ADVERTISEMENT

Explainer | ಕೊರೊನಾ ಬಳಿಕ ಬದುಕೇ ಬದಲು

​ಪ್ರಜಾವಾಣಿ ವಾರ್ತೆ
Published 9 ಮೇ 2020, 1:59 IST
Last Updated 9 ಮೇ 2020, 1:59 IST
   
""
""

ಕೊರೊನಾ ವೈರಾಣು ಸೋಂಕು ನಮ್ಮ ನಿತ್ಯ ಜೀವನ ವಿಧಾನವನ್ನೇ ಬದಲಿಸಿದೆ. ಕೆಲವು ರೂಢಿಗಳನ್ನು ಜನರು ಅನಿವಾರ್ಯವಾಗಿ ತೊರೆದಿದ್ದರೆ, ಇನ್ನೂ ಕೆಲವನ್ನು ಅನಿವಾರ್ಯವಾಗಿ ಪಾಲಿಸಲೇಬೇಕಾದ ಒತ್ತಡದಲ್ಲಿ ಇದ್ದಾರೆ. ಶಿಕ್ಷಣ, ಕ್ರೀಡೆ, ಉದ್ಯೋಗದ ಸ್ವರೂಪದಲ್ಲಿ ಬದಲಾವಣೆ ಎಂಬುದು ನಿಯಮವೇ ಆಗಿಹೋಗಿದೆ. ಜನರ ಬದುಕಿನಲ್ಲಿ ಕೊರೊನಾ ತಂದಿರುವ ತಿರುವಿನಲ್ಲಿ ದೈನಂದಿನ ಜೀವನ ಹೊಸ ನಿಯಮಗಳಿಗೆ ಒಡ್ಡಿಕೊಂಡಿದೆ. ಕೊರೊನಾ ನಂತರದ ಬದುಕೂ ಅದರ ನೆರಳಲ್ಲಿಯೇ ಸಾಗಲಿದೆ. ಸರ್ಕಾರಗಳ ನೀತಿ ನಿರೂಪಣೆಗಳಲ್ಲಿಯೂ ಬದಲಾವಣೆ ನಿರೀಕ್ಷಿತ...

ಲಾಕ್‌ಡೌನ್‌ನಿಂದ ಆದ ಉದ್ಯೋಗ ನಷ್ಟ ಮತ್ತು ಇತರ ಸಂಕಷ್ಟದಿಂದಾಗಿ ಹಳ್ಳಿಗಳತ್ತ ವಲಸೆ ಆರಂಭವಾಗಿದೆ. ಕೊರೊನಾ ಸೋಂಕು ಹರಡುವ ಅಪಾಯವಿದ್ದರೂ, ಸರ್ಕಾರದ ಕಟ್ಟಾಜ್ಞೆ ಇದ್ದರೂ ಕಾರ್ಮಿಕರು ತಮ್ಮ ಹಳ್ಳಿಗಳತ್ತ ಮರಳಿದ್ದಾರೆ. ಮರಳುತ್ತಿದ್ದಾರೆ. ನಗರದ ಉದ್ಯೋಗ ಮತ್ತು ಬದುಕು ಅನಿಶ್ಚಿತ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ‘ತಮ್ಮ ಹಳ್ಳಿಗಳಲ್ಲಿ ಇದ್ದರೆ, ಹೇಗಾದರೂ ಬದುಕಬಹುದು’ ಎಂಬ ವಿಶ್ವಾಸ ಹಳ್ಳಿಗಳತ್ತ ಹೊರಟ ಜನರಿಂದ ವ್ಯಕ್ತವಾಗಿದೆ.

ಮತ್ತೆ ನಗರಕ್ಕೆ ವಾಪಸಾಗುವುದಿಲ್ಲ ಎಂದು ಹಲವರು ನಿಶ್ಚಯಿಸಿದ್ದಾರೆ. ‘ನನ್ನ ಮಗಳು ಹುಟ್ಟಿ 1 ತಿಂಗಳು ಆಗಿದೆ. ಅವಳನ್ನು ನೋಡದೆಯೇ ಸತ್ತುಹೋಗುತ್ತೇನೆಯೇ ಅಂತ ಭಯ ಆಗ್ತಿದೆ. ದಯವಿಟ್ಟು ನನ್ನನ್ನು ಊರಿಗೆ ಕಳುಹಿಸಿಬಿಡಿ. ಮತ್ತೆ ಇಲ್ಲಿಗೆ ಬರೋದಿಲ್ಲ’ ಎಂದು ಅಂಗಲಾಚುತ್ತಾರೆ ಕಟ್ಟಡ ನಿರ್ಮಾಣ ಕಾರ್ಮಿಕ ಷಣ್ಮುಗಂ. ಬೆಂಗಳೂರಿನ ಜಯನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸಿಲುಕಿಕೊಂಡಿರುವ ಷಣ್ಮುಗಂ ಅವರದ್ದು ತಮಿಳುನಾಡಿನ ಹೊಸೂರಿನ ಬಳಿಯ ಒಂದು ಗ್ರಾಮ. ಲಾಕ್‌ಡೌನ್ ಘೋಷಣೆಯಾದಾಗಿನಿಂದ ಮೇಸ್ತ್ರಿಯಿಂದ ಅವರಿಗೆ ಯಾವ ಸವಲತ್ತೂ ಸಿಕ್ಕಿಲ್ಲ. ಅವರಿಗೆ ಪಡಿತರ ನೀಡಲು ಹೋದ ಬಿಬಿಎಂಪಿ ಸಿಬ್ಬಂದಿ ಎದುರು ತೋಡಿಕೊಂಡ ಅಳಲು ಇದು. ಈ ಅನಿಶ್ಚಿತ ಸ್ಥಿತಿ ಮತ್ತೆ ಬಂದರೆ ಎಂಬ ಭಯ ಷಣ್ಮುಗಂ ಅವರಲ್ಲಿದೆ. ನಗರದಿಂದ ವಲಸೆ ಹೋಗುತ್ತಿರುವ ಹಲವು ಕಾರ್ಮಿಕರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ADVERTISEMENT

ನಗರದಿಂದ ಹೊರಟು ಈಗಾಗಲೇ ಹಳ್ಳಿ ಸೇರಿರುವವರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕೃಷಿ ಮಾಡುತ್ತೇವೆಯೇ ಹೊರತು, ನಗರಕ್ಕೆ ಬರುವುದಿಲ್ಲ ಎಂಬ ಮಾತನ್ನು ಹಲವರು ಆಡಿದ್ದಾರೆ. ‘ಲಾಕ್‌ಡೌನ್‌ ಬಂದಾಗಿನಿಂದ ತರಕಾರಿ, ದಿನಸಿ ವ್ಯಾಪಾರ ನಡೆದೇ ನಡೆಯಿತು. ಬೇರೆಲ್ಲಾ ವ್ಯವಹಾರ ನಿಲ್ಲಿಸಲಾಗಿತ್ತು. ಮನುಷ್ಯ ಇರುವವರೆಗೂ ತರಕಾರಿ ದಿನಸಿಗೆ ಬೇಡಿಕೆ ಇದ್ದೇ ಇರುತ್ತದೆ. ನಗರಕ್ಕೆ ಹೋಗದೆ, ಕೃಷಿ ಮಾಡುತ್ತೇನೆ’ ಎನ್ನುತ್ತಾರೆ ರಾಮನಗರ ಜಿಲ್ಲೆಯ ಹಳ್ಳಿಯೊಂದರ ಮಧು. ಅವರ ಹಳ್ಳಿಯ ಉಳಿದ ಯುವಕರೂ ಇದೇ ಮಾತನ್ನಾಡುತ್ತಿದ್ದಾರೆ. ತಕ್ಷಣಕ್ಕೆ ಕೂಲಿ ಸಿಗದೇ ಇದ್ದರೂ, ಸರ್ಕಾರ ನೀಡುವ ಪಡಿತರದಿಂದ ಜೀವನ ನಡೆಸಬಹುದು ಎಂಬುದು ಅವರ ನಿರ್ಧಾರವನ್ನು ಗಟ್ಟಿಗೊಳಿಸಿದೆ.

ಹೀಗೆ ಹಳ್ಳಿಗಳತ್ತ ಮರಳಿದ ಕಾರ್ಮಿಕ ಸಮುದಾಯ ನಗರಕ್ಕೆ ವಾಪಸಾಗದೇ ಇದ್ದರೆ, ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರ ಕೊರತೆ ಎದುರಾಗಲಿದೆ. ಕಟ್ಟಡ ಕಾರ್ಮಿಕರು ಸಿಗದೇ ಹೋದರೆ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳುತ್ತದೆ. ಇದಕ್ಕಾಗಿ ಕಾರ್ಮಿಕರ ರೈಲನ್ನು ರದ್ದುಪಡಿಸಿ ಎಂಬ ಬಿಲ್ಡರ್‌ಗಳ ಬೇಡಿಕೆ ಹಿಂದೆ ಇದ್ದ ಭಯವೂ ಇದೇ ಆಗಿತ್ತು. ಕಾರ್ಮಿಕರ ರೈಲು ರದ್ದುಪಡಿಸುವ ಮೂಲಕ ಕರ್ನಾಟಕ ಸರ್ಕಾರ ಪೇಚಿಗೆ ಸಿಲುಕಿತ್ತು. ಮುಂದೆ ಉದ್ಯೋಗ ಸಿಗುತ್ತದೆ ಎಂಬುದಕ್ಕಿಂತ, ಹಳ್ಳಿಗಳಲ್ಲಿ ಸುರಕ್ಷಿತವಾಗಿ ಬದುಕಬಹುದು ಎಂಬುದು ಕಾರ್ಮಿಕರ ನಂಬಿಕೆ. ಹೀಗಾಗಿ ರದ್ದುಪಡಿಸಿದ್ದ ರೈಲುಗಳನ್ನು ಸರ್ಕಾರ ಮತ್ತೆ ಆರಂಭಿಸಬೇಕಾಯಿತು.

ನಗರದ ಸಣ್ಣಪುಟ್ಟ ಕೈಗಾರಿಕೆಗಳೂ ಈಗಾಗಲೇ ಈ ಬಿಸಿ ಎದುರಿಸುತ್ತಿವೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಣ್ಣಪುಟ್ಟ ಗಾರ್ಮೆಂಟ್ಸ್‌ಗಳು ಕಾರ್ಯಾರಂಭ ಮಾಡಿವೆ. ಆದರೆ, ಕಾರ್ಮಿಕರ ಕೊರತೆ ಎದುರಿಸುತ್ತಿವೆ. ‘ಲೆಗ್ಗಿನ್ಸ್‌ ಹೊಲಿಯಲು ತರಿಸಿದ್ದ ಹತ್ತಿಯ ಬಟ್ಟೆ ಸಾಕಷ್ಟು ಉಳಿದಿದೆ. ಈಗ ಲೆಗ್ಗಿನ್ಸ್‌ಗೆ ಬೇಡಿಕೆ ಇಲ್ಲ. ಮಾಸ್ಕ್‌ ತಯಾರಿಸಿ, ನಾವೇ ಮಾರಾಟ ಮಾಡಬಹುದು. ಅದಕ್ಕೆ ಬೇಡಿಕೆ ಇದೆ. ಆದರೆ, ಕಾರ್ಮಿಕರೇ ಇಲ್ಲದ ಕಾರಣ ತಯಾರಿಕೆ ಆರಂಭಿಸಲು ಸಾಧ್ಯವಾಗಿಲ್ಲ. ಷೆಡ್ ಬಾಡಿಗೆ ಕಟ್ಟುವಷ್ಟೂ ತಯಾರಿಕೆ ನಡೆಯುತ್ತಿಲ್ಲ. ಗಾರ್ಮೆಂಟ್ಸ್ ಮುಚ್ಚುವ ಬಗ್ಗೆ ಯೋಚಿಸುತ್ತಿದ್ದೇನೆ’ ಎನ್ನುತ್ತಾರೆ ಹೆಗ್ಗನಹಳ್ಳಿಯ ಮಂಜುನಾಥ್. ಲಾಕ್‌ಡೌನ್‌ಗೂ ಮೊದಲು ಅವರ ಗಾರ್ಮೆಂಟ್ಸ್‌ನಲ್ಲಿ 60 ಜನ ದುಡಿಯುತ್ತಿದ್ದರು. ಈಗ ಕೆಲಸಕ್ಕೆ ಬರುತ್ತಿರುವ ಕಾರ್ಮಿಕರ ಸಂಖ್ಯೆ 8ಕ್ಕೆ ಇಳಿದಿದೆ. ಸಿದ್ಧಉಡುಪು ಕಾರ್ಖಾನೆಗಳ ಕೇಂದ್ರವಾಗಿರುವ ಈ ಪ್ರದೇಶದಲ್ಲಿದ್ದ ಬಹುತೇಕ ಕಾರ್ಮಿಕರು ವಲಸೆ ಹೋಗಿದ್ದಾರೆ. ತಯಾರಿಕೆ ಆರಂಭಿಸಲು ಅನುಮತಿ ದೊರೆತರೂ, ತಯಾರಿಕೆ ಸಾಧ್ಯವಾಗುತ್ತಿಲ್ಲ.

ಹೋಟೆಲ್‌ ಉದ್ದಿಮೆಗೆ ಹೊಡೆತ:ಲಾಕ್‌ಡೌನ್‌ನ ನಂತರ ಅತಿದೊಡ್ಡ ಹೊಡೆತ ಬೀಳುವುದು ಹೋಟೆಲ್‌ ಉದ್ಯಮಕ್ಕೆ ಎಂದು ಸಮೀಕ್ಷೆಯೊಂದು ಹೇಳಿದೆ. ಹಳ್ಳಿಗಳಿಂದ ನಗರಕ್ಕೆ ಬರುವವರ ಸಂಖ್ಯೆ ಕಡಿಮೆ ಆಗುವುದರಿಂದ, ಹೋಟೆಲ್‌ಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗುತ್ತದೆ. ಲಾಕ್‌ಡೌನ್‌ ಮುಗಿದ ನಂತರ ಸುರಕ್ಷತೆ ದೃಷ್ಟಿಯಿಂದ ಬಹುತೇಕ ಮಂದಿ ಮನೆಊಟವನ್ನೇ ಅವಲಂಬಿಸುವ ಸಾಧ್ಯತೆ ಅಧಿಕವಾಗಿದೆ. ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಜಾರಿಯಾದರೂ, ಹೋಟೆಲ್‌ಗಳಿಗೆ ಗ್ರಾಹಕರು ಇಲ್ಲವಾಗುತ್ತಾರೆ.ಹೀಗೇನಾದರೂ ಆದರೆ, ಹೋಟೆಲ್‌ಗಳ ವಹಿವಾಟೇ ಕುಸಿಯುತ್ತದೆ ಎಂದು ಅಧ್ಯಯನ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಹೋಟೆಲ್‌ಗಳೂ ಕಾರ್ಮಿಕರ ಕೊರತೆ ಎದುರಿಸುವ ಅಪಾಯವಿದೆ. ನಗರ ಪ್ರದೇಶಗಳ ಬಹುತೇಕ ಸಣ್ಣಪುಟ್ಟ ಹೋಟೆಲ್‌ಗಳಲ್ಲಿ ದುಡಿಯುವವರು ತಮ್ಮ ಊರುಗಳಿಗೆ ಮರಳಿದ್ದಾರೆ. ಅವರು ನಗರಕ್ಕೆ ವಾಪಸ್ ಬರದಿದ್ದರೆ, ಹೋಟೆಲ್ ನಡೆಸುವುದು ಕಷ್ಟವಾಗುತ್ತದೆ. ಹೀಗೇನಾದರು ಆದರೆ ಹೋಟೆಲ್‌ಗಳನ್ನು ಮುಚ್ಚಬೇಕಾಗುತ್ತದೆ. ಲಾಕ್‌ಡೌನ್‌ ಮುಗಿದರೂ, ಶೇ 30ರಷ್ಟು ಹೋಟೆಲ್‌ಗಳು ಕಾರ್ಯಾರಂಭ ಮಾಡುವುದಿಲ್ಲ ಎಂದು ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿದೆ.

ಪ್ರೇಕ್ಷಕರಿಲ್ಲದ ಕ್ರೀಡೆ
ಕ್ರೀಡೆಗಳ ಸ್ವರೂಪ ಬದಲಾವಣೆಗೆ ಈಗಾಗಲೆ ಮುನ್ನುಡಿ ಬರೆಯಲಾಗಿದೆ. ಕೆಲವು ಆಟಗಳು ಆನ್‌ಲೈನ್ ಆಗಿದ್ದರೆ, ಸಾಂಪ್ರದಾಯಿಕ ಕ್ರೀಡೆಗಳು ಪ್ರೇಕ್ಷಕರಿಲ್ಲದೇ ನಡೆಯುತ್ತಿವೆ. ದಕ್ಷಿಣ ಕೊರಿಯಾದಲ್ಲಿ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಫುಟ್‌ಬಾಲ್ ಆಟಕ್ಕೆ ಮತ್ತೆ ಜೀವ ಬಂದಿದೆ. ಆದರೆ ಗೋಲು ಗಳಿಸಿದಾಗ ಇರುತ್ತಿದ್ದ ಸಂಭ್ರಮ, ಆಟಗಾರರ ಮಧ್ಯೆ ಹಸ್ತಲಾಘವ, ಮಾತುಕತೆ ಮಾತ್ರ ಇಲ್ಲ. ಸಂಭ್ರಮಿಸಲು ಕ್ರೀಡಾಂಗಣದಲ್ಲಿ ಪ್ರೇಕ್ಷಕರೇ ಇಲ್ಲ. ಟಿ.ವಿಯಲ್ಲಿ ಫುಟ್‌ಬಾಲ್ ನೋಡಿ ಸಂಭ್ರಮಿಸುವ ದಿನ ಬಂದಿದೆ. ತೈವಾನ್, ಬೆಲಾರಸ್‌ನಲ್ಲೂ ಪ್ರೇಕ್ಷಕರಿಲ್ಲದ ಆಟಗಳು ನಡೆದಿವೆ. ಇದನ್ನು ಉಳಿದ ದೇಶಗಳು ಪಾಲಿಸಿದರೆ ಅಚ್ಚರಿಯಿಲ್ಲ. ಭಾರತದಲ್ಲೂ ಫುಟ್‌ಬಾಲ್ ಕಬಡ್ಡಿ, ಐಪಿಎಲ್‌ನಂತಹ ಟೂರ್ನಿಗಳು ನೆನೆಗುದಿಗೆ ಬಿದ್ದಿವೆ.

ಸ್ಥಳೀಯ ಸರಕಿಗೆ ಬೇಡಿಕೆ
ಇಷ್ಟು ದಿನ ಜಾಗತೀಕರಣಕ್ಕೆ ಒಡ್ಡಿಕೊಂಡಿದ್ದ ದೇಶಗಳು ಕೋವಿಡ್ ಸಹವಾಸದಿಂದ ದೇಶಿ ಉತ್ಪನ್ನಗಳಿಗೆ ಮರಳುವ ಸಾಧ್ಯತೆ ಇದೆ. ಸೋಂಕು ದೇಶದಿಂದ ದೇಶಕ್ಕೆ ಪಸರಿಸುವ ಆತಂಕ ಒಂದೆಡೆಯಾದರೆ, ಸುಂಕ ಹೆಚ್ಚಳ ಮತ್ತೊಂದು ಹೊಡೆತ. ಹೀಗಾಗಿ ಸರಕು ವಿತರಣಾ ವ್ಯವಸ್ಥೆಯಲ್ಲಿ ಸ್ಥಳೀಯ ಉತ್ಪನ್ನಗಳು ಜಾಗ ಪಡೆಯುವ ಸಾಧ್ಯತೆಯಿದೆ. ಸ್ಥಳೀಯವಾಗಿ ತಂತ್ರಜ್ಞಾನ ಅಭಿವೃದ್ಧಿಗೂ ವೇಗ ದೊರೆಯಬಹುದು

ಅಂಗಡಿಗಿಂತ ಆನ್‌ಲೈನ್ ವಾಸಿ
ಇ–ಕಾಮರ್ಸ್ ಹೊಡೆತದಿಂದ ಅಂಗಡಿಗಳು ಈಗಾಗಲೇ ತೀವ್ರ ಸ್ಪರ್ಧೆ ಎದುರಿಸುತ್ತಿವೆ. ಇದೀಗ ಕೊರೊನಾ ಸೋಂಕು ಪಸರಿಸುವಿಕೆಯಿಂದ ಪಾರಾಗಲು ಜನರು ಅಂಗಡಿಗಳಿಗೆ ಬದಲಾಗಿ ಆನ್‌ಲೈನ್ ಶಾಪಿಂಗ್‌ ಮೊರೆ ಹೋಗುವ ಸಾಧ್ಯತೆ ಹೆಚ್ಚು. ಇದರಿಂದ ಅಂಗಡಿಗಳ ವ್ಯಾಪಾರ ತೊಂದರೆಗೆ ಸಿಲುಕುವ ಅಪಾಯವಿದೆ

ಕೈತೊಳೆಯುವ ಗೀಳು
ಯಾರನ್ನಾದರೂ, ಏನನ್ನಾದರೂ ಮುಟ್ಟಿದರೆ ಕೈ ತೊಳೆಯುವ, ಹೊರಹೋಗಿ ಬಂದ ಕೂಡಲೇ ಕೈ ತೊಳೆಯುವ ಅಭ್ಯಾಸವು ಮುಂದಿನ ದಿನಗಳಲ್ಲೂ ರೂಢಿಯಾಗಿ ಬದಲಾಗಲಿದೆ.‌ ಸ್ಯಾನಿಟೈಸರ್, ಸೋಪು, ಸೋಪುನೀರಿನಿಂದ ಆಗಾಗ್ಗೆ ಕೈ ತೊಳೆಯುವ ಪ್ರಕ್ರಿಯೆಯು ಪದ್ಧತಿಯಾಗಿ, ಗೀಳಾಗಿ ಮಾರ್ಪಟ್ಟರೂ ಅಚ್ಚರಿಯಿಲ್ಲ.

ಹಸ್ತಲಾಘವಕ್ಕೆ ಬ್ರೇಕ್
ಪರಸ್ಪರ ಕೈಕುಲುಕಿ ಶುಭಾಶಯ ಹೇಳಲೂ ಕೋವಿಡ್ ಅಡ್ಡಿಯಾಗಿದೆ. ಸೋಂಕಿತರೊಂದಿಗೆ ಹಸ್ತಲಾಘವ ಮಾಡಿದರೆ ಕೊರೊನಾ ವೈರಾಣು ಹಬ್ಬುತ್ತದೆ. ಜಗತ್ತಿನ ವಿವಿಧ ದೇಶಗಳ ನಾಯಕರು ಕೈಕುಲುಕುವ ಪದ್ಧತಿಗೆ ಈಗಾಗಲೇ ತಿಲಾಂಜಲಿ ಹೇಳಿ, ನಮಸ್ತೆ ಎಂದು ಕೈಮುಗಿದು ಶುಭಾಶಯ ವಿನಿಮಯ ಮಾಡಲು ಶುರು ಮಾಡಿದ್ದಾರೆ. ಇದು ಜಗತ್ತಿನೆಲ್ಲೆಡೆ ಕೆಲ ಸಮಯದವರೆಗಾದರೂ ರೂಢಿಯಲ್ಲಿರಲಿದೆ.

ಮಾಸ್ಕ್ ಕಡ್ಡಾಯ
ಕೊರೊನಾ ನಿಯಂತ್ರಣಕ್ಕೆ ಬಂದಿರುವ ಕೆಲವು ದೇಶಗಳೂ ಸೇರಿದಂತೆ ಜಗತ್ತಿನ ಎಲ್ಲ ದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಪ್ರಯಾಣ, ಕಚೇರಿ ಕೆಲಸ, ಹೊರಗಡೆ ಹೋದಾಗ ಮುಖಗವಸು ಧರಿಸುವುದು ಜೀವನದ ಭಾಗವೇ ಆಗಲಿದೆ. ವೈರಾಣು ತೀವ್ರತೆ ಕಡಿಮೆಯಾದರೂ ಸಹ ಮಾಸ್ಕ್ ಬಳಕೆಯನ್ನು ಮುಂದುವರಿಸಲು ಹಲವು ದೇಶಗಳು ನಿರ್ಧರಿಸಿವೆ. ಸೋಂಕು ಕಡಿಮೆಯಾದರೂ, ಅದರ ಭೀತಿ ಇದ್ದೇ ಇರುತ್ತದೆ. ಮತ್ತೆ ಅದು ಸ್ಫೋಟಗೊಳ್ಳದಂತೆ ತಡೆಯಲು ಇದು ಸದ್ಯಕ್ಕಿರುವ ಪರಿಹಾರ.ಮಾಸ್ಕ್ ಧರಿಸದಿದ್ದರೆ,ಉಗುಳಿದರೆ ದಂಡ ವಿಧಿಸಲಾಗುತ್ತಿದೆ. ಈ ನಿಯಮ ಇನ್ನಷ್ಟು ಸಮಯ ಮುಂದುವರಿಯುವ ಸಾಧ್ಯತೆಯಿದೆ.

ಆನ್‌ಲೈನ್ ಶಿಕ್ಷಣ
ಶಾಲಾ ಮಕ್ಕಳು ಪರಸ್ಪರ ಸ್ಪರ್ಶಿಸುವ, ಮಾತನಾಡುವ, ಕುಳಿತುಕೊಳ್ಳುವ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ವೈರಾಣು ಹರಡುವ ಅಪಾಯ ಇರುತ್ತದೆ. ಅಂತರ ಕಾಪಾಡುಕೊಳ್ಳುವುದು ಬಹು ಮುಖ್ಯ. ಶಾಲಾ ಮಕ್ಕಳನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸುದು ಸಹ ಅಷ್ಟೇ ಕಠಿಣ ಸವಾಲು. ಸೋಂಕಿನ ಪ್ರಭಾವ ತಗ್ಗುವವರೆಗೆ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ಶಾಲೆಗಳು ಬಂದ್ ಆಗಿರುವ ಕಾರಣ ಬಹುತೇಕ ದೇಶಗಳು ತಾತ್ಕಾಲಿಕವಾಗಿ ಆನ್‌ಲೈನ್ ಶಿಕ್ಷಣಕ್ಕೆ ಮೊರೆ ಹೋಗಿವೆ. ಟ್ಯೂಷನ್, ಕೋಚಿಂಗ್‌ ವೇಳೆ ಆನ್‌ಲೈನ್ ಸೂಕ್ತ.

ಅನಗತ್ಯ ಓಡಾಟ ಇನ್ನಿಲ್ಲ
ವಾರಾಂತ್ಯಗಳಲ್ಲಿ ಜನರು ಸ್ನೇಹಿತರು, ಕುಟುಂಬದ ಜೊತೆ ಸುತ್ತಾಡುವುದು ಸಾಮಾನ್ಯ. ಆದರೆ ಕೊರೊನಾ ಬಳಿಕ ಇದು ಕಷ್ಟ.ಹೊರಗಡೆ ಅನಗತ್ಯ ಓಡಾಟ ತಗ್ಗಲಿದೆ. ಜನಸಂದಣಿಯಿಂದ ದೂರವಿರುವ ಅಭ್ಯಾಸ ಬೆಳೆಯಬಹುದು. ಪ್ರಯಾಣದ ವೇಳೆ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ.

ಅಮೆರಿಕದ ಕಾರ್ಮಿಕ, ಆರೋಗ್ಯ ಮತ್ತು ಮಾನವ ಸೇವೆಗಳ ಸಂಸದೀಯ ಉಪಸಮಿತಿಯು ಕೋವಿಡ್‌–19 ಸ್ಪಂದನೆಗೆ ಕುರಿತಂತೆ ಇತ್ತೀಚೆಗೆ ವಿಚಾರಣೆ ನಡೆಸಿತ್ತು. ಅದಕ್ಕಾಗಿ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. – ಎಎಫ್‌ಪಿ ಚಿತ್ರ

ಕೆಲಸದ ವಿನ್ಯಾಸ
ಮನೆಯಿಂದಲೇ ಕಚೇರಿ ಕೆಲಸ ಇನ್ನಷ್ಟು ದಿನ ವಿಸ್ತರಣೆಯಾಗುವ ಸಾಧ್ಯತೆಯಿದೆ. ಕೆಲವು ನೌಕರರಿಗೆ ಇದನ್ನು ಖಾಯಂ ಮಾಡುವ ಚಿಂತನೆಯನ್ನು ಹಲವು ಸಂಸ್ಥೆಗಳು ನಡೆಸಿವೆ. ಕಚೇರಿಯಲ್ಲಿ ಉದ್ಯೋಗಿಗಳು ಕುಳಿತುಕೊಳ್ಳುವ ಸ್ಥಳದ ವಿನ್ಯಾಸ ಬದಲಾಗಬಹುದು. ಕಚೇರಿಗಳಲ್ಲಿ ಸಭೆ, ಸಮಾರಂಭಗಳಲ್ಲಿಅಂತರ ಕಾಯ್ದುಕೊಳ್ಳುವುದು ಪದ್ಧತಿಯಾಗಿ ಬದಲಾಗುವ ಸಂಭವವಿದೆ.

ಆರೋಗ್ಯ, ವಿಮೆಗೆ ಆದ್ಯತೆ
ಕೊರೊನಾದಿಂದ ಕಷ್ಟ ಎದುರಿಸಿರುವ ಜನರು ಈಗಾಗಲೇ ತಮ್ಮ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಲು ಆರಂಭಿಸಿದ್ದಾರೆ. ಹೆಲ್ತ್‌ಕೇರ್ ಹಿಂದೆಂದಿಗಿಂತಲೂ ಪ್ರಾಮುಖ್ಯತೆ ಪಡೆಯಲಿದೆ. ಆರೋಗ್ಯ ವಿಮೆ ಆದ್ಯತೆಯ ವಿಷಯವಾಗಲಿದೆ

ಕಾಡಲಿದೆ ನಿರುದ್ಯೋಗ
ಲಾಕ್‌ಡೌನ್ ಪರಿಣಾಮವಾಗಿ ಏಪ್ರಿಲ್ ತಿಂಗಳೊಂದರಲ್ಲೇ ದೇಶದ ಸುಮಾರು 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಖಾಸಗಿ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿದೆ. ಬರುವ ದಿನಗಳಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಬಾಗಿಲು ಹಾಕಲಿದ್ದು, ಇನ್ನಷ್ಟು ಉದ್ಯೋಗ ನಷ್ಟವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ

ಏಪ್ರಿಲ್‌ನಲ್ಲಿ ಉದ್ಯೋಗ ಕಳೆದುಕೊಂಡವರು

9.13 ಕೋಟಿ:‌ಸಣ್ಣ ವರ್ತಕರು ಮತ್ತು ಕಾರ್ಮಿಕರು

1.82 ಕೋಟಿ:ಸ್ವಉದ್ಯೋಗಿಗಳು/ಉದ್ಯಮಿಗಳು

1.78 ಕೋಟಿ:ವೇತನ ಪಡೆಯುವವರು

58 ಲಕ್ಷ:ರೈತರು


* ನಿರುದ್ಯೋಗ ದರ ಶೇ 27.1ಕ್ಕೆ ಏರಿಕೆಯಾಗಿದ್ದು, ಗರಿಷ್ಠ ದರ ದಾಖಲಿಸಿದೆ.

* ಭಾರತದ ನಿರುದ್ಯೋಗ ದರ ಅಮೆರಿಕಕ್ಕಿಂತ ನಾಲ್ಕು ಪಟ್ಟು ಹೆಚ್ಚಿದೆ.

ಆಧಾರ: ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.