ಆಳ–ಅಗಲ: ಹಕ್ಕಿ ಜ್ವರದ ಬಗ್ಗೆ ಆತಂಕ ಬೇಡ– ಮಾಂಸ, ಮೊಟ್ಟೆ ತಿಂದರೆ ಸೋಂಕು ತಗಲದು
ದೇಶದ ಹಲವು ರಾಜ್ಯಗಳಲ್ಲಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸೋಂಕಿತ ಹಕ್ಕಿಗಳನ್ನು, ಕೋಳಿಗಳನ್ನು ನಾಶಪಡಿಸಲಾಗುತ್ತಿದೆ. ಅದರ ಜತೆಯಲ್ಲೇ ಸೋಂಕು ಮನುಷ್ಯರಿಗೆ ಹರಡುವ ಬಗ್ಗೆ ಮತ್ತು ಕೋಳಿ ಮಾಂಸ, ಮೊಟ್ಟೆ ತಿನ್ನುವ ಬಗ್ಗೆ ಜನರಲ್ಲಿ ಆತಂಕ ಮೂಡಿದೆ. ಆದರೆ, ಹಕ್ಕಿ ಜ್ವರದ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆಗಳು ಇವೆ. ತಜ್ಞರ ಪ್ರಕಾರ, ಬೇಯಿಸಿದ ಕೋಳಿ ಮಾಂಸ, ಮೊಟ್ಟೆಯನ್ನು ಜನ ಯಾವುದೇ ಆತಂಕವಿಲ್ಲದೆ ತಿನ್ನಬಹುದು. ಮಾಂಸ ಮತ್ತು ಮೊಟ್ಟೆಯನ್ನು ಹೇಗೆ ಬೇಯಿಸಬೇಕು, ಹೇಗೆ ಶುಚಿತ್ವ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆಯೂ ಆಹಾರ ತಜ್ಞರು, ವೈದ್ಯರು ಸಲಹೆಗಳನ್ನು ನೀಡಿದ್ದಾರೆ.
–––––––––––––––––
ಕರ್ನಾಟಕದ ಹಲವು ಪ್ರದೇಶಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಕಂಡುಬಂದಿವೆ. ಫಾರಂ ಕೋಳಿಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಕಂಡು ಬಂದಿದ್ದು, ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಈ ಜಿಲ್ಲೆಗಳಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸೋಂಕಿತ ಮತ್ತು ಶಂಕಿತ ಕೋಳಿಗಳನ್ನು ಕೊಲ್ಲಲಾಗಿದೆ. ಹಕ್ಕಿಜ್ವರ ಇತರ ಜಿಲ್ಲೆಗಳಿಗೂ ಹರಡುವ ಅಪಾಯವನ್ನು ತಳ್ಳಿಹಾಕಲಾಗದು. ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲೂ ಹಕ್ಕಿ ಜ್ವರ ವರದಿಯಾಗಿದ್ದು, ಸಾವಿರಾರು ಕೋಳಿಗಳನ್ನು ನಾಶಪಡಿಸಲಾಗಿದೆ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಹಕ್ಕಿಗಳಿಂದ ಹಕ್ಕಿಗಳಿಗೆ ಬಹುಬೇಗ ಹರಡುತ್ತದೆ. ಹೊರರಾಜ್ಯಗಳಿಂದ ರಾಜ್ಯಕ್ಕೂ ಫಾರಂ ಕೋಳಿಗಳು ಪೂರೈಕೆಯಾಗುತ್ತಿರುವುದರಿಂದ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಈ ರಾಜ್ಯಗಳ ಕೋಳಿ ಸಾಗಾಣಿಕೆಗೆ ನಿರ್ಬಂಧ ಹೇರಲಾಗಿದೆ.
ಈ ವೈರಾಣು ಸೋಂಕು ದೇಶದ ಹಲವು ರಾಜ್ಯಗಳಲ್ಲಿ ವರದಿಯಾಗಿರುವುದರಿಂದ ಕೋಳಿಗಳ ಸಾವು, ರೈತರ ರಕ್ಷಣೆ ಮತ್ತು ಜನರ ಆರೋಗ್ಯದ ಸುರಕ್ಷೆಯ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಪಶುವೈದ್ಯಕೀಯ ಸಚಿವಾಲಯವೂ ರಾಜ್ಯಗಳಿಗೆ ಸೂಚಿಸಿದೆ.
ಕೋಳಿಗಳು, ಟರ್ಕಿ ಕೋಳಿ, ಗಿನಿ ಕೋಳಿ, ಗೀಜಗ, ಕಾಗೆ ಮುಂತಾದ ಪಕ್ಷಿಗಳಲ್ಲಿ ಹಕ್ಕಿ ಜ್ವರ ಕಂಡುಬಂದಿದೆ. ಹಕ್ಕಿ ಜ್ವರದ ಭಯದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕೋಳಿ ಮಾಂಸ, ಮೊಟ್ಟೆ ತಿನ್ನಲು ಜನ ಹಿಂದೇಟು ಹಾಕುತ್ತಿದ್ದಾರೆ. ಕುಕ್ಕುಟೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಹಕ್ಕಿ ಜ್ವರದ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳೇ ಕಾರಣ.
ಏವಿಯೆನ್ ಇನ್‌ಫ್ಲುಯೆಂಜಾ ಎಂದು ಕರೆಯಲಾಗುವ ಹಕ್ಕಿ ಜ್ವರವು ಹಕ್ಕಿಗಳ ಜತೆಗೆ ಒಮ್ಮೊಮ್ಮೆ ಪ್ರಾಣಿಗಳಲ್ಲೂ ಕಾಣಿಸಿಕೊಳ್ಳುತ್ತದೆ. ಎಚ್5ಎನ್1 ಎನ್ನುವ ವೈರಸ್ ಈ ಸೋಂಕಿಗೆ ಕಾರಣ. ಹಕ್ಕಿಗಳ ಜೊಲ್ಲು, ಮೂಗಿನ ಸೋರಿಕೆ, ಹಿಕ್ಕೆಗಳ ಮೂಲಕ ವೈರಾಣುಗಳು ಹರಡುತ್ತವೆ. ಅವುಗಳ ಹಿಕ್ಕೆ, ಜೊಲ್ಲು ಮುಂತಾದವು ಬೆರೆತ ನೀರು ಕುಡಿಯುವುದರಿಂದಲೂ ಸೋಂಕು ಬರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ವಲಸೆ ಹಕ್ಕಿಗಳು ರೋಗವನ್ನು ಹರಡುವುದುಂಟು. ವೈರಸ್ ರೂಪಾಂತರಗೊಂಡು ಪಕ್ಷಿಗಳಲ್ಲಿ ತೀವ್ರ ರೋಗಕ್ಕೆ, ಸಾವಿಗೆ ಕಾರಣವಾಗುವುದೂ ಉಂಟು.
ಮನುಷ್ಯರಿಗೆ ಹರಡುವ ಸಾಧ್ಯತೆ ಕ್ಷೀಣ: ಹಕ್ಕಿ ಜ್ವರವು ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅಪರೂಪ. ಆದರೆ, ತೀರಾ ಹರಡುವುದೇ ಇಲ್ಲ ಎಂದು ಹೇಳಲಾಗುವುದಿಲ್ಲ. ಮನುಷ್ಯರಿಗೆ ಹರಡಿರುವ ನಿದರ್ಶನಗಳಿವೆ. ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅಮೆರಿಕದ ವ್ಯಕ್ತಿಯೊಬ್ಬರು ಇತ್ತೀಚೆಗೆ ಹಕ್ಕಿಜ್ವರದಿಂದ ಮೃತರಾಗಿದ್ದರು. ಅದು ಬಹಳ ಅಪರೂಪದ ಪ್ರಕರಣ. ಬಹಳ ಮುಖ್ಯವಾಗಿ, ಹಕ್ಕಿ ಜ್ವರವು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.
ತಜ್ಞರ ಪ್ರಕಾರ, ಹಕ್ಕಿ ಜ್ವರದಿಂದ ಮನುಷ್ಯರಿಗೆ ಯಾವುದೇ ಅಪಾಯ ಇಲ್ಲ. ಅಷ್ಟೇ ಅಲ್ಲ, ಜನ ಮಾಂಸ ಮತ್ತು ಮೊಟ್ಟೆಯನ್ನೂ ಎಂದಿನಂತೆ ತಿನ್ನಬಹುದು. ಹಸುಗಳಲ್ಲಿ ಹಕ್ಕಿಜ್ವರ ಕಂಡು ಬಂದರೆ, ಈ ರೋಗಕ್ಕೆ ಕಾರಣವಾಗುವ ಎಚ್5ಎನ್1 ವೈರಸ್‌ಗಳು ಹಸುಗಳ ಹಾಲಿನಲ್ಲಿಯೂ ಇರುತ್ತವೆ. ಆದರೆ, ಆ ಹಾಲನ್ನು ಕುದಿಸಿ ಕುಡಿದರೆ ರೋಗ ಹರಡುವುದಿಲ್ಲ ಎಂಬುದು ತಜ್ಞರ ಹೇಳಿಕೆ.
***
ತಿನ್ನುವುದು ಹೇಗೆ?
ಹಕ್ಕಿಜ್ವರದ ಕಾರಣದಿಂದಾಗಿ ಮಾಂಸ ಮತ್ತು ಮೊಟ್ಟೆಗಳನ್ನು ಹೇಗೆ ತಿನ್ನಬೇಕು, ಹೇಗೆ ಶುಚಿತ್ವ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ಆಹಾರ ತಜ್ಞರು ಮಾರ್ಗಸೂಚಿ ಪ್ರಕಟಿಸಿದ್ದಾರೆ.
l ಮಾಂಸವನ್ನು ಶುಚಿಯಾಗಿ ಇಡಬೇಕು
l ಬೇಯಿಸದೇ ಇರುವ ಮತ್ತು ಬೇಯಿಸಿದ ಮಾಂಸವನ್ನು ಪ್ರತ್ಯೇಕವಾಗಿ ಇಡಬೇಕು
l ಸೋಂಕಿರುವ ಕೋಳಿ/ಹಕ್ಕಿಗಳ ಹಸಿ ಮೊಟ್ಟೆ ತಿನ್ನಬಾರದು
l ಕೋಳಿ ಮಾಂಸ, ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಸುಮಾರು 30 ನಿಮಿಷ ಚೆನ್ನಾಗಿ ಬೇಯಿಸಬೇಕು
l ಕೋಳಿ ಮಾಂಸ ಸಿದ್ಧಪಡಿಸಿದ ನಂತರ ಕೈಗಳನ್ನು ನಂಜು ನಿರೋಧಕದಿಂದ ಶುಚಿಗೊಳಿಸಿಕೊಳ್ಳಬೇಕು.
ಸರ್ಕಾರದ ಸಲಹೆಗಳೇನು?
l ಹಕ್ಕಿಜ್ವರ ಸಾಂಕ್ರಾಮಿಕ ರೋಗವಾದರೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ರೋಗ ಹರಡುವಿಕೆ ತಡೆಯಬಹುದು
l ಹಕ್ಕಿ/ಕೋಳಿಗಳಲ್ಲಿ ಅಸಹಜ ಸಾವು ಹಾಗೂ ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಗೆ ಮಾಹಿತಿ ನೀಡಬೇಕು
l ಹಕ್ಕಿ/ಕೋಳಿ/ಬಾತುಕೋಳಿಗಳು ಮೃತಪಟ್ಟರೆ ಅದರ ಸಮೀಪ ಹೋಗಬಾರದು, ಅವುಗಳನ್ನು ಮುಟ್ಟಬಾರದು. ಅವುಗಳನ್ನು ಕೊಲ್ಲಲು, ನಂತರ ವಿಲೇವಾರಿ ಮಾಡಲು ಪಶುಸಂಗೋಪನಾ ಇಲಾಖೆಗೆ ತಿಳಿಸಬೇಕು
l ಕೋಳಿ ಸಾಕಣಿಕೆ ಕೇಂದ್ರಗಳನ್ನು ಗುರುತಿಸಿ ಅಗತ್ಯ ಮಾಹಿತಿಗಳನ್ನು ನೀಡಿ ಕೇಂದ್ರದ ಮೇಲೆ ನಿಗಾ ವಹಿಸಬೇಕು. ಕೋಳಿ ಫಾರಂ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು
l ಹಕ್ಕಿಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು
l ಸೋಂಕು ಹರಡಿರುವ ಫಾರಂಗೆ ಭೇಟಿ ನೀಡಿದಾಗ ಅಥವಾ ಸಂಪರ್ಕಕ್ಕೆ ಬಂದರೆ ತಕ್ಷಣವೇ ಕೈಕಾಲು, ಮುಖ ತೊಳೆದುಕೊಂಡು ಬಟ್ಟೆ ಬದಲಾಯಿಸಿಕೊಳ್ಳಬೇಕು. ಜ್ವರದ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು
l ಹಕ್ಕಿಜ್ವರ ಪ್ರಕರಣಗಳು ವರದಿಯಾಗಿರುವ ಪ್ರದೇಶದ 3ರಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ಜ್ವರ, ಶೀತ ನೆಗಡಿಯ ರೋಗ ಲಕ್ಷಣ ಇರುವ ಬಗ್ಗೆ ವಾರಕ್ಕೊಮ್ಮೆ ಸಮೀಕ್ಷೆ ಮಾಡಬೇಕು ಮತ್ತು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು
l ಒಂದು ವೇಳೆ ಈ ಪ್ರದೇಶಗಳಲ್ಲಿ ಜ್ವರ, ಕೆಮ್ಮು, ತಲೆ ನೋವು, ಗಂಟಲು ನೋವು ಮತ್ತು ಸ್ನಾಯು ನೋವುಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು
l ಸೋಂಕಿತ ಸ್ಥಳದಲ್ಲಿ ಯಾವುದೇ ವಸ್ತು ಮುಟ್ಟಿದರೆ ತಕ್ಷಣ, ಸೋಂಕು ನಿವಾರಕ/ಸಾಬೂನು ಬಳಸಿ ಕೈತೊಳೆಯಬೇಕು
l ಕೋಳಿ ಫಾರಂಗಳಿಂದ ಕೋಳಿಗಳನ್ನು ಸಾಗಣೆ ಮಾಡುವ ವಾಹನಗಳನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಬೇಕು
l ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಕೋಳಿ ಸಾಗಣೆ ವಾಹನಗಳ ಮೇಲೆ ನಿಗಾ ಇಡಬೇಕು
l ಸಾರ್ವಜನಿಕರು ಅನಗತ್ಯವಾಗಿ ಭಯ ಬೀಳುವುದನ್ನು ತಪ್ಪಿಸುವುದಕ್ಕಾಗಿ ಅವರಲ್ಲಿ ಹಕ್ಕಿಜ್ವರದ ಬಗ್ಗೆ ಜಾಗೃತಿ ಮೂಡಿಸಬೇಕು.
***
‘ಬೇಯಿಸಿ ತಿನ್ನುವುದು ಸುರಕ್ಷಿತ’
ಹಕ್ಕಿಜ್ವರದ ಬಗ್ಗೆ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೋಳಿ ಮಾಂಸ ಅಥವಾ ಮೊಟ್ಟೆಯನ್ನು ತಿನ್ನುವುದರಿಂದ ಹಕ್ಕಿಜ್ವರ ಮನುಷ್ಯರಿಗೆ ಬರುವುದಿಲ್ಲ. ಆದರೆ, ತಿನ್ನುವುದಕ್ಕೂ ಮೊದಲು ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಬೇಕು. ಸೋಂಕಿತ ಕೋಳಿಗಳ ಮಾಂಸವನ್ನು ಸರಿಯಾಗಿ ಬೇಯಿಸದೆ ತಿಂದರೆ, ಅವುಗಳ ಹಸಿ ಮೊಟ್ಟೆ ಸೇವಿಸಿದರೆ ರೋಗ ತಗಲುವ ಸಾಧ್ಯತೆ ಇರುತ್ತದೆ. ಮಾಂಸದ ಅಡುಗೆ ಸಿದ್ಧಪಡಿಸುವವರು ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಸೋಂಕು ನಿವಾರಕದಿಂದ ಕೈಗಳನ್ನು ಸ್ವಚ್ಛಮಾಡಿಕೊಳ್ಳಬೇಕು.
-ಡಾ.ಅನ್ಸರ್ ಅಹಮದ್, ರಾಜ್ಯ ಆರೋಗ್ಯ ಇಲಾಖೆಯ
ಸಮಗ್ರ ರೋಗ ಕಣ್ಗಾವಲು ಯೋಜನಾ (ಐಡಿಎಸ್‌ಪಿ) ನಿರ್ದೇಶಕ
---
ಆಧಾರ: ಪಿಟಿಐ, ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ಮತ್ತು ಪಶುಸಂಗೋಪನೆ ಇಲಾಖೆ ಮಾಹಿತಿ
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.