ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಪಾಕಿಸ್ತಾನ ಮೇಲೆ ಕಠಿಣ ಕ್ರಮ ಕೈಗೊಂಡಿರುವ ಭಾರತ, ಸಿಂಧೂ ಜಲ ನದಿ ಒಪ್ಪಂದ ಸೇರಿದಂತೆ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಂಡಿತ್ತು.
ಭಾರತ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೇಲೂ ನಿರ್ಬಂಧ ವಿಧಿಸಲಾಗಿತ್ತು.
ಇದರ ಮುಂದುವರಿದ ಭಾಗವೆಂಬಂತೆ, ಪಾಕಿಸ್ತಾನ ಮೂಲದ ವೆಬ್-ಸರಣಿ, ಚಲನಚಿತ್ರ, ಪಾಡ್‌ಕಾಸ್ಟ್ ಸೇರಿದಂತೆ ಎಲ್ಲ ರೀತಿಯ ಕಂಟೆಂಟ್‌ಗಳನ್ನು ತಕ್ಷಣವೇ ನಿಲ್ಲಿಸುವಂತೆ ಒಟಿಟಿ ವೇದಿಕೆಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಒಟಿಟಿ ವೇದಿಕೆಗಳು, ಮಾಧ್ಯಮ ಸ್ಟ್ರೀಮಿಂಗ್ ವೇದಿಕೆಗಳು, ಮಧ್ಯವರ್ತಿಗಳ ವೆಬ್-ಸಿರೀಸ್, ಚಲನಚಿತ್ರ, ಹಾಡುಗಳು, ಪಾಡ್‌ಕಾಸ್ಟ್‌ಗಳು ಮತ್ತು ಇತರೆ ಸ್ಟ್ರೀಮಿಂಗ್ ಮಾಧ್ಯಮಗಳು ಪಾಕ್ ಮೂಲದ ವಿಷಯಗಳ ಪ್ರಸಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಗುರಿಯಾಗಿಸಿ ಭಾರತೀಯ ಸಶಸ್ತ್ರ ಪಡೆಗಳು, ಮಂಗಳವಾರ ಮಧ್ಯರಾತ್ರಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಈ ದಾಳಿಯಲ್ಲಿ ಉಗ್ರರ ಒಂಬತ್ತು ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.