ADVERTISEMENT

ವರ್ಷಕ್ಕೆರಡು ಸಿನಿಮಾ ನನ್ನಾಸೆ: ಪುನೀತ್‌ ರಾಜ್‌ಕುಮಾರ್‌

ಕೆ.ಎಂ.ಸಂತೋಷ್‌ ಕುಮಾರ್‌
Published 23 ಜನವರಿ 2020, 19:30 IST
Last Updated 23 ಜನವರಿ 2020, 19:30 IST
   

ಕನ್ನಡದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಎರಡು ಬಹು ನಿರೀಕ್ಷೆಯ ಚಿತ್ರಗಳಾದ ‘ಯುವರತ್ನ’ ಮತ್ತು ‘ಜೇಮ್ಸ್‌’2020ರಲ್ಲಿ ಅಪ್ಪು ಅಭಿಮಾನಿಗಳನ್ನು ರಂಜಿಸುವ ನಿರೀಕ್ಷೆ ಹುಟ್ಟು ಹಾಕಿವೆ. ಇದರ ಜತೆಗೆ ಪುನೀತ್‌ ಕೈಯಲ್ಲಿ ಮತ್ತೆರಡು ಹೊಸ ಪ್ರಾಜೆಕ್ಟ್‌ಗಳಿದ್ದು, ‘ಒಂದಲ್ಲಾ ಎರಡಲ್ಲಾ’ ಖ್ಯಾತಿಯ ಸತ್ಯಪ್ರಕಾಶ್‌ ನಿರ್ದೇಶನದ ಚಿತ್ರವೊಂದರಲ್ಲಿ ಪುನೀತ್‌ ಈ ವರ್ಷ ನಟಿಸಲಿದ್ದಾರೆ. ನಟನೆಯ ಜತೆಗೆ ನಿರ್ಮಾಣಕ್ಕೂ ಕೈಹಾಕಿರುವ ಪುನೀತ್‌, ಪತ್ನಿ ಅಶ್ವಿನಿ ಜತೆಗೆಪಿಆರ್‌ಕೆ ಪ್ರೊಡಕ್ಷನ್‌ ಸಂಸ್ಥೆ ಹುಟ್ಟುಹಾಕಿದ್ದು, ಈ ಬ್ಯಾನರ್‌ನಲ್ಲಿ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಹೊಸಹೊಸ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ಬ್ಯಾನರ್‌ನಲ್ಲಿ ಮೂಡಿಬಂದ ಮೊದಲ ಚಿತ್ರ ‘ಕವಲುದಾರಿ’ ಅವರಿಗೆ ಯಶಸ್ಸು ಕೂಡ ತಂದುಕೊಟ್ಟಿದೆ. ಈ ಚಿತ್ರ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಗಳಿಗೂ ರಿಮೇಕ್‌ ಆಗುತ್ತಿದೆ. ಈ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಎರಡನೇ ಪ್ರಯೋಗಾತ್ಮಕ ಸಿನಿಮಾ ‘ಮಾಯಬಜಾರ್‌’ ಕೂಡ ತೆರೆಕಾಣಲು ಸಜ್ಜಾಗಿದೆ. ಈ ಚಿತ್ರದಲಿರಿಕಲ್‌ ವಿಡಿಯೋ ಸಾಂಗ್‌ ಬಿಡುಗಡೆ ವೇಳೆ ಪುನೀತ್‌ ರಾಜ್‌ಕುಮಾರ್‌ ಮಾತಿಗೆ ಸಿಕ್ಕಿದ್ದರು. ತಮ್ಮ ಬಹುನಿರೀಕ್ಷೆಯ ‘ಯುವರತ್ನ’ ಮತ್ತು ಜೇಮ್ಸ್‌ ಚಿತ್ರಗಳ ಬಗ್ಗೆಯೂ ಹಲವು ಮಾಹಿತಿಗಳನ್ನು ಅವರು ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಆನಂದ್‌ ರಾಮ್‌ ಮತ್ತು ನಿಮ್ಮ ಕಾಂಬಿನೇಷನ್‌ ಮತ್ತೆ ಜತೆಯಾಗಿರುವ ಬಗ್ಗೆ ಹೇಳಿ...

ಸಂತೋಷ್‌ ಆನಂದ್‌ ರಾಮ್‌ ಕಾಂಬಿನೇಷನ್‌ನಲ್ಲಿ ಎರಡನೇ ಸಿನಿಮಾ ‘ಯುವರತ್ನ’ ಮಾಡುತ್ತೇನೆಂದು ನಿರೀಕ್ಷೆ ಮಾಡಿರಲಿಲ್ಲ.‘ರಾಜಕುಮಾರ’ ಸಿನಿಮಾವನ್ನು ಜನರು ನೋಡಿ ಆಶೀರ್ವಾದ ಮಾಡಿದರು. ಸಿನಿಮಾ ಯಶಸ್ವಿಯಾಯಿತು. ಯಶಸ್ಸು, ನಿರೀಕ್ಷೆ ಈ ಎರಡಕ್ಕೂ ಮೀರಿದ್ದೇನೆಂದರೆ ಒಳ್ಳೆಯ ಸಿನಿಮಾ ಮಾಡಿದ ಮೇಲೆ ಅಲ್ಲೊಂದು ಕುಟುಂಬದ ವಾತಾವರಣ ಶುರುವಾಗಿರುತ್ತದೆ. ನಿರ್ಮಾಪಕ ವಿಜಯ್‌ ಕಿರಗಂದೂರ್‌, ಸಂತೋಷ್‌ ಆನಂದ್‌ ರಾಮ್‌ ನನಗೆ ತುಂಬಾ ಹತ್ತಿರದವರು. ರಾಜಕುಮಾರ ಸಿನಿಮಾದಲ್ಲಿದ್ದ ತಾಂತ್ರಿಕ ತಂಡ ಮತ್ತು ಕಲಾವಿದರೇ ಬಹುತೇಕ ‘ಯುವರತ್ನ’ದಲ್ಲೂ ಇದ್ದಾರೆ. ಸಂತೋಷ್‌ ಮತ್ತು ಹೊಂಬಾಳೆ ತಂಡದ ಜತೆಗೆ ಎಷ್ಟು ಸಿನಿಮಾ ಬೇಕಾದರೂ ನಾನು ಮಾಡುತ್ತಲೇ ಇರುತ್ತೇನೆ. ನಮ್ಮ ನಡುವೆ ಒಂದು ಬಾಂಡಿಂಗ್‌ ಇದೆ. ಎಲ್ಲರೂ ಖುಷಿಖುಷಿಯಿಂದ ಚಿತ್ರದಲ್ಲಿ ತೊಡಗಿಸಿಕೊಂಡಾಗ ಒಳ್ಳೆಯ ಸಿನಿಮಾ ಆಗುತ್ತದೆ ಎನ್ನುವ ನಿರೀಕ್ಷೆ ನನ್ನದು.ಸೂರಿ, ಸಂತೋಷ್‌ ಜತೆಗೆ ಸಿನಿಮಾ ಮಾಡಲು ನಾನು ಯಾವಾಗಲೂ ಸಿದ್ಧ.

ADVERTISEMENT

‘ಯುವರತ್ನ’ ಟೈಟಲ್‌ ಯುವಜನರನ್ನು ಸೆಳೆಯುವ ಉದ್ದೇಶದಿಂದ ಇಟ್ಟಿರುವುದೇ?

ಇದು ಯುವಜನರನ್ನು ಅಷ್ಟೇ ಅಲ್ಲ, ಎಲ್ಲರನ್ನೂ ಆಕರ್ಷಿಸುವಂತಹ ಟೈಟಲ್‌. ಆಕರ್ಷಣೆ ಅನ್ನುವುದಕ್ಕಿಂತಲೂ ನಾವು ಜೀವನದಲ್ಲಿ ನಡೆದುಕೊಳ್ಳುವಂತೆ ಸಿನಿಮಾದಲ್ಲಿಯೂ ಕಂಟೆಂಟ್‌ ಇರುತ್ತದೆ. ಒಂದು ಸಿನಿಮಾ ಮಾಡಿದಾಗ ಅದು ನಮ್ಮ ದೇಶಕ್ಕೆ, ರಾಜ್ಯಕ್ಕೆ ಹೊಂದಿಕೆಯಾಗುವಂತಿರಬೇಕು. ನಮ್ಮ ಪ್ರೇಕ್ಷಕರು ಇಷ್ಟಪಡುವಂತಿರಬೇಕು.

ಈ ಚಿತ್ರದಲ್ಲಿ ಕ್ರೀಡಾಪಟುವಾಗಿಕಾಣಿಸಿಕೊಂಡಿದ್ದೀರಾ?

ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿರುವುದು ಸಿನಿಮಾದ ಒಂದು ಭಾಗ. ಕ್ರೀಡಾಪಟುವಾಗಿ ತೋರಿಸಿರುವುದು ಸಂತೋಷ್‌ ಮತ್ತು ವಿಜಯ್‌ ಅವರ ಐಡಿಯಾ. ಸಿನಿಮಾದಲ್ಲಿ ಇರುವುದನ್ನೇ ಟೀಸರ್‌ನಲ್ಲಿ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಫಸ್ಟ್‌ಲುಕ್‌ ಆ ರೀತಿ ಇರುತ್ತದೆ ಎನ್ನುವುದುಶೂಟಿಂಗ್‌ ಮಾಡುವಾಗಲೂ ನನಗೆ ಗೊತ್ತಿರಲಿಲ್ಲ. ಫಸ್ಟ್‌ಲುಕ್‌ ತುಂಬಾ ಚೆನ್ನಾಗಿದೆ. ಎಲ್ಲರೂ ಇದಕ್ಕೆ ತುಂಬಾಪರಿಶ್ರಮ ಹಾಕಿದ್ದಾರೆ.

ಈ ವರ್ಷ ನಿಮ್ಮ ಎಷ್ಟು ಸಿನಿಮಾ ತೆರೆಗೆ ಬರಲಿವೆ?

‘ಯುವರತ್ನ’ ಚಿತ್ರವಂತೂ ಈ ವರ್ಷ ತೆರೆಕಾಣುವುದು ಹಂಡ್ರೆಸ್‌ ಪರ್ಸೆಂಟ್‌ ಗ್ಯಾರಂಟಿ. ದೇವರ ದಯೆಯಿಂದ ‘ಜೇಮ್ಸ್‌’ ಕೂಡ ಈ ವರ್ಷದ ಕೊನೆಯಲ್ಲೇ ಬರುವ ನಿರೀಕ್ಷೆ ಇದೆ. ಇದರ ಜತೆಗೆ ಇನ್ನೊಂದಷ್ಟು ಪ್ರಾಜೆಕ್ಟ್‌ಗಳು ಕೈಯಲ್ಲಿವೆ.ಸತ್ಯಪ್ರಕಾಶ್‌ ಜತೆಗೆ ಒಂದು ಸಿನಿಮಾ ಮಾಡಲಿದ್ದು, ಆ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ.ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾ ಮಾಡಲು ಇಷ್ಟವಿದೆ.ಆದರೆ, ಅದು ಯಾಕೋ ಆಗುತ್ತಿಲ್ಲ.

‘ಜೇಮ್ಸ್‌’ ಸಿನಿಮಾದಲ್ಲಿ ಜೇಮ್ಸ್‌ಬಾಂಡ್‌ ಛಾಯೆ ಇರಲಿದೆಯೇ?

ಖಂಡಿತ ಇಲ್ಲವೇ ಇಲ್ಲ. ಇದು ಬಾಂಡ್‌ ಸಿನಿಮಾ ಅಲ್ಲ. ಹೆಸರು ಜೇಮ್ಸ್‌ ಅಷ್ಟೆ.ಜೇಮ್ಸ್‌ ಬಾಂಡ್‌ಗೆ ಸಂಬಂಧಿಸಿದ ಸಿನಿಮಾವೂ ಅಲ್ಲ. ಇದೊಂದು ಸಂಪೂರ್ಣ ಮನರಂಜನೆಯ ಸಿನಿಮಾ. ಈ ಟೈಟಲ್‌ ಇಟ್ಟಾಗಲೇ ಅಭಿಮಾನಿಗಳು, ನನ್ನ ಹಿತೈಷಿಗಳು ಮತ್ತು ಚಿತ್ರೋದ್ಯಮದ ಸ್ನೇಹಿತರು ತುಂಬಾ ಇಷ್ಟಪಟ್ಟರು.

ಸಿನಿಮಾ ನಿರ್ಮಾಣ ಹೇಗನಿಸುತ್ತಿದೆ?

ನಾನು ವಜ್ರೇಶ್ವರಿಗೆ ಸಂಬಂಧಪಟ್ಟವನು.ಪಿಆರ್‌ಕೆ ಎನ್ನುವುದು ವಜ್ರೇಶ್ವರಿ ಕಂಬೈನ್ಸ್‌ಗೆ ಸಂಬಂಧಿಸಿದ್ದು, ಅದರ ಇನ್ನೊಂದು ಬ್ರಾಂಚ್‌ ಅಷ್ಟೇ. ನಮ್ಮ ಪ್ರೊಡಕ್ಷನ್‌ನಿಂದ ನೂರು ಸಿನಿಮಾಗಳನ್ನು ಮಾಡಬೇಕೆನ್ನುವುದು ನಮ್ಮ ಕನಸು. ನಾವು ನಮ್ಮ ತಾಯಿಗೆಏನಾದರೂ ಅರ್ಪಣೆ ಮಾಡಬೇಕು ಅಂದುಕೊಂಡು, ನಾನು ಮತ್ತು ಅಶ್ವಿನಿ ಸೇರಿ ವಜ್ರೇಶ್ವರಿ ಜತೆಗೆ ಇನ್ನೊಂದು ಚಿಕ್ಕ ಪ್ರೊಡಕ್ಷನ್‌ ಕಂಪನಿ ಪಿಆರ್‌ಕೆ (ಪಾರ್ವತಮ್ಮ ರಾಜ್‌ಕುಮಾರ್‌) ಆರಂಭಿಸಿದೆವು. ಈ ಪ್ರೊಡಕ್ಷನ್‌ನಲ್ಲಿ ಕಂಟೆಂಟ್‌ ಓರಿಯಂಟೆಡ್‌ ಸಿನಿಮಾ ಮಾಡುವುದು ನಮ್ಮ ಕನಸಾಗಿತ್ತು. ಅದನ್ನು ಈಗ ನನಸು ಮಾಡಿಕೊಂಡು ಬರುತ್ತಿದ್ದೇವೆ.

ಈ ಬ್ಯಾನರ್‌ನಲ್ಲಿ ಇನ್ನು ಎರಡು ಸಿನಿಮಾಗಳು ಸಿದ್ಧವಾಗಿವೆ. ‘ಮಾಯಾಬಜಾರ್‌’ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಬಿಡುಗಡೆ ಮುಂದೂಡುತ್ತಲೇ ಬರಲಾಗಿತ್ತು. ಬಿಡುಗಡೆ ಮಾಡಲುದಿನಾಂಕವೂ ಕೂಡಿ ಬಂದಿರಲಿಲ್ಲ. ಸೆನ್ಸಾರ್‌ ಆಗಬೇಕಿದ್ದು,ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲಿದ್ದೇವೆ.

ನಟನೆ– ನಿರ್ಮಾಣ ಎರಡನ್ನೂ ಹೇಗೆ ನಿರ್ವಹಿಸುತ್ತಿದ್ದೀರಿ?

ಪ್ರೊಡಕ್ಷನ್‌ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದನ್ನು ಪತ್ನಿ ಅಶ್ವಿನಿ ನೋಡಿಕೊಳ್ಳುತ್ತಾರೆ. ಕಥೆ ಕೇಳುವುದು ಮತ್ತು ಬಜೆಟ್‌ ಬಗ್ಗೆಮಾತ್ರ ನಾನು ನೋಡಿಕೊಳ್ಳುತ್ತೇನೆ ಅಷ್ಟೆ.

ಸೋಷಿಯಲ್‌ ಮೀಡಿಯಾಕ್ಕೆ ಪ್ರವೇಶ ನೀಡಿರುವ ಬಗ್ಗೆ ಹೇಳಿ...

ಈಗ ಟ್ರೆಂಡ್‌ ಚೇಂಜ್‌ ಆಗಿದೆ. ಅದಕ್ಕೆ ತಕ್ಕಂತೆ ನಾವು ಚೇಂಜ್‌ ಆಗಬೇಕು. ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲದಕ್ಕೂ ಪ್ರತಿಕ್ರಿಯಿಸಬೇಕು, ಅಭಿಪ್ರಾಯ ದಾಖಲಿಸಬೇಕೆಂದಿಲ್ಲ.ಸಿನಿಮಾಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು, ನಮ್ಮ ಸಿನಿಮಾಗಳನ್ನು ಪ್ರಮೋಟ್‌ ಮಾಡಲು ಸೋಷಿಯಲ್‌ ಮೀಡಿಯಾ ಕೂಡ ಒಂದು ವೇದಿಕೆ. ಅಲ್ಲಿ ಕ್ರೀಡೆ ಮತ್ತು ಫಿಟ್‌ನೆಸ್‌ ಬಗ್ಗೆ ನನಗೆ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು ನನಗೆ ಇಷ್ಟ. ಫಿಟ್‌ನೆಸ್‌ ಬಗ್ಗೆ ವಿಡಿಯೋ ಮಾಡಿ ಹಂಚಿಕೊಳ್ಳುತ್ತೇನೆ. ಏಕೆಂದರೆ ಅದನ್ನು ಜನರು ಅನುಸರಿಸಿದರೆ ಕೊನೆ ಪಕ್ಷ ಅವರ ಆರೋಗ್ಯಕ್ಕಾದರೂ ಒಳ್ಳೆಯದಾಗುತ್ತದೆ. ಸೋಷಿಯಲ್‌ ಮೀಡಿಯಾದಲ್ಲಿ ನಕಾರಾತ್ಮಕ ಆಲೋಚನೆಗಳೇ ಹೆಚ್ಚಾಗುತ್ತಿವೆ. ಇದರ ನಡುವೆ ಸಕರಾತ್ಮಕವಾಗಿರುವ ಸಂಗತಿ ಹಂಚಿಕೊಂಡರೆ ಅದು ಎಲ್ಲರಿಗೂ ಖುಷಿ ಕೊಡಬಹುದು.

ಚಿತ್ರರಂಗಕ್ಕೆ ಮಾರಕವಾಗಿರುವ ಪೈರಸಿ ಬಗ್ಗೆ ಏನು ಹೇಳುತ್ತೀರಿ...

ಈಗತಂತ್ರಜ್ಞಾನ ಮುಂದುವರಿದು ಬೆಳೆದುಬಿಟ್ಟಿದೆ. ಪೈರಸಿ ತಪ್ಪಿಸಲು ಆಗುತ್ತಿಲ್ಲ. ಎಲ್ಲಿ ಪೈರಸಿಯಾಗುತ್ತದೆ ಎನ್ನುವುದನ್ನು ಪತ್ತೆ ಹಚ್ಚಲು ಆಗುತ್ತಿಲ್ಲ. ಪೈರಸಿಯನ್ನು ನಾವು ಹೇಗಾದರೂ ಮಾಡಿ ತಡೆಯಲೇಬೇಕೆಂದರೆ ಪ್ರೇಕ್ಷಕರಲ್ಲಿಜಾಗೃತಿ ಬೆಳೆಸಬೇಕಷ್ಟೆ.ಚಿತ್ರಮಂದಿರದಲ್ಲಿ ಚಿತ್ರದ ನಕಲು ನಡೆದರೆ ಅದನ್ನು ಚಿತ್ರಾಭಿಮಾನಿಗಳೇ ಹಿಡಿದು,ತಡೆದು, ಹೊಡೆದ ನಿದರ್ಶನಗಳೂ ಇವೆ. ಈಗ ಜನರು ಹೆಚ್ಚು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಿದ್ದಾರೆ. ಅದು ಇನ್ನಷ್ಟು ಹೆಚ್ಚಾಗಬೇಕು. ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೆಚ್ಚು ಬರುವಂತೆ ಮಾಡುವ ಚಾಲೆಂಜ್‌ ನಮ್ಮೆಲ್ಲರ ಮೇಲಿದೆ.

ರಾಘಣ್ಣನಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದ್ದು ಏನಿಸಿತು?

ನನಗೆ ತುಂಬಾ ಸಂತೋಷವಾಗಿದೆ. ನಾನು ರಾಘಣ್ಣ, ಶಿವಣ್ಣನ ಅಭಿಮಾನಿಯಾಗಿ ಹೇಳಬೇಕೆಂದರೆ ಗಜಪತಿ ಗರ್ವಭಂಗ, ನಂಜುಂಡಿ ಕಲ್ಯಾಣ ಸಿನಿಮಾದಲ್ಲೇ ರಾಘಣ್ಣನಿಗೆ ಪ್ರಶಸ್ತಿ ಬರಬೇಕಿತ್ತು ಎನಿಸುತ್ತದೆ. ಆದರೆ, ಪ್ರಶಸ್ತಿ ಕೊಡುವುದು ಸಂಬಂಧಪಟ್ಟವರ ತೀರ್ಮಾನ. ರಾಘಣ್ಣ ಆರೋಗ್ಯ ಸಮಸ್ಯೆ ಎದುರಾದ ಮೇಲೂ ಅದರಿಂದ ಚೇತರಿಸಿಕೊಂಡು ನಟಿಸಿ, ಪ್ರಶಸ್ತಿಗೆ ಪಾತ್ರವಾಗಿದ್ದು ಹೆಮ್ಮೆಯ ವಿಚಾರ. ನನಗೆಬಾಲನಟನಾಗಿ ಪ್ರಶಸ್ತಿ ಸಿಕ್ಕಿದೆ. ನನ್ನ ಅಕ್ಕ ಪೂರ್ಣಿಮಾಗೂ ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಪ್ರಶಸ್ತಿ ಸಿಕ್ಕಿದೆ. ಶಿವಣ್ಣ ಮತ್ತು ರಾಘಣ್ಣನಿಗೆ ನಾಯಕರಾದ ಮೇಲೆ ಪ್ರಶಸ್ತಿ ಸಿಕ್ಕಿದೆ.

ರಾಜ್‌ ಕುಡಿಗಳೆಲ್ಲರೂ ಸೇರಿ ಒಂದು ಸಿನಿಮಾದಲ್ಲಿ ನಟಿಸುವ ಕನಸು ಏನಾಯಿತು?

ಇದುವರೆಗೂ ಅಂಥ ಸ್ಕ್ರಿಪ್ಟ್‌ ಯಾಕೋಬರಲೇ ಇಲ್ಲ....!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.