ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ‘ಗುಲ್ಟು’ ಚಿತ್ರದಲ್ಲಿ ಕಂಪ್ಯೂಟರ್‌ನ ಅಪಾಯಕಾರಿ ಜಗತ್ತನ್ನು ಕಟ್ಟಿಕೊಟ್ಟಿದ್ದರು. ಡಾರ್ಕ್ ವೆಬ್‌ಗಳ ಕುರಿತಾದ ಕಥೆ ಕುತೂಹಲ ಹುಟ್ಟಿಸಿತ್ತು. ಅದೇ ರೀತಿ ‘ಅಜ್ಞಾತವಾಸಿ’ಯಲ್ಲಿ ಕೂಡ 1990ರ ದಶಕದ ಕಂಪ್ಯೂಟರ್ ಪೆಟ್ಟಿಗೆಯನ್ನು ಮುಂದಿಟ್ಟುಕೊಂಡು, ಅದರಿಂದ ತೀರ ಕುಗ್ರಾಮಗಳಲ್ಲಿ ಶುರುವಾದ ಬದಲಾವಣೆಗಳನ್ನು ಹೇಳುತ್ತ ಹೋಗಿದ್ದಾರೆ. ಒಂದು ಹಂತದಲ್ಲಿ ಇಡೀ ಸಿನಿಮಾ ಕಂಪ್ಯೂಟರ್ ಮೇಲಿನ ಸಿನಿಮಾವೇ ಎಂಬಷ್ಟು ಅನುಮಾನ ಹುಟ್ಟಿಸುತ್ತದೆ! ಆದರೆ ಇದೊಂದು ಮರ್ಡರ್ ಮಿಸ್ಟ್ರಿ ಸಿನಿಮಾ ಎನ್ನಲು ಒಂದೆರಡು ಕೊಲೆಗಳು ನಡೆಯುತ್ತವೆ. ಇಷ್ಟಾಗಿಯೂ ಸಿನಿಮಾದಲ್ಲಿ ಇಷ್ಟವಾಗುವ ಸಾಕಷ್ಟು ಅಂಶಗಳು ಸಿಗುತ್ತವೆ. ಕಾರಣ ಚಿತ್ರವನ್ನು ಕಟ್ಟಿಕೊಟ್ಟ ರೀತಿ.
90ರ ದಶಕದಲ್ಲಿ ಕಂಪ್ಯೂಟರ್ ಎಂಬುದೇ ಹೊಸತು. ಹಳ್ಳಿಗಳಲ್ಲಿ ಆಗಷ್ಟೇ ಸಾಫ್ಟ್‌ವೇರ್ ಕ್ರಾಂತಿ ಶುರುವಾಗಿ ಮನೆಯ ಮಕ್ಕಳು ಊರು ಬಿಟ್ಟು ಹೊರಡಲು ಶುರುಮಾಡಿದ್ದರು. ಈಗ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಬೆಂಗಳೂರು ಸ್ವರ್ಗವಾಗಿರುವಂತೆ ಅಂದು ಅಮೆರಿಕ ನೆಚ್ಚಿನ ತಾಣವಾಗಿತ್ತು. ಮಲೆನಾಡು, ಕಾಫಿನಾಡುಗಳಿಂದ ಹೀಗೆ ಗುಳೆ ಹೋದವರು ಸಾಕಷ್ಟು ಜನ. ಆ ಕಾಲಘಟ್ಟದ ಚಿತ್ರಣವನ್ನು ನಿರ್ದೇಶಕರು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಕಾಫಿನಾಡಿನ ದಟ್ಟ ಕಾಡಿನ ನಡುವೆ ಇರುವ ಒಂದು ಊರು. ಅಲ್ಲಿನ ಪೊಲೀಸ್ ಠಾಣೆಯಿಂದ ಕಥೆ ಪ್ರಾರಂಭವಾಗುತ್ತದೆ. ಅದು ಫಾರೆಸ್ಟ್ ಆಫೀಸ್ ಅಲ್ಲ, ಪೊಲೀಸ್ ಠಾಣೆ ಎಂಬುದು ಅರ್ಥವಾಗಲು ಕೆಲಹೊತ್ತು ಬೇಕಾಗುತ್ತದೆ. ಆ ಊರಿಗೆ ಪೊಲೀಸ್ ಠಾಣೆ ಬಂದು 25 ವರ್ಷ ಕಳೆದರೂ ಅಲ್ಲಿ ಒಂದೇ ಒಂದು ಕೇಸ್ ಇಲ್ಲ. ಕೊಲೆ ಹಾಗಿರಲಿ, ತಲೆ ಉಪಯೋಗಿಸಿ ಕಳ್ಳತನ ಮಾಡುವವರೂ ಇಲ್ಲ. ಅಂಥ ಊರಿನಲ್ಲಿ ಎಸ್ಟೇಟ್ ಮಾಲೀಕ ಶ್ರೀನಿವಾಸಗೌಡರ ಕೊಲೆಯಾಗುತ್ತದೆ. ಮಗ ಮನೆ ಬಿಟ್ಟು ಹೋಗಿದ್ದಾನೆ. ಗೌಡರು ಕಾಡಿನ ತೋಟದಲ್ಲಿ ಬದುಕುವ ಒಂಟಿ ಜೀವ. ಗೌಡರದ್ದು ಸಾಯುವ ವಯಸ್ಸು. ಇಷ್ಟಾಗಿಯೂ ಅದು ಸಹಜ ಸಾವಲ್ಲ, ಕೊಲೆ ಎಂಬುದು ಪೊಲೀಸ್ ಇನ್‌ಸ್ಪೆಕ್ಟರ್ ಆಗಿರುವ ರಂಗಾಯಣ ರಘುಗೆ ಗೊತ್ತಾಗುತ್ತದೆ. ಕೊಲೆ ಮಾಡಿದವರು ಯಾರು ಎಂಬ ಕುತೂಹಲ ಬಹಳ ಕಾಲ ಉಳಿಯುವುದಿಲ್ಲ. ಅದರ ಬದಲಿಗೆ ಊರು, ಕಂಪ್ಯೂಟರ್, ಪೋಸ್ಟ್‌ಮ್ಯಾನ್, ಇಂಟರ್‌ನೆಟ್‌ನ ಸುತ್ತಲೇ ಕಥೆ ಸಾಗುತ್ತದೆ. ಕೆಲ ದೃಶ್ಯಗಳ ಪುನರಾವರ್ತನೆ, ಅಲ್ಲೇ ಸುತ್ತುವ ಕಥೆ ಮೊದಲಾರ್ಧದಲ್ಲಿ ಅಲ್ಲಲ್ಲಿ ತಾಳ್ಮೆ ಪರೀಕ್ಷಿಸುತ್ತದೆ.
ಇಮೇಲ್ ಮೂಲಕ ಶುರುವಾಗುವ ಅರುಣನ ಪ್ರೇಮಕಥೆ ಚಿತ್ರಕ್ಕೊಂದು ಹೊಸ ಚೈತನ್ಯ ನೀಡುತ್ತದೆ. ಊರಿನ ಎಲ್ಲರ ಪತ್ರವನ್ನು ಇಮೇಲ್ ಮಾಡುವ ರೋಹಿತ್ ಪಾತ್ರಧಾರಿಯಾಗಿ ಸಿದ್ದು ಮೂಲಿಮನಿ ಇಷ್ಟವಾಗುತ್ತಾರೆ. ಅಜ್ಞಾತವಾಸಿ ಅರುಣನ ಪ್ರೇಮಿಯಾಗಿ ಪಾವನಾ ಗೌಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಂಗಾಯಣ ರಘು ಎಂದಿನಂತೆ ಕೆಲವು ಕಡೆ ನಟಿಸುತ್ತ, ಇನ್ನು ಕೆಲವು ಕಡೆ ಸಹಜವೆನಿಸಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶರತ್ ಲೋಹಿತಾಶ್ವ, ರವಿಶಂಕರ್ ಗೌಡ, ಯಮುನಾ ಶ್ರೀನಿಧಿ ಅವರ ಪಾತ್ರಗಳೂ ಗಮನ ಸೆಳೆಯುತ್ತವೆ.
ಸಿನಿಮಾದ ದೊಡ್ಡ ಶಕ್ತಿ ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೈಚಳಕ. 90ರ ದಶಕದ ಬೈಕು, ಕಾರು, ಮನೆ, ಸುತ್ತಲ ಹಸಿರಾದ ಪರಿಸರದೊಂದಿಗೆ ಪ್ರತಿ ಫ್ರೇಮ್ ಅನ್ನು ವರ್ಣಮಯವಾಗಿಸಿದ್ದಾರೆ. ಅದಕ್ಕೆ ತಕ್ಕಂತೆ ಚರಣ್ ರಾಜ್ ಹಿನ್ನೆಲೆ ಸಂಗೀತವೂ ಒಂದು ಸುಮಧುರ ಅನುಭವ ನೀಡುತ್ತದೆ. ಇಷ್ಟಾಗಿಯೂ ಚಿತ್ರದಲ್ಲಿ ಇನ್ನೇನೋ ಬೇಕಿತ್ತು ಎನ್ನಿಸುವುದು ಬರವಣಿಗೆಯಲ್ಲಿ. ಬದುಕಿನಲ್ಲಿ ನಡೆದ ಘಟನೆಯೊಂದರಿಂದ ಅಜ್ಞಾತವಾಸಿಯಾಗಿರುವ ರಂಗಾಯಣ ರಘು ಹಿನ್ನೆಲೆಯನ್ನು ಇನ್ನಷ್ಟು ಗಟ್ಟಿಯಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಮರ್ಡರ್ ಮಿಸ್ಟ್ರಿ ಜಾನರಿಗೆ ಅಗತ್ಯವಾದ ವೇಗ, ಕುತೂಹಲ ಎರಡೂ ಚಿತ್ರದಲ್ಲಿ ಕಾಣಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.