ಬೆಂಗಳೂರು: ನಟ ವಿಕ್ಕಿ ಕೌಶಲ್ ಅಭಿನಯದ ‘ಸರ್ದಾರ್ ಉಧಾಮ್ ಸಿಂಗ್’ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಇಂದು ಬಿಡುಗಡೆಯಾಗಿದ್ದು, ವೀಕ್ಷಕರಿಂದಉತ್ತಮ ಸ್ಪಂದನೆ ಸಿಕ್ಕಿದೆ.
1919 ರಲ್ಲಿ ನಡೆದ ಜಲಿಯನ್‌ವಾಲಾಭಾಗ್ ಹತ್ಯಾಕಾಂಡದ ವಿರುದ್ಧ ಸೇಡು ತೀರಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರ ಉಧಾಮ್ ಸಿಂಗ್ ಅವರ ಜೀವನಗಾಥೆಯನ್ನು ಈ ಸಿನಿಮಾ ಹೊಂದಿದೆ.
ಸರ್ದಾರ್ ಉಧಾಮ್ ಅವರ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಕೇಳಿ ಬಂದಿದೆ. ಭಾರತದಲ್ಲಿ ಬ್ರಿಟಿಷ್ ದುರಾಡಳಿತದಿಂದ ಜಲಿಯನ್‌ವಾಲಾಭಾಗ್ ಹತ್ಯಾಕಾಂಡ ಆಗಿದ್ದು, ಹಾಗೂ ಬಾಲಕನಾಗಿ ಉಧಾಮ್ ಸಿಂಗ್ ಸೇಡು ತೀರಿಸಿಕೊಳ್ಳಲು ಶಪಥ ಮಾಡಿ ಲಂಡನ್‌ಗೆ ಹೋಗಿ ಹತ್ಯಾಕಾಂಡಕ್ಕೆ ಕಾರಣವಾಗಿದ್ದ ಜನರಲ್ ಡಯರ್‌ನನ್ನು ಕೊಲ್ಲುವ ರೋಚಕ ಘಟನೆಗಳನ್ನು ಸಿನಿಮಾದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೂಜಿತ್ ಸರ್ಕಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿನ ವಿಕ್ಕಿ ಕೌಶಲ್ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ಕೇಳಿ ಬರುತ್ತಿವೆ. ಉಳಿದಂತೆ ಸ್ಟಿಫನ್ ಹೋಗನ್, ಶಾನ್ ಸ್ಕಾಟ್, ಕ್ರಿಸ್ಟಿ ಅವರಟೋನ್, ಆಂಡ್ರೂ ಹಾವಿಲ್, ಭನಿತಾ ಸಂಧು ಹಾಗೂ ಅಮೂಲ್ ಪರಶಾರ್ ತಾರಾಗಣದಲ್ಲಿದ್ದಾರೆ.
ರೈಸಿಂಗ್ ಸನ್ ಫಿಲ್ಮ್ಸ್ ಸಂಸ್ಥೆ ನಿರ್ಮಿಸಿರುವ ಸರ್ದಾರ್ ಉಧಾಮ್ ಸಿಂಗ್ ಬಹುತೇಕ ಲಂಡನ್‌ನಲ್ಲೇ ಚಿತ್ರೀಕರಣ ಆಗಿದೆ. ಇನ್ನೊಂದೆಡೆ ಈ ಚಿತ್ರದ ಥಿಯೇಟರ್ ಸ್ಕ್ರೀನಿಂಗ್‌ನ್ನು ಇಂದು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ನಟಿ ಕತ್ರಿನಾ ಕೈಫ್ ಅವರು ಸಿನಿಮಾ ನೋಡಿದ್ದಾರೆ. ಇತ್ತೀಚೆಗೆ ವಿಕ್ಕಿ ಕೌಶಲ್ ಅವರ ಹೆಸರು ಕತ್ರಿನಾ ಕೈಫ್ ಅವರೊಂದಿಗೆ ಥಳಕು ಹಾಕಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.