ADVERTISEMENT

Yashwant Sardeshpande: ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 7:11 IST
Last Updated 29 ಸೆಪ್ಟೆಂಬರ್ 2025, 7:11 IST
   

ಬೆಂಗಳೂರು: ರಂಗಭೂಮಿ ನಟ ಯಶವಂತ ಸರದೇಶಪಾಂಡೆ (60) ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಭಾನುವಾರ ರಾತ್ರಿ ಧಾರವಾಡದಲ್ಲಿ ನಾಟಕ ಪ್ರದರ್ಶನ ನೀಡಿದ್ದ ಅವರು, ಸೋಮವಾರ ಬೆಳಿಗ್ಗೆ ಬೆಂಗಳೂರು ತಲುಪಿದ್ದರು. ಹೃದಯಾಘಾತದ ಕಾರಣ ಅವರನ್ನು ಇಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬೆಳಿಗ್ಗೆ 10 ಗಂಟೆ ವೇಳೆಗೆ ಅವರು ನಿಧನರಾಗಿದ್ದಾರೆ.

ಕನ್ನಡ ರಂಗಭೂಮಿ ನಟರಾಗಿ ಅವರು ಹೆಚ್ಚು ಜನಪ್ರಿಯರಾಗಿದ್ದರು. ಅವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತ್ತು.  ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆಯಾಗಿದ್ದಾರೆ. ಹಾಸ್ಯ ನಾಟಕಗಳ ಮೂಲಕ ಯಶವಂತ ಸರದೇಶಪಾಂಡೆ ಚಿರಪರಿಚಿತರಾಗಿದ್ದರು.

ADVERTISEMENT

ಯಶವಂತ ಸರದೇಶಪಾಂಡೆ ಕುರಿತು

ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದವರಾದ ಯಶವಂತ ಅವರು ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪದವಿ ಪಡೆದವರು. ನ್ಯೂಯಾರ್ಕ್‌ ವಿಶ್ವವಿದ್ಯಾಯದಿಂದ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿಯನ್ನೂ ಪಡೆದಿದ್ದರು.

ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ಸಮರ್‌ ನೈಟ್ಸ್‌ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ.

ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ ಇವರದ್ದು. ರೇಡಿಯೋ, ದೂರದರ್ಶನಗಳಿಗಾಗಿ ಕಾರ್ಯಕ್ರಮಗಳನ್ನು ಅವರು ಸಿದ್ಧಪಡಿಸಿದ್ದರು. ಹಾಸ್ಯ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ ಯಶವಂತ ಅವರು, ಆಲ್‌ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್‌ ರಂಗದ ಮೇಲೆ ತಂದ ರಂಗ ಕಲಾವಿದ ಅವರು. 

‘ರಾಶಿ ಚಕ್ರ’ ಹಾಸ್ಯ ನಾಟಕದಲ್ಲಿ ಅವರ ಏಕವ್ಯಕ್ತಿ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆಯ ಜತೆಗೆ ಹಲವೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳಲ್ಲಿ ನಟನೆಯ ಜತೆಗೆ, ಸಂಭಾಷಣೆಕಾರರಾಗಿಯೂ ಅವರ ಕೆಲಸ ಮಾಡಿದ್ದಾರೆ. ರಾಮ ಶ್ಯಾಮ ಭಾಮ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದ ಅವರು, ಕಮಲ್‌ಹಾಸ್‌ ಅವರಿಂದ ಉತ್ತರ ಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದರು. ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ ಚಿತ್ರದಲ್ಲೂ ಅವರು ನಟಿಸಿದ್ದಾರೆ.

ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ಮಾಜಿ ನಿರ್ದೇಶಕರಾಗಿದ್ದರು. ಅಕ್ಟೋಬರ್‌ನಲ್ಲಿ ಕೊಳಲು ವಾದಕ ಪಂ.ಪ್ರವೀಣ ಗೋಡಖಿಂಡಿ ಅವರೊಂದಿಗೆ 'ಕೊಳಲು' ನಾಟಕದಲ್ಲಿ ಅವರು ಅಭಿನಯಿಸಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.