ADVERTISEMENT

ರಂಗಭೂಮಿ: ಅಂಕದ ಪರದೆ ಭಿನ್ನ ರಂಗಪ್ರಯೋಗ

ಎಂ.ರಾಘವೇಂದ್ರ
Published 14 ಡಿಸೆಂಬರ್ 2024, 23:30 IST
Last Updated 14 ಡಿಸೆಂಬರ್ 2024, 23:30 IST
<div class="paragraphs"><p>ನಾಟಕದ ದೃಶ್ಯ</p></div>

ನಾಟಕದ ದೃಶ್ಯ

   
ತಿಳಿಹಾಸ್ಯ, ವ್ಯಂಗ್ಯ, ವಿಡಂಬನೆಯೊಂದಿಗೆ ನಗಿಸುತ್ತಲೇ ವೃದ್ಧಾಪ್ಯದ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತ, ವೃದ್ಧಾಶ್ರಮದ ಪರಿಸರವನ್ನು ಪರಿಚಯಿಸುವ ಈ ನಾಟಕ ನೀನಾಸಂ ತಿರುಗಾಟದ ಭಾಗವಾಗಿದೆ. ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಈ ಮರಾಠಿ ನಾಟಕವನ್ನು ಜಯಂತ ಕಾಯ್ಕಿಣಿ ಅನುವಾದಿಸಿದ್ದಾರೆ.

ವೃದ್ಧಾಪ್ಯದ ಸಮಸ್ಯೆಗಳನ್ನು ನಾಟಕ ಸೇರಿದಂತೆ ಯಾವುದೇ ಕಲಾ ಪ್ರಕಾರಕ್ಕೆ ಅಳವಡಿಸುವಾಗ ಅದೊಂದು ಗೋಳು ಅಥವಾ ಮರುಕ ಹುಟ್ಟಿಸುವ ಕಥನವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಸವಾಲನ್ನು ಮೀರಿ ತಿಳಿಹಾಸ್ಯ, ವ್ಯಂಗ್ಯ, ವಿಡಂಬನೆ, ಸ್ವವಿಮರ್ಶೆ ಮೂಲಕ ವೃದ್ಧಾಪ್ಯದ ‘ವಿದ್ಯಮಾನ’ಗಳನ್ನು ರಂಗದ ಮೇಲೆ ತಂದಿರುವುದು ‘ಅಂಕದ ಪರದೆ’ ನಾಟಕದ ವಿಶೇಷ.

ಮರಾಠಿ ಲೇಖಕ ಅಭಿರಾಮ್ ಭಡ್ಕಮ್ಕರ್ ರಚಿಸಿರುವ, ಜಯಂತ ಕಾಯ್ಕಿಣಿ ಅನುವಾದಿಸಿರುವ, ವಿದ್ಯಾನಿಧಿ ವನಾರಸೆ (ಪ್ರಸಾದ್) ನಿರ್ದೇಶಿಸಿರುವ ‘ಅಂಕದ ಪರದೆ’ ನಾಟಕ ನೀನಾಸಂ ತಿರುಗಾಟದ ಭಾಗವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಬೇರೆ ಬೇರೆ ಕಾರಣಗಳಿಗಾಗಿ ಜೀವನದ ಸಂಧ್ಯಾಕಾಲವನ್ನು ವೃದ್ಧಾಶ್ರಮದಲ್ಲಿ ಕಳೆಯಬೇಕಾದ ಹಿರಿಯ ನಾಗರಿಕರ ಬದುಕಿನ ಚಿತ್ರಣವನ್ನು ನಾಟಕ ಕಟ್ಟಿಕೊಡುತ್ತದೆ.

ADVERTISEMENT

ಇಲ್ಲಿ ವೃದ್ಧಾಶ್ರಮದಲ್ಲಿ ಬದುಕುತ್ತಿರುವ ವ್ಯಕ್ತಿಗಳ ಆಳದಲ್ಲಿ ನೋವಿದ್ದರೂ ಸಂಪೂರ್ಣವಾಗಿ ಹತಾಶರಲ್ಲ. ತಾವು ವೃದ್ಧಾಶ್ರಮಕ್ಕೆ ಸೇರಬೇಕಾದ ಸನ್ನಿವೇಶ ನಿರ್ಮಾಣವಾಗಿರುವ ಬಗ್ಗೆ ಅವರ ಅಂತರಂಗದಲ್ಲಿ ದುಗುಡವಿದ್ದರೂ ಅದು ಅನಿವಾರ್ಯ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿದವರು.

ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತ ರೋಮಾಂಚನಗೊಳ್ಳುವ ವೃದ್ಧರು, ಮಕ್ಕಳ ಬಗ್ಗೆ ಮಿಶ್ರಭಾವ ಹೊಂದಿದವರು. ಇಂತಹ ಭಾವನೆಗಳ ಮೂಲಕವೇ ಹೊಸ ಬದುಕನ್ನು ಆವಿಷ್ಕರಿಸುವ ಮನೋಭೂಮಿಕೆ ಅವರಲ್ಲಿರುವ ಕಾರಣದಿಂದಲೇ ತುಂಟತನ, ತಮಾಷೆಯ ಮೂಲಕ ವೃದ್ಧಾಶ್ರಮದಲ್ಲಿ ಬದುಕು ಕಳೆಯುತ್ತಿರುತ್ತಾರೆ. ಈ ಹೊತ್ತಿನಲ್ಲಿ ತಂದೆಯ ವೇಷಧರಿಸಿ ಯುವಕನೊಬ್ಬ ವೃದ್ಧಾಶ್ರಮ ಸೇರಿಕೊಳ್ಳುವುದರೊಂದಿಗೆ ನಾಟಕ ತಿರುವು ಪಡೆದುಕೊಳ್ಳುತ್ತದೆ. ವೃದ್ಧಾಪ್ಯವೆಂಬ ವಾಸ್ತವ ರಂಗಭೂಮಿಯ ಭೂಮಿಕೆಗಳಾಗಿ ಪರಿವರ್ತನೆಯಾಗುವ ವಿಸ್ಮಯದ ದಿಕ್ಕಿಗೆ ನಾಟಕ ಮುನ್ನಡೆಯುವಲ್ಲಿ ಪ್ರತಿಯೊಂದು ಪಾತ್ರಗಳು ಜೀವಂತಿಕೆ ಪಡೆಯುತ್ತವೆ.

ಹೀಗೆ ವೇಷ ಮರೆಸಿ ಯುವಕನೊಬ್ಬ ವೃದ್ಧನಾಗುವುದು ನಾಟಕದೊಳಗೊಂದು ‘ನಾಟಕ’ ನಡೆಯುವುದಕ್ಕೆ, ಸ್ವಾರಸ್ಯಕರ ಪ್ರಸಂಗಗಳಿಗೆ ಪ್ರಯೋಗ ತೆರೆದುಕೊಳ್ಳುತ್ತದೆ. ಈ ಹಂತದಲ್ಲಿ ಬೆರಗು ಹುಟ್ಟಿಸುವ ರೀತಿಯಲ್ಲಿ ವೃದ್ಧಾಪ್ಯದ ವಸ್ತುವಿನ ನಿರ್ವಹಣೆಗೆ ನಾಟಕ ಮುಂದಾಗುವುದು ಪ್ರೇಕ್ಷಕರೂ ಪಾತ್ರವಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ. ವೃದ್ಧಾಶ್ರಮದ ಚಿತ್ರಣ ಕಟ್ಟಿಕೊಡುತ್ತಲೇ ಸಮಕಾಲೀನ ರಾಜಕೀಯ, ಸಾಮಾಜಿಕ ಸಂಗತಿಗಳಿಗೂ ಮುಖಾಮುಖಿಯಾಗುವುದು ‘ಅಂಕದ ಪರದೆ’ಯ ವಿಶೇಷತೆಯಾಗಿದೆ. ಹಿರಿಯರನ್ನು ಅಪ್ರಸ್ತುತ ಎಂದು ಪರಿಗಣಿಸುವ ಕಿರಿಯರ ಮನೋಭಾವ ಅದೆಷ್ಟು ಸರಿ ಎಂಬ ಪ್ರಶ್ನೆ ರಂಗದ ಮೇಲೆ ಹಲವು ಬಾರಿ ಎದುರಾಗುತ್ತದೆ.

ತಂದೆ ತಾಯಿಗೆ ಮಕ್ಕಳು ಯಾವತ್ತೂ ವರ್ತಮಾನ. ಆದರೆ ಮಕ್ಕಳು ದೊಡ್ಡವರಾಗಿ ತಂದೆ ತಾಯಿಗೆ ವಯಸ್ಸಾದ ನಂತರ ಮಕ್ಕಳ ಪಾಲಿಗೆ ಅವರು ಭೂತಕಾಲವಾಗುವುದು ಎಂತಹ ವಿಪರ್ಯಾಸ ಎಂಬ ಪ್ರಶ್ನೆ ಎತ್ತುವ ನಾಟಕ, ಯುವಜನರೆ ನೀವು ಒಂದಿಷ್ಟು ವೃದ್ಧಾಶ್ರಮ ನಿರ್ಮಿಸಿ, ಭವಿಷ್ಯದಲ್ಲಿ ನಿಮಗೂ ಇದರ ಅಗತ್ಯ ಬೀಳಬಹುದು ಎನ್ನುವುದನ್ನು ಮಾರ್ಮಿಕವಾಗಿ ಧ್ವನಿಸುತ್ತದೆ.

ಆಧುನಿಕ ನಾಗರಿಕತೆ, ಆಧುನಿಕ ಶಿಕ್ಷಣ, ಜೀವನಕ್ರಮ ನಮ್ಮ ಚಿಂತನಾಕ್ರಮಗಳನ್ನು ಹೇಗೆ ಬದಲಿಸಿದೆ, ಹಿರಿಯರಿಗೂ ಘನತೆಯಿಂದ ಬದುಕುವ ಹಕ್ಕು ಇದೆ ಎಂಬುದು ಯಾಕೆ ಮುಖ್ಯವಾಗುತ್ತಿಲ್ಲ. ಯಶಸ್ಸು ದೊರೆತರೆ ಅದಕ್ಕೆ ನಾವೇ ಕಾರಣ, ವೈಫಲ್ಯಕ್ಕೆ ಮಾತ್ರ ಹೆತ್ತವರು ಕಾರಣ ಎಂಬ ಯುವ ತಲೆಮಾರಿನ ಧೋರಣೆ ಎಷ್ಟು ಸರಿ ಎಂಬೆಲ್ಲಾ ವಿದ್ಯಮಾನಗಳಿಗೆ ನಾಟಕ ಕನ್ನಡಿ ಹಿಡಿಯುತ್ತದೆ.

ಜೀವನಪೂರ್ತಿ ಚಳವಳಿಯಲ್ಲೆ ಕಾಲ ಕಳೆದ ಸಮಾಜವಾದಿ ತನ್ನ ಬದುಕಿನ ಸಂಧ್ಯಾಕಾಲದಲ್ಲಿ ಚಳವಳಿಯ ಯಶಸ್ಸು, ಅಪಯಶಸ್ಸಿನ ವಿಮರ್ಶೆ ನಡೆಸುವುದು, ರಂಗಭೂಮಿಯಲ್ಲೆ ಬದುಕು ಸವೆಸಿದ ಕಲಾವಿದನೊಬ್ಬ ತನ್ನ ಬದುಕಿನ ಗತಿಬಿಂಬವನ್ನು ಕಲೆಯೊಂದಿಗೆ ಅನುಸಂಧಾನ ನಡೆಸುವುದು ಸೇರಿದಂತೆ ಹಲವು ವಿವರಗಳು ನಾಟಕವನ್ನು ಜೀವಂತವಾಗಿಟ್ಟಿದೆ.

ತಂದೆ ವೇಷದಲ್ಲಿ ವೃದ್ಧಾಶ್ರಮ ಸೇರಿದ ಯುವ ನಟ ಹಾಗೂ ವೃದ್ಧಾಶ್ರಮದ ವ್ಯವಸ್ಥಾಪಕನೊಂದಿಗೆ ನಡೆಯುವ ಸಂವಾದ ಕುತೂಹಲಕರ. ರಂಗಭೂಮಿ ಸಮಾಜಮುಖಿಯಾಗಿರಬೇಕು ಎಂಬ ವಿಷಯಕ್ಕೆ ಇದು ನಾಟಕದವರಿಗೆ ಮಾತ್ರ ನೀಡಿರುವ ಗುತ್ತಿಗೆಯೆ, ಈ ಪ್ರಶ್ನೆಯನ್ನು ಚಿತ್ರಕಲಾವಿದರಿಗೆ ಯಾಕೆ ಕೇಳುವುದಿಲ್ಲ ಎಂಬ ಮರುಪ್ರಶ್ನೆ ವಿವಿಧ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವವರ ಸೈದ್ಧಾಂತಿಕ ಬದ್ದತೆಯ ವಿಮರ್ಶೆಗೆ ದಾರಿ ಮಾಡಿಕೊಡುತ್ತದೆ.

ವೃದ್ಧಾಶ್ರಮದ ಬದುಕಿನಲ್ಲೆ ಹಲವು ಆತಂಕ, ಸಂಕಟಗಳಿಗೆ ಮುಖಾಮುಖಿಯಾಗುವ ವೃದ್ಧರು ಅವುಗಳನ್ನು ಸಮರ್ಥವಾಗಿ ಎದುರಿಸುತ್ತಲೇ ‘ಆಜ್ ಫಿರ್ ಜೀನೆಕಿ ತಮನ್ನಾ ಹೈ....’ ಎಂಬ ಗೀತೆಯನ್ನು ಹಾಡುತ್ತ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿಕೊಳ್ಳುವ ಆಶಯ ವ್ಯಕ್ತಪಡಿಸುವುದರೊಂದಿಗೆ ನಾಟಕ ಕೊನೆಯಾಗುತ್ತದೆ.

ವೃದ್ಧಾಶ್ರಮದ ಅವಶ್ಯಕತೆ ಬೀಳುವ ಕಾಲ ಬಂತಲ್ಲಪ್ಪ ಎಂಬ ವಿಷಾದದ ಜೊತೆಗೆ ಕೊನೆ ಕಾಲದಲ್ಲಿ ಅಂತಹದ್ದೊಂದು ವ್ಯವಸ್ಥೆಯಾದರೂ ಇದೆಯಲ್ಲ ಎಂಬ ವಾಸ್ತವವನ್ನೂ ನಾಟಕ ಬಿಂಬಿಸುತ್ತದೆ. ಯುವ ನಟ ತನ್ನ ನಟನೆಯ ಕುರಿತು ಸ್ವ ವಿಮರ್ಶೆ ನಡೆಸುವಲ್ಲಿ ‘ಬದಲಾಗಬೇಕಿರುವುದು ನಿನ್ನ ಧ್ವನಿಯಲ್ಲ, ಬದಲಾಗಿ ನಿನ್ನ ಧೋರಣೆ’ ಎಂಬ ಮಾತು ಹಿರಿಯರ ಬಗ್ಗೆ ಅನಾದರ ಭಾವ ಹೊಂದಿರುವವರಿಗೆ ಬೀಸಿದ ಚಾಟಿಯಂತೆ ಭಾಸವಾಗುತ್ತದೆ.

‘ಒಳ್ಳೆಯ ಮನುಷ್ಯರನ್ನು ಮತ್ತಷ್ಟು ಒಳ್ಳೆಯವರನ್ನಾಗಿ ಮಾಡುವುದೇ ನಾಟಕ ಸೇರಿದಂತೆ ಇತರ ಎಲ್ಲಾ ಕಲೆಗಳ ಉದ್ದೇಶ’ಎಂಬ ನಾಟಕದೊಳಗಿನ ಮಾತಿಗೆ ಪ್ರಯೋಗ ತಕ್ಕುದಾಗಿದೆ. ಮರಾಠಿ ಆವರಣದಲ್ಲೆ ಕತೆ ನಡೆಯುತ್ತಿದೆ ಎಂದೆನಿಸಿದರೂ ವೃದ್ಧಾಪ್ಯದ ಸಮಸ್ಯೆ ದೇಶ, ಭಾಷೆ, ಗಡಿಗಳನ್ನು ಮೀರಿದ ವಿದ್ಯಮಾನವಾಗಿರುವುದರಿಂದ ವಸ್ತು ಹೊರಗಿನದು ಎಂಬ ಭಾವ ಕಾಡುವುದಿಲ್ಲ.

ನೀನಾಸಂ ತಿರುಗಾಟ ತಂಡದ ನಟರ ಹದವಾದ ಅಭಿನಯ ಪ್ರದರ್ಶನ ಕಳೆಗಟ್ಟುವಂತೆ ಮಾಡಿದೆ. ನಾಟಕ ಮುಗಿದ ನಂತರ ಹಿರಿಯರಲ್ಲಿ ಜೀನೋತ್ಸಾಹ ಹೆಚ್ಚುವ ಭಾವ ಮೂಡಿಸಿದರೆ, ಯುವ ತಲೆಮಾರಿನವರಲ್ಲಿ ಹಿರಿಯರ ಕುರಿತು ಇರುವ ಧೋರಣೆಗಳ ಆತ್ಮವಿಮರ್ಶೆಗೆ ಹಚ್ಚಿಸುವಷ್ಟು ರಂಗಪ್ರಯೋಗ ಪರಿಣಾಮಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.