ADVERTISEMENT

ಆಳ–ಅಗಲ | ಉಸಿರು ಕಸಿದ ವೈಮಾನಿಕ ದುರಂತ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 23:53 IST
Last Updated 28 ಜನವರಿ 2026, 23:53 IST
   
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಹಾಗೂ ಇತರ ನಾಲ್ವರು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಳೆದ ವರ್ಷದ ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಮೃತಪಟ್ಟಿದ್ದರು. ಬುಧವಾರದ ಅಪಘಾತವು ಆ ದುರ್ಘಟನೆಯನ್ನು ಮತ್ತೆ ನೆನಪಿಸಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್‌ ಅಪಘಾತದಲ್ಲಿ ಹಲವರು ರಾಜಕೀಯ ನಾಯಕರು ಹಾಗೂ ಗಣ್ಯ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಅವರಲ್ಲಿ ಪ್ರಮುಖರ ವಿವರಗಳನ್ನು ಇಲ್ಲಿ ನೀಡಲಾಗಿದೆ

ಹೋಮಿ ಭಾಭಾ (1966)

ದೇಶದ ಖ್ಯಾತ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್‌ ಭಾಭಾ ಅವರು 1966ರ ಜನವರಿ 24ರಂದು ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. ಜಿನೀವಾದಲ್ಲಿರುವ ವಾಯು ಸಂಚಾರ ನಿಯಂತ್ರಣ ಕೇಂದ್ರದೊಂದಿಗಿನ (ಎಟಿಸಿ) ಸಂವಹನದಲ್ಲಿ ಆದ ತಪ್ಪಿನಿಂದಾಗಿ ಯುರೋಪ್‌ನ ಆಲ್ಫ್ಸ್‌ ಪರ್ವತ ಶ್ರೇಣಿಯ ಮೌಂಟ್‌ ಬ್ಲಾಂಕ್‌ ಶಿಖರದಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು.

ಗುರುನಾಮ್‌ ಸಿಂಗ್‌ ಮತ್ತು ಮೋಹನ್‌ ಕುಮಾರಮಂಗಲಂ (1973)

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಗುರುನಾಮ್‌ ಸಿಂಗ್‌ ಮತ್ತು ಕೇಂದ್ರದ ಉಕ್ಕು ಮತ್ತು ಗಣಿ ಸಚಿವರಾಗಿದ್ದ ಮೋಹನ್‌ ಕುಮಾರಮಂಗಲಂ ಅವರು 1973ರ ಮೇ 31ರಂದು ದೆಹಲಿಯಲ್ಲಿ ಸಂಭವಿಸಿದ ಇಂಡಿಯನ್ ಏರ್‌ಲೈನ್ಸ್‌ ವಿಮಾನ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಬೋಯಿಂಗ್‌ 737 ವಿಮಾನವು ಚೆನ್ನೈನಿಂದ ದೆಹಲಿಗೆ ತೆರಳುತ್ತಿತ್ತು. ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿಯುವುದಕ್ಕೂ ಮೊದಲು ಪತನಗೊಂಡಿತ್ತು.

ಸಂಜಯ್‌ ಗಾಂಧಿ (1980)

ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮಗ ಸಂಜಯ್‌ ಗಾಂಧಿ ಅವರು 1980ರ ಜೂನ್‌ 23ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ದೆಹಲಿ ಫ್ಲೈಯಿಂಗ್ ಕ್ಲಬ್‌ನ ವಿಮಾನವನ್ನು ಸ್ವತಃ ವಿಮಾನ ಚಲಾಯಿಸುತ್ತಿದ್ದ ಅವರು ಸಫ್ದರ್‌ಜಂಗ್‌ ವಿಮಾನ ನಿಲ್ದಾಣದ ಬಳಿ ಸಾಹಸ ಪ್ರದರ್ಶನ ನೀಡುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿತ್ತು.

ADVERTISEMENT

ಡೆರಾ ನಾಟುಂಗ್‌ (2001)

ಕಾಂಗ್ರೆಸ್‌ ನಾಯಕ ಮತ್ತು ಅರುಣಾಚಲ ಪ್ರದೇಶದ ಶಿಕ್ಷಣ ಸಚಿವರಾಗಿದ್ದ ಡೆರಾ ನಾಟುಂಗ್‌ ಅವರು 2001ರ ಮೇ 8ರಂದು ಪವನ್‌ ಹನ್ಸ್‌ ಹೆಲಿಕಾಪ್ಟರ್‌ನಲ್ಲಿ ಇಟಾನಗರದಿಂದ ಪಶ್ಚಿಮ ಕಾಮೆಂಗ್‌ಗೆ ತೆರಳುತ್ತಿದ್ದಾಗ, ಪ್ರಕ್ಷುಬ್ಧ ವಾತಾವರಣದ ಕಾರಣದಿಂದ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು.

ಮಾಧವರಾವ್‌ ಸಿಂಧಿಯಾ (2001)

2001ರ ಸೆಪ್ಟೆಂಬರ್‌ 30ರಂದು ಕಾನ್ಪುರದಲ್ಲಿ ಆಯೋಜಿಸಲಾಗಿದ್ದ ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸುವುದಕ್ಕಾಗಿ ಕಾಂಗ್ರೆಸ್‌ ಹಿರಿಯ ಮುಖಂಡ ಮಾಧವರಾವ್‌ ಸಿಂಧಿಯಾ ಅವರು ಖಾಸಗಿ ವಿಮಾನದಲ್ಲಿ ಪ್ರಯಾಣ ಹೊರಟಿದ್ದರು. ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಅವರಿದ್ದ 10 ಆಸನ ಸಾಮರ್ಥ್ಯದ ವಿಮಾನ ಅಪಘಾತಕ್ಕೀಡಾಗಿತ್ತು  

ಜಿ.ಎಂ.ಸಿ. ಬಾಲಯೋಗಿ (2002)

ತೆಲುಗುದೇಶಂ ಪಕ್ಷದ ನಾಯಕ ಮತ್ತು ಲೋಕಸಭಾ ಸ್ಪೀಕರ್‌ ಆಗಿದ್ದ ಜಿ.ಎಂ.ಸಿ. ಬಾಲಯೋಗಿ ಅವರು 2002 ಮಾರ್ಚ್‌ 3ರಂದು ಹೆಲಿಕಾಪ್ಟರ್‌ ಅಪಘಾತದಲ್ಲಿ ಅಸುನೀಗಿದ್ದರು. ಅವರು ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್‌ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೈಕಲೂರು ಬಳಿಯ ಕೆರೆಯಲ್ಲಿ ಪತನಗೊಂಡಿತ್ತು.

ಸಿಪ್ರಿಯನ್‌ ಸಂಗ್ಮಾ (2004)

ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರೀಯನ್‌ ಸಂಗ್ಮಾ ಹಾಗೂ ಇತರ ಒಂಬತ್ತು ಮಂದಿ ಪವನ್‌ ಹನ್ಸ್‌ ಹೆಲಿಕಾಪ್ಟರ್‌ನಲ್ಲಿ 2004ರ ಸೆಪ್ಟೆಂಬರ್‌ 22ರಂದು ಗುವಾಹಟಿಯಿಂದ ಶಿಲ್ಲಾಂಗ್‌ಗೆ ಪ್ರಯಾಣಿಸುತ್ತಿದ್ದಾಗ ಬಾರಾಪಾನೀ ಸರೋವರದ ಬಳಿ ಹೆಲಿಕಾಪ್ಟರ್‌ ಪತನಗೊಂಡು ಎಲ್ಲರೂ ಮೃತಪಟ್ಟಿದ್ದರು

ಕೆ.ಎಸ್‌.ಸೌಮ್ಯ (ಸೌಂದರ್ಯ) (2004)

ಬಹುಭಾಷಾ ನಟಿ ಮತ್ತು ಬಿಜೆಪಿ ನಾಯಕಿ, ಸೌಂದರ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್‌.ಸೌಮ್ಯ ಅವರು 2004ರ ಏಪ್ರಿಲ್‌ 17ರಂದು ಸಂಭವಿಸಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದರು. ತಮ್ಮ ಸಹೋದರನೊಂದಿಗೆ ಬೆಂಗಳೂರಿನಿಂದ ಕರೀಂನಗರಕ್ಕೆ ಅವರು ಹೊರಟಿದ್ದಾಗ, ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿತ್ತು.

ಒ.ಪಿ.ಜಿಂದಾಲ್‌ ಮತ್ತು ಸುರೇಂದರ್‌ ಸಿಂಗ್‌ (2005)

ಜಿಂದಾಲ್‌ ಸಮೂಹದ ಸಂಸ್ಥಾಪಕ ಮತ್ತು ಹರಿಯಾಣದ ಸಚಿವರಾಗಿದ್ದ ಒ.ಪಿ.ಜಿಂದಾಲ್‌ ಹಾಗೂ ಕೃಷಿ ಸಚಿವರಾಗಿದ್ದ ಸುರೇಂದರ್‌ ಸಿಂಗ್‌ ಅವರು 2005ರ ಮಾರ್ಚ್‌ 31ರಂದು ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದಾಗ, ಅವರಿದ್ದ ಹೆಲಿಕಾಪ್ಟರ್‌  ಉತ್ತರಪ್ರದೇಶದ ಸಹಾರನ್‌ಪುರದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು.

ವೈ.ಎಸ್‌.ರಾಜಶೇಖರ ರೆಡ್ಡಿ (2009) 

2009ರ ಸೆಪ್ಟೆಂಬರ್‌ 2ರಂದು ಕಾಂಗ್ರೆಸ್‌ ನಾಯಕ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಬೆಲ್‌ 430 ಹೆಲಿಕಾಪ್ಟರ್‌ ಪ್ರತಿಕೂಲ ಹವಾಮಾನದ ಕಾರಣದಿಂದ ನಲ್ಲಮಲ ಅರಣ್ಯದಲ್ಲಿ ಪತನಗೊಂಡಿತ್ತು. ನೆರೆಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ಅವರು ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದರು. 

ದೋರ್ಜಿ ಖಂಡು (2011)

ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಮತ್ತು ಇತರ ನಾಲ್ವರು 2011ರ ಏಪ್ರಿಲ್ 30ರಂದು ಸಂಭವಿಸಿದ್ದ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರು. ಖಂಡು ಹಾಗೂ ಇತರರು ತವಾಂಗ್‌ನಿಂದ ಇಟಾನಗರಕ್ಕೆ ತೆರಳುತ್ತಿದ್ದಾಗ ಹೆಲಿಕಾಪ್ಟರ್ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಪತನವಾಗಿತ್ತು. 

ಜನರಲ್ ಬಿಪಿನ್ ರಾವತ್ (2021)

ಭಾರತದ ಸೇನಾಪಡೆಗಳ ಮುಖ್ಯಸ್ಥರಾಗಿದ್ದ (ಸಿಡಿಎಸ್‌) ಜನರಲ್ ಬಿಪಿನ್ ರಾವತ್ ಅವರು 2021ರ ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಅವರು ಪತ್ನಿ ಮತ್ತು ಇತರ 11 ಜನರೊಂದಿಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಸೂಲೂರು ವಾಯುನೆಲೆಯಿಂದ ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಸೇನಾ ಕಾಲೇಜಿಗೆ ಪ್ರಯಾಣಿಸುತ್ತಿದ್ದಾಗ, ಪ್ರತಿಕೂಲ ಹವಮಾನದ ಕಾರಣದಿಂದ ಅಪಘಾತ ಸಂಭವಿಸಿತ್ತು. 

ವಿಜಯ್ ರೂಪಾಣಿ (2025)

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಜೂನ್ 2025ರ ಜೂನ್‌ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ್ದ ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್  ವಿಮಾನವು ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ನೂಕು ಬಲದ ಕೊರತೆಯಿಂದಾಗಿ ರನ್‌ವೇನಿಂದ ಕೂಗಳತೆ ದೂರದಲ್ಲಿದ್ದ ವೈದ್ಯಕೀಯ ಕಾಲೇಜಿನ ವಸತಿ ನಿಲಯದ ಕಟ್ಟಡಕ್ಕೆ ಅಪ್ಪಳಿಸಿತ್ತು.

ಸಣ್ಣ ವಿಮಾನ, ಹೆಲಿಕಾಪ್ಟರ್‌ ಪ್ರಯಾಣ ಸುರಕ್ಷಿತವೇ?

ವಾಣಿಜ್ಯ ಉದ್ದೇಶದ ದೊಡ್ಡ ವಿಮಾನಗಳಿಗೆ ಹೋಲಿಸಿದರೆ ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗುವ ಪ್ರಮಾಣ ಹೆಚ್ಚು. ಹಾಗಾಗಿ, ಅವುಗಳಲ್ಲಿ ಪ್ರಯಾಣ ಸುರಕ್ಷಿತವಲ್ಲ ಎಂಬ ವಾದ ಮೊದಲಿನಿಂದಲೂ ಇದೆ. ಹೆಲಿಕಾಪ್ಟರ್‌, ಪುಟ್ಟ ವಿಮಾನ ತಯಾರಿಕಾ ಕಂಪನಿಗಳು ಈ ವಾದವನ್ನು ತಳ್ಳಿ ಹಾಕುತ್ತಾ ಬಂದಿವೆ.

ಆದರೆ, ಈ ಕ್ಷೇತ್ರದಲ್ಲಿ ತೊಡಗಿಕೊಂಡವರು ಸಣ್ಣ ವಿಮಾನಗಳು/ಹೆಲಿಕಾಪ್ಟರ್‌ಗಳ ಅಪಘಾತಕ್ಕೆ ವಿವಿಧ ಕಾರಣಗಳನ್ನು ಪಟ್ಟಿ ಮಾಡುತ್ತಾರೆ 

  • ಪ್ರಯಾಣಿಕರ ವಿಮಾನಗಳು ತುಂಬಾ ಎತ್ತರದಲ್ಲಿ ಹಾರಾಡುವುದರಿಂದ (ಸರಾಸರಿ 30 ಸಾವಿರದಿಂದ 40 ಸಾವಿರ ಅಡಿಗಳಷ್ಟು ಎತ್ತರದಲ್ಲಿ) ಅವುಗಳ ಮೇಲೆ ಪ್ರತಿಕೂಲ ಹವಾಮಾನದ ಪರಿಣಾಮ ಹೆಚ್ಚು ಬೀರುವುದಿಲ್ಲ. ಆದರೆ, ಕಡಿಮೆ ಆಸನ ಸಾಮರ್ಥ್ಯವುಳ್ಳ ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಕಡಿಮೆ ಎತ್ತರದಲ್ಲಿ ಹಾರಾಡುತ್ತವೆ. ಹೀಗಾಗಿ ಅವುಗಳು ಪ್ರತಿಕೂಲ ಹವಾಮಾನದ ಸನ್ನಿವೇಶಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ 

  • ದೊಡ್ಡ ವಿಮಾನಗಳ ನಿರ್ಮಾಣದಲ್ಲಿ ಸುರಕ್ಷತೆಗೆ ಹೆಚ್ಚು ಮಹತ್ವ ಕೊಡಲಾಗುತ್ತದೆ. ಕಂಪನಿಗಳು ಹೆಚ್ಚು ಮುತುವರ್ಜಿಯಿಂದ ನಿರ್ವಹಣೆ ಮಾಡುತ್ತವೆ. ಆದರೆ, ಸಣ್ಣ ವಿಮಾನಗಳ ಮಾಲೀಕತ್ವ ಸಾಮಾನ್ಯವಾಗಿ ಸಣ್ಣ ಕಂಪನಿಗಳು/ಖಾಸಗಿ ವ್ಯಕ್ತಿಗಳ ಬಳಿ ಇರುತ್ತವೆ. ವಿಮಾನಯಾನ ಕಂಪನಿಗಳು ನಡೆಸುವ ಮಾದರಿಯಲ್ಲಿ ಇವುಗಳ ನಿರ್ವಹಣೆ ನಡೆಯುವುದಿಲ್ಲ  

  • ಪ್ರಯಾಣಿಕರ ವಿಮಾನಗಳಲ್ಲಿ ಅನುಭವಿ ಪೈಲಟ್‌ಗಳಿರುತ್ತಾರೆ. ಪೈಲಟ್‌ಗಳು ಕನಿಷ್ಠ ಇಬ್ಬರು ಇರುತ್ತಾರೆ. ಪುಟ್ಟ ವಿಮಾನ, ಹೆಲಿಕಾಪ್ಟರ್‌ಗಳನ್ನು ಚಲಾಯಿಸುವರು ಕಡಿಮೆ ಅನುಭವಿ ಪೈಲಟ್‌ಗಳಾಗಿರುತ್ತಾರೆ. ಮತ್ತು ಒಬ್ಬರೇ ಇರುತ್ತಾರೆ

  • ದೊಡ್ಡ ವಿಮಾನಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಎಂಜಿನ್‌ಗಳಿರುತ್ತವೆ. ಒಂದು ಎಂಜಿನ್‌ ನಿಷ್ಕ್ರಿಯಗೊಂಡರೂ ಇನ್ನೊಂದು ಅಥವಾ ಉಳಿದ ಎಂಜಿನ್‌ಗಳ ಸಹಾಯದಿಂದ ಸುರಕ್ಷಿತವಾಗಿ ಇಳಿಸಬಹುದು. ಬಹುತೇಕ ಸಣ್ಣ ವಿಮಾನಗಳಲ್ಲಿ ಇರುವುದು ಒಂದೇ ಎಂಜಿನ್‌. ತಾಂತ್ರಿಕ ದೋಷ ಕಂಡು ಬಂದರೆ ವಿಮಾನವನ್ನು ಸುರಕ್ಷಿತವಾಗಿ ಇಳಿಸುವುದು ಕಷ್ಟ

ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ತಯಾರಿಸಲಾಗಿರುವ ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಯಾವುದೇ ಪ್ರತಿಕೂಲ ಸನ್ನಿವೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲವು ಎಂಬ ವಾದವನ್ನೂ ಕಂಪನಿಗಳು ಮುಂದಿಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.