ADVERTISEMENT

ಸಿನಿಮಾ ವಿಮರ್ಶೆ: ಸಮಾಜಕ್ಕೆ ಕೈಗನ್ನಡಿಯಾಗುವ ‘ಹೆಬ್ಬುಲಿ ಕಟ್‌’

ಅಭಿಲಾಷ್ ಪಿ.ಎಸ್‌.
Published 7 ಜುಲೈ 2025, 12:34 IST
Last Updated 7 ಜುಲೈ 2025, 12:34 IST
ಹೆಬ್ಬುಲಿ ಕಟ್‌ 
ಹೆಬ್ಬುಲಿ ಕಟ್‌    

ಕ್ಷೌರ ಮಾಡುವಂತೆ ಪರಿಶಿಷ್ಟರು ಕೇಳಿದ್ದಕ್ಕೆ ಅಂಗಡಿಗಳನ್ನೇ ಕ್ಷೌರಿಕರು ಬಂದ್‌ ಮಾಡಿದ್ದಾರೆ...ಪರಿಶಿಷ್ಟ ಜಾತಿಯ ಯುವಕರಿಗೆ ಕ್ಷೌರ ಮಾಡಲು ನಿರಾಕರಿಸಿದ ಆರೋಪದಡಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು...ಇಂತಹ ಘಟನೆಗಳು ನಮ್ಮದೇ ನೆಲೆದಲ್ಲಿ ವರದಿಯಾದವು. ಇಂತಹ ಸಾಲು ಸಾಲು ಅಸ್ಪೃಶ್ಯತೆ ಆಚರಣೆ, ಜಾತಿ ತಾರತಮ್ಯ, ದಬ್ಬಾಳಿಕೆಯ ಘಟನೆಗಳ ಚಿತ್ರಣಗಳಿಗೆ ಕಮರ್ಷಿಯಲ್‌ ಸ್ಪರ್ಶ ನೀಡಿ ‘ಹೆಬ್ಬುಲಿ ಕಟ್‌’ ಎಂಬ ಸಿನಿಮಾ ತಂದಿದ್ದಾರೆ ನಿರ್ದೇಶಕ ಭೀಮರಾವ್‌.

ತಮಿಳಿನಲ್ಲಿ 2021ರಲ್ಲಿ ಯೋಗಿ ಬಾಬು ನಟನೆಯ ‘ಮಂಡೇಲಾ’ ಸಿನಿಮಾ ಬಂದಿತ್ತು. ರಾಜಕೀಯ ವಿಡಂಬನೆಯ ಈ ಸಿನಿಮಾ ಹಲವು ಸೂಕ್ಷ್ಮಗಳನ್ನು ತೆರೆದಿಟ್ಟಿತ್ತು. ಕ್ಷೌರಿಕನೊಬ್ಬನ ಕುರಿತ ಈ ಸಿನಿಮಾ ಒಂದು ಮತ ಆತನ ಜೀವನವನ್ನು ಹೇಗೆ ಆಟವಾಡಿಸಿತು ಎನ್ನುವುದರ ಕುರಿತಾಗಿತ್ತು. ‘ಹೆಬ್ಬುಲಿ ಕಟ್‌’ ತನ್ನೂರಿನ ಐಷಾರಾಮಿ ಕ್ಷೌರದಂಗಡಿಯಲ್ಲಿ ಕ್ಷೌರ ಮಾಡಿಸಿಕೊಳ್ಳಲು ಆಸೆ ಪಡುವ ಹುಡುಗನ ಕಥೆಯಾಗಿದೆ.  

ಅಸ್ಪೃಶ್ಯತೆ, ಜಾತಿ ತಾರತಮ್ಯವನ್ನು ಆಧರಿಸಿದ ಸಿನಿಮಾಗಳು ತಮಿಳಿನಲ್ಲಿ ಬರುತ್ತಿರುವಂತೆ ಕನ್ನಡದಲ್ಲಿಯೂ ಬರುತ್ತಿವೆ. ‘ಕಾಟೇರ’ ಈ ನಿಟ್ಟಿನಲ್ಲಿ ಕಮರ್ಷಿಯಲ್‌ ವಿಚಾರದಲ್ಲಿ ಗಟ್ಟಿಯಾದ ಕಥೆ ಹೊಂದಿದ್ದ ಚಿತ್ರ. ‘ಹೆಬ್ಬುಲಿ ಕಟ್‌’ ಕೂಡಾ ತನ್ನ ಕಥಾವಸ್ತುವಿನಿಂದ ಉತ್ಕೃಷ್ಟವಾಗಿದೆ. ಪ್ರಬಲ ವರ್ಗದಿಂದ ದುರ್ಬಲ ವರ್ಗದ ಮೇಲಿನ ದಬ್ಬಾಳಿಕೆಯ ಕಥೆ ಇದು.  

ADVERTISEMENT

ಚಿತ್ರದ ನಾಯಕ–ನಾಯಕಿ ಇಬ್ಬರೂ ಹೈಸ್ಕೂಲ್‌ ವಿದ್ಯಾರ್ಥಿಗಳು. ಮಲಿಯಾಬಾದ್‌ ಗ್ರಾಮದ ಚಮ್ಮಾರನ ಮಗನಾದ ನಾಯಕ ‘ವಿನ್ಯಾ’(ವಿನಯ)ನಿಗೆ ಊರಿನಲ್ಲಿರುವ ‘ನಾದರಿ ಚೆನ್ನ’ನ ‘ಮಾಡರ್ನ್‌ ಮೆನ್ಸ್‌ ಬ್ಯೂಟಿ ಪಾರ್ಲರ್‌’ನಲ್ಲಿ ಹೇರ್‌ಕಟಿಂಗ್‌ ಮಾಡಿಕೊಳ್ಳುವಾಸೆ. ಆದರೆ ತಾಯಿಯ ಹಟಕ್ಕೆ ‘ಮೌಲಾ’ನ ಕತ್ತರಿಗೆ ಪ್ರತಿ ಬಾರಿಯೂ ವಿನ್ಯಾನ ಉದ್ದುದ್ದ ಕೂದಲು ಸಿಕ್ಕಿಬೀಳುತ್ತಿರುತ್ತದೆ. ಹೀಗಿರುವಾಗ ತನ್ನ ತರಗತಿಯಲ್ಲೇ ಓದುತ್ತಿರುವ ಊರಿನ ಗೌಡ್ರ ತಂಗಿಯ ಮೇಲೆ ವಿನ್ಯಾನಿಗೆ ಮುಗುಳ್ನಗೆಯ ಪ್ರೀತಿ, ಆಕೆಗೂ. ಅವಳಿಗೆ ನಟ ಸುದೀಪ್‌ ಹಾಗೂ ಅವರ ‘ಹೆಬ್ಬುಲಿ’ ಸಿನಿಮಾದ ಹೇರ್‌ಕಟ್‌ ಬಹಳ ಇಷ್ಟ. ಇದನ್ನರಿತ ನಾಯಕ ‘ನಾದರಿ ಚೆನ್ನ’ನ ಬಳಿ ಆ ರೀತಿ ಕೇಶ ವಿನ್ಯಾಸಕ್ಕಾಗಿ ಬೆಂಬೀಳುತ್ತಾನೆ. ನಂತರದ ಘಟನೆಗಳೇ ಚಿತ್ರದ ಕಥಾಹಂದರ.

ಧರ್ಮದೊಳಗಿನ ಅಸಮಾನತೆ, ಅಸ್ಪೃಶ್ಯತೆಯನ್ನು ಅಕ್ಷರ ರೂಪದಲ್ಲೂ, ದೃಶ್ಯ ರೂಪದಲ್ಲೂ ಕಟ್ಟಿಕೊಟ್ಟಿದೆ ಈ ಸಿನಿಮಾ. ಆರಂಭಿಕ ದೃಶ್ಯದಲ್ಲೇ ಶುಭ್ರವಾದ ನಂದಿ ಬಟ್ಟಲು ಹೂವೊಂದು ಶುಭ್ರವಾದ ತಿಳಿನೀರಿನಲ್ಲಿ ಸಾಗಿ, ಕೊಚ್ಚೆ ನೀರನ್ನು ಸೇರಿ ಸಮಾಜದ ವೇಗಕ್ಕೆ ಅಂತ್ಯ ಕಾಣುವುದು ಇಡೀ ಸಿನಿಮಾದ ಸಾರಾಂಶವನ್ನು ತೆರೆದಿಡುತ್ತದೆ. ಒಂದು ಲೆಕ್ಕಾಚಾರದ ಮುಖಾಂತರ ಸದ್ಯದ ಪರಿಸ್ಥಿತಿಯನ್ನು ಸಿನಿಮಾ ಹೇಳುತ್ತದೆ. ನಾಯಕನ ತಂದೆಯ ಬಳಿ ತೆರಳುವ ಪ್ರಬಲ ವರ್ಗದ ವ್ಯಕ್ತಿಯೋರ್ವ ಚಪ್ಪಲಿ ಹೊಲಿಯಲು ಕೊಟ್ಟು ಎಷ್ಟಾಯಿತು ಎಂದು ಕೇಳುತ್ತಾನೆ. ‘₹10’ ಎಂಬ ಉತ್ತರ ಬಂದಾಗ, ‘ಎರಡು ನಿಮಿಷದ ಕೆಲಸ, ಎರಡು ಹೊಲಿಗೆಗೆ ಹತ್ತು ರೂಪಾಯಿನಾ? ಅಂದ್ರೆ ತಾಸಿಗೆ ಮುನ್ನೂರು, ಒಂದು ದಿನಕ್ಕೆ ₹3 ಸಾವಿರ. ತಿಂಗ್ಳಿಗೆ ಲಕ್ಷ ರೂಪಾಯಿ ದುಡಿತಿದ್ದಿ. ರೇಷನ್‌ ಬೇರೆ ಪುಗ್ಸಟ್ಟೆ...’ ಇದು ಮೇಲಿನಿಂದಲೇ ನೋಡುವ ಕಣ್ಣುಗಳಿಗೆ ಪ್ರತಿಬಿಂಬ. ಸಾಮಾಜಿಕ ಅಸಮಾನತೆಯನ್ನು ವೇದಿಕೆಯಾಗಿಟ್ಟುಕೊಂಡು ಪ್ರೀತಿ, ಧರ್ಮ ದ್ವೇಷ, ಸಂಬಂಧ, ಸಾಮಾಜಿಕ ಮಾಧ್ಯಮಗಳಿಂದಾಗುವ ಅವಘಡಗಳನ್ನು ಈ ಸಿನಿಮಾ ಅನ್ವೇಷಿಸಿದೆ. ಮೆಕ್ಯಾನಿಕ್‌ ರಫೀಕ್‌ ಮೂಲಕವೂ ಕಥೆಯೊಳಗೆ ಕಥೆಯೊಂದನ್ನು ನಿರ್ದೇಶಕರು ಹೆಣೆದಿದ್ದಾರೆ.    

ದುರ್ಬಲ ವರ್ಗವನ್ನು ಪ್ರಬಲ ವರ್ಗ ನೋಡುವ ಬಗೆಯನ್ನು ‘ಗೌಡ್ರ’ ಪಾತ್ರದ ಮೂಲಕ ರೂಪಕವಾಗಿ ಹೇಳಲಾಗಿದೆ. ಗ್ರಾಮೀಣ ಜೀವನವನ್ನು ಕಟ್ಟಿಕೊಟ್ಟಿರುವ ಈ ಸಿನಿಮಾ, ಹಳ್ಳಿಗಳೊಳಗೆ ಈಗಲೂ ಇರುವ ಮೂಲಸೌಕರ್ಯಗಳ ಅವ್ಯವಸ್ಥೆಯನ್ನೂ ಬಿಚ್ಚಿಟ್ಟಿದೆ. ‘ವಿನ್ಯಾ’ನ ಮುಗ್ಧತೆ, ನಗು ಎಷ್ಟು ಶುಭ್ರವಾಗಿದೆಯೋ ಸಮಾಜದ ವರ್ತನೆ ಅಷ್ಟೇ ಕೊಳಕಾಗಿದೆ ಎನ್ನುವುದನ್ನು ತೆರೆ ಮೇಲೆ ನಿರ್ದೇಶಕರು ಚಿತ್ರಿಸಿದ್ದಾರೆ. ನೂರಾರು ಪ್ರಶ್ನೆಗಳಿಗೆ ಕಿಡಿ ಹೊತ್ತಿಸುವ ಉತ್ತರ ಕರ್ನಾಟಕ ಭಾಗದ ಕಥೆ ಹೊತ್ತ ಸಿನಿಮಾಗಳ ಪಟ್ಟಿಗೆ ಇದೂ ಸೇರ್ಪಡೆಯಾಗಿದೆ. ನಾಯಕನ ಕನಸಿಗೆ ನಿರ್ದೇಶಕರು ಜೀವ ತುಂಬಿರುವುದು ಚಿತ್ರದ ಪ್ಲಸ್‌ ಪಾಯಿಂಟ್‌. ಕಥೆಗೊಂದು ಸೂಕ್ತವಾದ ಅಂತ್ಯವಿಲ್ಲ. ಈ ಪಿಡುಗು, ವ್ಯವಸ್ಥೆ ಬದಲಾಗುವುದಿಲ್ಲ ಎನ್ನುವುದೇ ಅಂತ್ಯ! ಮೌನದಲ್ಲೇ ಇದನ್ನು ಹೇಳಲಾಗಿದೆ 

ನಟನೆಯಲ್ಲಿ ಮೌನೇಶ್‌ ನಟರಂಗ ‘ವಿನ್ಯಾ’ನಾಗಿ ಜೀವಿಸಿದ್ದಾನೆ. ಮಹಾದೇವ ಹಡಪದ ಅಪ್ಪನ ಪಾತ್ರದಲ್ಲಿ, ಉಮಾ ವೈ.ಜಿ. ಅಮ್ಮನಾಗಿ ಈ ಪಾತ್ರಕ್ಕೆ ಜೊತೆಯಾಗಿದ್ದಾರೆ. ಅನನ್ಯ, ವಿನಯ್‌, ಮಹಂತೇಶ್‌ ಹಿರೇಮಠ, ಪುನೀತ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.     

ಭೀಮರಾವ್‌ ಜೊತೆ ‘ಡೇರ್‌ಡೆವಿಲ್‌ ಮುಸ್ತಾಫಾ’ ಚಿತ್ರದ ಚಿತ್ರಕಥೆ, ಸಂಭಾಷಣೆ ಬರೆದಿದ್ದ ಅನಂತ ಶಾಂದ್ರೇಯ ಈ ಸಿನಿಮಾಗೂ ಚಿತ್ರಕಥೆ ಬರೆದಿದ್ದು, ಚಿತ್ರಕ್ಕೆ ಇದೇ ಬೆನ್ನೆಲುಬಾಗಿದೆ. ದೀಪಕ್ ಯರಗೇರಾ ಛಾಯಾಚಿತ್ರಗ್ರಹಣ, ನವನೀತ್ ಶ್ಯಾಮ ಸಂಗೀತ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೆಬ್ಬುಲಿ ಕಟ್‌ ಬೇಡ ಬದಲಿಗೆ ಅಸ್ಪೃಶ್ಯತೆ ಕಟ್‌ ಆಗಲಿ ಎಂಬ ಒಳಾರ್ಥವನ್ನು ನಗಿಸುತ್ತಾ, ಕಣ್ಪಸೆ ತರಿಸುತ್ತಾ ಈ ಸಿನಿಮಾದಲ್ಲಿ ಹೇಳಲಾಗಿದೆ.

ಇದು ನೋಡಬಹುದಾದ ಸಿನಿಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.