ADVERTISEMENT

‘ರಾಮಾಯಣ’ ಫಸ್ಟ್ ಲುಕ್‌ ಬಿಡುಗಡೆ: ರಾಮನಾಗಿ ರಣಬೀರ್‌, ರಾವಣನಾಗಿ ಯಶ್‌ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 11:27 IST
Last Updated 3 ಜುಲೈ 2025, 11:27 IST
   

ಬೆಂಗಳೂರು: ರಾಕಿಂಗ್ ಸ್ಟಾರ್‌ ಯಶ್‌ ಮತ್ತು ಬಾಲಿವುಡ್‌ ನಟ ರಣಬೀರ್ ಕಪೂರ್‌ ನಟನೆಯ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಸಿನಿಮಾದ ಫಸ್ಟ್ ಲುಕ್‌ ಗುರುವಾರ ಬಿಡುಗಡೆಯಾಗಿದೆ.

ಚಿತ್ರದ ಫಸ್ಟ್‌ ಗ್ಲಿಂಪ್ಸ್‌ ಮತ್ತು ಫಸ್ಟ್ ಲುಕ್‌ ಪೋಸ್ಟರ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಶ್‌, ‘ಹತ್ತು ವರ್ಷಗಳ ಕನಸು... ಜಗತ್ತಿನ ಶ್ರೇಷ್ಠ ಮಹಾಕಾವ್ಯವನ್ನು ತೆರೆ ಮೇಲೆ ತರಬೇಕೆಂಬ ಧೃಡಸಂಕಲ್ಪದೊಂದಿಗೆ ‘ರಾಮಾಯಣ’ ಸಿನಿಮಾವನ್ನು ಅತ್ಯಂತ ಗೌರವಾದಾರಗಳಿಂದ ಪ್ರಸ್ತುತಪಡಿಸಲಾಗಿದೆ. ಇದಕ್ಕಾಗಿ ವಿಶ್ವದ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದೇವೆ. ರಾಮ ವರ್ಸಸ್‌ ರಾವಣನ ಅಮರ ಕಥೆಯನ್ನು ಸಂಭ್ರಮಿಸೋಣ’ ಎಂದು ಬರೆದುಕೊಂಡಿದ್ದಾರೆ.

‘ದಂಗಲ್’ ಖ್ಯಾತಿಯ ನಿತೇಶ್‌ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಸೀತೆಯಾಗಿ ಬಹುಭಾಷಾ ನಟಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಹನುಮನಾಗಿ ಸನ್ನಿ ದೇವಲ್‌, ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ.

ADVERTISEMENT

ಯಶ್ ಒಡೆತನದ ‘ಮಾಸ್ಟರ್‌ಮೈಂಡ್ ಕ್ರಿಯೇಷನ್ಸ್‌‘ ಮತ್ತು ನಮಿತ್ ಮಲ್ಹೋತ್ರಾ ಸಾರಥ್ಯದ ‘ಪ್ರೈಮ್ ಫೋಕಸ್ ಸ್ಟುಡಿಯೊ‘ ಚಿತ್ರ ನಿರ್ಮಾಣ ಜವಾಬ್ದಾರಿಯನ್ನು ತೆಗೆದುಕೊಂಡಿದೆ.

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕರಾದ ಹ್ಯಾನ್ಸ್‌ ಜಿಮ್ಮರ್ ಮತ್ತು ಎ.ಆರ್‌.ರೆಹಮಾನ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಗೈ ನೋರಿಸ್‌ ಚಿತ್ರತಂಡ ಸೇರಿಕೊಂಡಿರುವುದು ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ.

ಸಿನಿಮಾವು ಎರಡು ಭಾಗಗಳಾಗಿ ಬಿಡುಗಡೆಯಾಗಲಿದ್ದು, ಭಾಗ –1 2026ರ ದೀಪಾವಳಿಯಂದು ಬಿಡುಗಡೆಯಾದರೆ, ಭಾಗ– 2 2027 ದೀಪಾವಳಿಗೆ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.