
ಗಿಲ್ಲಿ ನಟ
ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಗಿಲ್ಲಿಯ ಆಟ, ಪರಿಶ್ರಮದ ಜತೆಗೆ ಸಾಮಾಜಿಕ ಜಾಲತಾಣಗಳು ಸಹ ಆತನ ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಬಿಗ್‌ಬಾಸ್ ಶುರುವಾಗಿನಿಂದ ಒಟ್ಟು 24 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದರು. ಈ ಪೈಕಿ ಫೆನಾಲೆ ದಿನಕ್ಕೆ 6 ಮಂದಿ ತಲುಪಿದ್ದರು. ಸತತ 16 ವಾರಗಳ ‘ಬಿಗ್‌ಬಾಸ್‘ ಆಟದಲ್ಲಿ ಗಿಲ್ಲಿಯ ಆಟ ಜನರನ್ನು ಮೋಡಿ ಮಾಡಿತ್ತು.
ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಗಿಲ್ಲಿಗೆ ಗೆಲುವು ಕಬ್ಬಿಣದ ಕಡಲೆಯೇ ಆಗಿತ್ತು. ಬಿಗ್‌ಬಾಸ್‌ನಲ್ಲಿ ಗಿಲ್ಲಿ ಆಟ, ನಡವಳಿಕೆ, ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಜನರನ್ನು ತಲುಪಿಸಿದ್ದು ಸಾಮಾಜಿಕ ಜಾಲತಾಣಗಳು ಎಂದರೆ ತಪ್ಪಾಗಲಾರದು. ಹೀಗಾಗಿಯೇ ಎಲ್ಲಿ ನೋಡಿದರೂ ಗಿಲ್ಲಿ ಬಗ್ಗೆ ಮಾತು ಕೇಳಿ ಬರುತ್ತಿತ್ತು.
ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ಕ್ರೇಜ್
ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ಕುರಿತ ವಿಡಿಯೊಗಳು ಹರಿದಾಡುತ್ತಿದ್ದವು. ಗಿಲ್ಲಿ– ಕಾವ್ಯ ನಡುವಿನ ಸ್ನೇಹ ಕುರಿತು ಹಲವು ಟ್ರೋಲ್‌ಗಳು, ಮಿಮ್ಸ್‌ಗಳು ಹರಿದಾಡಿದ್ದವು. ಗಿಲ್ಲಿ ಮಾತು, ಡೈಲಾಗ್‌ಗಳು, ಕಾಮಿಡಿ ಟೈಮಿಂಗ್ ಎಲ್ಲವೂ ಜನರ ಬಾಯಿಯಲ್ಲಿ ಹರಿದಾಡ ತೊಡಗಿದ್ದವು. ಇದೇ ಗಿಲ್ಲಿ ಬಗ್ಗೆ ಕ್ರೇಜ್ ಹುಟ್ಟಲು ಕಾರಣ.
ಮಕ್ಕಳಿಗೂ ಗಿಲ್ಲಿ ಅಂದ್ರೆ ಇಷ್ಟ
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಹಾಡುವ ಹಾಡುಗಳು, ಡೈಲಾಗ್‌ಗಳನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ರೀಲ್ಸ್ ಮಾಡಿ ಹಾಕ ತೊಡಗಿದ್ದರು. ಉದಾಹರಣೆಗೆ 'ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು' ಹಾಡು, 'ತಾಕತ್ತಿದ್ದರೆ ಲಡಾಯ್ಸು, ಎದುರಿಗೆ ಬಂದ್ರೆ ಉಡಾಯ್ಸು. ಜೊತೇಲ್ ಇದ್ಕೊಂಡ್ ಕಟಾಯಿಸ್ಬೇಡ' ಎಂಬ ಡೈಲಾಗ್‌ಗಳು ಎಲ್ಲರನ್ನೂ ನಗೆ ಕಡಲಲ್ಲಿ ತೇಲಿಸಿತ್ತು.
ಜನರ ಮನ ಗೆದ್ದ ಹಳ್ಳಿ ಸೊಗಡು, ಸರಳತನ
ಬಿಗ್‌ಬಾಸ್ ಮನೆಯಲ್ಲಿ ಸಿನಿಮಾ, ಧಾರಾವಾಹಿ ಸೇರಿದಂತೆ ಅನೇಕ ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿದ್ದರು. ಅವರೆಲ್ಲರ ಮಧ್ಯೆ ಗಿಲ್ಲಿಯ ಹಳ್ಳಿ ಸೊಗಡು ಜನರಿಗೆ ಇಷ್ಟವಾಗಿದೆ. ಆಡಂಭರವಿಲ್ಲದ ಮಾತು, ಸರಳತನ, ಮುಗ್ಧತೆಯ ಮೂಲಕ ಗಿಲ್ಲಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂಬುದಕ್ಕೆ ಗಿಲ್ಲಿಯೇ ಉದಾಹರಣೆ. ಐದಾರು ವರ್ಷಗಳ ಹಿಂದೆಯೇ ಸಣ್ಣ ಸಣ್ಣ ವಿಡಿಯೊಗಳನ್ನು ಯುಟ್ಯೂಬ್, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ ಹಾಸ್ಯದ ಹೊನಲು ಹರಿಸಿ, ಸದ್ದು ಮಾಡಿದವರು ಗಿಲ್ಲಿ. ಅವರ 'ನಲ್ಲಿ ಮೂಳೆ', 'ರೋಲೆಕ್ಸ್ ರಾಜಣ್ಣ', 'ರಾಮಚಾರಿ ವೆಡ್ಸ್ ರಾಜಣ್ಣ' ಸಾಕಷ್ಟು ಜನರನ್ನು ತಲುಪಿದ್ದವು. ಹೀಗಾಗಿ, ಅವರಿಗೆ ಕಿರುತೆರೆ ವೇದಿಕೆಗಳಲ್ಲಿ ಅವಕಾಶಗಳ ಬಾಗಿಲು ತೆರೆಯಿತು.
ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ನಟನಿಗೆ 10 ಲಕ್ಷಕ್ಕೂ ಅಧಿಕ ಅನುಯಾಯಿಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.