ಮುಂಬೈ: ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಟಿಸಿದ್ದ ಹಿಂದಿಯ ಜನಪ್ರಿಯ ಧಾರಾವಾಹಿ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ತಿ’ಯ 2ನೇ ಆವೃತ್ತಿ ತೆರೆ ಕಾಣುತ್ತಿದೆ.
ಸ್ಮೃತಿ ಅವರು ತುಳಸಿಯಾಗಿ ಈ ಧಾರವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. 2ನೇ ಆವೃತ್ತಿಯಲ್ಲಿ ‘ತುಳಸಿಯ ಹೊಸ ಅಧ್ಯಾಯ’ ಎಂಬ ಒಕ್ಕಣೆಯೊಂದಿಗೆ ಅವರು ರಾಜಕೀಯದಿಂದ ತುಸು ಬಿಡುವು ಪಡೆದು ಬಣ್ಣದ ಲೋಕಕ್ಕೆ ಮರಳಿದ್ದಾರೆ.
ಮಂಗಳವಾರ ರಾತ್ರಿ 10.30ಕ್ಕೆ ಇದು ಪ್ರದರ್ಶನಗೊಂಡಿತು. ತುಳಸಿ ಹಾಗೂ ಮಿಹಿರ್ ವಿರಾನಿ ಅವರ 38ನೇ ವಿವಾಹ ವಾರ್ಷಿಕೋತ್ಸವದೊಂದಿಗೆ ಧಾರವಾಹಿ ಆರಂಭವಾಯಿತು. ‘ಕ್ಯೂಂಕಿ..’ ಧಾರಾವಾಹಿಯನ್ನು ಏಕ್ತಾ ಕಪೂರ್ ಅವರ ಸಂಸ್ಥೆ ನಿರ್ಮಾಣ ಮಾಡಿದೆ. 2000ನೇ ಇಸವಿಯಲ್ಲಿ ಅತ್ಯಂತ ಜನಪ್ರಿಯ ಧಾರವಾಹಿ ಇದಾಗಿತ್ತು. 30 ನಿಮಿಷಗಳ ಪ್ರಸಾರ ಅವಧಿ ಇದರದ್ದು.
2ನೇ ಆವೃತ್ತಿಯಲ್ಲೂ ರೋನಿತ್ ರಾಯ್ ಹಾಗೂ ಸ್ಮೃತಿ ಇರಾನಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಬಾರಿ 2ನೇ ಆವೃತ್ತಿಯ ‘ಕ್ಯೂಂಕಿ..’ ಧಾರವಾಹಿಯು ಸ್ಟಾರ್ ಪ್ಲಸ್ ಜತೆಗೆ ಜಿಯೊ ಹಾಟ್‌ಸ್ಟಾರ್‌ನಲ್ಲೂ ಪ್ರಸಾರವಾಗುತ್ತಿದೆ. ಟೈಟಲ್ ಗೀತೆಯೊಂದಿಗೆ ದೇವಾಲಯಗಳ ದೃಶ್ಯಗಳೊಂದಿಗೆ ತುಳಸಿ ಗಿಡಕ್ಕೆ ನಾಯಕಿ ತುಳಸಿ ವಿರಾನಿ ನೀರು ಹಾಕುವ ಮೂಲಕ ಕೊನೆಗೊಳ್ಳುತ್ತದೆ. ದೃಶ್ಯ ಆರಂಭವಾಗುತ್ತದೆ. 2ನೇ ಆವೃತ್ತಿಯು ಎಚ್‌ಡಿ ಗುಣಮಟ್ಟದಲ್ಲಿ ಲಭ್ಯವಾಗುತ್ತಿರುವುದು ಮತ್ತೊಂದು ವಿಶೇಷ.
‘ಕಾಲ ಸರಿದಂತೆ ವಿರಾನಿ ಕುಟುಂಬವು ಶ್ರೀಮಂತವಾಗಿದೆ. ಮೊದಲ ಆವೃತ್ತಿಯಲ್ಲಿ ಅಡುಗೆ ಮಾಡುತ್ತಿದ್ದ ತುಳಸಿ, ಈ ಆವೃತ್ತಿಯಲ್ಲಿ ಒಂದಷ್ಟು ಮನೆ ಕೆಲಸಗಳಲ್ಲಷ್ಟೇ ನೆರವಾಗುತ್ತಾರೆ. ಮಾವ ಈಗಿಲ್ಲ, ಆದರೆ ಅತ್ತೆ ಸವಿತಾ (ಅಪರಾ ಮಹ್ತಾ) ಇದ್ದಾರೆ. 38ನೇ ವಿವಾಹ ವಾರ್ಷಿಕೋತ್ಸವಕ್ಕೆ ಅತ್ತೆ ಸೊಸೆಗೆ ಶುಭಾಶಯ ಕೋರುತ್ತಾರೆ.
25 ವರ್ಷಗಳ ನಂತರ ‘ಕ್ಯೂಂಕಿ ಸಾಸ್ ಬಿ ಕಭಿ ಬಹೂ ತಿ’ ಧಾರಾವಾಹಿಯ 2ನೇ ಆವೃತ್ತಿ ತೆರೆ ಕಾಣುತ್ತಿರುವುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.