ADVERTISEMENT

ಪ್ರಭಾಸ್‌ ಅಭಿನಯದ 'ರಾಧೆ ಶ್ಯಾಮ್' ಸಿನಿಮಾ ವಿಮರ್ಶೆ: ದೃಶ್ಯಮುಚ್ಚಟೆ...ಕದಲದ ಕಥೆ

ವಿಶಾಖ ಎನ್.
Published 13 ಮಾರ್ಚ್ 2022, 7:52 IST
Last Updated 13 ಮಾರ್ಚ್ 2022, 7:52 IST
ಪ್ರಭಾಸ್, ಪೂಜಾ
ಪ್ರಭಾಸ್, ಪೂಜಾ   

ಚಿತ್ರ: ರಾಧೆ ಶ್ಯಾಮ್ (ತೆಲುಗು)
ನಿರ್ಮಾಣ: ವಂಶಿ, ಪ್ರಮೋದ್, ಪ್ರಸಿದ್ಧ
ನಿರ್ದೇಶನ: ರಾಧಾ ಕೃಷ್ಣ ಕುಮಾರ್
ತಾರಾಗಣ: ಪ್ರಭಾಸ್, ಪೂಜಾ ಹೆಗ್ಡೆ, ಕೃಷ್ಣಂ ರಾಜು, ಭಾಗ್ಯಶ್ರೀ, ಜಗಪತಿಬಾಬು, ಸಚಿನ್ ಖೇಡೇಕರ್, ಜಯರಾಂ.

2006ರಲ್ಲಿ ಶೇಖರ್‌ ಕಮ್ಮುಲ ‘ಗೋದಾವರಿ’ ಎಂಬ ಮಧುರವಾದ ಕಾವ್ಯಾತ್ಮಕ ತೆಲುಗು ಪ್ರೇಮಚಿತ್ರ ನಿರ್ದೇಶಿಸಿದ್ದರು. ‘ಟೈಟಾನಿಕ್‌’ನ ದುರಂತ ಕಥಾನಕ ಕೂಡ ಮನದಲ್ಲಿ ಪ್ರೇಮದ ಪಸೆ ಉಳಿಸಿತ್ತಲ್ಲ; ಹಾಗೆಯೇ ‘ಗೋದಾವರಿ’ಯೂ ಇತ್ತು. ದುರಂತದ ಅಧ್ಯಾಯವನ್ನು ಅಳಿಸಿಹಾಕಿ, ಹಾಸ್ಯ ಲೇಪದ ರೊಮ್ಯಾಂಟಿಕ್ ಕಥಾನಕವನ್ನಾಗಿ ಅದನ್ನು ಚಿತ್ರಿಸಲಾಗಿತ್ತಷ್ಟೆ. ಹಡಗಿನ ಬದಲು ಅಲ್ಲಿ ಪ್ರೇಮದ ದೊಡ್ಡ ಬೋಟ್‌ ಇತ್ತು. 1973ರಲ್ಲಿ ತೆರೆಕಂಡಿದ್ದ ‘ಅಂದಾಲ ರಾಮುಡು’ ತೆಲುಗು ಚಿತ್ರದ ಆತ್ಮವನ್ನು ಹೊಸ ಬಣ್ಣಗಳಲ್ಲಿ ತಾವು ತೋರಿದ್ದಾಗಿ ಶೇಖರ್ ಕಮ್ಮುಲ ವಿನಮ್ರವಾಗಿ ಹೇಳಿಕೊಂಡಿದ್ದರು.

ನಿರ್ದೇಶಕ ರಾಧಾ ಕೃಷ್ಣ ಕುಮಾರ್‌ ಅವರಿಗೆ ‘ಟೈಟಾನಿಕ್‌’ನಲ್ಲಿ ಹಡಗಿನ ದುರಂತ ಉಳಿಸಿದ ನೆನಪೂ ಮುಖ್ಯವಾಗಿದೆ. ಪ್ರೇಮವನ್ನು ಕಾವ್ಯವಾಗಿಸಬೇಕೆಂಬ ಉಮೇದೂ ಇದೆ. ಆದರೆ, ಅವೆರಡನ್ನೂ ಚಿತ್ರಕಥೆಗೆ ಒಗ್ಗಿಸಲು ಬೇಕಾದ ಕೌಶಲ ಸಿದ್ಧಿಸಿಲ್ಲ. ‘ರಾಧೆ ಶ್ಯಾಮ್‌’ನಲ್ಲಿ ಕೃಷ್ಣನ ಭಾವಗೀತಾತ್ಮಕತೆಯಾಗಲೀ, ರಾಧೆಯ ವಿರಹದ ಹಾಡಾಗಲೀ ತುಳುಕುವುದಿಲ್ಲ. ಸಪಾಟಾದ ರಸ್ತೆಯ ಮೇಲೆ ಉರುಳುಸೇವೆ ಮಾಡಿಸಿ, ‘ಸಾಕಿನ್ನು, ಮೇಲಕ್ಕೇಳಿ’ ಎಂದರೆ ಮನಸ್ಸಿಗೆ ಹೇಗಾಗುವುದೋ ಅದೇ ಪರಿಣಾಮವನ್ನು ಉಳಿಸುತ್ತದೆ.

ADVERTISEMENT

ಕಥಾನಾಯಕ ಹಸ್ತಸಾಮುದ್ರಿಕೆ ಓದುವುದರಲ್ಲಿ ನಿಸ್ಸೀಮ. ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ ಅವರೆದುರಲ್ಲಿ ಕುಳಿತು, ‘ಭವಿಷ್ಯದಲ್ಲಿ ತುರ್ತು ಪರಿಸ್ಥಿತಿ ಹೇರುವಿರಿ’ ಎಂದು ಕರಾರವಾಕ್ಕು ಭವಿಷ್ಯ ಹೇಳಿದವನು. ಅದಕ್ಕೇ ಅವನನ್ನು ದೇಶ ಬಿಟ್ಟು ಓಡಿಸಿರುತ್ತಾರೆ. ಅವನ ನೆಲೆ ಇಟಲಿಯಲ್ಲಿ. ಅಲ್ಲಿಯೂ ಅವನದು ಹಸ್ತಸಾಮುದ್ರಿಕೆ ಹೇಳುವ ಕೆಲಸ. ಇಂತಿಪ್ಪ ಅವನ ಪೂರ್ವಾಪರದ ದಟ್ಟ ವಿವರಗಳಿಲ್ಲ. ತನಗೆ ಪ್ರೇಮದ ಗೆರೆ ಇಲ್ಲ ಎನ್ನುತ್ತಲೇ, ‘ಫ್ಲರ್ಟೇಷನ್‌ ಮಾಡುವೆ’ ಎಂದು ಲಲನೆಯರಲ್ಲಿ ನಿರ್ಭಿಡೆಯಿಂದ ಹೇಳುವಾತ.

ಕಥಾನಾಯಕ ಸುಂದರಾಂಗಿಯ ಮೋಹಕ್ಕೆ ಸಿಲುಕುತ್ತಾನೆ. ಅದು ಪ್ರೇಮವಾಗಿ ಪರಿವರ್ತಿತವಾಗುತ್ತದೆ. ಅವಳ ಹಸ್ತಸಾಮುದ್ರಿಕೆ ಓದಿದ ಮೇಲೆ ಕಥೆಗೆ ತಿರುವು. ಮೊದಲರ್ಧ ಪ್ರೇಮ ಪಲ್ಲವಿಸುವ ಗಳಿಗೆಗಳನ್ನು ನಿರ್ದೇಶಕರು ಬಹಳ ಸಾವಧಾನದಿಂದ ಪೇಂಟಿಂಗ್‌ನಂತಹ ಚಿತ್ರಿಕೆಗಳ ಮೂಲಕ ಕಟ್ಟುತ್ತಾ ಹೋಗಿದ್ದಾರೆ. ದೃಶ್ಯಮುಚ್ಚಟೆಯಲ್ಲಿ ಕಳೆದುಹೋಗುವ ಅವರು, ಚಿತ್ರಕಥಾ ವಿಸ್ತರಣೆಯನ್ನು ನಿರ್ಲಕ್ಷಿಸಿದ್ದಾರೆ. ಎರಡನೇ ಅರ್ಧದಲ್ಲಿ ತಿರುವುಗಳನ್ನು ತೋರಿಸಿದರೂ ಯಾವುದೂ ‘ಅಬ್ಬಾ’ ಎನ್ನುವಂತೆ ಮಾಡುವುದಿಲ್ಲ. ಕೊನೆಯಲ್ಲಿ ಸುನಾಮಿಗೆ ಸಿಲುಕಿದ ಹಡಗಿನಲ್ಲಿ ನಾಯಕ ಉಳಿಯುವ ದೃಶ್ಯಗಳಿವೆ. ಸಾವಿಗೆ ಮುಖಾಮುಖಿಯಾಗುವ ಅವನ ಆ ಅಂತಿಮ ಹೋರಾಟವೂ ಮೈನವಿರೇಳಿಸುವಂತಿಲ್ಲ.

ಪೂಜಾ ಹೆಗ್ಡೆ ಸೌಂದರ್ಯ ತೋರಿರುವುದರಲ್ಲಿ ಸಿನಿಮಾಟೊಗ್ರಫರ್ ಮನೋಜ್ ಪರಮಹಂಸ ಅವರ ರಸಿಕತನಕ್ಕೆ ಜೈ ಎನ್ನಬೇಕು. ಲವರ್‌ ಬಾಯ್‌ ಆಗಲು ಪ್ರಭಾಸ್ ವಿಪರೀತ ಕಷ್ಟಪಟ್ಟಿದ್ದಾರೆ. ನಿಲುವು, ನಡೆ ಚೆನ್ನಾಗಿದ್ದರೂ ಚೆಲುವೆಯೊಟ್ಟಿಗಿನ ಆಪ್ತ ಕ್ಷಣಗಳ ಅಭಿನಯದಲ್ಲಿ ಅವರದ್ದು ದಯನೀಯ ಸೋಲು. ಪ್ರೇಮದ ಜುಗಲ್‌ಬಂದಿಯಲ್ಲಿ ಗೆಲುವು ಪೂಜಾ ಅವರದ್ದೆ. ಜಸ್ಟಿನ್ ಪ್ರಭಾಕರನ್ ಸ್ವರ ಸಂಯೋಜನೆಯ ಹಾಡುಗಳು ಹಸನಾಗಿವೆ. ಎಸ್. ತಮನ್ ಹಿನ್ನೆಲೆ ಸಂಗೀತ ಎಷ್ಟೋ ದೃಶ್ಯಗಳನ್ನು ಮೇಲಕ್ಕೆತ್ತಲು ನೆರವಾಗಿದೆ.

ಗೀತನಾಟಕದಂತೆ ಮೊದಲರ್ಧವನ್ನು ಕಟ್ಟಿ, ಆಮೇಲೆ ನಾಟಕೀಯ ತಿರುವುಗಳನ್ನು ದಕ್ಕಿಸುವ ಹಳೆಯ ಸಿನಿಮೀಯ ಚಟಕ್ಕೆ ನಿರ್ದೇಶಕರು ಬಿದ್ದಿದ್ದಾರೆ. ತರ್ಕವನ್ನೆಲ್ಲ ಚಿಂದಿ ಮಾಡಿ, ಕೊನೆಯಲ್ಲಿ ಇಬ್ಬರೂ ಗಾಯಾಳು ಪ್ರೇಮಿಗಳನ್ನು ಫ್ರೇಮಿಗೆ ತಂದು ‘ಶುಭಂ’ ಹೇಳಿ ಮುಗಿಸುತ್ತಾರೆ. ಪ್ರಭಾಸ್‌ ಅಭಿಮಾನಿಗಳಿಗೂ ಹೇಳುವುದಕ್ಕಿನ್ನೇನಿದೆ ಎಂದು ಹೊಳೆಯುವುದೇ ಇಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.