ADVERTISEMENT

ವಾಣಿಜ್ಯ ಉದ್ದೇಶಕ್ಕೆ ಅಂತರ್ಜಲ: ಕೇಂದ್ರ ಸರ್ಕಾರ, ಸಿಪಿಸಿಬಿಗೆ ಎನ್‌ಜಿಟಿ ನೋಟಿಸ್‌

ಪಿಟಿಐ
Published 13 ಅಕ್ಟೋಬರ್ 2020, 11:11 IST
Last Updated 13 ಅಕ್ಟೋಬರ್ 2020, 11:11 IST
ಅಂತರ್ಜಲಕ್ಕಾಗಿ ಕೊಳವೆಬಾವಿ ಕೊರೆಯುತ್ತಿರುವುದರ ಪ್ರಾತಿನಿಧಿಕ ಚಿತ್ರ
ಅಂತರ್ಜಲಕ್ಕಾಗಿ ಕೊಳವೆಬಾವಿ ಕೊರೆಯುತ್ತಿರುವುದರ ಪ್ರಾತಿನಿಧಿಕ ಚಿತ್ರ    

ನವದೆಹಲಿ: ವಾಣಿಜ್ಯ ಉದ್ದೇಶಕ್ಕಾಗಿ ಅತಿಯಾಗಿ ಅಂತರ್ಜಲ ಬಳಕೆ ಮಾಡುವುದರಿಂದ ನದಿಗಳಲ್ಲಿ ನಿರಿನ ಹರಿವು ಕಡಿಮೆಯಾಗುವ ಜತೆಗೆ, ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಹಸಿರು ಪೀಠ, ವಾಣಿಜ್ಯ ಉದ್ದೇಶಕ್ಕಾಗಿ ಅಂತರ್ಜಲ ಬಳಕೆಗೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಮಂಗಳವಾರ ಕೇಂದ್ರ ಸರ್ಕಾರ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ನೀಡಿದೆ.

ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಹಸಿರು ನ್ಯಾಯಪೀಠ, ‘ಕೇಂದ್ರೀಯ ಅಂತರ್ಜಲ ಪ್ರಾಧಿಕಾರ, ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಅಂತರ್ಜಲ ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಇಂಥ ಪ್ರದೇಶದಲ್ಲಿ ಅಂತರ್ಜಲ ಬಳಕೆಯನ್ನು ಉದಾರೀಕರಣಗೊಳಿಸುವಂತೆ ಪದೇ ಪದೇ ಅಧಿಸೂಚನೆ ಹೊಡಿಸುತ್ತಿದೆ. ಇದು ಪ್ರಾಧಿಕಾರದ ಉದ್ದೇಶಕ್ಕೆ ವಿರುದ್ಧವಾಗಿದೆ‘ ಎಂದು ಅಭಿಪ್ರಾಯಪಟ್ಟಿತು.

ತಜ್ಞರ ಅಧ್ಯಯನಗಳ ಆಧಾರದ ಮೇಲೆ ನ್ಯಾಯಾಧಿಕರಣವು ನಿಗದಿಪಡಿಸಿದ ಸಮರ್ಪಕ ಪರಿಹಾರವನ್ನು ಮರುಪಡೆಯುವ ಮೂಲಕ ನಿಯಮಗಳ ಉಲ್ಲಂಘನೆಯನ್ನು ಪರಿಶೀಲಿಸಲು ಯಾವುದೇ ಪರಿಣಾಮಕಾರಿ ಕಾರ್ಯವಿಧಾನವಿಲ್ಲ ಎಂದು ಅದು ಹೇಳಿದೆ.

ADVERTISEMENT

ಇಲ್ಲಿ ಆಕ್ಷೇಪಿಸಲಾದ ಆದೇಶಕ್ಕೆ ರಾಷ್ಟ್ರಿಯ ಹಸಿರು ನ್ಯಾಯಮಂಡಳಿಯ ಕಾಯ್ದೆ 2010ರ ಸೆಕ್ಷನ್‌ 16 (ಜಿ) ಅಡಿ ಶಾಸನಬದ್ಧವಾಗಿ ಮೇಲ್ಮನವಿ ಸಲ್ಲಿಸಬಹುದು. ಆದ್ದರಿಂದ ಇದಕ್ಕೆ ಸರಿಯಾದ ಪರಿಹಾರವೆಂದರೆ ಮೇಲ್ಮನವಿ ಸಲ್ಲಿಸುವುದು. ಆದ್ದರಿಂದ ನಾವು ಈ ಅರ್ಜಿಯನ್ನು ಮನವಿ ಎಂದು ಬದಲಾಯಿಸಿ ಸಲ್ಲಿಸಲು ನಿರ್ದೇಶಿಸುತ್ತಿದ್ದೇವೆ.

ನೋಂದಣಿ ದಾಖಲೆ (ರಿಜಿಸ್ಟ್ರಿ)ಯಲ್ಲಿ ಈ ವಿಷಯವನ್ನು ಮೇಲ್ಮನವಿ ಎಂದು ನೋಂದಾಯಿಸಬಹುದು. ಇದರಲ್ಲಿ ಉಲ್ಲೇಖಿಸಲಾಗಿ ರುವ ಅಂಶಗಳನ್ನು ಗಮನಿಸಿದಾಗ ವಾದಿಸಲು ಯೋಗ್ಯವೆನಿಸುವ ವಿಷಯಗಳು ಇವೆ. ಮಾತ್ರವಲ್ಲ, ಈ ಅರ್ಜಿಯನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ. ಆದ್ದರಿಂದ ಈ ಮನವಿಯನ್ನು ಸ್ವೀಕರಿಸಿ ಜಲಶಕ್ತಿ ಸಚಿವಾಲಯಕ್ಕೆ ನೋಟಿಸ್‌ ನೀಡಿ ಎಂದು ನ್ಯಾಯಪೀಠ ಹೇಳಿತು.

ನ್ಯಾಯಪೀಠ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೂ ನೋಟಿಸ್‌ ನೀಡಿತು. ಜತೆಗೆ, ನೀರು ವಿರಳ ಸಂಪನ್ಮೂಲ. ಅದರ ಮೇಲೆ ಜೀವನವು ಅವಲಂಬಿತವಾಗಿದೆ. ಅಂಥ ಸಂಪನ್ಮೂಲವನ್ನು ಅತಿಯಾಗಿ ಬಳಸದಂತೆ ನಿಯಂತ್ರಿಸಬೇಕಿದೆ ಎಂದು ಪೀಠ ಹೇಳಿತು.

ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ, ಜಲಮರುಪೂರಣವನ್ನು ಖಾತ್ರಿಪಡಿಸುವಂತಹ ರಚನೆಗಳಿದ್ದರೆ, ಅದರ ಆಧಾರದ ಮೇಲೆಅಂತರ್ಜಲ ಬಳಕೆಗೆ ಅವಕಾಶ ನೀಡಬಹುದು ಎಂದು ಪೀಠ ಹೇಳಿದೆ.

ಪರಿಸರ ಕಾರ್ಯಕರ್ತ ದೇವಿದಾಸ್‌ ಖಾತ್ರಿ ಅವರು, ಕೇಂದ್ರೀಯ ಅಂತರ್ಜಲ ಪ್ರಾಧಿಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಸಿರು ನ್ಯಾಯಪೀಠ, ಸರ್ಕಾರ ಮತ್ತು ಸಿಪಿಸಿಬಿಗೆ ನೋಟಿಸ್ ನೀಡಿದೆ. ಅರ್ಜಿದಾರರು, ‘ನೀರಿನ ಕೊರತೆ ಇರುವ ಪ್ರದೇಶದಲ್ಲಿ ಅಂತರ್ಜಲವನ್ನು ಬಳಕೆ ಮಾಡುವುದು ಸುಸ್ಥಿರ ಅಭಿವೃದ್ಧಿಯ ತತ್ವಗಳಿಗೆ ವಿರುದ್ಧವಾದ ನಡೆ‘ ಎಂದು ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.