ADVERTISEMENT

Big Boss 8: ಜೈಲು ಪಾಲಾದ ಪ್ರಶಾಂತ್ ಸಂಬರಗಿ: ಊಟ ಬಿಟ್ಟು ಮೌನ ಸತ್ಯಾಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮಾರ್ಚ್ 2021, 6:19 IST
Last Updated 27 ಮಾರ್ಚ್ 2021, 6:19 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್   
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್      

ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 8ರ ಮನೆಯಲ್ಲಿ ಜಗಳ ಮತ್ತು ಸುಳ್ಳುಗಳಿಂದ ಸುದ್ದಿ ಮಾಡಿರುವ ಪ್ರಶಾಂತ್ ಸಂಬರಗಿ, ಈಗ ಕಂಬಿ ಎಣಿಸುತ್ತಿದ್ದಾರೆ. ಹೌದು, ನಾಲ್ಕನೇ ವಾರ ಕಳಪೆ ಸ್ಪರ್ಧಿ ಎಂದು ಮನೆಯ ಸದಸ್ಯರು ಬಹುಮತದಿಂದ ನಿರ್ಧರಿಸಿದ್ದರಿಂದ ನಿಯಮದಂತೆ ಮನೆಯ ಜೈಲು ಸೇರಿದ್ದಾರೆ.

ಆಯ್ಕೆ ವೇಳೆಯೇ ಸಿಡಿದ ಪ್ರಶಾಂತ್: ಎಂದಿನಂತೆ ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಕಳಪೆ ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಈ ಸಲ ಹಲವರ ದ್ವೇಷ ಕಟ್ಟಿಕೊಂಡಿದ್ದ ಸಂಬರಗಿಗೆ ನಿರೀಕ್ಷೆಯಂತೆ ಕಳಪೆ ಪಟ್ಟ ಸಿಕ್ಕಿದೆ. ಮಂಜು ಪಾವಗಡ, ನಿಧಿ ಸುಬ್ಬಯ್ಯ, ನಾಯಕ ವಿಶ್ವನಾಥ್, ಶಮಂತ್, ದಿವ್ಯಾ ಉರುಡುಗ ಸೇರಿ ಹಲವರು ಪ್ರಶಾಂತ್ ಸಂಬರಗಿ ಹೆಸರು ಹೇಳಿದರು. ನನ್ನನ್ನು ಡಿ‌ಮೋಟಿವೇಟ್ ಮಾಡಿದ್ದಕ್ಕಾಗಿ ಪ್ರಶಾಂತ್ ಅವರನ್ನು ಕಳಪೆ ಎಂದು ನಿರ್ಧರಿಸಿದ್ದಾಗಿ ನಿಧಿ ಸುಬ್ಬಯ್ಯ ಹೇಳಿದರೆ, ಸುಳ್ಳು ಹೇಳುವ ಮತ್ತು ಅನಗತ್ಯ ಚರ್ಚೆ ಮಾಡುವುದರಿಂದ ಅವರಿಗೆ ಕಳಪೆ ಪಟ್ಟ ಕೊಡುತ್ತೇನೆ ಎಂದು ಮಂಜು ಹೇಳಿದರು. ಈ ವೇಳೆ, ಸಿಟ್ಟಾದ ಸಂಬರಗಿ, ಇದು ಪೂರ್ವನಿಯೋಜಿತ ಯೋಜನೆ. ನನಗೆ ಕಳಪೆ ಪಟ್ಟ ಕಟ್ಟಲು ಸ್ವಿಮ್ಮಿಂಗ್ ಪೂಲ್ ಬಳಿ ನಿಧಿ ಮತ್ತು ಮಂಜ ಯೋಜನೆ ರೂಪಿಸಿದ್ದಾರೆ ಎಂದು ಡ್ರಗ್ಸ್ ಕೇಸಲ್ಲಿ ನಟಿಯರ ಮೇಲೆ ಆರೋಪ ಮಾಡಿದ ರೀತಿಯೆ ಸಂಬರಗಿ ಇಲ್ಲಿಯೂ ತಮ್ಮ ವಾದ ಮಂಡಿಸಿದರು.

ಊಟ ಬಿಟ್ಟು ಮೌನ ಸತ್ಯಾಗ್ರಹ: ಕಳಪೆ ಪಟ್ಟ ಹೊತ್ತು ಜೈಲು ಸೇರಿರುವ ಸಂಬರಗಿಗೆ ಈಗ ಗಂಜಿ ಮಾತ್ರ ಗತಿ. ಆದರೆ, ಅವರು ಅದನ್ನೂ ತ್ಯಾಗ ಮಾಡಿದ್ದಾರೆ. 24 ಗಂಟೆ ಕಾಲ ಊಟ ಸೇವಿಸದೆ, ಮೌನ ಸತ್ಯಾಗ್ರಹ ಮಾಡುವ ಮೂಲಕ ಮನೆಯವರ ಗುಂಪುಗಾರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತೇನೆ. ಇದು ನಿಮ್ಮ ಗಮನಕ್ಕಿರಲಿ ಎಂದು ಕ್ಯಾಮೆರಾ ಮುಂದೆ ತೆರಳಿ ಬಿಗ್ ಬಾಸ್‌ಗೆ ತಿಳಿಸಿದರು.

ADVERTISEMENT

ಸುಳ್ಳು ಹೇಳಿ ಸಿಕ್ಕಾಕಿಕೊಂಡಿದ್ದ ಪ್ರಶಾಂತ್: ಚದುರಂಗ ಟಾಸ್ಕ್ ವೇಳೆ ಎದುರಾಳಿ ತಂಡದ ಶಮಂತ್‌ಗೆ ಸನ್ನೆ ಮಾಡಿ ಬಳಿಕ ನನ್ನ ತಾಯಾಣೆಗೂ ಏನು ಮಾಡಿಲ್ಲ ಎಂದು ಹೇಳುವ ಮೂಲಕ ಮನೆಯವರ ಮುಂದೆ ತಮ್ಮ ವೀಕ್ನೆಸ್ ಬಿಚ್ಚಿಟ್ಟಿದ್ದರು ಪ್ರಶಾಂತ್. ಅಡುಗೆ ಮನೆಯಲ್ಲಿ ಕಡಿಮೆ ಇದ್ದ ತುಪ್ಪವನ್ನು ಬಳಸಿಯೂ ಕೂಡ ಬಳಸಿಲ್ಲ ಎಂದು ಹೇಳಿ ಮನೆಯವರಿಗೆಲ್ಲ ಬೇಸರ ಮೂಡಿಸಿದ್ದರು.

ಮಂಜು ಜೊತೆ ಜಗಳ; ಆಟದ ನಿಯಮ ಉಲ್ಲಂಘಿಸಬೇಡಿ ಎಂದು ಮಂಜು ಪಾವಗಡ ಮಾಡಿದ್ದ ಮನವಿಗೆ ಸಿಡಿದಿದ್ದ ಪ್ರಶಾಂತ್ ಜಗಳ ಮಾಡಿದ್ದರು. ಪರಿಸ್ಥಿತಿ ಕೈಮೀರುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಅರವಿಂದ್ ಪರಿಸ್ಥಿತಿ ತಿಳಿಗೊಳಿಸಿದ್ದರು.

ಈ ಎಲ್ಲ ವಿಷಯಗಳು ಸಂಬರಗಿಗೆ ಕಳಪೆ ಪಟ್ಟ ಕಟ್ಟಲು ಕಾರಣವಾಗಿವೆ. ಆಶ್ಚರ್ಯಕರ ರೀತಿಯಲ್ಲಿ ದಿವ್ಯಾ ಸುರೇಶ್ ಮಾತ್ರ ಪ್ರಶಾಂತ್ ಪರ ನಿಂತಿರುವುದು ಕುತೂಹಲಕ್ಕೆ ಎಡೆಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.