ADVERTISEMENT

‘ನಾನು ಮತ್ತು ಗುಂಡ 2’ ಸಿನಿಮಾ ವಿಮರ್ಶೆ: ಬದುಕುಳಿದ ನಾಯಿಯ ಕಥೆ

ವಿನಾಯಕ ಕೆ.ಎಸ್.
Published 5 ಸೆಪ್ಟೆಂಬರ್ 2025, 12:32 IST
Last Updated 5 ಸೆಪ್ಟೆಂಬರ್ 2025, 12:32 IST
ಚಿತ್ರದ ದೃಶ್ಯ
ಚಿತ್ರದ ದೃಶ್ಯ   

ಶಿವರಾಜ್‌ ಕೆ.ಆರ್‌. ಪೇಟೆ ನಾಯಕರಾಗಿ ನಟಿಸಿದ್ದ ‘ನಾನು ಮತ್ತು ಗುಂಡ’ ಚಿತ್ರ ವಿಭಿನ್ನವಾದ ಕಾಂಟೆಂಟ್‌ನಿಂದ ಗಮನ ಸೆಳೆದಿತ್ತು. ಆ ಚಿತ್ರದ ನಿರ್ಮಾಪಕರಾಗಿದ್ದ ರಘು ಹಾಸನ್‌ ‘ನಾನು ಮತ್ತು ಗುಂಡ 2’ ನಿರ್ಮಾಣದ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಹೀಗಾಗಿಯೇ ನಿರೀಕ್ಷೆಯಂತೆ ಆ ಚಿತ್ರದ ಮುಂದುವರಿಕೆ ಕಥೆ ಇಲ್ಲಿದೆ. ಅದರಲ್ಲಿ ಶಂಕರನಾಗಿದ್ದ ಶಿವರಾಜ್‌ ಕೆ.ಆರ್‌.ಪೇಟೆ ಚಿತ್ರದ ಕೊನೆಯಲ್ಲಿ ತೀರಿಕೊಂಡಿರುತ್ತಾರೆ. ಆದರೆ ಆತ ಸಾಕಿದ್ದ ನಾಯಿ ಗುಂಡ ಬದುಕುತ್ತಿರುತ್ತದೆ. ಗುಂಡನ ಬದುಕು ಏನೆಲ್ಲ ಆಗುತ್ತದೆ ಎಂಬುದೇ ‘ನಾನು ಮತ್ತು ಗುಂಡ 2’ ಚಿತ್ರದ ಒಟ್ಟಾರೆ ಕಥೆ.

ನಾಯಿಯೇ ಮುಖ್ಯಪಾತ್ರದಲ್ಲಿರುವ ಚಿತ್ರ ಕೂಡಲೇ ಒಂದಷ್ಟು ನಿರೀಕ್ಷೆಗಳು ಸಹಜ. ಜಪಾನ್‌ನ ‘ಹಚಿಕೋ’ ಈ ಜಾನರ್‌ನಲ್ಲಿ ಅತ್ಯುತ್ತಮ ಚಿತ್ರ. ‘ಚಾರ್ಲಿ’ ಕೂಡ ನಾಯಿ ಮತ್ತು ಮನುಷ್ಯ ಸಂಬಂಧವನ್ನೇ ಮುಖ್ಯ ಕಥೆಯಾಗಿಟ್ಟುಕೊಂಡ ಗೆದ್ದ ಸಿನಿಮಾ. ಅದೇ ರೀತಿ ಕಥಾಹಂದರ ಈ ಚಿತ್ರದಲ್ಲಿಯೂ ಇದೆ. ‘ಹಚಿಕೋ’ದಂತೆ ಇಲ್ಲಿಯೂ ಗುಂಡ, ಮರಣ ಹೊಂದಿದ ತನ್ನ ಮಾಲೀಕ ಮರಳುತ್ತಾನೆಂದು ಕಾಯುತ್ತ, ನರಳುತ್ತ ಇರುತ್ತಾನೆ. ಆಗ ಗುಂಡನಿಗೆ ಜತೆಯಾಗುವುದು ಶಂಕರನ ಮಗ. ಆತನ ಹೆಸರೂ ಶಂಕರ. ಜೂನಿಯರ್‌ ಶಂಕರ ಮತ್ತು ಗುಂಡನ ಕಥೆಯೇ ಚಿತ್ರದ ಮೊದಲಾರ್ಧ. ಅದ್ಭುತವಾಗಿ ನಟಿಸಿರುವ ನಾಯಿ ಮತ್ತು ಮಾಸ್ಟರ್‌ ಯುವನ್‌ ಸಾಯಿ ಪಾತ್ರಗಳನ್ನಿಟ್ಟುಕೊಂಡು ಒಂದು ಭಾವುಕವಾದ, ಪ್ರೇಕ್ಷಕನಿಗೆ ಹತ್ತಿರವಾದ ಸಿನಿಮಾವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸ್ವಲ್ಪ ಎಡವಿದ್ದಾರೆ. 

ಗುಂಡ ಮತ್ತು ಪುಟಾಣಿ ಶಂಕರನೊಂದಿಗೆ ಕಥೆ ಪ್ರಾರಂಭವಾಗುತ್ತದೆ. ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡ ಶಂಕರನನ್ನು ಭೂರಿ ದಂಪತಿ ಸಾಕಿ ಬೆಳೆಸುತ್ತಾರೆ. ‘ಕಾಮಿಡಿ ಕಿಲಾಡಿ’ ಖ್ಯಾತಿಯ ಗೋವಿಂದೇಗೌಡ ಮತ್ತು ನಯನಾ ಈ ದಂಪತಿ ಪಾತ್ರ ಮಾಡಿದ್ದಾರೆ. ಹೀಗಾಗಿ ನಿರ್ದೇಶಕರು ಅಲ್ಲಿ ಹಾಸ್ಯವನ್ನು ಬೆರೆಸಲು ಹೋಗಿ ಪ್ರಾರಂಭದಲ್ಲಿಯೇ ಕಥೆ ಒಂಚೂರು ದಿಕ್ಕು ತಪ್ಪುತ್ತದೆ. ಅಪ್ಪ ಶಂಕರನೊಂದಿಗೆ ಗುಂಡನ ನೆನಪುಗಳು, ಮಗ ಶಂಕರನೊಂದಿಗೆ ಗುಂಡನ ಒಂದಷ್ಟು ಚೇಷ್ಟೆಗಳು ಮನಮಿಡಿಯುವಂತಿವೆ. ಇಷ್ಟಾಗಿಯೂ ಕಥೆಗೆ ಸ್ಪಷ್ಟತೆ ಇಲ್ಲದೆ ಕೆಲವಷ್ಟು ಸನ್ನಿವೇಶಗಳು ಅಸಹಜ ಎಂಬ ಭಾವನೆ ಮೂಡುತ್ತವೆ.

ADVERTISEMENT

ಗುಂಡನಿಗೆ ಹೃದಯಾಘಾತವಾಗುತ್ತದೆ. ಆತ ಹೆಚ್ಚು ಕಾಲ ಬದುಕುಳಿಯುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಅಲ್ಲಿತನಕವೂ ಕೃತಕ ಎನಿಸುವ ನಾಯಿ ನಟನೆ ಅಲ್ಲಿಂದ ಬೇರೆಯದೇ ತಿರುವು ಪಡೆದುಕೊಳ್ಳುತ್ತದೆ. ಅಲ್ಲಿಂದ ಗುಂಡ ಸಾಯುವ ತನಕವೂ ನಾಯಿ ಮತ್ತು ಮಾಸ್ಟರ್‌ ಯುವನ್‌ ಸಾಯಿ ಕಣ್ಣಂಚಲ್ಲಿ ನೀರು ತರಿಸುವಂತೆ ನಟಿಸಿದ್ದಾರೆ. ಈ ಜೋಡಿಯೇ ಚಿತ್ರದ ಬಹುದೊಡ್ಡ ಶಕ್ತಿ. ಗುಂಡ ತೀರಿ ಆರೆಂಟು ವರ್ಷ ಕಳೆದರೂ ಶಂಕರನಿಗೆ ಅದರ ನೆನಪು ಹೋಗಿರುವುದಿಲ್ಲ. ಯುವಕ ಶಂಕರನಾಗಿ ರಾಕೇಶ್‌ ಅಡಿಗ ಕಾಣಿಸಿಕೊಳ್ಳುವ ಹೊತ್ತಿಗೆ ಚಿತ್ರದ ಮೊದಲಾರ್ಧ ಮುಗಿದಿರುತ್ತದೆ.

ಶಂಕರನಿಗೆ ಗುಂಡ ಊಟಿಯಲ್ಲಿ ಮತ್ತೆ ಮರುಜನ್ಮ ಪಡೆದ ಕನಸು ಬೀಳುತ್ತದೆ. ಮತ್ತೆ ಆತ ಗುಂಡನನ್ನು ಹುಡುಕಿಕೊಂಡು ಹೋಗುತ್ತಾನೆ. ಅಲ್ಲಿ ಪುಟಾಣಿ ಗುಂಡ ಮತ್ತೆ ನಾಯಕಿ ಇಂದು ಸಿಗುತ್ತಾರೆ. ಇಂದುವಾಗಿ ರಚನಾ ಇಂದರ್‌ ಕಾಣಿಸಿಕೊಂಡಿದ್ದಾರೆ. ಈ ಮೂವರ ಕಥೆಯೇ ಚಿತ್ರದ ದ್ವಿತೀಯಾರ್ಧ. ಛಾಯಾಚಿತ್ರಗ್ರಹಣ, ಹಿನ್ನೆಲೆ ಸಂಗೀತ ನಡೆಯುವ ಸನ್ನಿವೇಶಗಳಿಗೆ ಸೂಕ್ತವಾಗಿವೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಕಥೆಯಲ್ಲಿ ಅನವಶ್ಯ ಹಾಸ್ಯ, ಪ್ರೀತಿಗೆ ಕಡಿವಾಣ ಹಾಕಿ ನಾಯಿ ಮತ್ತು ಮನುಷ್ಯ ಸಂಬಂಧಗಳನ್ನು ಹೇಳುವ ಇನ್ನಷ್ಟು ಭಾವುಕ ಸನ್ನಿವೇಶಗಳಿಗೆ ನಿರ್ದೇಶಕರು ಒತ್ತು ನೀಡಬೇಕಿತ್ತು.

ನೋಡಬಹುದಾದ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.