ADVERTISEMENT

Telugu Kutumbam Awards: ವೇದಿಕೆ ಮೇಲೆ ಮಂಡ್ಯ ರಮೇಶ್ ಪಾದಪೂಜೆ ಮಾಡಿದ ಕನ್ನಡತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2025, 12:35 IST
Last Updated 7 ಅಕ್ಟೋಬರ್ 2025, 12:35 IST
<div class="paragraphs"><p>ನಟಿ ಮೇಘನಾ ಲೋಕೇಶ್ ಮತ್ತು ಮಂಡ್ಯ ರಮೇಶ್</p></div>

ನಟಿ ಮೇಘನಾ ಲೋಕೇಶ್ ಮತ್ತು ಮಂಡ್ಯ ರಮೇಶ್

   

ಚಿತ್ರ: zeetelugu


ADVERTISEMENT

ಮೈಸೂರು ಮೂಲದ ನಟಿ ಮೇಘನಾ ಲೋಕೇಶ್ ಅವರು ತೆಲುಗು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ನಟ ದಿಲೀಪ್ ರಾಜ್ ಅಭಿನಯದ ’ಪುರುಷೋತ್ತಮ’ ಧಾರಾವಾಹಿಯಲ್ಲಿ ನಟಿ ಮೇಘನಾ ನಟಿಸಿ ಜನಪ್ರಿಯತೆ ಪಡೆದುಕೊಂಡರು. ನಟಿ ಮೇಘನಾ ಲೋಕೇಶ್‌ ಅವರು ಕನ್ನಡ ಮಾತ್ರವಲ್ಲದೇ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಇನ್ನು, ಜೀ ತೆಲುಗು ಕುಟುಂಬಂ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ನಟಿ ಮೇಘನಾ ಲೋಕೇಶ್‌ ಅವರು, ಕನ್ನಡದ ಖ್ಯಾತ ನಟ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮಂಡ್ಯ ರಮೇಶ್ ಅವರಿಗೆ ಸನ್ಮಾನ ಮಾಡಿದ್ದಾರೆ.

ಜೀ ತೆಲುಗು ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಆ ಪ್ರೊಮೋದಲ್ಲಿ, ಜೀ ಕುಟುಂಬ ಅವಾರ್ಡ್ಸ್‌ ನಡೆಯುತ್ತಿದ್ದ ವೇಳೆ ವೇದಿಕೆ ಮೇಲೆ ಮಂಡ್ಯ ರಮೇಶ್‌ರನ್ನು ಕರೆಸಿದ್ದಾರೆ. ಮಂಡ್ಯ ರಮೇಶ್‌ ಅವರನ್ನು ನೋಡುತ್ತಿದ್ದಂತೆ ಮೇಘನಾ ಅಚ್ಚರಿಗೊಂಡಿದ್ದಾರೆ.

ಬಳಿಕ ವೇದಿಕೆ ಮೇಲೆ ಮಾತನಾಡಿದ ಮೇಘನಾ ಅವರು, ‘ ನಾನು ಸರ್‌ ಅವರನ್ನು ನನ್ನ ಜೀವನದಲ್ಲಿ ಎತ್ತರದ ಸ್ಥಾನದಲ್ಲಿಟ್ಟಿದ್ದೇನೆ’ ಎಂದು ಹೇಳಿದ್ದಾರೆ. ಆ ನಂತರ ವೇದಿಕೆ ಮೇಲೆ ಪಾದಪೂಜೆಯನ್ನು ಮಾಡಿದ್ದಾರೆ. ನಟ ಮಂಡ್ಯ ರಮೇಶ್‌ ಅವರು ಕೂಡ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

‘ಮೂಕನಾದೆ. ತೆಲುಗು ಜೀ ವಾಹಿನಿಯಿಂದ ಕರೆ ಬಂದಾಗ ಅಚ್ಚರಿ, ಆತಂಕ, ಮುಜುಗರ, ಎಲ್ಲವೂ ಸೇರಿದ ಭಾವವೊಂದು ಸುಳಿದಾಡತೊಡಗಿತು. ಪ್ರೀತಿಯ ಒತ್ತಾಸೆಗೆ ಮಣಿದೆ. ಹೋಗಿ-ಬರುವ ಮತ್ತು ಎಲ್ಲಾ ವ್ಯವಸ್ಥೆಗಳನ್ನು ಅದೆಷ್ಟು ಚೆನ್ನಾಗಿ ಮಾಡಿದ್ದರು, ನಡೆಸಿಕೊಂಡರು ಅಂದರೆ ನನಗೆ ಸಂಕೋಚವಾಗುತ್ತಿತ್ತು. ನಮ್ಮ ಮನೆಯ ಹೂವು ಒಂದು ಅಲ್ಲಿ ಅರಳಿದೆ. ಈ ಹುಡುಗಿ ಅದೆಷ್ಟು ಜನರ ಪ್ರೀತಿ ಗಳಿಸಿದ್ದಾಳೆ ಅಂತ ನೋಡಿಯೇ ಅನುಭವಿಸಬೇಕು.

‘ವೇದಿಕೆ ಮೇಲೆ ನಾನು ಬರುತ್ತಿದ್ದ ಹಾಗೆ ಮತ್ತು ಕನ್ನಡ ನುಡಿಯುತ್ತಿದ್ದ ಹಾಗೆ ಆ ತೆಲುಗು ಜನ ಮತ್ತು ಅಲ್ಲಿದ್ದ ಕನ್ನಡಿಗರು ಪ್ರತಿಕ್ರಯಿಸಿದ ರೀತಿ ಯಾವತ್ತಿಗೂ ಮರೆಯಲಾರೆ. ಅನೇಕ ಭಾಷೆಯ ಜನ ಅಲ್ಲಿದ್ದರು. ಮೇಘನಾ ಲೋಕೇಶ್ ಅಲ್ಲಿ ಬರೀ 'ತಾರೆ'ಯಾಗಿರಲಿಲ್ಲ, 'ಮನೆ ಮಗಳಾಗಿದ್ದಳು. ನಟನೆಯಿಂದ ನೂರಾರು ಮಂದಿ ಬದುಕು ರೂಪಿಸಿಕೊಂಡಿದ್ದಾರೆ. ಕೆಲವರು ಪ್ರೀತಿಯಿಂದ ನೆನೆಯುತ್ತಾರೆ. ಮತ್ತೆ ಕೆಲವರು ಇಲ್ಲ. ಆದರೆ, ನಾನು ಮತ್ತು ನಟನ ಅವರ ಇಲ್ಲಿಯ ಕಾರ್ಯ ತತ್ಪರತೆ, ಶ್ರಮ, ಶ್ರದ್ಧೆಗಳನ್ನು ಪ್ರೀತಿಯಿಂದ ಗೌರವಗಳಿಂದ ನೆನೆಯುತ್ತಲೇ ಇರುತ್ತೇವೆ. ನಮ್ಮ ಕೆಲಸಗಳನ್ನು ಮತ್ತಷ್ಟು ಶ್ರದ್ಧೆಯಿಂದ ಮಾಡುತ್ತಲೇ ಹೋಗುತ್ತೇವೆ’.

‘ಸಮಾರಂಭದಲ್ಲಿ ನಾನು ವಿಚಿತ್ರ ಟ್ರಾನ್ಸ್‌ನಲ್ಲಿದ್ದೆ. ಅಷ್ಟೊಂದು ನಾಚಿಕೆಯಾಗಿ ಬಿಟ್ಟಿತು. ಬದುಕಿನಲ್ಲಿ ಏನೇನೋ ಸಂದರ್ಭಗಳು ಬರುತ್ತವೆ. ಆದರೆ ಸಾಮಾನ್ಯ ರಂಗ ಕರ್ಮಿಯೊಬ್ಬನಿಗೆ ಹೀಗೆ ಅನಿರೀಕ್ಷಿತ, ಅನಪೇಕ್ಷಿತ ಗೌರವ ಸಿಕ್ಕರೆ, ಅದು ನೆರೆಯ ನಾಡಿನಿಂದ ಏನು ಪ್ರತಿಕ್ರಿಯಿಸಬೇಕು. ತಿಳಿದು ನಾಲ್ಕು ಮಾತಾಡಿದೆ ಕನ್ನಡದಲ್ಲಿ. ನೂರಾರು ಕನ್ನಡ ಕಲಾವಿದ ಜೀವಿಗಳು ಮುದ್ದಾಡಿ ಮಾತಾಡಿ ಹೋದವು. ಅನೇಕ ಆಂಧ್ರವಾಳ್ಳುಗಳು, ಕಣ್ಣಲ್ಲಿ ಅಭಿಮಾನ ತುಂಬಿ, ಕೈಕುಲುಕಿ ಹೋದವು. ಅದೊಂದು ಸುಂದರ ನೆನಪು. ಎಲ್ಲಕ್ಕೂ ಮನಸ್ವೀ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ನಟಿ ಮೇಘನಾ ಲೋಕೇಶ್‌ ಅವರು ಮಂಡ್ಯ ರಮೇಶ್‌ ಅವರ ನಟನೆ ರಂಗಸಂಸ್ಥೆಯಲ್ಲಿ ಅಭಿನಯವನ್ನು ಕಲಿತಿದ್ದಾರೆ. ಇದೇ ನಟನೆ ಅಕಾಡೆಮಿಯಲ್ಲಿ ರಾಮಾಚಾರಿ ಧಾರಾವಾಹಿ ನಟ ರಿತ್ವಿಕ್‌ ಕೃಪಾಕರ್‌ ಕೂಡ ನಟನೆಯನ್ನು ಕಲಿತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.