ADVERTISEMENT

ಸಿನಿಮಾ ವಿಮರ್ಶೆ| ಉತ್ಪ್ರೇಕ್ಷಿತ ವ್ಯಂಗ್ಯದ ‘ಪ್ರಯೋಗಶಾಲೆ’ ಎಕೆ ವರ್ಸಸ್ ಎಕೆ

ವಿಶಾಖ ಎನ್.
Published 28 ಡಿಸೆಂಬರ್ 2020, 6:14 IST
Last Updated 28 ಡಿಸೆಂಬರ್ 2020, 6:14 IST
ಅನುರಾಗ್ ಕಶ್ಯಪ್, ಅನಿಲ್ ಕಪೂರ್
ಅನುರಾಗ್ ಕಶ್ಯಪ್, ಅನಿಲ್ ಕಪೂರ್   

ನಾವು ನೋಡಿದ ಸಿನಿಮಾ

ಚಿತ್ರ: ಎಕೆ ವರ್ಸಸ್ ಎಕೆ (ಹಿಂದಿ–ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದೆ)

ನಿರ್ಮಾಣ: ದೀಪಾ ಡೆ ಮೋಟ್ವಾನೆ

ADVERTISEMENT

ನಿರ್ದೇಶನ: ವಿಕ್ರಮಾದಿತ್ಯ ಮೋಟ್ವಾನೆ

ತಾರಾಗಣ: ಅನಿಲ್ ಕಪೂರ್, ಅನುರಾಗ್ ಕಶ್ಯಪ್, ಯೋಗಿತಾ ಬಿಹಾನಿ, ಸೋನಂ ಕಪೂರ್, ಹರ್ಷವರ್ಧನ್ ಕಪೂರ್

ದ.ರಾ. ಬೇಂದ್ರೆ ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂಬ ಪದ್ಯ ಬರೆದಿದ್ದರು. ‘ಹಕ್ಕಿ ಹಾರುತಿದೆ ನೋಡಿದಿರಾ’ ಬರೆದಿದ್ದ ಕವಿ ಹೀಗೆ ಬರೆದಿದ್ದು ಚರ್ಚೆಗೆ ಒಳಗಾಗಿತ್ತು. ಸಾಹಿತ್ಯದಲ್ಲಿ ತಂತಮ್ಮ ಧೋರಣೆ, ನಿಲುವುಗಳ ಪುಗ್ಗಕ್ಕೆ ಲಘು ಧಾಟಿಯಲ್ಲಿ ವ್ಯಂಗ್ಯದ ಸೂಜಿಮೊನೆ ತಾಕಿಸುವವರಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅಂಥವರು ವಿರಳ. ‘ಎಕೆ ವರ್ಸಸ್ ಎಕೆ’ಯಲ್ಲಿ ಅಂತಹ ಆಸಕ್ತಿಕರ ಪ್ರಯೋಗವೊಂದು ನಡೆದಿದೆ.

ನಟ ಅನಿಲ್ ಕಪೂರ್ ಈ ಸಿನಿಮಾದಲ್ಲಿ ಸ್ವಯಂ ಅವರೇ. ನಿರ್ದೇಶಕ ಅನುರಾಗ್ ಕಶ್ಯಪ್ ಪಾತ್ರವೂ ಅವರ ನಿಜಬದುಕಿನದೇ. ಇಬ್ಬರ ಭಿನ್ನ ನಿಲುವು, ಧೋರಣೆಗಳನ್ನೇ ಉತ್ಪ್ರೇಕ್ಷಿತ ಧಾಟಿಯಲ್ಲಿ ಚಿತ್ರಕಥೆಯಾಗಿಸಲಾಗಿದೆ. ಥ್ರಿಲ್ಲರ್‌ ಹಾಗೂ ಹಾಸ್ಯದ ಮೆರವಣಿಗೆ ಇರುವಂತೆ ಅವಿನಾಶ್ ಸಂಪತ್ ಕಥೆ ಬರೆದಿದ್ದಾರೆ. ಚಿತ್ರಕಥೆಯಲ್ಲಿ ಅವರ ಜತೆ ವಿಕ್ರಮಾದಿತ್ಯ ಕೂಡ ತೊಡಗಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ಅವರೇ ಹಸಿ ಹಸಿ ಸಂಭಾಷಣೆ ಬರೆದಿದ್ದಾರೆ.

ವೇದಿಕೆಯೊಂದರಲ್ಲಿ ಪರಸ್ಪರ ಹಂಗಿಸಿಕೊಳ್ಳುವ ಅನಿಲ್ ಕಪೂರ್ ಹಾಗೂ ಅನುರಾಗ್ ಕಶ್ಯಪ್, ಆಮೇಲೆ ಜಗಳಕ್ಕಿಳಿಯುತ್ತಾರೆ. ಅನಿಲ್ ಮುಖಕ್ಕೆ ಅನುರಾಗ್ ನೀರನ್ನು ಎರಚುತ್ತಾರೆ. ಹಿಂದೆ ‘ಆಲ್ವಿನ್ ಕಾಲಿಚರಣ್’ ಎನ್ನುವ ಸಿನಿಮಾ ಮಾಡಲು ಹೊರಟು ಅದಕ್ಕೆ ಅನಿಲ್ ಅವರನ್ನು ನಾಯಕರಾಗುವಂತೆ ಅನುರಾಗ್ ಕೇಳಿದ್ದಾಗ, ತಾರಾನಟ ಅದನ್ನು ನಿರಾಕರಿಸಿರುತ್ತಾರೆ. ಅದರ ಸೆಡವಿನ ರೂಪದಲ್ಲಿ ಅದೇ ನಟನಿಂದ ಸಹಜಾಭಿನಯ ತೆಗೆಸುವಂತೆ ಚಿತ್ರವನ್ನು ಅನುರಾಗ್ ಒತ್ತಾಯದಿಂದ ಮಾಡಹೊರಡುವುದು ಚಿತ್ರದ ಕಥೆ. ಮಗಳು ಸೋನಂ ಅವರನ್ನು ಅಪಹರಿಸಿ, ಅವಳನ್ನು ಪತ್ತೆಮಾಡುವ ಟಾಸ್ಕ್‌ನ ಸವಾಲನ್ನು ಅನಿಲ್‌ಗೆ ಅನುರಾಗ್ ನೀಡುತ್ತಾರೆ. ಅನಿಲ್ ಹೊಯ್ದಾಟ, ಮಗಳ ಪತ್ತೆಗಾಗಿ ಅವರು ತಮ್ಮ ಹುಟ್ಟುಹಬ್ಬದ ರಾತ್ರಿಯೇ ಪಡುವ ಪಡಿಪಾಟಲು, ಅಭಿಮಾನಿಗಳ ಹುಚ್ಚಾಟ, ಅನುರಾಗ್ ಕಶ್ಯಪ್ ಕಾಲೆಳೆಯುತ್ತಾ ಸಾಗುವ ರೀತಿ... ಇವೇ ಸಿನಿಮಾದ ಕಥನಗಳು. ಚಕಚಕನೆ ನಡೆಯುವ ಪ್ರಸಂಗಗಳು ಕಣ್ಣು ಕೀಲಿಸಿ ನೋಡಿಸಿಕೊಳ್ಳುತ್ತವೆ.

ಸಿನಿಮಾದ ಅಸಲಿಯತ್ತನ್ನೇ ವ್ಯಂಗ್ಯದ ಮಸೂರದಲ್ಲಿ ತೋರಿಸಿರುವ ಪ್ರಯತ್ನವನ್ನು ‘ಮೆಟಾ ಸಿನಿಮಾ’ ಎಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ಇದು ಹೊಸ ಪ್ರಯೋಗ.

ಅನುರಾಗ್ ರೂಪಿಸಿರುವ ಸ್ಕ್ರಿಪ್ಟ್‌ ಕೊನೆಯ ಹಂತದಲ್ಲಿ ಅವರ ನಿಯಂತ್ರಣವನ್ನೂ ಮೀರಿ ಮುಂದುವರಿಯುವುದು ಇನ್ನೊಂದು ಗಮನಾರ್ಹ ವಿಸ್ತರಣೆ. ಸ್ವಪ್ನಿಲ್ ಸೋನಾವಾನೆ ಕ್ಯಾಮೆರಾವನ್ನು ಹೊತ್ತು ಪಾತ್ರಗಳ ಹಿಂದೆ ಹೇಗೆಂದರೆ ಹಾಗೆ ಸಾಗುತ್ತಾ ಎಲ್ಲವನ್ನೂ ಚಿತ್ರೀಕರಿಸಿಕೊಂಡಿದ್ದಾರೆ, ಕೃತಕ ಸಂಗೀತ ಬಳಸದೆ, ರಿಯಲಿಸ್ಟಿಕ್‌ ಆಗಿ ಚಲನೆಗಳನ್ನು ದಾಖಲಿಸುತ್ತಾ ಸಿನಿಮಾ ಸಾಗುತ್ತದೆ. ಅಗತ್ಯ ಇರುವೆಡೆ ಕನ್ನಡಿಗಳಲ್ಲಿ ಕಾಣುವ ಪಾತ್ರಗಳ ಪ್ರತಿಬಿಂಬಗಳನ್ನೇ ಪ್ರೇಕ್ಷಕರ ಹಿಡಿದಿಟ್ಟುಕೊಳ್ಳಲು ಬಳಸಿಕೊಂಡಿರುವ ರೀತಿಯೂ ಪ್ರಯೋಗವೇ ಸರಿ. ಅಂತ್ಯದಲ್ಲಿ ಸೂತ್ರದ ಗಂಟುಗಳನ್ನು ಹೆಚ್ಚಿಸಿ, ತಲೆಯೊಳಗೆ ಹುಳ ಬಿಡುವ ‘ತಂತ್ರವನ್ನೂ’ ವಿಕ್ರಮಾದಿತ್ಯ ತೋರಿಸಿದ್ದಾರೆ.

ತಾಂತ್ರಿಕವಾಗಿ ಅಚ್ಚುಕಟ್ಟಾಗಿರಬೇಕು ಎನ್ನುವುದನ್ನು ಮುರಿದಿರುವುದು, ತಾರಾನಟ ಹಾಗೂ ವ್ಯಂಗ್ಯದ ಸರಕಿನ ನಿರ್ದೇಶಕನ ನಡುವೆ ದೈಹಿಕ ಕಿತ್ತಾಟದ ಮಟ್ಟದ ಸನ್ನಿವೇಶಗಳನ್ನು ಸೃಷ್ಟಿಸಿರುವುದು ಕೂಡ ನಗೆಯುಕ್ಕಿಸುತ್ತದೆ.

ಪ್ರಯೋಗದ ದೃಷ್ಟಿಯಿಂದ ಗಮನ ಸೆಳೆಯುವ ಚಿತ್ರ, ಸಿನಿಮೀಯ ಮೌಲ್ಯಗಳ ತಕ್ಕಡಿಯಲ್ಲಿ ಕುಸಿಯುತ್ತದೆ. ಅಂತ್ಯದ ಗೊಂದಲದ ಸನ್ನಿವೇಶಗಳೂ ಸಡಿಲವೆನಿಸುತ್ತವೆ. ಇಂತಹ ಕೆಲವೇ ಕೆಲವು ಕೊರತೆಗಳ ನಡುವೆಯೂ ಇದು ನೋಡಲೇಬೇಕಾದ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.