ADVERTISEMENT

ಕನ್ನಡ ಬಾವುಟಕ್ಕೆ ಅವಮಾನ ಆರೋಪ: ಕಿಚ್ಚ ಸುದೀಪ್‌, ಪ್ರೇಮ್‌ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 13:54 IST
Last Updated 16 ನವೆಂಬರ್ 2018, 13:54 IST
   

ಬೆಂಗಳೂರು:ಪ್ರೇಮ್‌ ನಿರ್ದೇಶನದ, ಶಿವರಾಜ್‌ಕುಮಾರ್ ಮತ್ತು ಸುದೀಪ್ ಜತೆಯಾಗಿ ನಟಿಸಿರುವ ‘ದಿ ವಿಲನ್‌’ ಚಿತ್ರ ಹಲವರ ಪಾಲಿಗೆ ಖಳನಾಗಿಯೇ ಕಾಣಿಸುತ್ತಿದೆ. ಚಿತ್ರ ಬಿಡುಗಡೆ ಆದಾಗಿನಿಂದಲೂ ಒಂದಿಲ್ಲ ಒಂದು ವಿವಾದಗಳನ್ನು ಎದುರಿಸುತ್ತಲೇ ಬಂದಿರುವ ‘ವಿಲನ್‌’ ಸಂಕಷ್ಟ ಇನ್ನೂ ಕೊನೆಗೊಂಡಿಲ್ಲ. ಚಿತ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ನಿರ್ದೇಶಕ ಪ್ರೇಮ್‌ ಆ ಕುರಿತು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ನಂತರ ಶಿವರಾಜ್‌ ಕುಮಾರ್ ಅವರಿಗೆ ಸುದೀಪ್‌ ಸಿನಿಮಾ ದೃಶ್ಯವೊಂದರಲ್ಲಿ ಹೊಡೆದಿದ್ದಾರೆ ಎನ್ನುವುದೂ ಶಿವಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇವೆಲ್ಲ ಕೊಂಚ ತಣ್ಣಗಾಗುತ್ತಿರುವಂತೆಯೇ ಇದೀಗ ಹೊಸ ಆರೋಪವೊಂದು ‘ವಿಲನ್‌’ ಬೆನ್ನೇರಿದೆ.

‘‘ವಿಲನ್‌’ ಚಿತ್ರದ ಹಾಡೊಂದರಲ್ಲಿ ಸುದೀಪ್‌, ಕನ್ನಡ ಬಾವುಟವನ್ನು ಸೊಂಟಕ್ಕೆ ಸುತ್ತಿಕೊಂಡು ಅವಮಾನ ಮಾಡಿದ್ದಾರೆ. ಇದಕ್ಕೆ ನಿರ್ದೇಶಕ ಪ್ರೇಮ್‌ ಮತ್ತು ನಟ ಸುದೀಪ್ ಇಬ್ಬರೂ ಕ್ಷಮೆ ಯಾಚಿಸಬೇಕು’ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದೆ.

ಕನ್ನಡ ಚಳವಳಿ ನಾಗೇಶ್ ಎನ್ನುವವರು ಈ ದೂರನ್ನು ನೀಡಿದ್ದು, ‘ಒಂದೊಮ್ಮೆ ಕ್ಷಮೆ ಯಾಚಿಸದಿದ್ದರೆ ಚಿತ್ರಮಂದಿರಗಳ ಎದುರು ಪ್ರತಿಭಟನೆ ಮಾಡುತ್ತೇವೆ’ ಎಂದೂ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಸುದೀಪ್‌, ಕನ್ನಡ ಬಾವುಟ ಸೊಂಟಕ್ಕೆ ಕಟ್ಟಿಕೊಂಡಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನಟರಾಜ್‌, ಬೊಮ್ಮಸಂದ್ರ ಎಂಬವರು ಕರ್ನಾಟಕ ಸಂಘಟನೆಗಳ ಒಕ್ಕೂಟಕ್ಕೆ ಟ್ಯಾಗ್‌ ಮಾಡಿದ್ದಾರೆ. ‘ಕನ್ನಡದ ನಿರ್ದೇಶಕರು ಹಾಗೂ ನಾಯಕರೇ, ಕನ್ನಡ ಚಿತ್ರದಲ್ಲಿ ಕನ್ನಡ ಬಾವುಟದ ಬಣ್ಣವಿರುವ ಬಟ್ಟೆಗಳನ್ನು ಸರಿಯಾಗಿ ಬಳಸಿ. ಹಾಗೂ ಗೌರವಿಸಿ. ಇದೇ ಕಾರಣ ಹೇಳಿ ಪ್ರತಿಭಟನೆ ಮಾಡಿದರೆ ಕನ್ನಡ ಸಂಘಟನೆಗಳೇ ಕನ್ನಡ ನಾಯಕರನ್ನು, ಕನ್ನಡ ಚಿತ್ರಗಳನ್ನು ಕಡೆಗಣಿಸುತ್ತಾರೆ ಎಂದು ಬೊಬ್ಬೆ ಹೊಡೆಯುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ, ‘ವಿಲನ್‌ ಚಿತ್ರದಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಮಾಡಲಾಗಿದೆ ಎಂದು ದೂರು ಕೊಟ್ಟಿರುವುದು ನಿಜ. ಆದರೆ ಸಿನಿಮಾ ಬಿಡುಗಡೆಯಾಗಿ ಈಗಾಗಲೇ ತುಂಬ ದಿನಗಳಾಗಿವೆ. ಸೆನ್ಸಾರ್‌ ಕೂಡ ಆ ದೃಶ್ಯಕ್ಕೆ ಸಮ್ಮತಿ ಸೂಚಿಸಿದೆ. ಹಾಗಿದ್ದ ಮೇಲೆ ಈಗ ಏನು ಮಾಡಲು ಸಾಧ್ಯ? ಆದ್ದರಿಂದ ನೀವು ಚಿತ್ರದ ನಿರ್ದೇಶಕರನ್ನೇ ನೇರವಾಗಿ ಸಂಪರ್ಕಿಸಿ ಎಂದು ಹೇಳಿಕಳುಹಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.