ADVERTISEMENT

OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾದ ‘ಹೋಮ್‌ಬೌಂಡ್’; ಸಿನಿಮಾದಲ್ಲೇನಿದೆ ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 12:08 IST
Last Updated 17 ಡಿಸೆಂಬರ್ 2025, 12:08 IST
   

ಜಾಗತಿಕ ಸಿನಿಮಾಗಳಿಗಾಗಿ ನೀಡುವ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ‘ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್‌ ಫಿಲ್ಮ್’ ವಿಭಾಗದ ಅಂತಿಮ ಪಟ್ಟಿಯಲ್ಲಿ ಭಾರತದ ‘ಹೋಮ್‌ಬೌಂಡ್‌’ ಸಿನಿಮಾ ಕೂಡ ಸ್ಥಾನಪಡೆದಿದೆ.

ನೀರಜ್ ಘಯ್ವಾನ್ ನಿರ್ದೇಶಿಸಿರುವ ‘ಹೋಮ್‌ಬೌಂಡ್‌’ ಸಿನಿಮಾವು 2025ರ ಕಾನ್‌ ಚಿತ್ರೋತ್ಸವದಲ್ಲಿ ಕೂಡ ಪ್ರದರ್ಶನಗೊಂಡಿತ್ತು.

ನಿರ್ಮಾಪಕ ಕರಣ್‌ ಜೋಹಾರ್‌ ಅವರ ಧರ್ಮ ಪ್ರೊಡಕ್ಷನ್‌ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ADVERTISEMENT

‘ಹೋಮ್‌ಬೌಂಡ್‌’ ಸಿನಿಮಾದ ಕತೆ ಏನು

ಉತ್ತರ ಭಾರತದ ಸಣ್ಣ ಹಳ್ಳಿಯೊಂದರ ಬಡ ಕುಟುಂಬದ ಇಬ್ಬರು ಬಾಲ್ಯ ಸ್ನೇಹಿತರು ಪೊಲೀಸ್‌ ಇಲಾಖೆಯಲ್ಲಿ ನೌಕರಿಗೆ ಸೇರುವ ಕನಸಿಟ್ಟುಕೊಂಡು, ಅದಕ್ಕಾಗಿ ಪಡುವ ಪರಿಶ್ರಮದ ಕತೆಯೇ ಹೋಮ್‌ಬೌಂಡ್‌.

ಸರ್ಕಾರಿ ಕೆಲಸಕ್ಕೆ ಸೇರುವ ಮೂಲಕ ತಮ್ಮ ಬಡತನ, ಸ್ಥಿತಿಗತಿ ಹಾಗೂ ವಸ್ತುಸ್ಥಿತಿಯನ್ನು ಬದಲಾಯಿಸಬಹುದು ಎನ್ನುವ ಕನಸಿಟ್ಟುಕೊಂಡ ತರುಣರಿಗೆ ಎದುರಾಗುವ ಸವಾಲುಗಳ ಸುತ್ತಾ ‘ಹೋಮ್‌ಬೌಂಡ್’ ಸಿನಿಮಾ ಸಾಗುತ್ತದೆ.

ಭಾರತದಂತಹ ದೇಶದಲ್ಲಿರುವ ಜಾತಿ, ಧರ್ಮ, ಭ್ರಷ್ಟಾಚಾರ ಮುಂತಾದ ಸಾಮಾಜಿಕ ಅಸಮಾನತೆಯನ್ನು ಮೆಟ್ಟಿನಿಲ್ಲುವ ದೇಶದ ಬಹುಪಾಲು ಇರುವ ಸಾಮಾನ್ಯ ವರ್ಗದ ತರುಣರ ಕಷ್ಟ –ಸುಖಗಳು ಈ ಚಿತ್ರದ ಜೀವಾಳ.

ಸರ್ಕಾರಿ ಕೆಲಸಕ್ಕಾಗಿನ ಪೈಪೋಟಿ, ಪೊಲೀಸ್‌ ನೇಮಕಾತಿಯಲ್ಲಿನ ಭ್ರಷ್ಟಾಚಾರ, ಕರೋನ, ಲಾಕ್‌ಡೌನ್‌, ಶಾಲೆಯಲ್ಲಿ ದಲಿತರು ಮಾಡಿದ ಅಡುಗೆಯನ್ನು ತಿರಸ್ಕರಿಸುವ ಮೇಲ್ವರ್ಗದ ಪೋಷಕರು.. ಹೀಗೆ ಸಿನಿಮಾದ ಉದ್ದಕ್ಕೂ ಹಲವು ನೈಜ ಘಟನೆಗಳನ್ನು ಪೋಣಿಸಿಕೊಂಡು ಚಿತ್ರಕತೆಯನ್ನು ಹೆಣೆಯಲಾಗಿದೆ.

‘ಹೋಮ್‌ಬೌಂಡ್‌’ ಚಿತ್ರದ ವಿಶೇಷತೆಯಿದು

ಲೇಖಕ ಬಶರತ್ ಪೀರ್ ಅವರು ‘ಎ ಫ್ರೆಂಡ್‌ಶಿಫ್, ಎ ಪ್ಯಾಂಡಮಿಕ್‌ ಅಂಡ್‌ ಎ ಡೆತ್‌ ಬಿಸೈಡ್‌ ದಿ ಹೈವೇ’ ಪುಸ್ತಕದಿಂದ ಈ ಸಿನಿಮಾವು ಪ್ರೇರಣೆಯಾಗಿದೆ. ಆ ಪುಸ್ತಕವು 2020ರಲ್ಲಿ ಬಿಡುಗಡೆಯಾಗಿತ್ತು.

ಗ್ರಾಮೀಣ ಹಿನ್ನಲೆಯಲ್ಲಿ ಸಾಗುವ ಚಿತ್ರಕತೆಯು, ಸರ್ಕಾರಿ ಉದ್ಯೋಗದ ಕನಸಿಟ್ಟುಕೊಂಡ ಯುವಜನರ ಜೀವನದ ಪ್ರತಿಬಿಂಬದಂತೆ ಹಾಗೂ ನಮ್ಮದೇ ಜೀವನ ಅಥವಾ ನಮ್ಮ ಮನೆಯ ಕತೆಯೇ ಎನ್ನುವಂತೆ ಭಾಸವಾಗುತ್ತದೆ.

ಹೋಮ್‌ಬೌಂಡ್‌ನ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಇಶಾನ್ ಖಟ್ಟರ್, ವಿಶಾಲ್ ಜೇತ್ವಾ ಹಾಗೂ ಜಾನ್ವಿ ಕಪೂರ್ ಅವರು ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ.

ಅದರಲ್ಲೂ ಇಶಾನ್‌ ಖಟ್ಟರ್‌ ಹಾಗೂ ವಿಶಾಲ್‌ ಜೇತ್ವಾ ಅವರ ಗೆಳೆತನ ಸಿನಿಮಾವನ್ನು ಆವರಿಸಿಕೊಳ್ಳುವಂತೆ ಮಾಡುತ್ತದೆ. ಇಬ್ಬರ ಅಭಿನಯವು ಸಿನಿಮಾದ ಹಲವು ಕಡೆಗಳಲ್ಲಿ ಪ್ರೇಕ್ಷಕರನ್ನು ಭಾವುಕಗೊಳಿಸುತ್ತದೆ.

‘ಹೋಮ್‌ಬೌಂಡ್‌’ ಎಲ್ಲಿ ನೋಡಬಹುದು

ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿರುವ ಬಾಲಿವುಡ್‌ನ ‘ಹೋಮ್‌ಬೌಂಡ್‌’ ಸಿನಿಮಾ 2025ರ ಮೇ. 21ರಂದು ತೆರೆಕಂಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಕೇವಲ ₹3 ಕೋಟಿ ಗಳಿಸಿದ್ದ ಈ ಸಿನಿಮಾವು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. 122 ನಿಮಿಷಗಳಿರುವ ಈ ಸಿನಿಮಾವು ಸೆ.26ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.