ತು ಆರಾಧನಾ ರಾಮ್
ಅರವಿಂದ್ ಕೌಶಿಕ್ ನಿರ್ದೇಶನದ, ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿರುವ ‘ನೆಕ್ಸ್ಟ್ ಲೆವೆಲ್’ ಸಿನಿಮಾ ಇತ್ತೀಚೆಗಷ್ಟೇ ಘೋಷಣೆಯಾಗಿತ್ತು. ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿ ಮಾಲಾಶ್ರೀ ಪುತ್ರಿ ‘ಕಾಟೇರ’ ಖ್ಯಾತಿಯ ಆರಾಧನಾ ನಟಿಸಲಿದ್ದಾರೆ.
ಸದ್ಯ ‘ಕೂಲಿ’, ‘45’, ‘ಬುದ್ಧಿವಂತ–2’ ಹಾಗೂ ‘ಭಾರ್ಗವ’ ಸಿನಿಮಾಗಳ ಬಿಡುಗಡೆಗೆ ಎದುರುನೋಡುತ್ತಿರುವ ಉಪೇಂದ್ರ ನವೆಂಬರ್‌ನಲ್ಲಿ ‘ನೆಕ್ಸ್ಟ್ ಲೆವೆಲ್’ಗೆ ಇಳಿಯಲಿದ್ದಾರೆ. ‘ನಮ್ ಏರಿಯಾಲ್ ಒಂದಿನ’, ‘ಅರ್ದಂಬರ್ಧ ಪ್ರೇಮಕಥೆ’ ನಿರ್ದೇಶಿಸಿದ್ದ ಅರವಿಂದ್ ಕೌಶಿಕ್ ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೋಕಕ್ಕೆ ಹೆಜ್ಜೆ ಇಡಲಿದ್ದಾರೆ.
ಸಿನಿಮಾ ಚಿತ್ರೀಕರಣ ಆದ ಬಳಿಕ ಗ್ರಾಫಿಕ್ಸ್ ಕೆಲಸಗಳನ್ನು ಚಿತ್ರತಂಡಗಳು ಆರಂಭಿಸುವುದು ಸಾಮಾನ್ಯ. ಆದರೆ ‘ನೆಕ್ಸ್ಟ್ ಲೆವೆಲ್’ ತಂಡ ಪ್ರಿಪ್ರೊಡಕ್ಷನ್‌ನಲ್ಲೇ ವಿಎಫ್‌ಎಕ್ಸ್ ಕೆಲಸ ಆರಂಭಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ತರುಣ್ ಶಿವಪ್ಪ, ‘ಚಿತ್ರದಲ್ಲಿ ವಿಎಫ್‌ಎಕ್ಸ್ ಹೆಚ್ಚು ಇದೆ. ಇದನ್ನು ಸಿದ್ಧಪಡಿಸಿಕೊಂಡೇ ಚಿತ್ರೀಕರಣಕ್ಕೆ ಇಳಿಯುವ ಯೋಜನೆ ನಮ್ಮದು. ಇದಕ್ಕಾಗಿ ಪ್ರಿಪ್ರೊಡಕ್ಷನ್‌ನಲ್ಲೇ ಪಕ್ವವಾಗುತ್ತಿದ್ದೇವೆ. ಗ್ರಾಫಿಕ್ಸ್‌ಗಳು ಎಲ್ಲೆಲ್ಲಿ, ಎಷ್ಟು ಹೊತ್ತು ಬೇಕು? ಏನಿರಬೇಕು ಎನ್ನುವುದನ್ನು ಚಿತ್ರಕಥೆ ಸಮಯದಲ್ಲೇ ಅಂತಿಮಗೊಳಿಸಿದ್ದೇವೆ. ನಿರ್ದೇಶಕರಿಗೆ ಈ ಕುರಿತು ಬಹಳ ಸ್ಪಷ್ಟತೆ ಇದೆ. ಚಿತ್ರೀಕರಣ ಆದ ನಂತರ ಗ್ರಾಫಿಕ್ಸ್ ಕೆಲಸಗಳಿಗೆ ಕೂತರೆ ಯಾವುದೇ ಸ್ಪಷ್ಟತೆ ಇರುವುದಿಲ್ಲ. 16 ನಿಮಿಷದ ಸಿಜಿ ಕೆಲಸ 30 ನಿಮಿಷದವರೆಗೆ ಹೋಗಬಹುದು. ಇದು ಬಜೆಟ್ ಮೇಲೆ ಪರಿಣಾಮ ಬೀರುತ್ತದೆ. ಈಗಲೇ ವಿಎಫ್‌ಎಕ್ಸ್ ಅಂತಿಮಗೊಳಿಸುತ್ತಿರುವ ಕಾರಣ ದುಂದುವೆಚ್ಚವಿಲ್ಲ. ನವೆಂಬರ್‌ನಲ್ಲಿ ಶೂಟಿಂಗ್ ಆರಂಭವಾಗಲಿದೆ’ ಎಂದರು.
‘ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಿದ್ಧವಾಗಿದೆ. ಸಂಭಾಷಣೆಯನ್ನು ಉಪೇಂದ್ರ ಅವರೂ ಕೇಳಿದ್ದಾರೆ. ಯಾವುದೇ ಬದಲಾವಣೆ ಇಲ್ಲದೇ ಕಥೆಯನ್ನು ಅವರು ಒಪ್ಪಿದ್ದಾರೆ. ಇದು ‘ಎ’, ‘ಉಪೇಂದ್ರ’, ‘ರಕ್ತಕಣ್ಣೀರು’ ರೀತಿ ಟಿಪಿಕಲ್ ಉಪ್ಪಿ ಅವರ ಶೈಲಿಯ ಸಿನಿಮಾ. ಇವತ್ತಿನ ಪೀಳಿಗೆಗೆ ಉಪೇಂದ್ರ ಅವರು ಸಿನಿಮಾ ಮಾಡಿದರೆ ಹೇಗಿರುತ್ತದೆ ಆ ರೀತಿ ಚಿತ್ರದಲ್ಲಿ ಅವರ ಪಾತ್ರವಿದೆ. ಆರಾಧನಾ ಅವರು ಚಿತ್ರದಲ್ಲಿ ಮುಖ್ಯಮಂತ್ರಿಯ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಟೇರ’ ಸಿನಿಮಾದಲ್ಲಿದ್ದ ಅವರ ಪಾತ್ರಕ್ಕೆ ತದ್ವಿರುದ್ಧವಾಗಿ ಇಲ್ಲಿನ ಪಾತ್ರವಿದೆ. ಬಹಳ ಬೋಲ್ಡ್ ಆಗಿರುವ ಪಾತ್ರ ಇಲ್ಲಿದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಪಡಿಸುತ್ತಿದ್ದು, ಶೂಟಿಂಗ್ ಆರಂಭಿಸಿದ 6–8 ತಿಂಗಳಲ್ಲಿ ಸಿನಿಮಾ ಬಿಡುಗಡೆ ಪ್ಲ್ಯಾನ್ ಇದೆ’ ಎಂದರು ತರುಣ್.
ತಮ್ಮ ಎರಡನೇ ಹೆಜ್ಜೆಯ ಬಗ್ಗೆ ಮಾತನಾಡಿದ ಆರಾಧನಾ ‘ಉಪೇಂದ್ರ ಅವರು ಈ ಕಥೆ ಏಕೆ ಒಪ್ಪಿಕೊಂಡಿದ್ದಾರೆ ಎನ್ನುವ ಕುತೂಹಲ ನಿರೀಕ್ಷೆ ಎಲ್ಲರಿಗೂ ಇದೆ. ನಾನು ಸಿನಿಮಾ ಒಪ್ಪಿಕೊಳ್ಳಲು ಹಲವು ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಉಪೇಂದ್ರ ಅವರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ದೊರಕಿದ್ದು. ಉಪೇಂದ್ರ ಅವರ ಬಗ್ಗೆ ಅಪ್ಪ–ಅಮ್ಮನಿಗೆ ಬಹಳ ಗೌರವವಿದೆ. ಈ ಸಿನಿಮಾದ ಕಥೆ ನನ್ನ ಪಾತ್ರವೂ ನನ್ನನ್ನು ಆಕರ್ಷಿಸಿತು. ಈ ಪೀಳಿಗೆಗೆ ಇಂದಿನ ಸಿನಿಮಾ ಮಾರುಕಟ್ಟೆಗೆ ತೃಪ್ತಿ ನೀಡುವ ಸಿನಿಮಾ ಇದಾಗಲಿದೆ ಎನ್ನುವ ಭರವಸೆ ನನಗಿದೆ. ಬಜೆಟ್ ತಾಂತ್ರಿಕವಾಗಿಯೂ ಈ ಸಿನಿಮಾ ಬೃಹದಾಗಿರಲಿದೆ. ‘ಕಾಟೇರ’ದಲ್ಲಿ ನೋಡಿರುವ ಆರಾಧನಾಗೂ ‘ನೆಕ್ಸ್ಟ್ ಲೆವಲ್’ ಆರಾಧನಾಳಿಗೂ ಬಹಳ ವ್ಯತ್ಯಾಸವಿದೆ. ಇಲ್ಲಿ ನನ್ನ ಪಾತ್ರಕ್ಕೆ ಮಾತು ಹೆಚ್ಚಿದೆ’ ಎಂದರು. ‘‘ಕಾಟೇರ’ ಸಿನಿಮಾದ ಯಶಸ್ಸು ಜವಾಬ್ದಾರಿ ನಿರೀಕ್ಷೆ ಹಾಗೂ ಒತ್ತಡ ಹೆಚ್ಚಿಸಿತ್ತು. ಎರಡನೇ ಹೆಜ್ಜೆ ಇಡುವ ಮುನ್ನ ಬಹಳ ಎಚ್ಚರಿಕೆಯಿಂದ ಇದ್ದೆ. ಹಲವು ಪಾತ್ರಗಳ ಅವಕಾಶಗಳು ಬಂದರೂ ಯಾವುದೋ ಒಂದು ಅಂಶ ಕೂಡಿಬರುತ್ತಿರಲಿಲ್ಲ. ಹೀಗಾಗಿ ಒಂದೂವರೆ ವರ್ಷ ತಾಳ್ಮೆಯಿಂದ ಕಾದೆ. ಒಂದು ಒಳ್ಳೆಯ ತಂಡ ಕಥೆಯ ನಿರೀಕ್ಷೆಯಲ್ಲಿದ್ದಾಗ ‘ನೆಕ್ಸ್ಟ್ ಲೆವೆಲ್’ ಕಥೆ ಬಂದಿತ್ತು’ ಎಂದರು ಆರಾಧನಾ. ‘ಈ ಸಿನಿಮಾಗಾಗಿ ಅಮ್ಮನೇ ಗುರುವಾಗಿ ನನ್ನನ್ನು ಸಿದ್ಧಪಡಿಸುತ್ತಿದ್ದಾರೆ. ‘ಕಾಟೇರ’ಗೂ ಮೊದಲು ಅಮ್ಮನ ಮೂಲಕ ಸಿನಿಮಾ ಜಗತ್ತು ನೋಡುತ್ತಿದ್ದೆ. ಇದೀಗ ವಿದ್ಯಾರ್ಥಿನಿಯಂತೆ ‘ಕಾಟೇರ’ದ ಕಲಿಕೆಗಳನ್ನು ಸ್ಕೂಲ್‌ಬ್ಯಾಗ್‌ಗೆ ತುಂಬಿಕೊಂಡು ಹೊಸ ಸಿನಿಮಾಗೆ ಹೆಜ್ಜೆ ಇಡಲಿದ್ದೇನೆ. ಈ ವರ್ಷದ ದ್ವಿತೀಯಾರ್ಧ ನನ್ನದು. ಹಲವು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಶೀಘ್ರದಲ್ಲೇ ಇವುಗಳು ಘೋಷಣೆಯಾಗಲಿದೆ’ ಎನ್ನುತ್ತಾರೆ ಆರಾಧನಾ.
‘ಕಾಟೇರ’ಕ್ಕೆ ಡಬ್ಬಿಂಗ್ ಮಾಡಿರಲಿಲ್ಲ. ಆ ಪಾತ್ರಕ್ಕೆ ನನ್ನ ದನಿ ಸರಿಹೋಗುತ್ತಿರಲಿಲ್ಲ. ‘ನೆಕ್ಟ್ಟ್ ಲೆವೆಲ್’ಗೆ ಡಬ್ಬಿಂಗ್ ಮಾಡುವ ಆಸೆ ಇದೆ. ‘ಡಬ್ಬಿಂಗ್’ ಒಂದು ಪಾತ್ರಕ್ಕೆ ಜೀವಾಳ. ಅಮ್ಮನ ಪಾತ್ರಗಳಿಗೆ ಜೀವ ತುಂಬಿದ್ದೇ ಸರ್ವಮಂಗಳ ಅವರ ಡಬ್ಬಿಂಗ್. ಪಾತ್ರದ ತಯಾರಿ ಜೊತೆಗೆ ಡಬ್ಬಿಂಗ್ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದೇನೆ.–ಆರಾಧನಾ, ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.