ಬಾಲ್ಯದಲ್ಲಿ ತನ್ನನ್ನು ತ್ಯಜಿಸಿದ ತಾಯಿಯನ್ನು ಹುಡುಕುತ್ತಾ, ಅವಳಿಗೊಂದಿಷ್ಟು ಪ್ರಶ್ನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೆಜ್ಜೆ ಹಾಕುವ ನಾಯಕ. ಈ ಎಳೆಯಲ್ಲಿ ಹಲವು ಸಿನಿಮಾಗಳಿವೆ. ಕನ್ನಡದಲ್ಲೇ ಬಂದ ‘ರತ್ನನ್ ಪ್ರಪಂಚ’, ಮಲಯಾಳದ ‘ಅರವಿಂದಂಡೆ ಅತಿಥಿಗಳ್’ ಮುಂತಾದ ಸಿನಿಮಾಗಳಲ್ಲಿ ಇದೇ ಕಥಾಹಂದರವಿದೆ. ಇಲ್ಲಿ ಭಾವನಾತ್ಮಕ ಅಂಶಗಳಿಗೆ ಹೆಚ್ಚಿನ ಆದ್ಯತೆ. ಇಂತಹದೇ ಒಂದು ಹೊಸ ಎಳೆ ‘ನೋಡಿದವರು ಏನಂತಾರೆ’. ಕಾದಂಬರಿಯಂತೆ ಸಾಗುವ ಈ ಸಿನಿಮಾದ ಚಿತ್ರಕಥೆ, ನಾಯಕ ತನ್ನನ್ನು ತಾನು ಅರಿತುಕೊಳ್ಳುವುದರ ಜೊತೆಗೆ, ‘ನೋಡಿದವರು ಏನಂತಾರೆ’ ಎಂಬ ಎಲ್ಲರೊಳಗಿರುವ ಪ್ರಶ್ನೆಗೆ ಉತ್ತರದಂತಿದೆ.
ವಿರಾಜಪೇಟೆ ಮೂಲದ ‘ಸಿದ್ಧಾರ್ಥ್ ದೇವಯ್ಯ’(ನವೀನ್ ಶಂಕರ್) ಬೆಂಗಳೂರಿನ ಕಂಪನಿಯೊಂದರಲ್ಲಿ ವೆಬ್ ಡಿಸೈನರ್. ಈತನಿಗೆ ಹುಡುಗಿಯೊಬ್ಬಳು ಕೈಕೊಟ್ಟಿದ್ದಾಳೆ. ಇದು ಈತನ ಕೆಲಸದ ಮೇಲೂ ಪರಿಣಾಮ ಬೀರಿದ್ದು, ಒತ್ತಡಕ್ಕೆ ಸಿಲುಕಿದ್ದಾನೆ. ಪ್ರೀತಿಸಿದ ಹುಡುಗಿ ಬಿಟ್ಟುಹೋದಳೆಂದು, ಬಾಲ್ಯದಲ್ಲೇ ತಾಯಿ ತನ್ನನ್ನು ತ್ಯಜಿಸಿದಳೆಂದು ಹೆಣ್ಣುಕುಲವನ್ನೇ ದ್ವೇಷಿಸಲಾರಂಭಿಸುತ್ತಾನೆ. ತಂದೆಯ ಅನಿರೀಕ್ಷಿತ ಸಾವು ಹಳೆಯ ನೆನಪುಗಳನ್ನು ಕೆದಕಿದೆ. ಈ ಸಂದರ್ಭದಲ್ಲಿ ಕೆಲಸವನ್ನೂ ಕಳೆದುಕೊಂಡು ತನ್ನನ್ನು ತಾನು ಕಂಡುಕೊಳ್ಳಲು ಹೊಸ ಪ್ರಯಾಣಕ್ಕೆ ಈತ ಸಜ್ಜಾಗುತ್ತಾನೆ. ‘ನೋಡಿದವರು ಏನಂತಾರೆ’ ಎಂಬಲ್ಲಿಂದ ಶುರುವಾಗುವ ಈತನ ಪಯಣ ‘ನೋಡಿದವರು ಏನಾದರೂ ಅಂದುಕೊಳ್ಳಲಿ’ ಎನ್ನುವವರೆಗೂ ಸಾಗುತ್ತದೆ.
ಸಿನಿಮಾದ ಆರಂಭಿಕ ದೃಶ್ಯಗಳು ನಿಧಾನಗತಿಯಲ್ಲಿದ್ದು ‘ಸಿದ್ಧಾರ್ಥ್’ ಹೊರಪ್ರಪಂಚಕ್ಕೆ ಹೆಜ್ಜೆ ಇಡುತ್ತಲೇ ಕ್ರಮೇಣ ವೇಗ ಪಡೆದುಕೊಳ್ಳುತ್ತದೆ. ರಾಜ್ ಬಿ.ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಂತೆ ಇಲ್ಲಿಯೂ ಸಾಹಿತ್ಯಕ್ಕೆ, ಸಂಭಾಷಣೆಗೆ ಹೆಚ್ಚಿನ ಆದ್ಯತೆ. ಆಳವಾದ ಅರ್ಥ ಹೊಂದಿದ ನಾಯಕನ ಮನಸ್ಸಿನ ಮಾತುಗಳು ಸಿನಿಮಾದುದ್ದಕ್ಕೂ ಪೋಣಿಸಲ್ಪಟ್ಟಿವೆ. ಬಹಳ ಸೂಕ್ಷ್ಮವಾಗಿ ಹಲವು ದೃಶ್ಯಗಳನ್ನು ನಿರ್ದೇಶಕರು ಕೆತ್ತಿದ್ದಾರೆ. ಉದಾಹರಣೆಗೆ ತಂದೆಯ ಸಾವಿನ ಸುದ್ದಿ ಕೇಳಿ ಒಂದು ಕ್ಷಣ ನಾಯಕ ಕಾರಿನೊಳಗೇ ಕುಳಿತು ತನ್ನ ಒತ್ತಡ, ಆಕ್ರೋಶ, ದುಃಖವನ್ನು ಹೊರಹಾಕುವ ರೀತಿ ಹಾಗೂ ತಂದೆ ಶವದೆದುರು ನಾಯಕ ಮೌನವಾಗಿ ಕುಳಿತಾಗ ನಡುಗುವ ಮೈ ಹೀಗೆ ಹಲವು ಸೂಕ್ಷ್ಮತೆಗಳು ಸಿನಿಮಾದೊಳಗಿವೆ. ಪಯಣದ ನಡುವೆ ಕುರಿ ಕಾಯುವ ಹುಡುಗ ಮಲ್ಲಣ್ಣ(ರಾಜೇಶ್) ಜೊತೆಗಿರುವ ದೃಶ್ಯಗಳು, ಸಂಭಾಷಣೆ ಹೊಸ ದೃಷ್ಟಿಕೋನವನ್ನೇ ನೀಡಬಲ್ಲವು. ವಾಸ್ತವಕ್ಕೆ ಹತ್ತಿರವಾಗುವ ಸನ್ನಿವೇಶ, ಸಂಭಾಷಣೆಗಳೂ ಇಲ್ಲಿ ಅಡಕವಾಗಿವೆ. ‘ಇನ್‌ಟು ದಿ ವೈಲ್ಡ್’ ಕೃತಿಯ ನೇರ ಉಲ್ಲೇಖ ಈ ಸಿನಿಮಾದಲ್ಲಿದ್ದು, ಇದೇ ಎಳೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಇದು ಮಾಸ್ ಸಿನಿಮಾವಲ್ಲ, ನೋಡಲು ತಾಳ್ಮೆ ಬಹಳ ಮುಖ್ಯ.
ನಟನೆಯಲ್ಲಿ ಸಿದ್ಧಾರ್ಥ್ ಆಗಿ ನವೀನ್ ಶಂಕರ್ ಜೀವಿಸಿದ್ದಾರೆ. ಎದೆಗೂಡು ಕಾಣುವಷ್ಟು ತೆಳ್ಳಗಾಗಿ ಪಾತ್ರದೊಳಗೆ ಇಳಿದು ನವೀನ್ ಇಲ್ಲಿ ಉಸಿರಾಡಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಅವರ ನಟನೆ ಗಂಟಲು ಬಿಗಿಯಾಗಿಸುತ್ತದೆ. ಕ್ಲೈಮ್ಯಾಕ್ಸ್ ದೃಶ್ಯದ ವೇಳೆಗೆ ತಾಯಿಯಾಗಿ ತೆರೆ ಪ್ರವೇಶಿಸುವ ಪದ್ಮಾವತಿ ರಾವ್ ನಟನೆ ಉತ್ಕೃಷ್ಟವಾಗಿದೆ. ಅಪೂರ್ವ ಭಾರದ್ವಾಜ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ‘ನೋಡಿದವರು ಏನಂತಾರೆ’ ಎನ್ನುವ ಗೋಜಿಗೆ ಬೀಳದೆ, ಶೀರ್ಷಿಕೆಗೆ ತಕ್ಕಂತೆ ಯಾವ ಸಿದ್ಧಸೂತ್ರಕ್ಕೂ ಅಂಟಿಕೊಳ್ಳದೆ ತನ್ನೊಳಗಿದ್ದ ಕಥೆಯನ್ನು ನಿರ್ದೇಶಕರು ತೆರೆಗೆ ತಂದಿದ್ದಾರೆ. ಇದು ಅವರ ಮುಂದಿನ ಹೆಜ್ಜೆಗಳನ್ನೂ ಸ್ಪಷ್ಟಪಡಿಸಿದೆ.
ತಾಯಿಯ ಇಮೇಲ್ ವಿಳಾಸವನ್ನು ಪತ್ತೆಹಚ್ಚುವತ್ತ ಇದ್ದ ನಾಯಕನ ಆಸಕ್ತಿ ಆಕೆಯ ಜೀವನದ ಕುರಿತು ಓದುವಷ್ಟು ಇರಲಿಲ್ಲವೇ? ಹೀಗೆ ಒಂದೆರಡು ಪ್ರಶ್ನೆಗಳನ್ನೂ ಸಿನಿಮಾ ಉಳಿಸುತ್ತದೆ. ಮಯೂರೇಶ್ ಅಧಿಕಾರಿ ಸಂಗೀತ ಹಾಗೂ ಅಶ್ವಿನ್ ಛಾಯಾಚಿತ್ರಗ್ರಹಣ ಈ ಟ್ರಾವೆಲ್ ಕಥೆಯ ಬೆನ್ನೆಲುಬಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.