ADVERTISEMENT

‘ಸಂಜು ವೆಡ್ಸ್‌ ಗೀತಾ–2’ ಸಿನಿಮಾ ವಿಮರ್ಶೆ: ನಿರೀಕ್ಷೆ ತಲುಪದ ಪ್ರೇಮಕಥೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 11:51 IST
Last Updated 17 ಜನವರಿ 2025, 11:51 IST
<div class="paragraphs"><p>ರಚಿತಾ ರಾಮ್ ಹಾಗೂ ಶ್ರೀನಗರ ಕಿಟ್ಟಿ</p></div>

ರಚಿತಾ ರಾಮ್ ಹಾಗೂ ಶ್ರೀನಗರ ಕಿಟ್ಟಿ

   

ದಶಕದ ಹಿಂದೆ ತೆರೆಕಂಡಿದ್ದ ನಾಗಶೇಖರ್‌ ನಿರ್ದೇಶನದ ‘ಸಂಜು ವೆಡ್ಸ್‌ ಗೀತಾ’ ಸಿನಿಮಾ ತನ್ನ ಕಥೆ, ಹಾಡುಗಳಿಂದ ಜನರನ್ನು ಸೆಳೆದಿತ್ತು. ಇದೇ ಶೀರ್ಷಿಕೆಯನ್ನಿಟ್ಟುಕೊಂಡು ನಾಗಶೇಖರ್‌ ಅವರೇ ‘ಸಂಜು ವೆಡ್ಸ್‌ ಗೀತಾ–2’ ತೆರೆ ಮೇಲೆ ತಂದಿದ್ದಾರೆ. ಆದರೆ ಇದು ನಿರೀಕ್ಷೆಯನ್ನು ತಣಿಸಿಲ್ಲ. 

ಇಲ್ಲಿ ಸಿನಿಮಾ ಶೀರ್ಷಿಕೆ ಮರುಬಳಕೆಯಾಗಿದೆಯಷ್ಟೇ. ಮೊದಲ ಭಾಗಕ್ಕೂ ಈ ಭಾಗದ ಕಥೆಗೂ ಯಾವುದೇ ಸಂಬಂಧವಿಲ್ಲ. ರೇಷ್ಮೆ ಬೆಳೆಗಾರರ ಸಂಕಷ್ಟ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಅದಕ್ಕೆ ಕಮರ್ಷಿಯಲ್‌ ಸ್ಪರ್ಶ ನೀಡಿದ್ದಾರೆ ನಿರ್ದೇಶಕರು. ‘ಸಂಜು’ (ಶ್ರೀನಗರ ಕಿಟ್ಟಿ) ಶಿಡ್ಲಘಟ್ಟದ ರೇಷ್ಮೆ ಕೈಮಗ್ಗ ವ್ಯಾಪಾರಿ. ಗೀತಾ (ರಚಿತಾ ರಾಮ್‌) ಖ್ಯಾತ ಉದ್ಯಮಿಯ ಮಗಳು. ಸಂಜು ಕೊಟ್ಟ ರೇಷ್ಮೆ ಸೀರೆಯೊಂದರಿಂದ ಗೀತಾ ‘ಮಿಸ್‌ ಕರ್ನಾಟಕ’ ಸ್ಪರ್ಧೆಯಲ್ಲಿ ಗೆಲ್ಲುತ್ತಾಳೆ. ಅಲ್ಲಿಂದ ಸಂಜು ಮೇಲೆ ಗೀತಾಳಿಗೆ ಪ್ರೀತಿ ಹುಟ್ಟುತ್ತದೆ. ಅವರಿಬ್ಬರೂ ಒಂದಾಗುತ್ತಾರೆಯೇ? ಗೀತಾ ಕನಸು ಏನಾಗುತ್ತದೆ? ಎನ್ನುವುದೇ ಚಿತ್ರದ ಮುಂದಿನ ಕಥೆ.   

ADVERTISEMENT

ಅನನುಕ್ರಮಣಿಕೆಯ(non-linear) ನಿರೂಪಣೆಯಲ್ಲಿ ಚಿತ್ರದ ಕಥೆಯಿದೆ. ಚಿತ್ರದ ಮೊದಲಾರ್ಧದ ಚಿತ್ರಕಥೆ ಪೇಲವವಾಗಿದೆ. ಸಂಭಾಷಣೆಯಲ್ಲೂ ತೂಕವಿಲ್ಲ. ಸಂಜು ವೆಡ್ಸ್‌ ಗೀತಾ ದಲ್ಲಿ ಗೆದ್ದಂಥ ರೀತಿಯ ಕಥೆ, ಬಿಗಿಯಾದ ನಿರೂಪಣೆ ಇಲ್ಲಿಲ್ಲ. ಅದೇ ರೀತಿಯ ಎಳೆಯಷ್ಟೇ ಇದೆ. ಮೊದಲ ಭಾಗಕ್ಕೂ ಎರಡನೇ ಭಾಗದ ಕೆಲ ಸನ್ನಿವೇಶಗಳಿಗೂ ಸಾಮ್ಯತೆ ಇದೆ. ಮೊದಲಾರ್ಧದಲ್ಲಿ ಚಿತ್ರಕಥೆಯನ್ನು ಎಳೆದಾಡಲಾಗಿದೆ. ಇದು ತಾಳ್ಮೆ ಪರೀಕ್ಷಿಸುತ್ತದೆ. ಮಧ್ಯಂತರದ ಬಳಿಕ ಕಥೆಗೆ ತಿರುವು ಸಿಗುತ್ತದೆ ಎಂದು ಊಹಿಸಿದರೆ ಅದೂ ಹುಸಿ. ಸ್ವಿಡ್ಜರ್ಲೆಂಡ್‌ನ ಸನ್ನಿವೇಶಗಳು ಹೊರದೇಶದ ಶೂಟಿಂಗ್‌ಗಷ್ಟೇ ಸೀಮಿತವಾಗಿದೆ. 

ಶ್ರೀನಗರ ಕಿಟ್ಟಿ ಹಾಗೂ ಸಂಪತ್‌ ರಾಜ್‌ ಅವರ ಪಾತ್ರದ ಬರವಣಿಗೆ ಬಹಳ ಕೃತಕವಾಗಿದೆ. ಕಥೆಯಲ್ಲಿ ರಚಿತಾ ರಾಮ್‌ ಪಾತ್ರಕ್ಕೆ ಹೆಚ್ಚಿನ ತೆರೆ ಅವಧಿಯಿದ್ದು, ಇದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ಸೂಕ್ತವಾದ ಕಥೆಯ ಕೊರತೆ ಈ ಪಾತ್ರಕ್ಕೆ ಅಡೆತಡೆಯಾದಂತಿದೆ. ಸಾಧು ಕೋಕಿಲ ಅವರ ಪಾತ್ರದ ಬರವಣಿಗೆ ಅವರ ಹಾಸ್ಯದ ಅಸ್ತ್ರವನ್ನೇ ವ್ಯರ್ಥವಾಗಿಸಿದೆ. ರಾಗಿಣಿ ದ್ವಿವೇದಿ ಪಾತ್ರದ ಪ್ರವೇಶ ಯಾವ ಕಾರಣಕ್ಕೋ ತಿಳಿಯದು. 

ಈ ಹಿಂದೆ ಕನ್ನಡದಲ್ಲೇ ಬಂದಿದ್ದ ‘ಕ್ಷೇತ್ರಪತಿ’ ಸಿನಿಮಾ ರೈತರ ಆರ್ಥಿಕ ಸ್ಥಿತಿ, ವ್ಯವಸ್ಥೆಯ ಕುತಂತ್ರಗಳು, ಕಾರ್ಪೊರೇಟ್‌ ಕಂಪನಿಗಳ ಹಿಡಿತ, ದಲ್ಲಾಳಿಗಳ ಆಟ ಮುಂತಾದವುಗಳನ್ನು ಕಮರ್ಷಿಯಲ್‌ ವೇದಿಕೆಯಡಿ ತಂದು ಒಂದು ಹಂತಕ್ಕೆ ಗೆದ್ದಿತ್ತು. ಆದರೆ ಈ ಸಿನಿಮಾದ ಕಥೆ ರೇಷ್ಮೆ ಬೆಳೆಗಾರರ ಸಂಕಷ್ಟವನ್ನು ಹೇಳಬೇಕು ಎಂದು ಹೊರಟು ಒಂದೆರಡು ದೃಶ್ಯಗಳಲ್ಲಷ್ಟೇ ಉಲ್ಲೇಖವಾಗಿ ನಂತರ ದಾರಿ ತಪ್ಪುತ್ತದೆ. ಈ ವಿಷಯಕ್ಕೆ ಹೆಚ್ಚಿನ ಒತ್ತು ಕೊಡದೆ ಕೊನೆಯಲ್ಲಿ ಸಂಜು ಮತ್ತು ಗೀತಾ ನಡುವಿನ ಪ್ರೀತಿಗಷ್ಟೇ ಸೀಮಿತವಾಗುತ್ತದೆ. ಸಿನಿಮಾದುದ್ದಕ್ಕೂ ಭಾವನಾತ್ಮಕ ದೃಶ್ಯಗಳ ಬರವಣಿಗೆಯೂ ತೆಳುವಾಗಿದೆ. ಪದೇ ಪದೇ ಗುನುಗುವಂತಹ ಹಾಡುಗಳು ಎರಡನೇ ಭಾಗದ ಕೊರತೆ. ಸತ್ಯ ಹೆಗಡೆ ಛಾಯಾಚಿತ್ರಗ್ರಹಣ ಸಿಡ್ಜರ್ಲೆಂಡ್‌ ಅನ್ನು ಅದ್ಭುತವಾಗಿ ತೋರಿಸಿದೆ. ಮೊದಲಾರ್ಧದಲ್ಲಿ ಡಬ್ಬಿಂಗ್‌ ಸಮಸ್ಯೆ ತೆರೆ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವೆಡೆ ವಿಎಫ್‌ಎಕ್ಸ್‌ ಗುಣಮಟ್ಟ ಕಳಪೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.