ADVERTISEMENT

‘ಧರ್ಮದ ಹಾದಿಗೆ ಅಡ್ಡಿ’ ಬಾಲಿವುಡ್ ತೊರೆದ ‘ಸೀಕ್ರೆಟ್ ಸೂಪರ್ ಸ್ಟಾರ್’ ಝೈರಾ ವಾಸಿಂ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 8:31 IST
Last Updated 30 ಜೂನ್ 2019, 8:31 IST
   

ಬೆಂಗಳೂರು: ‘ದಂಗಲ್’ ಚಿತ್ರದಲ್ಲಿ ಆಮೀರ್‌ ಖಾನ್ ಮಗಳಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಕಾಶ್ಮೀರ ಮೂಲದ ನಟಿ ಝೈರಾ ವಾಸಿಂ ಬಾಲಿವುಡ್‌ನಿಂದ ದೂರಾಗುವ ನಿರ್ಧಾರ ಪ್ರಕಟಿಸಿದ್ದಾರೆ. ‘ಧರ್ಮದ ಜೊತೆಗಿನ ಸಂಬಂಧಕ್ಕೆ ಚಿತ್ರ ಬದುಕು ಅಡ್ಡಿಯುಂಟುಮಾಡುತ್ತದೆ’ ಎನ್ನುವುದು ಅವರು ನೀಡಿರುವ ಕಾರಣ.ಇದೀಗ 18ರ ಹರೆಯಲ್ಲಿರುವ ಝೈರಾ, ಅದ್ವೈತ್ ಚೌಹಾಣ್ ಅವರ ‘ಸೀಕ್ರೆಟ್ ಸೂಪರ್‌ಸ್ಟಾರ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಈ ಕುರಿತು ತಮ್ಮ ಫೇಸ್‌ಬುಕ್ ಪುಟದಲ್ಲಿ ಸುದೀರ್ಘ ಪೋಸ್ಟ್ ಬರೆದುಕೊಂಡಿರುವ ಝೈರಾ, ‘ಐದು ವರ್ಷಗಳ ಹಿಂದೆ ನಾನು ತೆಗೆದುಕೊಂಡ ಒಂದು ನಿರ್ಧಾರವು ನನ್ನ ಬದುಕನ್ನು ಶಾಶ್ವತವಾಗಿ ಬದಲಿಸಿತು. ಬಾಲಿವುಡ್‌ಗೆ ಹೆಜ್ಜೆ ಇಟ್ಟೆ, ಅದು ನನಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ನನ್ನನ್ನು ಯುವಜನರ ರೋಲ್ ಮಾಡೆಲ್ ಎಂದು ಹಲವರು ಕೊಂಡಾಡಿದರು. ಆದರೆ ನನಗೆ ಎಂದಿಗೂ ಹಾಗೆ ಆಗಬೇಕು ಅಂತ ಅನ್ನಿಸಿಯೇ ಇರಲಿಲ್ಲ. ಸೋಲು ಮತ್ತು ಗೆಲುವನ್ನು ನಾನು ಅರ್ಥಮಾಡಿಕೊಳ್ಳುವ ರೀತಿಯೇ ಬೇರೆ. ಅದು ಈಗ ನನಗೂ ಅರ್ಥವಾಗುತ್ತಿದೆ. ಇಂದಿಗೆ ನಾನು ಚಿತ್ರಜಗತ್ತಿಗೆ ಪದಾರ್ಪಣೆ ಮಾಡಿ ಐದು ವರ್ಷಗಳಾಗುತ್ತವೆ. ಚಿತ್ರನಟಿಯಾಗಿ ನಾನು ಸಂತೋಷದಿಂದ ಇಲ್ಲ ಎಂಬ ನಿಜವನ್ನು ನಾನು ಒಪ್ಪಿಕೊಳ್ಳಲೇ ಬೇಕಾಗಿದೆ. ನಾನು ಇನ್ಯಾರೋ ಆಗಲು ಕಷ್ಟಪಡುತ್ತಿದ್ದೇನೆ ಎಂದು ತುಂಬಾ ಅನ್ನಿಸುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಸಮಯ, ಶ್ರಮ ಮತ್ತು ಭಾವನೆಗಳನ್ನು ತೊಡಗಿಸಿ ನಾನು ಮಾಡುತ್ತಿದ್ದ ಕೆಲಸಗಳು ನನ್ನೊಳಗೆ ತಳಮಳ ಹುಟ್ಟುಹಾಕುತ್ತಿದ್ದವು. ನಾನು ಬಾಲಿವುಡ್‌ಗೆ ಸರಿಯಾಗಿ ಹೊಂದಬಹುದು, ಆದರೆ ಖಂಡಿತ ನಾನು ಅಲ್ಲಿನವಳು ಆಗಲಾರೆ. ಚಿತ್ರಜಗತ್ತು ನನಗೆ ಸಾಕಷ್ಟು ಪ್ರೀತಿ, ಬೆಂಬಲ ಮತ್ತು ಹೊಗಳಿಕೆಯನ್ನು ತಂದುಕೊಟ್ಟಿದೆ. ಆದರೆ ಅದರಿಂದ ಧರ್ಮದ ಜೊತೆಗಿನ ನನ್ನ ಸಂಬಂಧಕ್ಕೆ ಧಕ್ಕೆಯೊದಗಿದೆ. ನಿಧಾನವಾಗಿ, ಅಪ್ರಜ್ಞಾಪೂರ್ವಕವಾಗಿ ನಾನು (ಇಮಾನ್) ದೇವರ ಹಾದಿಯಿಂದ ದೂರವಾಗುತ್ತಿದ್ದೇನೆ. ನಾನು ಕೆಲಸ ಮಾಡುವ ಸ್ಥಳವು ನನ್ನ ಇಮಾನ್‌ ಹಾದಿಗೆ ಅಡ್ಡಬರುತ್ತಿದೆ. ಧರ್ಮದೊಂದಿಗಿನ ನನ್ನ ಸಂಬಂಧಕ್ಕೆ ಆತಂಕವೊಡ್ಡಿದೆ’ ಎಂದು ಝೈರಾ ಹೇಳಿಕೊಂಡಿದ್ದಾರೆ.

ಮೊದಲ ಚಿತ್ರ ಬಿಡುಗಡೆಯಾಗುವ ಮೊದಲೂ ಝೈರಾ ಹಲವು ಅಡ್ಡಿಗಳನ್ನು ಎದುರಿಸಿದ್ದರು. ‘ಚಿತ್ರಗಳಲ್ಲಿ ನಟಿಸುವುದು ಇಸ್ಲಾಂ ಆಶಯಗಳಿಗೆ ವಿರುದ್ಧವಾದುದು’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಮೊದಲ ಚಿತ್ರಕ್ಕೇ ಝೈರಾ, ಅತ್ಯುತ್ತಮ ಪೋಷಕ ನಟಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಪ್ರಿಯಾಂಕಾ ಛೋಪ್ರಾ ಮತ್ತು ಫರ್ಹಾನ್ ಅಖ್ತರ್ ಮುಖ್ಯ ಭೂಮಿಕೆಯಲ್ಲಿರುವಶೊನಾಲಿ ಬೋಸ್ ನಿರ್ಮಾಣದ ‘ದಿ ಸ್ಕೈ ಈಸ್ ಪಿಂಕ್’ ಚಿತ್ರದಲ್ಲಿ ಝೈರಾ ನಟಿಸಿದ್ದಾರೆ. ಇದು ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.