ADVERTISEMENT

‘ನೋಟಾ’ ಇದು ರಾಜಕೀಯದಾಟದ ಥ್ರಿಲ್ಲರ್

ವಿಶಾಖ ಎನ್.
Published 5 ಅಕ್ಟೋಬರ್ 2018, 12:00 IST
Last Updated 5 ಅಕ್ಟೋಬರ್ 2018, 12:00 IST
‘ನೋಟಾ’ ಚಿತ್ರದಲ್ಲಿ ವಿಜಯ್ ದೇವರಕೊಂಡ
‘ನೋಟಾ’ ಚಿತ್ರದಲ್ಲಿ ವಿಜಯ್ ದೇವರಕೊಂಡ   

ಚಿತ್ರ: ನೋಟಾ (ತೆಲುಗು)
ನಿರ್ಮಾಣ: ಕೆ.ಇ. ಜ್ಞಾನವೇಲ್ ರಾಜಾ
ನಿರ್ದೇಶನ: ಆನಂದ್ ಶಂಕರ್
ತಾರಾಗಣ: ವಿಜಯ್ ದೇವರಕೊಂಡ, ನಾಸರ್, ಸತ್ಯರಾಜ್, ಮೆರ್ಹೀನ್ ಪಿರ್‌ಜಾದಾ, ಸಂಚನಾ ನಟರಾಜನ್.

ವಿಡಿಯೊ ಗೇಮ್ ಆಡುವ ಹೊಸ ತಲೆಮಾರಿನವರ ನಾಡಿಮಿಡಿತಕ್ಕೆ ಒಪ್ಪುವಂಥ ರಾಜಕೀಯ ಥ್ರಿಲ್ಲರ್ ಸಿನಿಮಾ ‘ನೋಟಾ’. ಬಲು ಬೇಗ ಟೇಕಾಫ್ ಆಗುವ ಚಿತ್ರಕಥೆ, ಪದೇ ಪದೇ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಏನು ನಡೆಯುತ್ತಿದೆ ಎನ್ನುವುದನ್ನು ಗುಟ್ಟು ಮಾಡದೆಯೂ (ಸಸ್ಪೆನ್ಸ್‌ ಅಲ್ಲ) ತಂತ್ರಕ್ಕೆ ಪ್ರತಿತಂತ್ರ ಹೆಣೆಯುವ ನಾಯಕನ ಜಾಣ್ಮೆಯೇ ಸಿನಿಮಾದ ಜೀವಾಳ.

ಇಂಗ್ಲೆಂಡ್‌ನಲ್ಲಿ ವಿಡಿಯೊ ಗೇಮ್‌ ಪ್ರೋಗ್ರಾಮರ್‌ ಆಗಿ ಸಂತೋಷವಾಗಿರುವ, ಪಾರ್ಟಿ ಪ್ರೇಮಿ ಯುವಕ ಚಿತ್ರದ ನಾಯಕ. ಮುಖ್ಯಮಂತ್ರಿಯ ಮಗನಾದ ಅವನೇ ರಾತ್ರೋರಾತ್ರಿ ಆ ಕುರ್ಚಿ ಮೇಲೆ ಕೂರಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಹಗರಣವೊಂದರಿಂದ ಜೈಲು ಸೇರಬೇಕಾದ ಅವನ ಅಪ್ಪ ಹೊರಿಸುವ ಜವಾಬ್ದಾರಿ ಅದು. ರಾಜ್ಯಪಾಲರ ಹೆಸರೂ ಗೊತ್ತಿಲ್ಲದ ಮಗ ಅಲ್ಪಾವಧಿಗೆ ಮುಖ್ಯಮಂತ್ರಿ ಆಗಿರಲಿ, ಆಮೇಲೆ ಮತ್ತದೇ ಗಾದಿ ಮೇಲೆ ಬಂದು ಕೂರಬಹುದು ಎನ್ನುವುದು ಅಪ್ಪನ ಲೆಕ್ಕಾಚಾರ.

ADVERTISEMENT

ಒಂದು ಕಾಲದಲ್ಲಿ ಜನಪ್ರಿಯ ಸಿನಿಮಾ ಹೀರೊ ಕೂಡ ಆದ ಆ ಅಪ್ಪ ಹಾಗೂ ಈ ಮಗನ ಬದುಕಿನಲ್ಲಿ ಕೆಲವು ಗೋಜಲುಗಳಿವೆ. ಇಬ್ಬರ ಭಾವಜಗತ್ತುಗಳೂ ಬೇರೆ ಬೇರೆ. ಕುರ್ಚಿಗಾಗಿ ಯಾವ ಮಟ್ಟಕ್ಕೂ ಇಳಿಯಬಲ್ಲ, ಶಕುನಿ ಬುದ್ಧಿಯ ಅಪ್ಪ ಹಾಗೂ ಸಮಯಪ್ರಜ್ಞೆಯಿಂದಲೇ ಯುವಶಕ್ತಿಯ ರಾಯಭಾರಿಯಂತೆ ಕಾಣುವ ಮಗ–ಇಬ್ಬರ ನಡುವಿನ ರಾಜಕೀಯ ಸಂಘರ್ಷ ಚಿತ್ರದ ವಸ್ತು. ತಮಿಳುನಾಡಿನ ರಾಜಕೀಯ ಇತಿಹಾಸದಿಂದ ಪ್ರೇರಿತರಾಗಿ ನಿರ್ದೇಶಕರು ಈ ಕಥೆಯನ್ನು ಹೆಣೆದಿರಲಿಕ್ಕೂ ಸಾಕು. ರೆಸಾರ್ಟ್‌ನಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು, ಇಡೀ ರಾಜಕೀಯ ವ್ಯವಸ್ಥೆಯನ್ನು ಸ್ವಾಮೀಜಿ ನಿಯಂತ್ರಿಸುವುದು, ರೌಡಿ ಹಿನ್ನೆಲೆಯವರೂ ಮುಂಚೂಣಿಗೆ ಬರುವುದು ಇವೆಲ್ಲವೂ ಸೂಚ್ಯವಾಗಿ ಇವೆ. ಚಿತ್ರಕಥೆ ಕಟ್ಟಿರುವ ಶಾನ್ ಕುಪ್ಪುಸ್ವಾಮಿ ಎಲ್ಲಕ್ಕೂ ಥ್ರಿಲ್ಲರ್ ಕವಚ ತೊಡಿಸಿರುವುದು ಗಮನಾರ್ಹ.

ವಿಡಿಯೊ ಗೇಮ್ ಆಡುವಾಗ ಉಂಟಾಗುವ ರೋಮಾಂಚನವೇ ಈ ಸಿನಿಮಾ ನೋಡುವಾಗಲೂ ಆಗುತ್ತದೆ. ಅದಕ್ಕೆ ಕಾರಣ ಸಂಕಲನದ ಜಾಣ್ಮೆ (ರೇಮಂಡ್ ಡೆರಿಕ್ ಕ್ರಾಸ್ಟಾ). ಸಂತಾನ ಕೃಷ್ಣನ್ ಛಾಯಾಗ್ರಹಣಕ್ಕೆ ಕೆಲವು ದೃಶ್ಯಗಳು ಸವಾಲೊಡ್ಡಿವೆ. ಎರಡು ವರ್ಷಗಳ ಹಿಂದೆ ‘ಇರು ಮುಗನ್’ ವಿಜ್ಞಾನ ಕೇಂದ್ರಿತ ಸಿನಿಮಾ ನಿರ್ದೇಶಿಸಿದ್ದ ಆನಂದ್ ಶಂಕರ್ ರಾಜಕೀಯ ಕೇಂದ್ರಿತ ವಿಷಯದಿಂದ ಸಿನಿಮಾ ತುಸುವೂ ಅತ್ತಿತ್ತ ವಾಲದಂತೆ ನಿಗಾ ವಹಿಸಿದ್ದಾರೆ. ಅನಗತ್ಯವಾಗಿ ಕಮರ್ಷಿಯಲ್ ಪರಿಕರಗಳ ಮಸಾಲೆ ಅರೆಯಲು ಹೋಗಿಲ್ಲ. ಸ್ಯಾಮ್ ಸಿ.ಎಸ್. ಸಂಗೀತಪ್ರತಿಭೆ ಹಾಡುಗಳಿಂತ ಹಿನ್ನೆಲೆ ಸಂಗೀತಕ್ಕೆ ಸದ್ವಿನಿಯೋಗವಾಗಿದೆ. ಹಾಗೆ ನೋಡಿದರೆ ಸಿನಿಮಾಗೆ ನಾಯಕಿಯೇ ಇಲ್ಲವೆನ್ನಬೇಕು.

ವಿಜಯ್ ದೇವರಕೊಂಡ ಪ್ರಯೋಗಶೀಲರೂ ಹೌದು ಎನ್ನುವುದಕ್ಕೆ ಈ ಸಿನಿಮಾ ಆಯ್ಕೆಯೇ ಸಾಕ್ಷಿ. ಅವರ ಹಿಂದಿನ ಮೂರು ಸಿನಿಮಾಗಳ ವಸ್ತುಗಳಿಗಿಂತ ಇದು ಸಂಪೂರ್ಣ ಭಿನ್ನ. ‘ಚಾಕೊಲೇಟ್ ಹೀರೊ’ ಚೌಕಟ್ಟಿನಿಂದ ಹೊರಬರಲೂ ಈ ಪಾತ್ರ ಅವರಿಗೆ ನೆರವಾಗಿದೆ. ನಾಸರ್, ಸತ್ಯರಾಜ್ ಕೂಡ ಪಾತ್ರಗಳ ಔಚಿತ್ಯ ಅರಿತಂತೆ ಅಭಿನಯಿಸಿದ್ದಾರೆ.

ಕೆಲವೆಡೆ ಹಿಡಿತ ತಪ್ಪುತ್ತಿದೆಯೇನೋ ಅನ್ನಿಸಿದರೂ ಬೇಗನೆ ಹಳಿಗೆ ಮರಳುವ ಚಿತ್ರಕಥೆಯು ಕೊನೆಯವರೆಗೂ ಹಿಡಿದು ಕೂರಿಸುತ್ತದೆ; ವಿಡಿಯೊಗೇಮ್ ಮೋಹಿಗಳು ಕುರ್ಚಿ ತುದಿಗೆ ಬಂದು ಕೂತು ಆಡುವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.