ADVERTISEMENT

ರಂಗಭೂಮಿ: ತಿರುಕಯಾನ ನಾಟಕ.. ಸಾರ್ಥಕ ರಂಗ ಪಯಣ

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಜೀವನ ಚಿರಿತ್ರೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 23:09 IST
Last Updated 7 ಫೆಬ್ರುವರಿ 2026, 23:09 IST
Malladihall
Malladihall   

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ಇತ್ತೀಚೆಗೆ ನಡೆದ ‘ತಿರುಕರಂಗ ನಾಟಕೋತ್ಸವ’ವು ರಂಗಾಸಕ್ತರ ಗಮನ ಸೆಳೆಯಿತು. ಈ ಉತ್ಸವದಲ್ಲಿ  ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿಯ ಜೀವನಾಧಾರಿತ ‘ತಿರುಕಯಾನ’ ನಾಟಕ ಪ್ರದರ್ಶನಗೊಂಡಿತು. ಈ ನಾಟಕವು ಮಲ್ಲಾಡಿಹಳ್ಳಿ ಸ್ವಾಮೀಜಿಯ ಅಕ್ಷರ ಮತ್ತು ಆರೋಗ್ಯ ದಾಸೋಹ ಬದುಕಿನ ಸಾರ್ಥಕ ದರ್ಶನವಾಗಿತ್ತು.

ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅವರು ರಚಿಸಿರುವ ‘ತಿರುಕಯಾನ’ ನಾಟಕವು ಸ್ವಾಮೀಜಿಯ ಹುಟ್ಟಿನಿಂದ ನಿರ್ವಾಣದವರೆಗಿನ ಘಟನಾವಳಿಗಳನ್ನು ಹದವಾಗಿ ಪೋಣಿಸಿದೆ. ಕೇರಳದಿಂದ ಕರ್ನಾಟಕದ ಕೊಲ್ಲೂರು, ಮಂತ್ರಾಲಯದ ಸಂಪರ್ಕ, ಬರೋಡಾದಲ್ಲಿ ಮಾಣಿಕ್ಯರಾಯರಿಂದ ಕಲಿತ ಕುಸ್ತಿ-ಕತ್ತಿ ವರಸೆ, ಸಿದ್ದಾರೂಢರು ಮತ್ತು ಶಿವಾನಂದರ ಆಶೀರ್ವಾದ, ಅಂತಿಮವಾಗಿ ಮಲ್ಲಾಡಿಹಳ್ಳಿಯಲ್ಲಿ ಸಂಕಜ್ಜಿಯವರ ಎರಡು ಎಕರೆ ದಾನದಿಂದ ಆರಂಭವಾದ ಸಾಮ್ರಾಜ್ಯದವರೆಗೆ ಕಥೆ ಹರಿಯುತ್ತದೆ. ನಾಟಕದ ಪ್ರತಿ ದೃಶ್ಯವೂ ಸ್ವಾಮೀಜಿಯ ಸೇವಾ ಸೆಲೆಗಳಾದ ಜೋಳಿಗೆ, ಶಿಕ್ಷಣ ಮತ್ತು ದಾಸೋಹವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತು.

ಹಿರಿಯ ರಂಗಕರ್ಮಿ ವೈ.ಡಿ.ಬದಾಮಿ ಮತ್ತು ಮಂಜುಳಾ ಬದಾಮಿ ದಂಪತಿ ಅವರ ಸಮರ್ಥ ನಿರ್ದೇಶನವು ನಾಟಕದ ಜೀವಾಳವಾಗಿತ್ತು. ನಲವತ್ತಕ್ಕೂ ಹೆಚ್ಚು ಕಲಾವಿದರನ್ನು (ವಿದ್ಯಾರ್ಥಿಗಳು ಹಾಗೂ ಆಶ್ರಮದ ನೌಕರರು) ಒಂದೇ ವೇದಿಕೆಯ ಮೇಲೆ ಸರಿಹೊಂದಿಸಿ, ನಾಟಕಕ್ಕೆ ಬೇಕಾದ ಶಿಸ್ತನ್ನು ಮೂಡಿಸಿದ್ದು ಅವರ ಅನುಭವದ ಹಿರಿಮೆಗೆ ಸಾಕ್ಷಿ.

ADVERTISEMENT

ಸಾಣೇಹಳ್ಳಿ ಶಿವ ಸಂಚಾರದ ನಾಗರಾಜು ಅವರ ಸಂಗೀತ ನಾಟಕದ ಭಾವಕ್ಕೆ ಪೂರಕವಾಗಿತ್ತು. ವೀರಗಾಸೆಯ ಗತ್ತಿನೊಂದಿಗೆ ಆರಂಭವಾದ ನಾಟಕವು ಸಂಗೀತದ ಏರಿಳಿತಗಳ ಮೂಲಕ ಪ್ರೇಕ್ಷಕರ ಎದೆಯಲ್ಲಿ ಭಾವಸಂಚಾರವನ್ನು ಸೃಷ್ಟಿಸಿತು. ಕಾಲಘಟ್ಟಕ್ಕೆ ತಕ್ಕಂತೆ ವಸ್ತ್ರ ವಿನ್ಯಾಸ ಮತ್ತು ಧ್ವನಿ-ಬೆಳಕಿನ ಸಂಯೋಜನೆ ಕಥಾವಸ್ತುವನ್ನು ಚಿತ್ರಸದೃಶ್ಯವಾಗಿಸಿತ್ತು.

ಎನ್.ಎಸ್.ರುದ್ರೇಶ್ ಅವರು ರಾಘವೇಂದ್ರ ಸ್ವಾಮೀಜಿ ಪಾತ್ರವನ್ನು ತಲ್ಲೀನತೆಯಿಂದ ನಿರ್ವಹಿಸಿದರೆಂದರೆ, ಪ್ರದರ್ಶನದ ನಂತರ ಜನರು ಇವರನ್ನು ಸ್ವಾಮೀಜಿಗಳೆಂದೇ ಭಾವಿಸಿ ನಮಿಸಿದರು! ಅವರ ಧ್ವನಿ ಮತ್ತು ಹಾವಭಾವವು ಪಾತ್ರಕ್ಕೆ ಘನತೆ ತಂದವು. ಉಮೇಶ್ ರಾಂಪುರ ಅವರು ಸೂರ್‌ದಾಸ್‌ಜೀ ಪಾತ್ರದಲ್ಲಿ ಸ್ವಾಮೀಜಿಯ ನೆರಳಿನಂತೆ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾದರು. ಮಂಜುಳಾ ಬದಾಮಿ ಅವರು ಪದ್ಮಾಂಬಳ ಮತ್ತು ಸಂಕಜ್ಜಿಯ ಪಾತ್ರಗಳಲ್ಲಿ ತಮ್ಮ ಅನುಭವವನ್ನು ಧಾರೆಯೆರೆದರು. ಸಂತೋಷ್ (ಮಾದಾರ ಚೆನ್ನಯ್ಯ ಸ್ವಾಮೀಜಿ), ಗುರುಮೂರ್ತಿ (ಪದ್ಮನಾಭ), ಶೇಷಣ್ಣ (ಮಾಣಿಕ್ಯರಾಯ), ಹಾಗೂ ಮಧು ಮತ್ತು ಶಿವಲಿಂಗಪ್ಪ ಅವರು ತಮ್ಮ ಪಾತ್ರಗಳ ಮಿತಿಯಲ್ಲಿ ನ್ಯಾಯ ಒದಗಿಸಿದರು.

ವರ್ತಮಾನದ ಕಾಲಘಟ್ಟದಲ್ಲಿ ಇಂತಹ ಸಾಧಕರ ಜೀವನಾಧಾರಿತ ನಾಟಕಗಳನ್ನು ಪ್ರದರ್ಶಿಸುವುದು ಸವಾಲಿನ ಕೆಲಸ. ನಟರಿಗೆ ಮೈಕ್ರೊಫೋನ್ ಬಳಕೆಯ ಸಣ್ಣಪುಟ್ಟ ತರಬೇತಿಯ ಕೊರತೆ ಕೆಲವೊಮ್ಮೆ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಿತು. ಆದರೂ ನಾಟಕದ ಒಟ್ಟಾರೆ ಭವ್ಯತೆಯ ಮುಂದೆ ಅದು ಗೌಣವಾಗಿತ್ತು. 165 ಎಕರೆಯಲ್ಲಿ ಆಶ್ರಮ ಕಟ್ಟಿದ ಸಾಧನೆಯ ದೃಶ್ಯಗಳು ಪ್ರೇಕ್ಷಕರ ನೆನಪಿನ ಬುತ್ತಿಯನ್ನು ಬಿಚ್ಚಿಸುವಲ್ಲಿ ಯಶಸ್ವಿಯಾದವು.

ನಾಟಕದ ಅಂತ್ಯದಲ್ಲಿ ಸ್ವಾಮೀಜಿ ಹೇಳುವ ‘ಸುತ್ತಿ ಸುತ್ತಿ ಬಂದೆ ಈ ಊರಿಗೆ, ಬುತ್ತಿ ಗಂಟು ತೀರಿತಿಂದು ಮತ್ತೆ ಹೊರಟೆ ನನ್ನೂರಿಗೆ’ ಎನ್ನುವ ಮಾತು ಪ್ರೇಕ್ಷಕರ ಕಣ್ಣಂಚನ್ನು ಒದ್ದೆ ಮಾಡಿತು.

‘ತಿರುಕಯಾನ’ ಕೇವಲ ನಾಟಕವಲ್ಲ; ಅದು ಒಂದು ನಂಬಿಕೆ ಮತ್ತು ಸಂಸ್ಕೃತಿಯ ಅನಾವರಣ.v

ರಾಘವೇಂದ್ರ ಸ್ವಾಮೀಜಿ ಸೂರ್‌ದಾಸ್‌ ಜೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.