ನಟ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತದ ಉತ್ತರ ಕರ್ನಾಟಕ ದಿಕ್ಕಿನ ಮೊದಲ ಹೆಜ್ಜೆ ಧಾರವಾಡದಲ್ಲಿ ಗಟ್ಟಿಯಾಗಿ ಮೂಡಿದೆ. ಆ ಹೆಜ್ಜೆಗಳು ಮುಂದಿನ ದಿನಗಳಲ್ಲಿ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿಗಳತ್ತ ಸಾಗಲಿವೆ. ಇದೊಂದು ರಂಗ ಚಳವಳಿಯ ಸಶಕ್ತ ನಡೆಯಾಗಿದೆ. ಅದರ ಕುರುಹುಗಳು ಧಾರವಾಡದ ಉತ್ಸವದಲ್ಲಿ ಢಾಳವಾಗಿ ಕಂಡವು. ಉತ್ಸವದಲ್ಲಿಯ ಹಾಡು, ಚರ್ಚೆ, ನಾಟಕಗಳಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ಮತ್ತು ‘ಮತ್ತಾಯ 22- 39’- ಇವೆರಡು ವಿಲಕ್ಷಣ ನಾಟ್ಯ ಬಿಂಬಗಳು ಮತ್ತು ಕನ್ನಡ ರಂಗಭೂಮಿಯ ನವ ದಿಗಂತವನ್ನು ವಿಸ್ತರಿಸಿ ಸಾಗಬಲ್ಲವು ಎಂಬುದನ್ನು ಸಾಬೀತು ಪಡಿಸಿದವು. ಇದೊಂದು ಭರವಸೆಯ ಬೆಳವಣಿಗೆ.
ವಿದೇಶದಲ್ಲಿ ರಂಗಧ್ಯಯನ ಪೂರೈಸಿದ ವಿಜಯಪುರದ ಲೋಣಿ ಬಿಕೆಯ ಹುಡುಗ ಶಕೀಲ್ ಅಹ್ಮದ್ ತಮ್ಮ ಶೋಧದ ಹೊಸ ಪರಿಭಾಷೆಯನ್ನು ಸೃಷ್ಟಿಸಿರುವರು. ತನ್ನ ಎದೆಯೊಳಗೆ ಮಡುಗಟ್ಟಿದ ಹಲವು ಸಾಮಾಜಿಕ, ರಾಜಕೀಯ ಪ್ರಶ್ನೆಗಳಿಗೆ ಬ್ರೆಕ್ಟ್‌ನ ಮೂಲಕ ತುಂಡೇರಾಯನನ್ನು ಕಟ್ಟುವ ಪ್ರೊಸೆಸ್‌ನಲ್ಲಿ ಉತ್ತರ ಕಂಡುಕೊಳ್ಳಲು ಯತ್ನಿಸಿರುವರು.
ಅಡಾಲ್ಫ್ ಹಿಟ್ಲರ್ ಮತ್ತು ನಾಝಿ ನೆಲೆಯಲ್ಲಿ ನೈಜತೆಯ ಆಧರಿಸಿದ ಬರ್ಟೋಲ್ಟ್ ಬ್ರೆಕ್ಟ್ ನ ‘ದಿ ರೆಸಿಸ್ಟಿಬಲ್ ರೈಜ್ ಆಫ್ ಆರ್ಥರೊ ಉಯಿ’ ನಾಟಕದ ದೇಸಿ ರೂಪಾಂತರವೇ ‘ತಿಂಡಿಗೆ ಬಂದ ತುಂಡೇರಾಯ.’ ಕೊಲೆ, ಸುಲಿಗೆ, ದರೋಡೆ ಕಸುಬಿನ ತುಂಡೇರಾಯ ಸಮಾಜವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ನಡೆಸುವ ಕ್ರಿಯೆಗಳು ಹತ್ತಾರು. ಆರ್ಥಿಕ ಸಂಕಷ್ಟ, ಭಯರಹಿತ ವಾತಾವರಣದಿಂದಾಗಿ ಆತನ ಹೆಸರು ಮರೆಯಾಗತೊಡಗುತ್ತದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ, ಲಂಚ, ಭ್ರಷ್ಟರೂಪಿ ರಾಜಕಾರಣಿಯ ವಿಚಾರಗಳು ಕಿವಿಗೆ ಬೀಳುತ್ತಿದ್ದಂತೆ ತುಂಡೇರಾಯನ ಕನಸುಗಳು ಚಿಗುರುವವು. ತನ್ನ ಗುಂಪು ಕಟ್ಟಿಕೊಳ್ಳುವನು. ಕುಟಿಲ ತಂತ್ರಗಳನ್ನು ಹೂಡುವನು. ಬಲ ಪ್ರಯೋಗದಿಂದ ದೊಂಬಿ, ಗಲಭೆ ಹುಟ್ಟು ಹಾಕುವನು. ಮೋಡಿ ಮಾಡುವ ಮಾತುಗಳು, ಹಿಂಸಾತ್ಮಕ ನೀತಿಯಿಂದಾಗಿ ಸರ್ವಾಧಿಕಾರಿಯಾಗುವನು. ಅಧಿಕಾರ ದಾಹ, ದುರಾಸೆ, ಹಪಾಹಪಿತನ ಮತ್ತು ಕ್ರೌರ್ಯ ಹೆಚ್ಚುವವು. ಜನರನ್ನು ಮರಳು ಮಾಡಿ ಕೊಲ್ಲುತ್ತ, ರಾಜ್ಯಗಳನ್ನು ಕಬಳಿಸುತ್ತ ಸಾಗುವನು.
ಈ ಎಳೆಯ ನಾಟಕವನ್ನು ವಿನ್ಯಾಸಗೊಳಿಸಿ ನಿರ್ದೇಶನ ಮಾಡಿದ್ದು ಶಕೀಲ್ ಅಹ್ಮದ್. ಮೂಲ ಪಠ್ಯವನ್ನು ಕಲಾವಿದರು ಸೇರಿ ಮೂರು ತಿಂಗಳ ತಾಲೀಮಿನ ಪ್ರೊಸೆಸ್‌ನಲ್ಲಿಯೇ ಸಿದ್ಧಪಡಿಸಿರುವರು. ಉತ್ತರ ಕರ್ನಾಟಕದ ಆಡುನುಡಿಗಳಲ್ಲಿ ಹೊಮ್ಮುವ ಸಂವಾದವು ನಾಟಕದ ಶಕ್ತಿ. ಅಸಹಾಯ ತಳಮಳದ ನ್ಯಾಯಾಧೀಶ ಮತ್ತು ವ್ಯಾಪಾರಿ ಕರ್ಮಠತನದ ನುಡಿಗಟ್ಟು ನುಡಿಸುವ ಹನುಮಂತ, ಶಾಂತ ಕೊಲ್ಲುವ ತೀಕ್ಷ್ಮ ಕಣ್ಣಿನ ಸೋಮನ ಪಾತ್ರಧಾರಿ ಗಣಪತಿ ಮತ್ತು ಧರ್ಮರಾಜನಾಗಿ ರಂಗಮಂಚದಲ್ಲಿ ಸಂಚಲನ ಮೂಡಿಸುವ ಸಿದ್ದಪ್ಪ ಬಿಜಾಪುರ್ ನಾಟಕದ ಮುಖ್ಯ ಕೇಂದ್ರಗಳು. ಆಸ್ಕರ್ ಪ್ರಶಸ್ತಿ ಪಡೆದ ‘ಜೋಕರ್’ ಅಭಿನಯ ಜ್ಞಾಪಿಸುವ ಸಿದ್ದಪ್ಪನ ಚಲನೆಯನ್ನು ಶಕೀಲ್ ವಿಲಕ್ಷಣ ನವ್ಯ ಶೈಲಿಯಲ್ಲಿ ಸೃಜಿಸಿದ್ದಾರೆ. ಈ ಶೈಲಿಯನ್ನು ‘ಶಕೀಲ್ ಘರಾನಾ’ ಎನ್ನಬಹುದು.
***
ನಮ್ಮನ್ನು ಎಚ್ಚರಗೊಳಿಸುವ ಮಂಗಳೂರಿನ ಅಸ್ತಿತ್ವ ಅಭಿನಯದ ‘ಮತ್ತಾಯ 22-39’ನಾಟಕವು ತಣ್ಣಗೆ ಪ್ರೇಕ್ಷಕನ ಪ್ರಜ್ಞೆಯ ಕಣಕಣದಲ್ಲಿ ಇಂಗಿತು. ಪ್ರಕೃತಿಯನ್ನು ನೈಜರೂಪದಲ್ಲಿ ಇಟ್ಟುಕೊಳ್ಳದಿದ್ದರೆ ಭವಿಷ್ಯದಲ್ಲಿ ಭೀಕರ ಬರಗಾಲದಿಂದ ಹನಿ ನೀರಿಗೂ ಹಾಹಾಕಾರ ಕಟ್ಟಿಟ್ಟ ಬುತ್ತಿ ಎಂಬುದನ್ನು ಎರಡೇ ಪಾತ್ರಗಳಲ್ಲಿ ಕೇರಳದ ಅರುಣ ಲಾಲ್ ಕಲಾತ್ಮಕ ರೂಪಕವಾಗಿ ಕಟ್ಟಿಕೊಟ್ಟರು.
ರಂಗದ ಬಲಕ್ಕೊಂದು ಒಣಗಿದ ಟಿಸಿಲು ಕೊಂಬೆ ಮರ. ಒಣ ಇಟ್ಟಿಗೆಗಳನ್ನೇ ಬಾವಿ, ಕಾಳಿನ ದಾಸ್ತಾನು, ಕೋಳಿಗಳನ್ನಾಗಿ ಬಳಸಿ ಇಡೀ ಸಾದರೀಕರಣವನ್ನು ಪರಿಣಾಮಕಾರಿಯಾಗಿ ನೋಡುಗನ ಎದೆಗೆ ಇಳಿಸುವಲ್ಲಿ ಅರುಣ ಲಾಲ್‌ರ ಪ್ರಯೋಗಶೀಲತೆ ಯಶಸ್ಸು ಕಂಡಿದೆ. ಟಿ.ವಿ. ಕುಚುಭಾವರ ಕತೆಯನ್ನು ಸುಧಾಕುಮಾರಿ ಕನ್ನಡಕ್ಕೆ ತಂದಿರುವರು. ಇದನ್ನು ತನ್ನದೇ ಶೈಲಿಯಲ್ಲಿ ಪರಿಕಲ್ಪನೆಯ ರೂಪಕೊಟ್ಟು ವಿನ್ಯಾಸಗೊಳಿಸಿ ಇಂಪ್ರೊವೈಜಡ್ ಪ್ರೊಸೆಸ್‌ನಲ್ಲಿ ನಾಟಕದ ಸಂವಾದಗಳನ್ನು ರಚಿಸಿರುವರು. ಕುಮಾರ ಲಾಲ್ ಯೋಹಾನ್ನನ ಉತ್ತರ ಕರ್ನಾಟಕದ ದೇಸಿ ನುಡಿ ಮತ್ತು ಕ್ಲಾನ್ವಿನ್ ಫರ್ನಾಂಡಿಸ್ ಮತ್ತಾಯನ ದಕ್ಷಿಣ ಕನ್ನಡ ಮಾತುಗಳು ಆ ಸ್ವಭಾವಗಳ ನೆಲೆಯಲ್ಲೇ ಅಭಿನಯದಲ್ಲಿ ಸ್ಪುಟಗೊಳ್ಳುವವು.
ಭೀಕರ ಬರ. ಮಣ್ಣು ಸುಟ್ಟು ಕಲ್ಲಾಗಿದೆ. ಜೀವ ಜಗತ್ತು ನಾಶವಾಗಿದೆ. ಇಬ್ಬರೇ ಬದುಕಿರುವರು. ಮತ್ತಾಯನ ಹತ್ತಿರ ಬಾವಿಯ ನೀರು, ಕೋಳಿಗಳು ಮತ್ತು ಅಕ್ಕಿಯಿದೆ. ಆಶ್ರಯವಿಲ್ಲದ ನೆರೆಯ ಯೋಹಾನ್ನ ಮತ್ತಾಯನ ಹತ್ತಿರ ಉಣ್ಣಲು ಬರುವುದು, ಮಾತುಗಳಲ್ಲಿ ಬದುಕು ಸಾಗುವುದು. ಹಾಡುತ್ತ, ಹರಟುತ್ತ ಸಂತಸದಿ ಹಂಚಿ ಉಣ್ಣುತ್ತ ಇರುವಾಗಲೇ ಆಹಾರ ಮತ್ತು ನೀರು ಖಾಲಿಯಾಗುವ ಭಯದಿಂದ ಮತ್ತಾಯ ಯೋಹಾನ್ನನಿಗೆ ಊಟಕ್ಕೆ ಬರಬೇಡ ಎಂದು ಹೇಳುತ್ತಾನೆ. ಆಹಾರ ಅರಸುತ್ತ ಹೋದ ಯೋಹಾನ್ನನ ಅಂತ್ಯವಾಗುತ್ತದೆ. ಮತ್ತಾಯ ಒಂಟಿಯಾಗುವನು. ಗೆಳೆಯನ ಅಗಲಿಕೆ ಪಶ್ಚಾತ್ತಾಪಕ್ಕೆ ಹೊರಳುತ್ತದೆ. ನಮ್ಮ ನೆರೆಹೊರೆಯವರ ಸಂಗಡ ಕೂಡು ಬದುಕಿನ ಅಗತ್ಯವನ್ನು, ಪ್ರೀತಿಸಬೇಕೆಂಬ ಅರಿವನ್ನು ನಾಟಕ ಒಡಮೂಡಿಸುತ್ತಿರುವಾಗಲೇ ಕಾಲ ಮೀರಿರುತ್ತದೆ. ವಿಷಾದದ ಬಿಸಿಯುಸಿರಲ್ಲಿ ನಾಟಕ ಕೊನೆಗೊಳ್ಳುತ್ತದೆ. ಇವು ಧಾರವಾಡ ಸೃಜನಾದಲ್ಲಿ ಪ್ರಯೋಗಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.