ಒಮ್ಮೆ ಕುರ್ತಕೋಟಿ ಗ್ರಾಮದಲ್ಲಿ ಸಂಚರಿಸುವಾಗ ‘ಜಾನುವಾರುಗಳ ವಸತಿ ನಿಲಯ’ ಎನ್ನುವ ಬೋರ್ಡ್ ಕಾಣಿಸಿತು! ಕುತೂಹಲದಿಂದಲೇ ವಸತಿ ನಿಲಯವನ್ನು ಪ್ರವೇಶಿಸಿದೆ. ಅದೊಂದು ದೊಡ್ಡ ಶೆಡ್. ಅಲ್ಲಿ 80ಕ್ಕೂ ಅಧಿಕ ಎತ್ತು ಎಮ್ಮೆಗಳನ್ನು ಕಟ್ಟುವ ವ್ಯವಸ್ಥೆ ಇದೆ. ಜತೆಗೆ ಮೇವಿನ ದಾಸ್ತಾನು ಕೊಠಡಿ, ಜಾನುವಾರು ಚಿಕಿತ್ಸಾ ಕೊಠಡಿ, ಸಿಬ್ಬಂದಿ ಕೊಠಡಿ, ಔಷಧಿ ದಾಸ್ತಾನು ಕೊಠಡಿ, ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಆಕಳು, ಎತ್ತು, ಎಮ್ಮೆಗಳ ಮೈತೊಳೆಯಲು ಯಂತ್ರಗಳೂ ಇದ್ದವು. ಇದನ್ನು ಸ್ಥಳೀಯರು ಆಕಳು, ಎತ್ತು, ಎಮ್ಮೆಗಳ ಹಾಸ್ಟೆಲ್ ಎಂದೂ ಕರೆಯುತ್ತಾರೆ!
ಹುಲಕೋಟಿ ಮತ್ತು ಕುರ್ತಕೋಟಿ ನಡುವೆ ಇರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಶ್ಯಾಮ್‌ಪ್ರಸಾದ್ ಮುಖರ್ಜಿ ರೂರ್ಬನ್ ಮಿಷನ್ ಯೋಜನೆ ಅಡಿ ₹1 ಕೋಟಿ ವೆಚ್ಚದಲ್ಲಿ ಜಾನುವಾರುಗಳಿಗೆ 14 ಸಾವಿರ ಚದರಡಿಯ ಹೈಟೆಕ್ ವಸತಿ ನಿಲಯ ನಿರ್ಮಿಸಲಾಗಿದೆ. ಇದು ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮದಿಂದ ಅಂದಾಜು ಎರಡು ಕಿಲೋಮೀಟರ್ ದೂರದಲ್ಲಿದೆ.
‘ನಮ್ ಜೀವ್ನ ನಡೀತಿರೋದೋ ಆಕಳ ಹಾಲಿನಿಂದ ಸಿಗೋ ರೊಕ್ಕದ ಮ್ಯಾಲೇ. ಮನೆಯ್ಯಾಗಿನ ಲಗ್ನ, ಹಬ್ಬ ಹರಿದಿನ ಎಲ್ಲ ಇವ್‌ಗಳ ರೊಕ್ಕದ ಮ್ಯಾಲೇ ನಡೆದೈತಿ. ಮನ್ಯಾಗಾ ಕೊಟ್ಗೆ ಇಲ್ಲದಕ್ಕ ಮುಂಚ್ಯಾಕ ಆಕಳೆಲ್ಲಾ ಬಿಸ್ಲು, ಗಾಳಿ, ಮಳ್ಯಾಗ ನೆನೀತಿದ್ವು. ಇಲ್ಲೀ ಹಾಶ್ಳು ಆದ್‌ಮ್ಯಾಕೆ ಬಾಳ ಅನುಕೂಲ ಆಗೈತಿ. ಆಕಳು ಈಗ ಬೆಚ್ಗೆ ಇರ್ತಾವೆ’ ಎಂದು ಕುರ್ತಕೋಟಿಯ ರೈತ ಮಲ್ಲಪ್ಪ ಖುಷಿಯಿಂದ ಹೇಳಿದರು.
ಮಲ್ಲಪ್ಪ, ಇವರ ಸಹೋದರರಾದ ರೋಣಪ್ಪ, ಕರಿಯಪ್ಪ ಮತ್ತು ಮಂಜಪ್ಪ ಅವರ ಬದುಕಿಗೆ ಆರ್ಥಿಕ ಬಲ ತುಂಬಿರುವುದು ಹೈನುಗಾರಿಕೆ. ತಮ್ಮ ಬಳಿ ಇರುವ 22 ಎಮ್ಮೆಗಳನ್ನು ಕಾಳಜಿ ಮಾಡುವ ಉದ್ದೇಶದಿಂದ ಈ ಹಾಸ್ಟೆಲ್‌ನಲ್ಲಿ ಇಟ್ಟಿದ್ದಾರೆ. ಒಂದು ಎಮ್ಮೆಗೆ ತಿಂಗಳಿಗೆ ₹200ರಂತೆ ಪ್ರತಿ ತಿಂಗಳು ₹4,400 ಶುಲ್ಕ ಪಾವತಿಸುತ್ತಿದ್ದಾರೆ.
ಮುಂಡರಗಿ ತಾಲ್ಲೂಕಿನ ಜಂತ್ಲಿಶಿರೂರಿನ ಲಕ್ಷ್ಮವ್ವ ಮಾಬಡ್ಡಿ ಮತ್ತು ನಿಂಗಪ್ಪ ಮಾಬಡ್ಡಿ ಸಹೋದರಿಯರು ಕುರ್ತುಕೋಟಿ ಗ್ರಾಮದ ಅಣ್ಣ ತಮ್ಮಂದಿರನ್ನು ವರಿಸಿ 20 ವರ್ಷಗಳಾಗಿವೆ. ಮದುವೆ ಸಂದರ್ಭದಲ್ಲಿ ಉಡುಗೊರೆಯಾಗಿ ಅವರಿಗೆ ತವರು ಮನೆಯವರು ಮುರ‍್ರಾ ತಳಿಯ ಒಂದು ಎಮ್ಮೆ ಕೊಟ್ಟಿದ್ದರು. ಅಂದಿನಿಂದಲೂ ಹೈನುಗಾರಿಕೆಯಲ್ಲಿ ತೊಡಗಿರುವ ಈ ಸಹೋದರಿಯರ ಬಳಿ ಈಗ 14 ಎಮ್ಮೆಗಳಿವೆ. ಇವರು ಕೂಡ ಪ್ರಾರಂಭದ ಮೂರು ತಿಂಗಳು ತಮ್ಮ ಎಮ್ಮೆಗಳಿಗೆ ಈ ಹಾಸ್ಟೆಲ್‌ನ ಸೌಲಭ್ಯ ಪಡೆದುಕೊಂಡಿದ್ದಾರೆ.
‘ಜಾನುವಾರು ಹಾಸ್ಟೆಲ್‌ನಿಂದ ರೈತರಿಗೆ ಉಪಯೋಗ ಆಗಿದೆ. ಪ್ರಾರಂಭದಲ್ಲಿ ಮೂರು ತಿಂಗಳು ಮೇವು, ನೀರು, ಜಾಗ ಎಲ್ಲ ಉಚಿತವಾಗಿ ಕೊಟ್ಟರು. ಆಮೇಲೆ ತಿಂಗಳಿಗೆ ಒಂದು ಆಕಳು–ಎಮ್ಮೆಗೆ ಇಷ್ಟು ಕೊಡಬೇಕು ಅಂದ್ರು. ಆದರೆ, ಎಮ್ಮೆಗಳು ಎಲ್ಲ ಸಮಯದಲ್ಲೂ ಹಾಲು ಹಿಂಡಲ್ಲ. ಹಾಲು ಹಿಂಡುವುದಕ್ಕೂ ಒಂದೇ ಶುಲ್ಕ, ಹಿಂಡದಿರುವುದಕ್ಕೂ ಒಂದೇ ಶುಲ್ಕ ಮಾಡಿದ್ರೆ ನಮಗೆ ಉಳಿಯುವುದಾದರೂ ಏನು? ಸರ್ಕಾರದ ಯಾವುದಾದರೂ ಒಂದು ಯೋಜನೆ ತಂದು ಮೊದಲು ಮಾಡಿದಂತೆ ಉಚಿತ ವ್ಯವಸ್ಥೆ ಮಾಡಿದ್ರೆ ಛಲೋ ಆಗ್ತದೆ’ ಅಂದರು ಈ ಸಹೋದರಿಯರು.
ಆಕಳು, ಎತ್ತು, ಎಮ್ಮೆಗಳನ್ನು ಸಾಕಬೇಕು ಎಂಬ ಆಸೆ ಎಲ್ಲ ರೈತರಿಗೂ ಇದೆ. ಆದರೆ, ಕೆಲವು ರೈತರಿಗೆ ಜಾಗದ ಕೊರತೆ ಇದೆ. ಅಂಥವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಜಾನುವಾರುಗಳಿಗೆ ಸುಸಜ್ಜಿತ ವಸತಿನಿಲಯ ತೆರೆಯಲಾಗಿದೆ. ಕುರ್ತಕೋಟಿ ಗ್ರಾಮ ಪಂಚಾಯಿತಿ ಹೇಳುವಂತೆ, ಜಾನುವಾರುಗಳಿಗಾಗಿ ತೆರೆದಿರುವ ರಾಜ್ಯದ ಮೊದಲ ವಸತಿನಿಲಯ ಇದು.
‘ಗ್ರಾಮೀಣ ಜನರ ಆರ್ಥಿಕ ಸ್ಥಿತಿ ಬಲಪಡಿಸುವ ಹೈನುಗಾರಿಕೆಯನ್ನು ಉತ್ತೇಜಿಸುವುದು ಹಾಗೂ ಒಕ್ಕಲುತನ ಪರಂಪರೆ ಮುಂದುವರಿಸುವುದು ಜಾನುವಾರು ವಸತಿನಿಲಯ ಸ್ಥಾಪನೆಯ ಉದ್ದೇಶ. ಇದು ಗದಗ ಶಾಸಕ
ಎಚ್.ಕೆ.ಪಾಟೀಲರ ಪರಿಕಲ್ಪನೆ’ ಎನ್ನುತ್ತಾರೆ ಕುರ್ತಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪಣ್ಣ ಇನಾಮತಿ.
ಒಮ್ಮೆ ಅಪ್ಪಣ್ಣ ಗುಜರಾತ್‌ಗೆ ಹೋಗಿದ್ದರು. ಅಲ್ಲಿನ ಹಳ್ಳಿಯೊಂದರಲ್ಲಿ ಜಾನುವಾರು ವಸತಿನಿಲಯ ಇರುವುದು ಗೊತ್ತಾಗಿ ಅಲ್ಲಿಗೆ ಹೋದರು. ದೊಡ್ಡ ಶೆಡ್ ನಿರ್ಮಿಸಿ, ಒಳಗೆ ಅದನ್ನು ಮತ್ತೆ ವಿಭಾಗಿಸಿ ಸಣ್ಣ ಸಣ್ಣ ಶೆಡ್‌ಗಳನ್ನು ಮಾಡಿದ್ದರು. ಜಾಗದ ಕೊರತೆ ಇರುವ ರೈತರು ಜಾನುವಾರುಗಳನ್ನು ಕಟ್ಟಿ ಅಲ್ಲೇ ಪೋಷಣೆ ಮಾಡುತ್ತಿದ್ದರು. ಇದರಿಂದ ಪ್ರಭಾವಿತರಾಗಿ ಈ ಕುರಿತು ಶಾಸಕರೊಂದಿಗೆ ಚರ್ಚಿಸಿ, ಜಾನುವಾರು ವಸತಿನಿಲಯ ನಿರ್ಮಿಸುವ ಯೋಜನೆ ರೂಪಿಸಲು ಕಾರಣರಾದರು.
‘ಜಾನುವಾರುಗಳಿಗೆ ಮೇವು, ನೀರು ಕೊಟ್ಟರೆ ಅದು ಗೋಶಾಲೆ ಆಗುತ್ತದೆ. ಗೋಶಾಲೆ ಬೇರೆ, ವಸತಿನಿಲಯವೇ ಬೇರೆ. ಮಕ್ಕಳಿಗೆ ಮನೆಯಲ್ಲಿ ಕಲಿಸಲು ಸಾಧ್ಯವಿಲ್ಲದಿದ್ದಾಗ ಪೋಷಕರು ಹಾಸ್ಟೆಲ್‌ಗೆ ಹಾಕುತ್ತಾರೆ. ಅದೇ ರೀತಿ, ವಸತಿನಿಯಲದಲ್ಲಿ ಜಾನುವಾರುಗಳನ್ನು ನಾವು ವರ್ಷಪೂರ್ತಿ ಪೋಷಣೆ ಮಾಡುವ ಉದ್ದೇಶ ಹೊಂದಿದ್ದೇವೆ. ಈ ಕಾರಣಕ್ಕೆ ವಸತಿನಿಲಯ ಅಂತ ಹೆಸರಿಟ್ಟಿದ್ದೇವೆ’ ಎನ್ನುತ್ತಾರೆ ಅಪ್ಪಣ್ಣ ಇನಾಮತಿ.
ಜಾನುವಾರು ವಸತಿನಿಲಯ ಪರಿಕಲ್ಪನೆ ಚೆನ್ನಾಗಿದೆ. ಆದರೆ, ರೈತರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎನ್ನುವುದು ಅವರ ಕೊರಗು.
ವಸತಿನಿಲಯವನ್ನು ಪಂಚಾಯಿತಿ ನಿರ್ವಹಣೆ ಮಾಡುತ್ತಿದೆ. ಪಶುಗಳಿಗೆ ಮೇವು, ನೀರು ಪೂರೈಕೆ, ವಿಮೆ, ಔಷಧಿ, ಚಿಕಿತ್ಸೆ, ವಿದ್ಯುತ್ ಶುಲ್ಕ, ಸಿಬ್ಬಂದಿ ವೆಚ್ಚ ಸೇರಿದಂತೆ ಒಂದು ಆಕಳಿಗೆ ತಿಂಗಳಿಗೆ ₹7 ಸಾವಿರ ನಿಗದಿಪಡಿಸಬೇಕು ಎಂದು ಪಶುಪಾಲನಾ ತಜ್ಞರು ಶಿಫಾರಸು ಮಾಡಿದ್ದರು. ಆದರೆ, ಪಂಚಾಯಿತಿ ಒಂದು ಆಕಳಿಗೆ ₹2 ಸಾವಿರ ನಿಗದಿ ಮಾಡುವುದಾಗಿ ಹೇಳಿದರೂ ರೈತರು ಸ್ಪಂದಿಸಲಿಲ್ಲ ಎನ್ನುವ ಮಾತು ಕೇಳಿಬಂದಿತು.
‘ವಸತಿನಿಲಯ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ಹೆಣ್ಣುಮಕ್ಕಳು ಪ್ರತಿದಿನ ಅಲ್ಲಿಗೆ ಎಮ್ಮೆ ಕಟ್ಟಿ, ಹಾಲು ಹಿಂಡುವುದು ಪ್ರಾಯೋಗಿಕವಾಗಿ ಸಾಧ್ಯವಾಗುತ್ತಿಲ್ಲ. ಪ್ರಾರಂಭದಲ್ಲಿ ಮೂರು ತಿಂಗಳು ಸಚಿವ ಎಚ್.ಕೆ.ಪಾಟೀಲ ಅವರು ₹5 ಲಕ್ಷ ಅನುದಾನ ಕೊಟ್ಟಿದ್ದರಿಂದ ಮೇವು, ನೀರು, ಜಾಗ ಸೇರಿದಂತೆ ಎಲ್ಲ ವ್ಯವಸ್ಥೆಯನ್ನೂ ಉಚಿತವಾಗಿ ಮಾಡಿದ್ದೆವು. ರೈತರು ಈಗಲೂ ಅದೇ ರೀತಿ ವ್ಯವಸ್ಥೆ ಮಾಡಿ ಅನ್ನುತ್ತಾರೆ. ವಸತಿನಿಲಯ ನಡೆಯಬೇಕೆಂದರೆ ನಿರ್ವಹಣಾ ವೆಚ್ಚ ಪಡೆಯಲೇಬೇಕು’ ಎಂದು ಅಪ್ಪಣ್ಣ ಹೇಳಿದರು.
ಸದ್ಯ ಹಾಸ್ಟೆಲ್‌ನಲ್ಲಿ 22 ಎಮ್ಮೆಗಳಿವೆ. ಒಂದಕ್ಕೆ ತಿಂಗಳಿಗೆ ₹200 ಶುಲ್ಕ ನಿಗದಿ ಮಾಡಿ, ಜಾಗವನ್ನಷ್ಟೇ ಕೊಡಲಾಗಿದೆ. ಮೇವಿನ ವ್ಯವಸ್ಥೆ ಅವರೇ ಮಾಡಿಕೊಂಡಿದ್ದಾರೆ. ವಸತಿನಿಲಯ ಸ್ಥಾಪನೆಯ ಮೂಲ ಉದ್ದೇಶ ಈಡೇರಲು ಇನ್ನಷ್ಟು ಸಮಯ ಬೇಕಾಗಬಹುದು. ಈ ನಿಟ್ಟಿನಲ್ಲಿ ಊರಿನಲ್ಲಿ ಡಂಗೂರ ಸಾರಿಸಿ, ರೈತರೊಂದಿಗೆ ಸಭೆ ನಡೆಸಿ, ಚರ್ಚಿಸಲಾಗಿದೆ. ಹೊಸದೊಂದು ಪರಿಕಲ್ಪನೆ ಯಶಸ್ವಿಯಾಗಲು ಸ್ಥಳೀಯ ಆಡಳಿತ, ಶಾಸಕರು ಮತ್ತು ರೈತರು ಮನಸ್ಸು ಮಾಡಬೇಕು. ಇದು ಫಲಪ್ರದವಾದರೆ, ಇನ್ನಷ್ಟು ಇಂತಹ ಹಾಸ್ಟೆಲ್‌ಗಳು ಆರಂಭ ಮಾಡಲು ಪ್ರೇರಣೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.