ADVERTISEMENT

ವಿಷ್ಣು ಪುಣ್ಯ ಸ್ಮರಣೆಗೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 21:05 IST
Last Updated 30 ಡಿಸೆಂಬರ್ 2020, 21:05 IST
ವಿಷ್ಣುವರ್ಧನ್ ಭಾವಚಿತ್ರಕ್ಕೆ ಅಭಿಮಾನಿಗಳು ಪುಷ್ಪನಮನ ಸಲ್ಲಿಸಿದರು
ವಿಷ್ಣುವರ್ಧನ್ ಭಾವಚಿತ್ರಕ್ಕೆ ಅಭಿಮಾನಿಗಳು ಪುಷ್ಪನಮನ ಸಲ್ಲಿಸಿದರು   

ಕೆಂಗೇರಿ: ಸಾವಿರಾರು ಅಭಿಮಾನಿಗಳ ಜೈಕಾರದ ನಡುವೆ ನಟ ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆ ಬುಧವಾರ ನೆರವೇರಿತು.

ಕೆಂಗೇರಿ -ಉತ್ತರಹಳ್ಳಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳಕ್ಕೆ ರಾಜ್ಯದ ವಿವಿಧೆಡೆಯಿಂದ ಬಂದ ಅಭಿಮಾನಿಗಳು ವಿಷ್ಣು ಸಮಾಧಿಗೆ ಬೆಳಗ್ಗಿನಿಂದಲೇ ಪೂಜೆ ಸಲ್ಲಿಸಿದರು. ಹಿತೈಷಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಮಲ್ಲತ್ತಹಳ್ಳಿ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಕೆಂಗೇರಿ ಹಾಗೂ ಶೃಂಗಾರ ಶಿಲ್ಪಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿತೈಷಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ’ವಿಷ್ಣು ಸ್ಮಾರಕ ಸ್ಥಳದ ವಿವಾದ ಕೋರ್ಟ್ ಕಟಕಟೆಯಲ್ಲಿದೆ. ಕಾನೂನು ಹೋರಾಟದಲ್ಲಿ ಗೆದ್ದು ಅಭಿಮಾನ್ ಸ್ಟುಡಿಯೊದಲ್ಲೇ ಸ್ಮಾರಕ ನಿರ್ಮಾಣ ಮಾಡಲಾಗುವುದು‘ ಎಂದರು.

’ಮಾಗಡಿ ರಸ್ತೆಯಲ್ಲಿದ್ದ ವಿಷ್ಣುವರ್ಧನ್ ಪ್ರತಿಮೆ ಭಗ್ನದ ಹಿಂದೆ ಕೆಲವು ಕಾಣದ ಕೈಗಳಿವೆ. ಇದೊಂದು ಪೂರ್ವ ನಿಯೋಜಿತ ಸಂಚಾಗಿದ್ದು ಕುಕೃತ್ಯ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು‘ ಎಂದು ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್ ಆಗ್ರಹಿಸಿದರು.

ADVERTISEMENT

ಇದೇ ವೇಳೆ ಕೆ.ವಿ.ಕೆ ರಕ್ತನಿಧಿ ಸಂಸ್ಥೆ, ರೆಡ್ ಕ್ರಾಸ್ ಹಾಗೂ ಲೈಫ್ ಕೇರ್ ವಾಲೆಂಟರಿ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 400ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.