ADVERTISEMENT

ರಂಗಭೂಮಿ: ಸರ್ವಾಧಿಕಾರಿಯ ದಟ್ಟ ವಿಡಂಬನೆ ಭಂಗೀಹುಳ ನಾಟಕ!

ಕೆ.ಟಿ.ಗಟ್ಟಿಯವರ ರೇಡಿಯೊ ನಾಟಕ ‘ಮೃಗ’ ವನ್ನು ‘ಅಂಗವಿರದ ದೇಹದಲ್ಲಿ ಭಂಗೀಹುಳ’ ನಾಟಕವಾಗಿ ಬೆಂಗಳೂರಿನ ‘ಅನೇಕ’ ತಂಡ ರಂಗದ ಮೇಲೆ ತಂದಿದೆ.

ಪ್ರಜಾವಾಣಿ ವಿಶೇಷ
Published 4 ಜನವರಿ 2025, 22:32 IST
Last Updated 4 ಜನವರಿ 2025, 22:32 IST
ನಾಟಕದ ದೃಶ್ಯ
ನಾಟಕದ ದೃಶ್ಯ   

ಒಂದರ ದೇಹದೊಳಗೆ ಇನ್ನೊಂದು ಸೇರಿಕೊಂಡು ಅದು ಬೇರೆಯದೇ ಆಗಿಬಿಡುವ ಪ್ರಕ್ರಿಯೆ ನಮಗೇನೂ ಹೊಸತಲ್ಲ. ಪುರಾಣಗಳಿಂದ ಮೊದಲುಗೊಂಡು ಜಾನಪದ ಕತೆಗಳವರೆಗೂ ಇಂಥವುಗಳನ್ನು ನೋಡುತ್ತಲೇ ಬಂದಿದ್ದೇವೆ. ಕನ್ನಡದ ನಾಟಕಗಳಲ್ಲೂ ಇಂಥವು ಅಲ್ಲಲ್ಲಿ ಕಂಡುಬಂದಿದ್ದುಂಟು. ನಾಟಕವೆಂದರೇ ರೂಪಾಂತರವಾಗುವ ಕ್ರಿಯೆ. ಇಂಥದೇ ಒಂದು ಎಳೆಯನ್ನು ಹಿಡಿದುಕೊಂಡು ಕಟ್ಟಿದ ನಾಟಕ ‘ಅಂಗವಿರದ ದೇಹದಲ್ಲಿ ಭಂಗೀಹುಳ’. ವ್ಯತ್ಯಾಸವೆಂದರೆ ಇಲ್ಲಿ ದೇಹದ ರೂಪ ಬದಲಾಗುವುದಿಲ್ಲ, ಬದಲಿಗೆ ಭಂಗೀಹುಳ ತಾನು ಹೊಕ್ಕ ದೇಹದ ಗುಣ ಲಕ್ಷಣಗಳನ್ನೇ ಬದಲಾಯಿಸಿಬಿಡುತ್ತದೆ. ಕೆ.ಟಿ.ಗಟ್ಟಿಯವರ ರೇಡಿಯೊ ನಾಟಕ ‘ಮೃಗ’ ವನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಸುರೇಶ ಆನಗಳ್ಳಿ ರಂಗಕ್ಕೆ ಅಳವಡಿಸಿದ್ದಾರೆ. ಇದು ಬೆಂಗಳೂರಿನ ‘ಅನೇಕ’ ತಂಡದ ಪ್ರಸ್ತುತಿ.

ನಾಟಕ ಪ್ರಾರಂಭವಾಗುವುದು ರೈಲ್ವೆಯ ಸಿಗ್ನಲ್‌ಮ್ಯಾನ್‌ ಪ್ರವೇಶದೊಂದಿಗೆ. ರೈಲಿಗೆ ಹಸಿರು ನಿಶಾನೆ ತೋರಿಸುತ್ತ, ಕಾಲಿನಿಂದ ಅದೇನನ್ನೋ ಮೆಟ್ಟುತ್ತಿದ್ದಾನೆ, ಕಾಟ ಕೊಡುತ್ತಿರುವ ಅದೇನನ್ನೋ ಸಾಯಿಸುವಂತೆ. ಆತನ ಹಿಂದೆಯೇ ಪ್ರವೇಶಿಸುವ ಸೂಟುಧಾರಿಗಳಿಬ್ಬರು ರಂಗ ಸಜ್ಜಿಕೆಯ ಚೌಕಟ್ಟುಗಳಲ್ಲಿ ಅದೇನನ್ನೋ ಗೀಚುತ್ತಿದ್ದಾರೆ. ಹೀಗೆ ಒಂದಿಷ್ಟು ಅಸಂಗತ ಕ್ರಿಯೆಗಳೊಂದಿಗೆ ಪ್ರಾರಂಭವಾಗುವ ನಾಟಕ, ಜೀವರಸಾಯನಶಾಸ್ತ್ರದ ಪ್ರೊಫೆಸರ್‌ ಹಿಡಿದುಕೊಂಡು ಬರುವ ಹಗ್ಗದ ಎಳೆಯೊಂದಿಗೆ ರೂಪ ಪಡೆಯುತ್ತ ಹೋಗುತ್ತದೆ. ಇದೇ ನಾಟಕವನ್ನು ಪ್ರವೇಶಿಸಲು ಪ್ರೇಕ್ಷಕರಿಗೆ ಸಿಗುವ ಎಳೆಯೂ ಕೂಡ.

ಆತ ಹಿಡಿದ ಹಗ್ಗದ ಇನ್ನೊಂದು ತುದಿಗೆ ಪ್ರೊಫೆಸರ್‌ಗೆ ಲ್ಯಾಬ್‌ನಲ್ಲಿ ಸಿಕ್ಕ ನಿಗೂಢ ಪ್ರಾಣಿಯಿದೆ. ಆದರೆ ಅದು ಕಣ್ಣಿಗೆ ಗೋಚರಿಸುತ್ತಿಲ್ಲ. ರಂಗದ ಇನ್ನೊಂದು ತುದಿಗೆ ಮನುಷ್ಯನೊಬ್ಬ ಮಲಗಿದ್ದಾನೆ. ಹರಕು ಬಟ್ಟೆಯ ಬಗ್ಗಿದ ದೇಹದ ಹೆಸರೇ ಇಲ್ಲದವ ಆತ. ಅದೆಲ್ಲೋ ಬಿದ್ದ ಅವನನ್ನು ಆಸ್ಪತ್ರೆಗೆ ಸೇರಿಸಿಕೊಂಡು ಆತನ ಅಂಗಾಂಗವನ್ನೆಲ್ಲ ಕದ್ದುಬಿಟ್ಟಿದ್ದಾರೆ. ಹೃದಯ, ಕಿಡ್ನಿ, ಲಿವರ್‌, ಶ್ವಾಸಕೋಶ ಯಾವುದೂ ಈಗ ಈತನೊಳಗಿಲ್ಲ. ಅವನದು ‘ಅಂಗವಿರದ ದೇಹ’. ಆತನ ದೇಹದೊಳಕ್ಕೆ ತಾನು ಎಳೆದು ತಂದ ‘ಭಂಗೀಹುಳ’ವನ್ನು ಸೇರಿಸಿಬಿಡುತ್ತಾನೆ ಪ್ರೊಫೆಸರ್.‌ ಹಗ್ಗ ಹಿಡಿದು ಬರುವ ಪೋಲೀಸರು, ಗಾರ್ಡುಗಳು, ಮಠಾಧೀಶರು, ಗನ್‌ಮ್ಯಾನ್‌ಗಳು ಆ ಮನುಷ್ಯನ ಖಾಲಿ ದೇಹವನ್ನು ಹೊಕ್ಕುಬಿಡುತ್ತಾರೆ. ಥಟ್ಟನೆ ಬದಲಾಗಿಬಿಡುತ್ತಾನೆ ಆತ. ಪ್ರೊಫೆಸರ್‌ ಆತನಿಗೆ ‘ವಿಶ್ವಭೂಷಣ ಚಕ್ರವರ್ತಿ’ ಅಂತ ನಾಮಕರಣವನ್ನೂ ಮಾಡಿಬಿಡುತ್ತಾನೆ. ಅಲ್ಲಿಂದಾಚೆಗೆ ನಡೆಯುವುದೇ ಈ ಚಕ್ರವರ್ತಿಯ ಆಟ.

ADVERTISEMENT

ಖಾಕಿ ಕಾವಿ ಕಾಸಿನ ಬಲದಿಂದ ಭೂಮಿಯನ್ನೆಲ್ಲ ತನ್ನದಾಗಿಸಿಕೊಳ್ಳುತ್ತ, ಜನರನ್ನ ಒಕ್ಕಲೆಬ್ಬಿಸುತ್ತ, ಯುರೇನಿಯಂಗಿಂತಲೂ ಅಪಾಯಕಾರಿಯಾದ ‘ಎ.ಸಿ.ಡಿ’ ಯ ಉತ್ಖನನಕ್ಕೂ ಆತ ಮುಂದಾಗುತ್ತಾನೆ. ಸರ್ವಾಧಿಕಾರಿಯಾಗುತ್ತಾನೆ. ಆತನ ನಡೆಯನ್ನು ವಿರೋಧಿಸಿದ ಚಳವಳಿಗಾರರನ್ನು ಮಟ್ಟ ಹಾಕುತ್ತಾನೆ. ಚಳವಳಿಯ ಮುಂಚೂಣಿಯಲ್ಲಿದ್ದ ಯುವಜೋಡಿಯೊಂದನ್ನು ಮುಗಿಸಿಬಿಡುತ್ತಾನೆ. ಪ್ರೊಫೆಸರ್‌ನ ಹೆಂಡತಿಗೂ ಹಣದ ಆಮಿಷ ತೋರಿಸಿ ತನ್ನ ಕಡೆಗೆ ಸೆಳೆದುಕೊಂಡುಬಿಡುತ್ತಾನೆ. ಭಸ್ಮಾಸುರನಂತೆ ಬೆಳೆಯುತ್ತಾನೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಪ್ರೊಫೆಸರ್‌ ಔಷಧಿಯೊಂದನ್ನು ಕಂಡು ಹಿಡಿದು ವೈನ್‌ನಲ್ಲಿ ಬೆರೆಸಿ ಅದನ್ನು ಆತನಿಗೆ ಕುಡಿಸಿದರೂ ಅದು ಏನೇನೂ ಪರಿಣಾಮ ಬೀರದೆ ಕೊನೆಗೆ ಆ ಸರ್ವಾಧಿಕಾರಿ ಹೊಸ ಹುಟ್ಟು ಕೊಟ್ಟ ಪ್ರೊಫೆಸರ್‌ನನ್ನೇ ತನ್ನೊಳಕ್ಕೆ ಸೆಳೆದುಕೊಂಡುಬಿಡುವುದರೊಂದಿಗೆ ನಾಟಕದ ಅಂತ್ಯವಾಗುತ್ತದೆ.

ಭಂಗೀಹುಳವನ್ನೂ ಖಾಲಿ ದೇಹವನ್ನೂ ರೂಪಕವಾಗಿಟ್ಟುಕೊಂಡು ವ್ಯವಸ್ಥೆಯ ಅವನತಿಯ ಕತೆ ಹೇಳಹೊರಡುತ್ತಾರೆ ಸುರೇಶ ಆನಗಳ್ಳಿ. ನಾವೇ ಹುಟ್ಟುಹಾಕಿದ ವ್ಯವಸ್ಥೆಯೊಂದು ನಮ್ಮನ್ನೇ ಸರ್ವನಾಶಪಡಿಸುವ ಕತೆಯಿದು, ಪೊಳ್ಳು ಪೊಳ್ಳಾದ ನಾಯಕರು ದೇಹದೊಳಗೆ ಅಧಿಕಾರವೆಂಬ ಭಂಗೀಹುಳವನ್ನು ತುಂಬಿ ನಮ್ಮನ್ನು ನಾವೇ ದುರಂತಕ್ಕೆ ತಳ್ಳಿಕೊಳ್ಳುವ ಕತೆ. ಇದೆಲ್ಲೋ ನಮ್ಮದೇ ಕತೆ ಎನಿಸುವಷ್ಟು ನಾಟಕವನ್ನು ಸಮಕಾಲೀನಗೊಳಿಸುತ್ತಾರೆ. ಸರ್ವಾಧಿಕಾರಿಯ ಪ್ರವೇಶಕ್ಕೂ ಮೊದಲು ಬಂದು ‘ಭೋ ಪರಾಕ್‌’ ಹಾಕುವ ಮಾಧ್ಯಮಗಳ ಕುರಿತಂತೆ ಆತ ಆಡುವ ‘ಕೋಳಿಗಳಿಗೊಂದಿಷ್ಟು ಕಾಳು ಹಾಕು’ ಎನ್ನುವ ಮಾತಾಗಲೀ, ಬಂದೂಕು, ಮೂಸಿ ನೋಡುವ ನಾಯಿಗಳನ್ನು ಹಿಡಿದುಕೊಂಡು ಬಂದು ಜನಸಾಮಾನ್ಯರನ್ನು ಸುತ್ತುವರಿದು ಬೆದರಿಸುವ ಸರ್ವಾಧಿಕಾರಿಯ ಚೇಲಾಗಳು ಒದರುವ ‘ಐ.ಡಿ. ಕಾರ್ಡ್‌ ತೋರಿಸಿ’ ಎನ್ನುವ ಕೂಗಾಗಲೀ ‘ಇನ್ನು ಮುಂದೆ ಎಲ್ಲ ತರಕಾರಿ ತಿನ್ನಿ’ ಎಂದು ಹೊರಡಿಸುವ ಫಾರ್ಮಾನು...

‘ಮಾಮು, ಕಾಕು’ ಪಾತ್ರಗಳು ಎಲ್ಲ ಘಟನೆಗಳಿಗೂ ಸಾಕ್ಷಿಯಾಗುತ್ತ, ಪ್ರತಿಕ್ರಿಯಿಸುತ್ತವೆ. ಕೆಲವು ಬಾರಿ ಅಸಂಗತ ಎನಿಸಿದರೂ ವರ್ತಮಾನಕ್ಕೆ ಮುಖಾಮುಖಿಯಾಗುತ್ತ ರಂಗದ ಮೇಲೆ ನಡೆಯುವ ಘಟನೆಗಳನ್ನು ಪೋಣಿಸುತ್ತ ಹೋಗುತ್ತವೆ. ಜನತೆಯ ನೋವುಗಳಿಗೆ ಧ್ವನಿಯಾಗುತ್ತವೆ.

ಸರಳ ರಂಗ ಸಜ್ಜಿಕೆಯಲ್ಲಿ, ಮೂರು ಬೃಹತ್‌ ಚೌಕಟ್ಟುಗಳನ್ನಿಟ್ಟುಕೊಂಡು ನಾಟಕ ಕಟ್ಟುತ್ತಾರೆ ನಿರ್ದೇಶಕರು. ಪರಿಕರಗಳು ಕೂಡ ಅಷ್ಟೇ ಸರಳವಾದವು. ಹಾಗಾಗಿ ನಾಟಕ ನಿಲ್ಲಬೇಕಾದದ್ದು ಸಾಹಿತ್ಯ, ಅಭಿನಯ, ರಂಗ ವಿನ್ಯಾಸದ ಮೇಲೆಯೇ. ಕಲಾವಿದರು ಚೆನ್ನಾಗಿಯೇ ಅಭಿನಯಿಸಿದ್ದಾರೆ. ಮುಖ್ಯ ಪಾತ್ರ ಇನ್ನಷ್ಟು ‘ಫೈನ್‌ ಟ್ಯೂನ್‌’ ಆಗಬೇಕಿತ್ತು. ಈ ಮಧ್ಯೆಯೇ ಒಂದೆರಡು ದೃಶ್ಯಗಳನ್ನು ನಿರ್ದೇಶಕರು ತುಂಬ ಜಾಣತನದಿಂದ ಕಟ್ಟಿದ್ದಾರೆ. ಪರಿಸರ ಹೋರಾಟಗಾರ ಅಜಯ್‌ನ ಪ್ರೇಯಸಿಯನ್ನು ಸರ್ವಾಧಿಕಾರಿಯ ಚೇಲಾಗಳು ಎತ್ತುಕೊಂಡು ಹೋಗಿ, ಹಿಂಸೆಗೊಳಪಡಿಸಿ, ಬಾಯಿ ಮುಚ್ಚಿಸುವ ದೃಶ್ಯದಲ್ಲಿ ಹುಡುಗಿಯ ಪ್ರತಿಕೃತಿಯನ್ನು ಉಪಯೋಗಿಸಿಕೊಂಡು, ತೀವ್ರ ಪರಿಣಾಮಕಾರಿಯಾದ ದೃಶ್ಯ ಸಂಯೋಜನೆ ಮಾಡಿದ್ದಾರೆ. ಯಾವುದೇ ಚಮತ್ಕಾರಗಳಿಲ್ಲದೇ ಸರಳವಾದ ಬೆಳಕಿನಲ್ಲೇ ದೃಶ್ಯಗಳನ್ನು ಚಂದಗಾಣಿಸಿದ್ದು ಇಷ್ಟವಾಗುತ್ತದೆ. ಸಂಗೀತವೂ ಆಲಂಕಾರಿಕವಾಗದೇ ನಾಟಕದ ನಿರ್ಮಿತಿಗೆ ಪೂರಕವಾಗಿದೆ. ಅದರಲ್ಲೂ ಹುಳದ ಝೇಂಕಾರದ ಧ್ವನಿಯನ್ನು ವಿಸ್ತರಿಸುತ್ತ, ನಾಟಕೀಯವಾಗಿಸಿ ಬಳಸಿಕೊಳಡಿದ್ದು, ಕಿವಿಗೆ ಮೊರೆಯುವಂತೆ ಮತ್ತೆ ಮತ್ತೆ ಅನುರಣಿಸುವ ಸಾಂಕೇತಿಕ ಭಾಷಣಗಳು ತುಂಬ ಪ್ರಭಾವ ಬೀರುತ್ತವೆ. ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸುತ್ತಲಿನ ಘಟನೆ ಗಳನ್ನು ಗಮನಿಸುತ್ತ ಸದಾ ಎಚ್ಚರದಿಂದಿರುವಂತೆ ನಾಟಕ ಪ್ರೇರೇಪಿಸುತ್ತದೆ.

ನಾಟಕದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.