ADVERTISEMENT

Bigg Boss: ಬಿಗ್‌ಬಾಸ್‌ನಲ್ಲಿ ಭಾಗಿಯಾದ ಲಿಂಗತ್ವ ಅಲ್ಪಸಂಖ್ಯಾತರಿವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2025, 12:11 IST
Last Updated 22 ಸೆಪ್ಟೆಂಬರ್ 2025, 12:11 IST
   

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಶುರುವಿಗೆ ಕೇವಲ ಐದು ದಿನಗಳು ಬಾಕಿ ಉಳಿದಿವೆ. ಈ ಬಾರಿಯ ಬಿಗ್‌ಬಾಸ್‌ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ಸೆ.28ಕ್ಕೆ ಅಧಿಕೃತವಾಗಿ ಗೊತ್ತಾಲಿದೆ.

ನಿಸರ್ಗದ ಮಾತಿಗೆ ಓಗೊಟ್ಟು ತಮ್ಮಲ್ಲಾದ ದೈಹಿಕ ಬದಲಾವಣೆಯನ್ನು ಒಪ್ಪಿಕೊಳ್ಳುವ ಮೂಲಕ ಸಮಾಜದಿಂದ ಅವಮಾನಕ್ಕೆ ತುತ್ತಾದ ಬಹಳಷ್ಟು ಲಿಂಗತ್ವ ಅಲ್ಪಸಂಖ್ಯಾತರ ಜೀವನ ಶೈಲಿ ಬದಲಾಗಿದೆ. ತಮ್ಮ ಜೀವನ ಕಷ್ಟವೆಂದು ಭಾವಿಸದೇ, ಖುಷಿ ಹರಡಲು, ಸಮಾನರಾಗಿ, ಸರಳತೆಯಿಂದ ಬದುಕನ್ನು ಸಾಗಿಸುತ್ತಿದ್ದಾರೆ ಲಿಂಗತ್ವ ಅಲ್ಪಸಂಖ್ಯಾತರು. ಇಂಥವರಿಗೆ ಬಿಗ್‌ಬಾಸ್‌ ಒಂದು ಉತ್ತಮ ವೇದಿಕೆಯಾಗಿದೆ.

ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ಮಲಯಾಳಂ, ತಮಿಳು ಸೀಸನ್‌ಗಳಲ್ಲಿ ಈಗಾಗಲೇ ಸಾಕಷ್ಟು ಲಿಂಗತ್ವ ಅಲ್ಪಸಂಖ್ಯಾತರು ಎಂಟ್ರಿ ಕೊಟ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಒಟ್ಟು 5 ಭಾಷೆಯಲ್ಲಿ ಪ್ರಸಾರ ಕಂಡ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಲಿಂಗತ್ವ ಅಲ್ಪಸಂಖ್ಯಾತರ ಪಟ್ಟಿ ಇಲ್ಲಿದೆ.

ADVERTISEMENT
ಕನ್ನಡ ಬಿಗ್‌ಬಾಸ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು

ಚಿತ್ರ: adampashaofficial

ಆದಮ್‌ ಪಾಶಾ

ಕನ್ನಡ ಬಿಗ್‌ಬಾಸ್‌ ಮನೆಗೆ ಮೊದಲು ಲಿಂಗತ್ವ ಅಲ್ಪಸಂಖ್ಯಾತರಾಗಿ ಪ್ರವೇಶ ಮಾಡಿದ್ದು ಡ್ಯಾನ್ಸರ್ ಆದಮ್‌ ಪಾಶಾ. ಬಿಗ್‌ಬಾಸ್‌ 6ನೇ ಆವೃತ್ತಿಗೆ ಆದಮ್‌ ಪಾಶಾ ಅವರು ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್‌ಬಾಸ್‌ಗೆ ಬಂದ ಆದಮ್‌ ಪಾಶಾ ತಮ್ಮ ಸಮುದಾಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಬಿಗ್‌ಬಾಸ್ ಮುಕ್ತಾಯದ ಬಳಿಕ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಆದಮ್ ಪಾಶಾ ಕಾಣಿಸಿಕೊಂಡಿದ್ದರು.

ನೀತು ವನಜಾಕ್ಷಿ

ನೀತು ವನಜಾಕ್ಷಿ

ಎರಡನೇಯದಾಗಿ ಲಿಂಗತ್ವ ಅಲ್ಪಸಂಖ್ಯಾತರಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ನೀತು ವನಜಾಕ್ಷಿ. ಇವರು ಬಿಗ್‌ಬಾಸ್‌ ಸೀಸನ್​ 10ರಲ್ಲಿ ಸ್ಪರ್ಧಿಯಾಗಿದ್ದರು. ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಉದ್ದೇಶದಿಂದ ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದರು. ಬಾಲ್ಯದಲ್ಲಿ ಮಂಜುನಾಥ್ ಆಗಿದ್ದ ವನಜಾಕ್ಷಿ, ಮುಂದೆ ನೀತು ಆಗಿ ಬದಲಾದರು. ತಮ್ಮ ಹೆಸರಿನೊಂದಿಗೆ ತಮ್ಮ ಬದಲಾವಣೆ ಹಾಗೂ ನಿರ್ಧಾರವನ್ನು ಸದಾ ಬೆಂಬಲಿಸಿದ ತಾಯಿಯ ಹೆಸರನ್ನೂ ಸೇರಿಸಿಕೊಂಡ ನೀತು ವನಜಾಕ್ಷಿ ಬಿಗ್‌ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಜತೆಗೆ ತಮ್ಮ ಸಮುದಾಯದವರ ಗೌರವಯುತ ಬದುಕಿಗೆ ಪ್ರರಣೆಯಾದರು. ಸದ್ಯ ಟ್ಯಾಟೂ ಕಲಾವಿದರಾಗಿ ಬದುಕು ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮಾಡೆಲಿಂಗ್‌ ಕ್ಷೇತ್ರದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ.

ಹಿಂದಿ ಬಿಗ್‌ಬಾಸ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು

ಚಿತ್ರ: darlingbobby

ಬಾಬಿ ಡಾರ್ಲಿಂಗ್

2006 ಹಿಂದಿ ಬಿಗ್‌ಬಾಸ್‌ ಮೊದಲ ಸೀಸನ್‌ನಲ್ಲಿ ಬಾಬಿ ಡಾರ್ಲಿಂಗ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ನಟಿ ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ನವರಸ, ನಾ ತುಮ್ ಜಾನೋ ನಾ ಹಮ್ ಮತ್ತು ಐಯಾಮ್ ಇನ್ ಲವ್ ಚಿತ್ರಗಳ ಮೂಲಕ ಬಾಬಿ ಡಾರ್ಲಿಂಗ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಚಿತ್ರ: rohitkverma

ರೋಹಿತ್ ವರ್ಮಾ

ಹಿಂದಿ ಬಿಗ್‌ಬಾಸ್‌ ಸೀಸನ್ 3ರಲ್ಲಿ ರೋಹಿತ್ ವರ್ಮಾ ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಗಲಾಟೆಯ ವೇಳೆ ನಟ ಕಮಲ್ ರಶೀದ್ ಖಾನ್ ಅವರ ಮೇಲೆ ಬಾಟಲಿ ಎಸೆದು ವಿವಾದಕ್ಕೀಡಾಗಿದ್ದರು. ಹೀಗಾಗಿ ರೋಹಿತ್ ವರ್ಮಾ ಅವರನ್ನು ಬಿಗ್‌ಬಾಸ್‌ನಿಂದ ಹೊರ ಹಾಕಲಾಗಿತ್ತು.

ಚಿತ್ರ: laxminarayan_tripathi

ಲಕ್ಷ್ಮಿ ನಾರಾಯಣ್ ತ್ರಿಪಾಠಿ

2011ರಲ್ಲಿ ಬಿಗ್‌ಬಾಸ್ ಸೀಸನ್ 5ರಲ್ಲಿ ಲಕ್ಷ್ಮಿ ನಾರಾಯಣ್ ತ್ರಿಪಾಠಿ ಭಾಗವಹಿಸಿದ್ದರು. ಆರು ವಾರಗಳ ನಂತರ ಅವರನ್ನು ಶೋಯಿಂದ ಹೊರಹಾಕಲಾಯಿತು. ಇವರು ಅಲ್ಪಸಂಖ್ಯಾತರ ಹಕ್ಕುಗಳ ಕಾರ್ಯಕರ್ತೆಯಾಗಿದ್ದ ಅವರು, ಪ್ರವೃತ್ತಿಯಲ್ಲಿ ನರ್ತಕಿ ಮತ್ತು ನಟಿಯಾಗಿಯೂ ಗುರುತಿಸಿಕೊಂಡಿದ್ದರು. ಜೊತೆಗೆ ವಿವಿಧ ಟಿವಿ ಕಾರ್ಯಕ್ರಮಗಳಲ್ಲಿ ಸಂದರ್ಶನಗಳನ್ನು ನೀಡಿದರು.

ಚಿತ್ರ: imam_a_siddique

ಇಮಾಮ್ ಸಿದ್ದಿಕಿ

ಫ್ಯಾಷನ್ ಸ್ಟೈಲಿಸ್ಟ್ ಮತ್ತು LGBT ಸಮುದಾಯದ ಸದಸ್ಯರಾಗಿದ್ದ ಇಮಾಮ್ ಸಿದ್ದಿಕಿ ಕೂಡ ಬಿಗ್‌ಬಾಸ್‌ ಸೀಸನ್ 6ರಲ್ಲಿ ಸ್ಪರ್ಧಿಯಾಗಿದ್ದರು. ಶಾರುಖ್ ಖಾನ್ ಸೇರಿದಂತೆ ಇತರೆ ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಇಮಾಮ್ ಸಿದ್ದಿಕಿ ಅಸಹ್ಯಕರ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು.

ಚಿತ್ರ: yogavivek

ವಿವೇಕ್ ಮಿಶ್ರಾ

ಯೋಗ ಗುರು ಮತ್ತು ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತ ವಿವೇಕ್ ಮಿಶ್ರಾ ಬಿಗ್‌ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸಿದ್ದರು. ಕೆಲವು ದಿನಗಳ ಬಳಿಕ ವಿವೇಕ್ ಮಿಶ್ರಾ ಅವರು ಬಿಗ್‌ಬಾಸ್‌ನಿಂದ ಆಚೆ ಬಂದಿದ್ದರು.

ಚಿತ್ರ: Andy Kumar

ಆ್ಯಂಡಿ ಕುಮಾರ್

ಹಿಂದಿ ವಿಜೆ ಆಂಡಿ ಅಂತ ಖ್ಯಾತಿ ಪಡೆದುಕೊಂಡ ‘ಆಂಡಿ ಕುಮಾರ್‌’ ಅವರು ಬಿಗ್‌ಬಾಸ್‌ ಸೀಸನ್ 7ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಯುಕೆ ಮೂಲದ ಆಂಡಿ ‘ಡೇರ್ 2 ಡೇಟ್ ಡೇಟಿಂಗ್’ ರಿಯಾಲಿಟಿ ಶೋ ಸೇರಿದಂತೆ ಹಲವಾರು ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ಚಿತ್ರ: sushantdivgikr

ಸುಶಾಂತ್ ದಿವಾಗಿಕರ್

ಬಿಗ್‌ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಸುಶಾಂತ್ ದಿವಾಗಿಕರ್ ಭಾಗವಹಿಸಿದ್ದರು. 7 ವಾರಗಳ ನಂತರ ಬಿಗ್‌ಬಾಸ್‌ ಮನೆಯಿಂದ ಆಚೆ ಬಂದರು. ಇದಾದ ಬಳಿಕ 'ರಾಣಿ ಕೋ-ಹೆ-ನೂರ್' ಎಂಬ ವೇದಿಕೆಯ ಹೆಸರಿನಲ್ಲಿ ಗಾಯಕಿ, ನಟ ಮತ್ತು ಡ್ರ್ಯಾಗ್ ಕ್ವೀನ್ ಆಗಿ ವೃತ್ತಿಜೀವನವನ್ನು ಮುಂದುವರೆಸಿದರು.

ತಮಿಳು ಬಿಗ್‌ಬಾಸ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು

ಚಿತ್ರ: namithamarimuthu


ನಮಿತಾ ಮಾರಿಮುತ್ತು

ತಮಿಳು ಬಿಗ್‌ಬಾಸ್‌ ಸೀಸನ್ 5ರಲ್ಲಿ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಸ್ಪರ್ಧಿಯಾಗಿ ನಮಿತಾ ಮಾರಿಮುತ್ತು ಎಂಟ್ರಿ ಕೊಟ್ಟಿದ್ದರು. ನಮಿತಾ ಮಾರಿಮುತ್ತು ಮಿಸ್ ಟ್ರಾನ್ಸ್ ಸ್ಟಾರ್ ಇಂಟರ್ನ್ಯಾಷನಲ್ 2020ರ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಮಾಡೆಲ್ ಆಗಿದ್ದ ನಮಿತಾ ಮಾರಿಮುತ್ತು ಸಮುತಿರಕನಿ ನಿರ್ದೇಶನದ ಕಾಲಿವುಡ್ ಚಲನಚಿತ್ರ ‘ನಾಡೋಡಿಗಲ್ 2’ರಲ್ಲಿ ನಟಿ ಮತ್ತು ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅವರು ಟ್ರಾನ್ಸ್ ವಿಭಾಗದಲ್ಲಿ ಮಿಸ್ ಚೆನ್ನೈ, ಮಿಸ್ ಪಾಂಡಿಚೇರಿ, ಮಿಸ್ ತಮಿಳುನಾಡು ಮತ್ತು ಮಿಸ್ ಇಂಡಿಯಾದಲ್ಲಿಯೂ ಭಾಗವಹಿಸಿದ್ದರು.

ಚಿತ್ರ: shivinganesan


ಶಿವಿನ್ ಗಣೇಶನ್

ಬಿಗ್‌ಬಾಸ್ ತಮಿಳಿನ ಸೀಸನ್ 6ರಲ್ಲಿ ಶಿವಿನ್ ಗಣೇಶನ್ ಫೈನಲ್ ತಲುಪಿದ ಮೊದಲ ಲಿಂಗತ್ವ ಅಲ್ಪಸಂಖ್ಯಾತರಾಗಿ ಇತಿಹಾಸ ನಿರ್ಮಿಸಿದ್ದಾರೆ. ನಟಿ ಮತ್ತು ಮಾಡೆಲ್ ಆಗಿದ್ದ ಶಿವಿನ್ ಗಣೇಶನ್ ಬಿಗ್ ಬಾಸ್ ತಮಿಳು ಸೀಸನ್ 6ರ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಸ್ಪರ್ಧಿಯಾಗಿ ಫೈನಲ್‌ ತಲುಪಿ ಖ್ಯಾತಿಗಳಿಸಿದರು. ಅಲ್ಲದೇ ಮಿಸ್ ಟ್ರಾನ್ಸ್ ಸ್ಟಾರ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಸದ್ಯ ಮಿಸ್ ಯುನಿವರ್ಸ್ ಇಂಡಿಯಾ 2025 ಸ್ಪರ್ಧೆಯ ರಾಷ್ಟ್ರೀಯ ಫೈನಲಿಸ್ಟ್ ಆಗಿದ್ದಾರೆ.

ತೆಲುಗು ಬಿಗ್‌ಬಾಸ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು

ಚಿತ್ರ: tamannasimhadri


ತಮನ್ನಾ ಸಿಂಹಾದ್ರಿ

ತೆಲುಗು ಬಿಗ್‌ಬಾಸ್‌ ಸೀಸನ್‌ 3ಕ್ಕೆ ಮೊದಲ ಲಿಂಗತ್ವ ಅಲ್ಪಸಂಖ್ಯಾತರಾಗಿ ತಮನ್ನಾ ಸಿಂಹಾದ್ರಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ್ದರು. ಜೊತೆಗೆ ಆಂಧ್ರಪ್ರದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯಾಗಿದ್ದಾರೆ.

ಚಿತ್ರ: priyankasingh.official_

ಪ್ರಿಯಾಂಕಾ ಸಿಂಗ್‌

ಪ್ರಿಯಾಂಕಾ ಸಿಂಗ್‌ ತೆಲುಗು ಬಿಗ್‌ಬಾಸ್‌ ಸೀಸನ್ 5ಕ್ಕೆ ಎಂಟ್ರಿ ಕೊಟ್ಟಿದ್ದರು. ಇವರು ಹಾಸ್ಯನಟಿಯಾಗಿ ಜನಪ್ರಿಯತೆ ಗಳಿಸಿದರು. ತಮನ್ನಾ ಸಿಂಹಾದ್ರಿ ನಂತರ ಎರಡನೇ ಲಿಂಗತ್ವ ಅಲ್ಪಸಂಖ್ಯಾತರಾಗಿ ಬಿಗ್‌ಬಾಸ್‌ ಮನೆಗೆ ಪ್ರವೇಶಿಸಿದ್ದರು.

ಮಲಯಾಳಂ ಬಿಗ್‌ಬಾಸ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು

ಚಿತ್ರ: anjali_ameer___________

ಅಂಜಲಿ ಅಮೀರ್

ಮಲಯಾಳಂ ಬಿಗ್‌ಬಾಸ್ ಸೀಸನ್‌ 1ರಲ್ಲಿ ಲಿಂಗತ್ವ ಅಲ್ಪಸಂಖ್ಯಾತರಾಗಿ ಅಂಜಲಿ ಅಮೀರ್ ಅವರು ಎಂಟ್ರಿ ಕೊಟ್ಟಿದ್ದರು. ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾಗೆ ಎಂಟ್ರಿ ಕೊಟ್ಟ ಅಂಜಲಿ ಅಮೀರ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮಲಯಾಳಂಗೆ ಪ್ರವೇಶಿಸಿದರು. ಆದರೆ, ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಅಂಜಲಿ ಅಮೀರ್‌ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಅರ್ಧದಲ್ಲೇ ತೊರೆದರು. ಆದರೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಚಿತ್ರ: nadira_mehrin_official


ನಾದಿರಾ ಮೆಹ್ರಿನ್

ಮಲಯಾಳಂ ಬಿಗ್‌ಬಾಸ್ ಸೀಸನ್‌ 5ರಲ್ಲಿ ಲಿಂಗತ್ವ ಅಲ್ಪಸಂಖ್ಯಾತರಾಗಿ ನಾದಿರ ಮೆಹ್ರಿನ್ ಎಂಟ್ರಿ ಕೊಟ್ಟಿದ್ದರು. ಜಿಯೋ ಬೇಬಿ ನಿರ್ದೇಶನದ 'ಫ್ರೀಡಂ ಫೈಟ್' ಎಂಬ ಅನೋಥಾಲಜಿ ಚಿತ್ರದ ಮೂಲಕ ಸಿನಿಮಾ ರಂಗಪ್ರವೇಶ ಮಾಡಿದರು.

ಚಿತ್ರ: jaan_moni_das

ಜಾನ್ಮೋನಿ ದಾಸ್

ಒಬ್ಬ ಅದ್ಭುತ ಮೇಕಪ್ ಕಲಾವಿದೆ, ನರ್ತಕಿ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕರ್ತೆಯಾಗಿದ್ದ ಜಾನ್ಮೋನಿ ದಾಸ್ ವರು ಮಲಯಾಳಂ ಬಿಗ್‌ಬಾಸ್‌ 6ಕ್ಕೆ ಎಂಟ್ರಿ ಕೊಟ್ಟಿದ್ದರು. ಜಾನ್ಮೋನಿ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯಕ್ಕೆ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದ್ದಾರೆ.

ಸದ್ಯ ಸೆ.28ರಂದು ಶುರುವಾಗುವ ಬಿಗ್‌ಬಾಸ್‌ ಸೀಸನ್‌ 12ಕ್ಕೆ ಲಿಂಗತ್ವ ಅಲ್ಪಸಂಖ್ಯಾತರು ಎಂಟ್ರಿ ಕೊಡಲಿದ್ದಾರಾ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.