ಬೆಂಗಳೂರು: ಪ್ರತಿ ಬಾರಿಯಂತೆ ಈ ಬಾರಿಯು ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ನಟ ಯಶ್, ರಾಧಿಕಾ ಅವರಿಗಾಗಿಯೇ ವಿಶೇಷ ಹಾಡೊಂದು ಹಾಡುವ ಮೂಲಕ ಸಂಭ್ರಮದ ರಂಗು ಹೆಚ್ಚಿಸಿದ್ದಾರೆ.
ಇತ್ತೀಚೆಗೆ 41ನೇ ವಸಂತಕ್ಕೆ ಕಾಲಿಟ್ಟಿರುವ ರಾಧಿಕಾ ಅವರು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ತಂದ ಕೇಕ್‌ಗಳನ್ನು ಕತ್ತರಿಸುವ ಮೂಲಕ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದರು.
ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ರಾಧಿಕಾ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಯಶ್ ಅವರು ಆಯೋಜಿಸಿದ್ದು, ಈ ವೇಳೆ ರಾಧಿಕಾ ಅವರಿಗಾಗಿ ಹಾಡು ಹಾಡಿದ್ದಾರೆ.
ದಿವಂಗತ್ ನಟ ಶಂಕರ್‌ನಾಗ್ ಅವರ ‘ಗೀತಾ’ ಚಿತ್ರದ ಜನಪ್ರಿಯ ಹಾಡು ‘ಜೊತೆ ಜೊತೆಯಲಿ’ ಹಾಡನ್ನು ಹಾಡುವ ಮೂಲಕ ರಾಧಿಕಾ ಅವರನ್ನು ಅಚ್ಚರಿಗೊಳಿಸಿದ್ದಾರೆ.
ಯಶ್ ಅವರು ಹಾಡನ್ನು ಹಾಡಿರುವ ವಿಡಿಯೊವನ್ನು ರಾಧಿಕಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ಮೆಚ್ಚಿನ ಗೀತೆ ಎಂದು ಹೇಳಿದ್ದಾರೆ.
2016ರ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಶ್–ರಾಧಿಕಾ ಅವರಿಗೆ ಐರಾ ಮತ್ತು ಯಥರ್ವ ಎಂಬ ಇಬ್ಬರು ಮಕ್ಕಳಿದ್ದಾರೆ.
ಶಂಕರ್‌ನಾಗ್ ಅವರು ನಿರ್ದೇಶಿಸಿ, ನಟಿಸಿದ್ದ ‘ಗೀತಾ’ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜಿಸಿದ್ದರು. ಈ ಹಾಡಿಗೆ ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಜಾನಕಿ ಅವರು ದನಿ ನೀಡಿದ್ದರು. ಈ ಚಿತ್ರ 1981ರಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.