ADVERTISEMENT

ನಾಟಕ: ಲಂಡನ್‌ನಲ್ಲಿ ಲಯನ್ ಕಿಂಗ್ ನೋಡಿದಾಗ...

ಡಾ.ಕೆ.ಎಸ್.ಪವಿತ್ರ
Published 26 ಜುಲೈ 2025, 23:30 IST
Last Updated 26 ಜುಲೈ 2025, 23:30 IST
ನಾಟಕದ ದೃಶ್ಯ
ನಾಟಕದ ದೃಶ್ಯ   
ಲಂಡನ್‌ನ ಲೈಸಿಯಮ್‌ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುವ ‘ಲಯನ್‌ ಕಿಂಗ್’ ನಾಟಕ ಬಹು ಜನಪ್ರಿಯ. ‘ಲಯನ್‌ ಕಿಂಗ್’ ಪುಸ್ತಕ, ಸಿನಿಮಾಗಳಿಗಿಂತಲೂ ನಾಟಕವೇ ಹೆಚ್ಚು ಪರಿಣಾಮಕಾರಿಯಾಗಿದೆ. ಅದಕ್ಕೆ ಕಾರಣ ಇಲ್ಲಿನ ಪಾತ್ರಧಾರಿಗಳು. ಇಡೀ ಜೀವನದಲ್ಲಿ ಮತ್ತೆ ಮತ್ತೆ ತಿರುವುಗಳು ಬರುತ್ತವೆ. ಬದಲಾವಣೆಗಳು ಹಠಾತ್ತನೆ ಎರಗುತ್ತವೆ. ಅವುಗಳನ್ನು ಅಪ್ಪಿಕೊಳ್ಳಬೇಕು, ಒಪ್ಪಿಕೊಳ್ಳಬೇಕು ಎಂಬ ಗಟ್ಟಿಯಾದ ಸಂದೇಶವನ್ನು ನೀಡುತ್ತದೆ.

ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ‘ಲಯನ್ ಕಿಂಗ್’ ಒಪೆರಾ ನೋಡಿದ್ದೆ. ಅವೆಲ್ಲ ಅರ್ಧದಿಂದ ಒಂದು ಗಂಟೆ ಶೋಗಳು. ಸಿಂಗಪುರದ ಸೆಂಟೋಸಾದಲ್ಲಿ, ಯುನಿವರ್ಸಲ್ ಸ್ಟುಡಿಯೊದಲ್ಲಿ, ಪ್ಯಾರಿಸ್‌ನ ಡಿಸ್ನಿಲ್ಯಾಂಡ್‌ನಲ್ಲಿ ನೋಡಿದ್ದೆ. ಸಿನಿಮಾವನ್ನು, ಅದನ್ನೇ ಆಧರಿಸಿದ ಪುಟ್ಟ ಪುಟ್ಟ ಕಾರ್ಟೂನ್ ಮಾದರಿಯ ಕಥೆ ಪುಸ್ತಕಗಳನ್ನೂ ಮಕ್ಕಳ ಜೊತೆಯಲ್ಲಿ ಓದಿದ್ದೆ. ಆದರೆ ಲಂಡನ್‌ನ ಲೈಸಿಯಮ್‌ ಥಿಯೇಟರ್‌ನಲ್ಲಿ ನೋಡಿದ ‘ಲಯನ್‌ ಕಿಂಗ್‌’ ಅದ್ಭುತವಾಗಿತ್ತು. ಮೂರು ಗಂಟೆಯಷ್ಟು ಸಂಭಾಷಣೆ-ಹಾಡು-ನಟನೆ-ನೃತ್ಯವನ್ನು ನಟರು ಮಾಡುವುದೆಂದರೆ ಸುಲಭದ ಮಾತೇ.

ಮೂರನೇ ಬೆಲ್ ಹೊಡೆಯುತ್ತಿದ್ದಂತೆ ಇಡೀ ರಂಗಮಂದಿರವನ್ನು ಕತ್ತಲು ಮತ್ತು ನಿಶ್ಯಬ್ದ ಆವರಿಸಿಕೊಂಡವು. ನಾನು, ಮಕ್ಕಳು ಉಸಿರು ಬಿಗಿ ಹಿಡಿದು ಕುಳಿತಿದ್ದೆವು. ಇದ್ದಕ್ಕಿದ್ದಂತೆ ಡ್ರಂಗಳು ಕೊಂಬು-ಕಹಳೆಗಳು ಮೊಳಗಲಾರಂಭಿಸಿದವು. ಇಡೀ ರಂಗಮಂಚದಲ್ಲಿ ಒಮ್ಮೆಲೇ ಜಿರಾಫೆ, ಜೀಬ್ರಾ, ಆನೆಗಳು, ಹೈನಾ ಬರಲಾರಂಭಿಸಿದವು. ಒಳಗಿದ್ದದ್ದು ಮನುಷ್ಯರೇ ಆದರೂ ಹುಲ್ಲು, ಮಣಿ, ಬಣ್ಣ ಮತ್ತು ಪುಕ್ಕಗಳಿಂದ ಮಾಡಿದ್ದ ವಿವಿಧ ವೇಷಗಳು ರಂಗೇರಿಸಿದವು. ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ಆಫ್ರಿಕಾದ ಸವನ್ನಾ ಹುಲ್ಲುಗಾವಲು, ಬಂಡೆಗಳು ಕಣ್ಣೆದುರಿಗೆ ನಿಂತುಬಿಟ್ಟವು.

ಸಿಂಬಾ, ನಲಾ, ಮಪೂಸಾ, ಸ್ಕಾರ್ ಮೊದಲಾದವರ ಕಥೆ ಗೊತ್ತಿರುವುದೇ. ಕಥೆ ಸರಳವಾಗಿ ಹೇಳಬೇಕೆಂದರೆ ಇಷ್ಟೇ–ಸಿಂಬಾ ಎಂಬ ಸಿಂಹದ ಮರಿ ಕಾಡಿನ ರಾಜನಾಗಲು ಅದು ಹುಟ್ಟಿದಾಗಿನಿಂದ ಉಂಟಾಗುವ ಅಡ್ಡಿ-ಆತಂಕಗಳು, ಅದರ ತಂದೆಯ ಸಾವು, ಹಲವು ಶತ್ರುಗಳು, ನಿಷ್ಠ ಸೇವಕ-ಮಾರ್ಗದರ್ಶಕರು, ಕೊನೆಗೆ ಶತ್ರುವನ್ನು ಗೆದ್ದು ಜಯಶಾಲಿಯಾಗಿ ತಾನು ರಾಜನಾಗುವುದು.

ADVERTISEMENT
ನಾಟಕದಲ್ಲಿ ಸಿಂಹ ಮತ್ತು ಹುಲಿ ಪಾತ್ರಧಾರಿಗಳು

ಇಡೀ ರಂಗಮಂದಿರವನ್ನು ಸುಡುಗೆಂಪು ಬಣ್ಣದಿಂದ ಅಲಂಕರಿಸಲಾಗಿತ್ತು. ಮೊದಲ ದೃಶ್ಯದಲ್ಲಿ ಸೂರ್ಯೋದಯವಾಗುತ್ತ ಸಿಂಹ ಮರಿಯ ಜನನದ ಸುದ್ದಿಯನ್ನು ಕಾಡಿಗೆ ಘೋಷಿಸುವ ಸನ್ನಿವೇಶಕ್ಕೂ, ರಂಗಮಂದಿರದ ಬಣ್ಣಕ್ಕೂ ತಾಳೆಯಾಗಿ ಸೃಷ್ಟಿಯಾಗುವ ಮಾಂತ್ರಿಕತೆಯೇ ಒಮ್ಮೆಲೇ ಹೊರಜಗತ್ತನ್ನು ನೋಡುಗನ ಮನಸ್ಸಿನಿಂದ ಮರೆಯಾಗಿಸಿಬಿಡುತ್ತದೆ.

ನಂತರ ಒಂದಾದ ಮೇಲೊಂದು ಬಂದ ಹಾಡುಗಳು-ಸರ್ಕಲ್ ಆಫ್ ಲೈಫ್, ಹಕೂನ ಮಾಟಾಟ, ಐ ಜಸ್ಟ್ ಕಾಂಟ್ ವೇಯ್ಟ್ ಟು ಬಿ ಕಿಂಗ್, ತುಂಬಾ ಪ್ರಸಿದ್ಧ. ಇವು ನಮಗೆ ಗೊತ್ತಿದ್ದಂತವು. ಸಿನಿಮಾದಲ್ಲಿ, ಚಿಕ್ಕ ಚಿಕ್ಕ ಲಯನ್ ಕಿಂಗ್ ಶೋಗಳಲ್ಲಿ ನಾವು ನೋಡಿ ಪರಿಚಯವಿದ್ದಂತಹವು. ಇವಲ್ಲದೆ ನಾಟಕಕ್ಕೆಂದೇ ಬರೆದ ಅದೆಷ್ಟು ಹಾಡುಗಳಿದ್ದವು! ಹುಲ್ಲುಗಾವಲಿನ ಪ್ರಾಣಿಗಳನ್ನು ಪರಿಚಯಿಸುವ ಗ್ರಾಸ್‌ಲ್ಯಾಂಡ್ಸ್ ಚ್ಯಾಂಟ್, ಸಿಂಹಿಣಿಗಳು ಬೇಟೆಯಾಡುವ ಹಾಡು, ತಂದೆ-ಮಗನ ಬಾಂಧವ್ಯದ ದೆ ಲಿವ್ ಇನ್ ಯೂ, ಸಿಂಬಾ ತನ್ನನ್ನು ತಾನು ಕಂಡುಕೊಳ್ಳುವ ‘ಎಂಡ್‌ಲೆಸ್ ನೈಟ್’ ಎಂಬ ಹಾಡು ‘ಮ್ಯೂಸಿಕಲ್’- ಗೀತ ನಾಟಕ ಎಂದರೆ ಹೇಗಿರುತ್ತದೆ ಎಂಬುದು ಮಕ್ಕಳಿಗೆ ಸರಿಯಾಗಿ ಗೊತ್ತು ಮಾಡಿತು.

ನಾಟಕದ ಪರಿಕರ-ವೇಷಭೂಷಣಗಳೂ ಅಷ್ಟೆ. ಅವುಗಳನ್ನು ರೂಪಿಸುವಲ್ಲಿ ಬಳಸಿರುವ ತಂತ್ರಗಳು ಕುತೂಹಲಕರವಾಗಿವೆ. ಸುಮಾರು 200 ಪಪೆಟ್‌ಗಳನ್ನು ಈ ನಾಟಕದಲ್ಲಿ ಬಳಸುತ್ತಾರೆ. ಇವುಗಳನ್ನು ಪ್ರತಿನಿತ್ಯದ ಪ್ರದರ್ಶನಕ್ಕಾಗಿ ಕಾಪಾಡಿಕೊಳ್ಳುವುದು ದುಡ್ಡಿನಿಂದ ಸಾಧ್ಯವಿಲ್ಲ. ಅದಕ್ಕೆ ಕಲೆಯೂ, ಕಲಾಪ್ರೀತಿಯೂ ಅತ್ಯವಶ್ಯ. ಇವುಗಳನ್ನು ರೂಪಿಸಿರುವ ಜೂಲಿ ಟೇಮರ್ ‘ಡಬಲ್ ಎಫೆಕ್ಟ್’ ಎಂಬ ತಂತ್ರವನ್ನು ಉಪಯೋಗಿಸಿದ್ದಾರೆ. ಇಲ್ಲಿ ಮುಖವಾಡ ತಲೆಯ ಮೇಲೆ ಕುಳಿತಿರುತ್ತದೆ. ಅದು ಯಾವ ಪ್ರಾಣಿ ಎಂಬುದು ಮುಖವಾಡದಿಂದ ಗೊತ್ತಾದರೆ, ಕಲಾವಿದನ ಮುಖಭಾವಗಳಿಂದ ಅಭಿನಯದ ಕೌಶಲ ವ್ಯಕ್ತವಾಗುತ್ತದೆ. ನಾವು ಕಲೆಯ ಎರಡು ವಿಭಿನ್ನ ಮುಖಗಳನ್ನು ನೋಡಬಹುದು.

ನಾಟಕದ ದೃಶ್ಯ

‘ಲಯನ್ ಕಿಂಗ್’ ನಾಟಕವನ್ನು ನೋಡುತ್ತಾ ಅದರೊಳಗೆ ಮುಳುಗಿ ಹೋದೆವು. ಈ ಕಥೆಯ ಮೂಲ ಷೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್’ ಮತ್ತು ಆಫ್ರಿಕಾದ ಜನಪದ ಕಥೆ ಸನ್‌ಡೈಯೇಟಾದಲ್ಲಿ ಇದೆ ಎಂದು ಎಲ್ಲೋ ಓದಿದ ನೆನಪಾಯ್ತು. ಒಂದು ಪಾಶ್ಚಾತ್ಯ ಸಂಸ್ಕೃತಿಯ ಕಥೆ, ಮತ್ತೊಂದು ಭಾರತದಂಥದ್ದೇ ಬಹು ಸಂಸ್ಕೃತಿ ಬಹು ಭಾಷೆಗಳ, ಶ್ರೀಮಂತ-ವರ್ಣಮಯ ವ್ಯಕ್ತಿತ್ವಗಳ ಜನರ ಕಥೆಗಳ ನಾಡಲ್ಲಿ ಬೆಳೆದು ಬಂದ ಕಥೆ. ಎರಡರ ಮಿಶ್ರಣವಿದು. ನಮ್ಮ ಜನಪದ ಕಥೆಗಳಲ್ಲಿ, ಪಂಚತಂತ್ರದ ಕಥೆಗಳಲ್ಲಿ ಮಾಡುವಂತೆ ಎಷ್ಟೆಲ್ಲಾ ಪ್ರಾಣಿಗಳನ್ನು ತಂದು, ಅವುಗಳಿಗೆ ಮನುಷ್ಯರ ಗುಣಗಳನ್ನು ನೀಡಿ, ಅವುಗಳ ಮೂಲಕ ಜನರಿಗೆ ಹಲವು ಸಂದೇಶಗಳನ್ನು ‘ಸಂದೇಶ’ ಎಂಬುದು ಗೊತ್ತಾಗದಂತೆ ನೀಡುವ ಉಪಾಯ.

‘ಲಯನ್‌ ಕಿಂಗ್’ ಜನಪ್ರಿಯವಾಗಿರುವಂತೆಯೇ ಮನೋವೈಜ್ಞಾನಿಕ ನೆಲೆಯಿಂದಲೂ ಸಮಾಧಾನ-ಪರಿಹಾರ ನೀಡುವ ನಾಟಕವಾಗಿಯೂ ಅಧ್ಯಯನ ಮಾಡಿರುವುದು ವಿಶೇಷ. ತನ್ನ ನಷ್ಟ-ಶೋಕವನ್ನು ಸಿಂಬಾ ಒಪ್ಪಿಕೊಳ್ಳುವುದು. ತನ್ನ ಸಾಮರ್ಥ್ಯದ ಬಗ್ಗೆ ಸಂದೇಹ ಪಡುವ ಕ್ಷಣ. ಸುತ್ತಲಿರುವ ಸಿಂಬಾನಿಗೆ ಬೆಂಬಲವಾಗುವ ಸ್ನೇಹಿತರು. ರಫೀಕಿಯಿಂದ ಸಿಂಬಾ ಪಡೆಯುವ ಮಾರ್ಗದರ್ಶನ. ತನ್ನ ಹಿಂದಿನ ತಪ್ಪುಗಳನ್ನು ಎದುರಿಸುವ ಧೈರ್ಯ. ಕೊನೆಯಲ್ಲಿ ಬರುವ ‘ಸರ್ಕಲ್ ಆಫ್ ಲೈಫ್’ -ಜೀವನ ಚಕ್ರ ಹಾಡು ನೀಡುವ ಜೀವನ ತತ್ತ್ವ. ಇಡೀ ಜೀವನದಲ್ಲಿ ಮತ್ತೆ ಮತ್ತೆ ತಿರುವುಗಳು ಬರುತ್ತವೆ. ಬದಲಾವಣೆಗಳು ಹಠಾತ್ತನೆ ಎರಗುತ್ತವೆ. ಅವುಗಳನ್ನು ಅಪ್ಪಿಕೊಳ್ಳಬೇಕು, ಒಪ್ಪಿಕೊಳ್ಳಬೇಕು. ನಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾದ ಮಾದರಿಯಾಗಿ ರಭಸವಾದ ಗಾಳಿಗೆ ತೂಗಾಡುವ ಆದರೆ ಕೆಳಕ್ಕುರುಳದ ಹುಲ್ಲುಗಾವಲು ಇವೆಲ್ಲವೂ ಆ ಕ್ಷಣಗಳಲ್ಲಿ ‘ಲಯನ್‌ ಕಿಂಗ್’ ನನಗೆ ನೀಡಿದ ಪಾಠಗಳು.

ನಾಟಕದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.