ADVERTISEMENT

ವ್ಹಾ ತಾಜ್...! ಜಾಹೀರಾತು ಪ್ರಪಂಚದಲ್ಲಿ ಅಚ್ಚೊತ್ತಿದ್ದ ತಬಲಾ ಮಾಂತ್ರಿಕ ಜಾಕೀರ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 12:28 IST
Last Updated 16 ಡಿಸೆಂಬರ್ 2024, 12:28 IST
Pavitra Bhat
   Pavitra Bhat

ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದ ತಬಲಾ ಮಾಂತ್ರಿಕ ಉಸ್ತಾದ್‌ ಜಾಕೀರ್‌ ಹುಸೇನ್‌ (73) ನಿಧನರಾಗಿದ್ದಾರೆ. ಸಂಗೀತ ಕ್ಷೇತ್ರ ಮಾತ್ರವಲ್ಲದೆ 90ರ ದಶಕದಿಂದ ಜಾಹೀರಾತು ಕ್ಷೇತ್ರದಲ್ಲೂ ಉಸ್ತಾದ್‌ ಭಾರತೀಯರಿಗೆ ಪರಿಚಿತರು.

90ರ ದಶಕದಲ್ಲಿ ಆಗಷ್ಟೇ ಕೇಬಲ್‌ ಟಿವಿಗಳು ಹಲವರ ಮನೆಗಳಿಗೆ ಕಾಲಿಟ್ಟಿತ್ತು. ಅದೇ ವೇಳೆ ತಾಜ್‌ ಚಹಾದ ಜಾಹೀರಾತಿನಲ್ಲಿ ಉಸ್ತಾದ್‌ರ ತಬಲಾ ಸದ್ದು ಜನರ ಮೆಚ್ಚುಗೆ ಪಡೆದಿತ್ತು.

ಜಾಹೀರಾತಿನಲ್ಲಿದ್ದ ‘ವ್ಹಾ ಉಸ್ತಾದ್‌ ನಹೀ, ವ್ಹಾ ತಾಜ್‌ ಬೋಲಿಯೇ’ (ವ್ಹಾ ಉಸ್ತಾದ್‌ ಅಲ್ಲ, ವ್ಹಾ ತಾಜ್‌ ಎಂದು ಹೇಳಿರಿ) ಎನ್ನುವ ಸಾಲು ಚಿರಪರಿಚಿತವಾಗಿತ್ತು. ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಉಸ್ತಾದ್‌ ದೇಶ, ಭಾಷೆ, ಧರ್ಮ ಎಲ್ಲವನ್ನೂ ಮೀರಿ ಸಂಗೀತ ಲೋಕದಲ್ಲಿ ಮಾಂತ್ರಿಕರಾಗಿ ಹೊರಹೊಮ್ಮಿದ್ದಾರೆ. 

ADVERTISEMENT

ತಾಜ್‌ ಚಹಾದ ಜಾಹೀರಾತಿನಲ್ಲಿ ಉಸ್ತಾದ್‌

1966ರಲ್ಲಿ ಬ್ರೂಕ್‌ ಬಾಂಡ್‌ ಕಂಪನಿ ಕೋಲ್ಕತ್ತದಲ್ಲಿ ತಾಜ್‌ ಮಹಲ್‌ ಚಹಾವನ್ನು ಆರಂಭಿಸಿತ್ತು. ಆರಂಭದಲ್ಲಿ ನಟ ಝೀನನ್‌ ಅಮನ್‌ ಮತ್ತು ಮಾಳವಿಕ ತಿವಾರಿ ಅವರು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. 1980ರ ಹೊತ್ತಿಗೆ ಮಧ್ಯಮವರ್ಗದ ಜನರಿಗೂ ತಾಜ್‌ ಚಹಾ ಇಷ್ಟವಾಗಿರುವುದನ್ನು ಕಂಪನಿ ಗಮನಸಿತ್ತು. ಹೀಗಾಗಿ ಹೊಸ ರಾಯಭಾರಿಯನ್ನು ನಿಯೋಜಿಸಿ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನಿಸಿತ್ತು. ಆಗ ಕಾಣಿಸಿಕೊಂಡಿದ್ದೇ ತಬಲಾ ಮಾಂತ್ರಿಕ ಉಸ್ತಾದ್‌ ಜಾಕೀರ್‌ ಹುಸೇನ್‌.

‘ತಾಜ್‌ ಚಹಾದ ಜಾಹೀರಾತಿನ ಚಿತ್ರೀಕರಣಕ್ಕಾಗಿ ಉಸ್ತಾದ್ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಆಗ್ರಾಗೆ ಬಂದಿದ್ದರು’ ಎಂಬ ಮಾಹಿತಿಯನ್ನು ಎನ್‌ಡಿಟಿವಿ ವರದಿ ಮಾಡಿದೆ.

ಜಾಹೀರಾತಿನಲ್ಲೇನಿತ್ತು?

ಜಾಹೀರಾತು ಬಹಳ ಸರಳವಾಗಿತ್ತು. ತಾಜ್‌ಮಹಲ್‌ ಎದುರು ಉಸ್ತಾದರು ಪರಿಪೂರ್ಣ ತಾಳಕ್ಕಾಗಿ ಗಂಟೆಗಟ್ಟಲೆ ತಬಲಾ ಅಭ್ಯಾಸ ಮಾಡುತ್ತಾರೆ. ಅದೇ ರೀತಿ ತಾಜ್ ಮಹಲ್ ಚಹಾದ ತಯಾರಕರೂ ಕೂಡ ಪರಿಪೂರ್ಣ ಮಿಶ್ರಣ ಮತ್ತು ಪರಿಮಳವನ್ನು ಕಂಡುಹಿಡಿಯಲು ಹಲವು ವಿಧಾನಗಳನ್ನು ಪರೀಕ್ಷಿಸಿದ್ದಾರೆ’ ಎನ್ನುವುದಾಗಿತ್ತು. ಕೊನೆಯಲ್ಲಿ ‘ವ್ಹಾ ಉಸ್ತಾದ್‌ ನಹಿ, ವ್ಹಾ ತಾಜ್‌ ಬೋಲಿಯೇ’  ಎನ್ನುವ ಸಾಲುಗಳನ್ನು ಹೇಳುತ್ತಾರೆ. 

1991ರ ಹೊತ್ತಿಗೆ ಉಸ್ತಾದರು ಕಾಣಿಸಿಕೊಂಡ ಜಾಹೀರಾತು ಭಾರತೀಯರ ಮನೆಗಳನ್ನು ತಲುಪಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.