ADVERTISEMENT

ಎಂತಹ ಪಾತ್ರಕ್ಕಾದರೂ ಸೈ: ಅಭಿನವ್‌

ರೇಷ್ಮಾ
Published 21 ಜನವರಿ 2021, 19:30 IST
Last Updated 21 ಜನವರಿ 2021, 19:30 IST
ಅಭಿನವ್‌ ವಿಶ್ವನಾಥನ್‌
ಅಭಿನವ್‌ ವಿಶ್ವನಾಥನ್‌   

‘ಒಬ್ಬ ನಟನಾದವನಿಗೆ ಯಾವುದೇ ಪಾತ್ರ ನೀಡಿದರೂ ಅದರೊಂದಿಗೆ ಜೀವಿಸುವ ಹಂಬಲವಿರಬೇಕು. ನಟ ಎನ್ನಿಸಿಕೊಂಡವನು ಎಂತಹ ಪಾತ್ರಕ್ಕಾದರೂ ಸೈ ಎನ್ನಬೇಕು. ನಾಯಕ ಎನ್ನಿಸಿಕೊಳ್ಳುವುದಕ್ಕಿಂತ ಜನರ ಮನಸ್ಸಿನಲ್ಲಿ ಉತ್ತಮ ನಟ ಎನ್ನಿಸಿಕೊಳ್ಳಬೇಕು’ ಎನ್ನುವುದು ಅಭಿನವ್‌ ವಿಶ್ವಾನಾಥನ್‌ ಅವರ ಮಾತು. ಇವರು ಕಲರ್ಸ್‌ ಕನ್ನಡ ವಾಹಿನಿಯ ‘ನನ್ನರಸಿ ರಾಧೆ’ ಧಾರಾವಾಹಿಯ ನಾಯಕ ಅಗಸ್ತ್ಯ ರಾಥೋಡ್‌.

ದೆಹಲಿಯಲ್ಲಿ ಹುಟ್ಟಿ ಬೆಳೆದ ಇವರು ನಂತರ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡವರು. ಬಾಲ್ಯದಿಂದಲೂ ಸಂಗೀತ, ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಇವರನ್ನು ಹೆಚ್ಚು ಸೆಳೆದಿದ್ದು ಯಯಾತಿ ನಾಟಕ. ಪಿಯುಸಿಯಲ್ಲಿದ್ದಾಗ ತಾಯಿಯೊಂದಿಗೆ ಯಯಾತಿ ನಾಟಕ ನೋಡಲು ಹೋಗಿದ್ದರು. ನಾಟಕ ನೋಡುತ್ತಾ ನೋಡುತ್ತಾ ನಟನೆಯ ಆಸಕ್ತಿಯ ಬೇರು ವಿಸ್ತಾರವಾಗಿ ಅವರೊಳಗೆ ಹಬ್ಬಿತ್ತು. ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದ್ದರು. ಕಳೆದ ನಾಲ್ಕು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿರುವ ಇವರು 60ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ನನ್ನರಸಿ ರಾಧೆ ಇವರ ಮೊದಲ ಧಾರಾವಾಹಿ. ತಮ್ಮ ಕಿರುತೆರೆ ಪಯಣದ ಕುರಿತು ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ ಅಭಿನವ್‌.

ಧಾರಾವಾಹಿ ಅವಕಾಶ ಸಿಕ್ಕಿದ್ದು
‘ನಾನು ಪ್ರಕಾಶ್ ಬೆಳವಾಡಿ ಹಾಗೂ ಪ್ರದೀಪ್ ಬೆಳವಾಡಿ ಅವರ ಜೊತೆ ಕೆಲಸ ಮಾಡುತ್ತಿದ್ದೆ. ನನ್ನ ನಟನೆಯ ಆಸಕ್ತಿಯ ಬಗ್ಗೆ ತಿಳಿದಿದ್ದ ಅವರು ನನಗೆ ಒಂದು ನಂಬರ್ ಕಳುಹಿಸಿ ‘ನೋಡು ಈ ಧಾರಾವಾಹಿ ತಂಡದವರು ನಾಯಕನ ಪಾತ್ರಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. ನೀನು ಹೋಗಿ ಪ್ರಯತ್ನ ಮಾಡು’ ಎಂದಿದ್ದರು. ನಾನು ಹೋಗಿ ಆಡಿಷನ್ ಕೊಟ್ಟು ಆಯ್ಕೆಯಾದೆ. ಈ ಧಾರಾವಾಹಿಗೂ ಮೊದಲು ಸಾಕಷ್ಟು ಆಡಿಷನ್‌ಗಳನ್ನು ನೀಡಿದ್ದರೂ ನನಗೆ ಅವಕಾಶ ಸಿಗುವ ಭರವಸೆಯೇ ಇರಲಿಲ್ಲ. ಆದರೆ ಈಗ ಅಗಸ್ತ್ಯ ರಾಥೋಡ್‌ ಪಾತ್ರ ಕರ್ನಾಟಕಕ್ಕೆ ನನ್ನನ್ನು ಪರಿಚಯಿಸಿದೆ. ಧಾರಾವಾಹಿಗೆ ಸೇರುವ ಮೊದಲು ನನಗೆ ಕನ್ನಡ ಓದಲು, ಬರೆಯಲು ಬರುತ್ತಿರಲಿಲ್ಲ. ಇಂದು ಸ್ಕ್ರಿಪ್ಟ್ ಓದುವಷ್ಟು ಕನ್ನಡ ಕಲಿತಿದ್ದೇನೆ. ಅದೆಲ್ಲಾ ಸಾಧ್ಯವಾಗಿದ್ದು ಈ ಧಾರಾವಾಹಿಯಿಂದ’ ಎಂದು ಧಾರಾವಾಹಿಗೆ ಆಯ್ಕೆಯಾಗಿ ಖ್ಯಾತಿ ಪಡೆದ ಖುಷಿಯನ್ನು ಹಂಚಿಕೊಳ್ಳುತ್ತಾರೆ.

ADVERTISEMENT

ಅಗಸ್ತ್ಯ– ಅಭಿನವ್ ನಡುವಿನ ವ್ಯತ್ಯಾಸ
‘ಅಗಸ್ತ್ಯ ಒಬ್ಬ ಸ್ವಾಭಿಮಾನಿ. ಜೊತೆಗೆ ಅವನು ಅಮ್ಮ ಇಲ್ಲದೇ ಇರುವ ಮಗ. 24 ಗಂಟೆಯೂ ಅಮ್ಮನ ಬಗ್ಗೆ ಯೋಚಿಸುವವನು. ನೋಡದ ತಾಯಿಯನ್ನು ಮನಸ್ಸಿನಲ್ಲೇ ಕಲ್ಪಿಸಿಕೊಂಡು ಪ್ರೀತಿಸುವ ಮಗ ಅಗಸ್ತ್ಯ. ಜನರೊಂದಿಗೆ ಬೆರೆಯದ, ಮನೆಯವರೊಂದಿಗೂ ಹೆಚ್ಚಾಗಿ ಸೇರದ ಅಂತರ್ಮುಖಿ. ಆದರೆ ನಾನು ವೈಯಕ್ತಿಕವಾಗಿ ಹಾಗಿಲ್ಲ, ನಾನು ತುಂಬಾ ಜನರೊಂದಿಗೆ ಬೆರೆಯು‌ತ್ತೇನೆ, ಎಲ್ಲರೊಂದಿಗೂ ಚೆನ್ನಾಗಿ ಮಾತನಾಡುತ್ತೇನೆ, ಭಾವನಾತ್ಮಕ ಅಂಶವೊಂದೇ ನಮ್ಮಿಬ್ಬರ ನಡುವಿನ ಸಾಮ್ಯತೆ’ ಎಂದು ಅಗಸ್ತ್ಯ–ಅಭಿನವ್ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾರೆ.

ಧಾರಾವಾಹಿ ಬಗ್ಗೆ ಹೇಳುವುದಾದರೆ..
ಈ ಧಾರಾವಾಹಿ ಕಥೆ ನಿಜಕ್ಕೂ ತುಂಬಾ ಚೆನ್ನಾಗಿದೆ. ಈ ಧಾರಾವಾಹಿ ತಂದೆ–ತಾಯಿಗಳೊಂದಿಗೆ ಹೇಗಿರಬೇಕು ಎಂಬ ಸಂದೇಶವನ್ನು ಸಮಾಜಕ್ಕೆ ಹೇಳುತ್ತಿದೆ. ಮುಖವನ್ನೇ ನೋಡದ ತಾಯಿಗೋಸ್ಕರ ತಂದೆಯನ್ನು ದ್ವೇಷಿಸುವ ಮಗ, ಅಪ್ಪನ ಪ್ರೀತಿಯನ್ನು ನೀಡುವ ಚಿಕ್ಕಪ್ಪ, ಅಮ್ಮನ ಪ್ರೀತಿ ನೀಡುವ ಅತ್ತೆ.. ಒಟ್ಟಾರೆ ಈ ಧಾರಾವಾಹಿಯಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವಿದೆ. ಕುಟುಂಬ, ಬಾಂಧವ್ಯದ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನವೂ ಇದರಲ್ಲಿದೆ.

ಸಿನಿಮಾದಿಂದಲೂ ಅವಕಾಶ

ಸುಚೇಂದ್ರ ಪ್ರಸಾದ್ ಅವರ ಜೊತೆ ಒಂದು ಸಿನಿಮಾವನ್ನು ಮಾಡಿದ್ದಾರೆ ಅಭಿನವ್‌. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಸಿನಿಮಾ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.