ADVERTISEMENT

ಬೆಂಗಳೂರು: ಪೇಯಿಂಗ್ ಗೆಸ್ಟ್‌ನಲ್ಲಿ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 16:17 IST
Last Updated 29 ಡಿಸೆಂಬರ್ 2025, 16:17 IST
ನಂದಿನಿ
ನಂದಿನಿ   

ಬೆಂಗಳೂರು: ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಾಜಿ ನಗರದ ಪೇಯಿಂಗ್ ಗೆಸ್ಟ್‌ನಲ್ಲಿ ಕಿರುತೆರೆ ನಟಿ ನಂದಿನಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪೇಯಿಂಗ್ ಗೆಸ್ಟ್‌ನಲ್ಲಿ ವಾಸವಾಗಿದ್ದ 26 ವರ್ಷದ ನಂದಿನಿ ಅವರು ಭಾನುವಾರ ತಡರಾತ್ರಿ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಎಸ್‌. ಮಹಾಬಲೇಶ್ವರ ಮತ್ತು ಜಿ.ಆರ್.ಬಸವರಾಜೇಶ್ವರಿ ಅವರ ದ್ವಿತೀಯ ಪುತ್ರಿ ನಂದಿನಿ ಅವರು ಬಿ.ಇ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ, ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜರಾಜೇಶ್ವರಿ ನಗರದಲ್ಲಿ ನಟನೆ ಬಗ್ಗೆ ತರಬೇತಿ ಪಡೆದುಕೊಂಡು, ಪಿ.ಜಿಯಲ್ಲಿ ವಾಸವಾಗಿದ್ದರು. 2019ರಿಂದ ಕನ್ನಡದ ವಿವಿಧ ಧಾರಾವಾಹಿಗಳಲ್ಲಿ ಪಾತ್ರಗಳನ್ನು ಮಾಡಿದ್ದರು.

ADVERTISEMENT

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರ ತಂದೆ 2021ರಲ್ಲಿ ಮೃತಪಟ್ಟಿದ್ದರು. 2023ರಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರಕಿತ್ತು. ಆದರೆ, ನಟನೆಯಲ್ಲಿ ಹೆಚ್ಚು ಆಸಕ್ತಿ ಇರುವ ಕಾರಣ ಉದ್ಯೋಗಕ್ಕೆ ಹೋಗದೆ, ಬೆಂಗಳೂರಿನಲ್ಲಿ ಪಿ.ಜಿಯಲ್ಲಿ ವಾಸವಾಗಿದ್ದರು. ಭಾನುವಾರ ಸಂಜೆ ಸ್ನೇಹಿತ ಪುನೀತ್‌ ಎಂಬುವವರನ್ನು ಭೇಟಿ ಮಾಡಿ, ರಾತ್ರಿ 11.23ಕ್ಕೆ ವಾಪಸ್ ಪಿ.ಜಿಗೆ ಬಂದಿದ್ದರು. ಪುನೀತ್‌ ಕರೆ ಮಾಡಿದಾಗ, ನಂದಿನಿ ಸ್ವೀಕರಿಸಲಿಲ್ಲ. ಈ ಬಗ್ಗೆ ಪಿ.ಜಿ ಮ್ಯಾನೇಜರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

‘ಸರ್ಕಾರಿ ಕೆಲಸ ಮಾಡಲು ಇಷ್ಟವಿಲ್ಲ, ನಟನೆ ಇಷ್ಟವಿದೆ. ಆದರೆ, ಮನೆಯಲ್ಲಿ ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ’ ಎಂದು ಮಗಳು ತನ್ನ ಡೈರಿಯಲ್ಲಿ ಬರೆದಿದ್ದಾಳೆ. ಹಾಗಾಗಿ ಮಗಳ ಸಾವಿನ ಬಗ್ಗೆ ಯಾರು ಮೇಲೂ ಅನುಮಾನ ಮತ್ತು ಸಂಶಯ ಇಲ್ಲ’ ಎಂದು ಮೃತಳ ತಾಯಿ ಬಸವರಾಜೇಶ್ವರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕನ್ನಡದಲ್ಲಿ 'ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಧಾರಾವಾಹಿಯಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.