
ಸುಷ್ಮಾ ರಾಜ್
ಚಿತ್ರ: ಇನ್‌ಸ್ಟಾಗ್ರಾಂ
‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದ ಸುಷ್ಮಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಖುದ್ದು ಸುಷ್ಮಾ ರಾಜ್ ಅವರೇ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ಸುಷ್ಮಾ ರಾಜ್, ಕನ್ನಡದ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ, ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸದ್ಯ ಸುಷ್ಮಾ ಅವರ ಮನೆಯಲ್ಲಿ ಸಂಭ್ರಮ ಜೋರಾಗಿದೆ. 2024ರ ಮೇನಲ್ಲಿ ನಿಶಾನ್ ನರೇಂದ್ರ ಎಂಬುವವರ ಜೊತೆಗೆ ನಟಿ ಸುಷ್ಮಾ ರಾಜ್ ಮದುವೆಯಾಗಿದ್ದರು. ಈ ಇಬ್ಬರು 10 ವರ್ಷಗಳಿಂದ ಪ್ರೀತಿಸಿ ಕುಟುಂಬಸ್ಥರ ಒಪ್ಪಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಸುಷ್ಮಾ ರಾಜ್ ಪತಿ ಜಿಮ್ ಟ್ರೈನರ್ ಆಗಿದ್ದಾರೆ. ಅಲ್ಲದೇ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಸುಷ್ಮಾ ಅವರು ದುನಿಯಾ ವಿಜಯ್ ಅವರ ‘ಮಾಸ್ತಿಗುಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ‘ಹುಬ್ಬಳ್ಳಿ ಹುಡುಗ ಮಂಗಳೂರು ಹುಡ್ಗಿ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಹುಲಿ ಕುಣಿತದಲ್ಲಿಯೇ ಪಳಗಿರುವ ಸುಷ್ಮಾ ಅವರು ಸಾಕಷ್ಟು ಕಡೆ ಹುಲಿ ಕುಣಿತ ಪ್ರದರ್ಶನ ನೀಡಿದ್ದಾರೆ.
ಅಷ್ಟೇ ಅಲ್ಲದೇ ಈಟಿವಿ (ಈಗಿನ ಕಲರ್ಸ್ ಕನ್ನಡ) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಇಂಡಿಯನ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಟಾಪ್ 4 ಸ್ಥಾನ ಪಡೆದುಕೊಂಡಿದ್ದರು. ಮಾಡೆಲ್ ಆಗಿಯೂ ಅವರು ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿಟ್‌ನೆಸ್ ಟ್ರೇನಿಂಗ್ ಕೂಡ ನೀಡುತ್ತಾರೆ. ಅಲ್ಲದೆ ರಿಯಾಲಿಟಿ ಶೋ ನಿರೂಪಣೆ ಕೂಡ ಮಾಡಿದ್ದರು.
ಸುಷ್ಮಾ ರಾಜ್ ಅವರ ತಂದೆ ಫೆಬ್ರುವರಿ ತಿಂಗಳಿನಲ್ಲಿ ನಿಧನರಾಗಿದ್ದರು. ವಿಶೇಷ ಎಂಬಂತೆ ಸುಷ್ಮಾ ರಾಜ್ ಅವರ ಚೊಚ್ಚಲ ಮಗು ಕೂಡ ಫೆಬ್ರವರಿಯಲ್ಲೇ ಜನಿಸಿದೆ. ಹೀಗಾಗಿ ಸುಷ್ಮಾ ರಾಜ್ ಅವರ ತಂದೆಯೇ ಹುಟ್ಟಿ ಬಂದಿದ್ದಾರೆ ಎಂಬ ಖುಷಿಯಲ್ಲಿದ್ದಾರೆ.
ಸುಷ್ಮಾ ರಾಜ್
ಇತ್ತೀಚೆಗೆ ನಟಿ ಸುಷ್ಮಾ ರಾಜ್ ತಮ್ಮ ಹೊಟ್ಟೆಯ ಮೇಲೆ ಮರಿ ಹುಲಿ ಚಿತ್ರವನ್ನು ಬಿಡಿಸಿಕೊಂಡು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದರು. ಅದರ ಹಿಂದೆ ಒಂದು ಕಾರಣ ಕೂಡ ಇತ್ತು. ಸುಷ್ಮಾ ಅವರು ಉಡುಪಿಯ ಅಶೋಕ್ ರಾಜ್-ರಾಧಾ ದಂಪತಿಯ ಪುತ್ರಿ. ಸುಷ್ಮಾ ರಾಜ್ ಅವರ ತಂದೆ ಸುಮಾರು 35 ವರ್ಷಗಳಿಂದ ಹುಲಿಕುಣಿತ ತರಬೇತಿ ನೀಡುತ್ತಿದ್ದರು. ತಂದೆಯಂತೆ ಮಗಳು ಸುಷ್ಮಾ ರಾಜ್ ಕೂಡ ಹುಲಿ ಕುಣಿತದಲ್ಲಿಯೇ ಪಳಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.