ADVERTISEMENT

ಜೀ5ನಲ್ಲಿ ‘ರಾಕ್ಷಸ’: ಹೆಜ್ಜೆಹೆಜ್ಜೆಗೂ ಕುತೂಹಲ ಕೆರಳಿಸುವ ಪತ್ತೆದಾರಿ ವೆಬ್‌ ಸರಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2026, 7:08 IST
Last Updated 21 ಫೆಬ್ರುವರಿ 2026, 7:08 IST
   

ಊರಿನ ಕೊನೆಯಲ್ಲಿರುವ ಹಿನ್ನೀರಿನಲ್ಲಿ ನರಭಕ್ಷಕನಾಗಿ ಕುಳಿತ ಮೊಸಳೆಯೊಂದು ಜನರನ್ನು ತಿನ್ನುತ್ತಿದೆ ಎನ್ನುವ ಗುಲ್ಲು ಆ ಊರಿನ ಜನರನ್ನು ಮಾತ್ರವಲ್ಲದೆ ಪೋಲೀಸರ ನಿದ್ದೆಗೆಡಿಸಿರುತ್ತದೆ. ಮೊಸಳೆಯ ಭಯದೊಂದಿಗೆ ಆರಂಭವಾಗುವ ಕಥೆ, ಸಾಗುತ್ತಾ ಕೊಲೆ ಪ್ರಕರಣಕ್ಕೆ ತೆರೆದುಕೊಳ್ಳುತ್ತದೆ.

ನಟ ವಿಜಯ ರಾಘವೇಂದ್ರ, ಮಯೂರಿ, ಹಾಸ್ಯ ನಟ ಜಹಾಂಗೀರ್, ಅಪ್ಪಣ್ಣ, ಅವಿನಾಶ್ ಸೇರಿ ಹಲವರು ನಟಿಸಿರುವ ‘ರಾಕ್ಷಸ’ ವೆಬ್‌ ಸರಣಿ ಜಿ5ನಲ್ಲಿ ವೀಕ್ಷಣೆಗೆ ಲಭ್ಯವಿದೆ. 7 ಸಂಚಿಕೆಗಳ ಈ ಸರಣಿ ನಿರ್ದೇಶಕ ತರುಣ್‌ ಸುಧೀರ್‌ ಅವರು ತಮ್ಮದೇ ಮಾಲೀಕತ್ವದ ‘ತರುಣ್‌ ಸುಧೀರ್‌ ಪ್ರೊಡಕ್ಷನ್ಸ್‌’ನಡಿ ನಿರ್ಮಿಸಿದ್ದಾರೆ.

ಸವದತ್ತಿ ಗ್ರಾಮದಲ್ಲಿ ನಡೆಯುವ ಕ್ರೈಮ್‌ ಥ್ರಿಲ್ಲರ್‌ ಇದಾಗಿದ್ದು, ಉತ್ತರ ಕರ್ನಾಟಕದ ಭಾಷೆಯನ್ನು ಸರಣಿಯುದ್ದಕ್ಕೂ ಕೇಳಬಹುದು. ಸವದತ್ತಿ ಯಲ್ಲಮ್ಮ, ಪೊಲೀಸ್ ಠಾಣೆ, ಊರಿನ ಕೊನೆಯಲ್ಲಿರುವ ಹಿನ್ನೀರಿನ ಸುತ್ತ ಕಥೆ ಸಾಗುತ್ತದೆ.

ADVERTISEMENT

ಹಿನ್ನೀರಿನ ದಡದಲ್ಲಿ ಶವವೊಂದು ಸಿಗುತ್ತದೆ. ಈ ಬಗ್ಗೆ ಊರಿನ ಜನರು ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ತನಿಖೆಗೆಂದು ಎಸ್‌ಐ ಹನುಮೇಶ/ ಹನುಮಪ್ಪ (ವಿಜಯ್‌ ರಾಘವೇಂದ್ರ), ಎಎಸ್‌ಐ ವಿರೂಪಾಕ್ಷ (ಜಹಾಂಗೀರ್), ಎಎಸ್‌ಐ ಯೆಲ್ಲಪ್ಪ (ಅಪ್ಪಣ್ಣ) ಹಾಗೂ ಡಿಎಸ್‌ಪಿ ರುದ್ರಪ್ಪ (ಅಭಿಜಿತ್‌), ಇನ್‌ಸ್ಪೆಕ್ಟರ್ ರವೀಂದ್ರ (ಹುಲುಗಪ್ಪ ಕಟ್ಟಿಮನಿ) ಹೆಣ ಸಿಕ್ಕ ಜಾಗಕ್ಕೆ ಬರುತ್ತಾರೆ. ಮಣ್ಣಿನಲ್ಲಿ ಹುಗಿದ ಶವ ಯಾರದ್ದೆಂದು ತನಿಖೆ ಮಾಡಲು ಆದೇಶಿಸಿ ಡಿಎಸ್‌ಪಿ ಹೊರಡುತ್ತಾರೆ. ಅಷ್ಟರಲ್ಲಿ ಮೊಸಳೆ ಬಂದಿದೆ ಎಂದು ಜನರ ಕೂಗಾಟ ಕೇಳಿ ಪೊಲೀಸರೆಲ್ಲ ಅಲ್ಲಿಗೆ ಓಡುತ್ತಾರೆ. ಹನುಮೇಶ, ಡಿಎಸ್‌ಪಿಯನ್ನು ಕಳುಹಿಸಿ ಬಂದು ನೋಡುವಷ್ಟರಲ್ಲಿ ಹೆಣದ ರುಂಡವೇ ಮಾಯವಾಗಿರುತ್ತದೆ. ಅಲ್ಲಿಂದ ಕಥೆಯಲ್ಲಿ ಹೊಸ ಆಯಾಮ ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೂ ಮೊಸಳೆಯ ಬಾಯಿಗೆ ಸಿಲುಕಿ ಜನ ಸಾಯುತ್ತಿದ್ದಾರೆ ಎಂದುಕೊಂಡಿದ್ದ ಪೊಲೀಸರಿಗೆ ಶಾಕ್‌ ಕಾದಿರುತ್ತದೆ.

ಇಲ್ಲಿ ಇನ್ನೊಬ್ಬ ಪ್ರಮುಖ ಪಾತ್ರದಾರಿ ಎಂದರೆ ಪೊಲೀಸ್‌ ಠಾಣೆಯಲ್ಲಿ ಚಹಾ, ಕಾಫಿ, ತಂದುಕೊಟ್ಟು, ಜವಾನನ ರೀತಿಯಲ್ಲಿ ಇರುವ ಬೀರ (ಮಹದೇವ ಹಡಪದ). ಕಥೆಯುದ್ದಕ್ಕೂ ಕಾಣಿಸಿಕೊಳ್ಳುವ ಬೀರನಿಗೂ, ಊರಿಗೇ ‘ರಾಕ್ಷಸ’ನೆಂದು ಕಾಣಿಸಿಕೊಳ್ಳುತ್ತಿರುವ ಮೊಸಳೆಗೂ ಇರುವ ಸಂಬಂಧವೇನು ಎನ್ನುವುದೇ ವೆಬ್‌ ಸರಣಿಯ ಕಥಾಹಂದರ.

ಇನ್ನೊಂದೆಡೆ ಹನುಮೇಶನ ಪತ್ನಿ ಜ್ಯೋತಿ (ಮಯೂರಿ) ತುಂಬು ಗರ್ಭಿಣಿ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಜ್ಯೋತಿಗೆ, ಸದಾ ಕೆಲಸದಲ್ಲಿ ತೊಡಗಿಕೊಂಡಿರುವ ಗಂಡನ ಅಲಭ್ಯತೆಯಿಂದ ಕಾಡುವ ಒಂಟಿತನ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಭರದಲ್ಲಿ ಪೊಲೀಸರು ಮತ್ತವರ ಕುಟುಂಬ ಎಷ್ಟರ ಮಟ್ಟಿಗೆ ಹೈರಾಣಾಗುತ್ತಾರೆ ಎನ್ನುವುದನ್ನು ವಿವರಿಸಿದ್ದಾರೆ ನಿರ್ದೇಶಕರು.

ಇದರ ಜತೆಗೆ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕೆಳಗೆ ಹಂತದ ಅಧಿಕಾರಿಗಳನ್ನು ಹಿರಿಯ ಅಧಿಕಾರಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವ ಎಳೆಯನ್ನೂ ಸರಣಿಯಲ್ಲಿ ತೋರಿಸಲಾಗಿದೆ.

ಇದೇ ಮೊದಲ ಬಾರಿಗೆ ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡಿರುವ ನಟ ವಿಜಯ್‌ ರಾಘವೇಂದ್ರ ಅವರ ನಟನೆ, ಮುಗ್ಧತೆ ನೋಡುಗರನ್ನು ಸೆಳೆಯುತ್ತದೆ. ಜಹಾಂಗೀರ್, ಅಪ್ಪಣ್ಣ, ಮಯೂರಿ ನಟನೆ ನೆನಪಿನಲ್ಲಿ ಉಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.