ಟಿಬೆಟ್ನಲ್ಲಿ ಹರಿಯುವ ಯಾರ್ಲಂಗ್ ಸಂಗ್ಪೊ ನದಿಯ ನೋಟ
ವಿಶ್ವದಲ್ಲೇ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದಾಗಿದೆ. ಅದರಿಂದ ಜಲವಿದ್ಯುತ್ ಉತ್ಪಾದನೆ ಮಾಡಿ, ಹೆಚ್ಚು ಸಮೃದ್ಧಿ ಸಾಧಿಸುವುದು ತನ್ನ ಗುರಿ ಎಂದು ಚೀನಾ ಹೇಳಿಕೊಂಡಿದೆ. ಆದರೆ, ಅಲ್ಲಿನ ತಜ್ಞರೂ ಸೇರಿದಂತೆ ಜಾಗತಿಕ ಮಟ್ಟದ ಹಲವರು ಆ ಅಣೆಕಟ್ಟು ಜನರ ಮೇಲೆ ಮತ್ತು ಪ್ರಕೃತಿಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಭಾರತವೂ ಈ ಬಗ್ಗೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಟಿಬೆಟ್, ಬಾಂಗ್ಲಾ, ಭಾರತದ ಜನರ ಸುರಕ್ಷತೆ ಮತ್ತು ಪ್ರಕೃತಿ ವಿನಾಶದ ದೃಷ್ಟಿಯಿಂದ ಅಪಾಯಕಾರಿಯಾಗಿದ್ದರೂ ಚೀನಾ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ.
ಬ್ರಹ್ಮಪುತ್ರ ಭಾರತದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು. ಟಿಬೆಟ್‌ನಲ್ಲಿ ಹುಟ್ಟುವ ಇದು, ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿದು ಕೊನೆಗೆ ಬಂಗಾಳ ಕೊಲ್ಲಿ ಸೇರುತ್ತದೆ. ಬ್ರಹ್ಮಪುತ್ರ ನದಿಯನ್ನು ಟಿಬೆಟ್‌ನಲ್ಲಿ ಯಾರ್ಲಂಗ್ ಸಂಗ್ಪೊ ಎಂದು ಕರೆಯುತ್ತಾರೆ. ನದಿಯ ಕೆಳಭಾಗದಲ್ಲಿ ವಿಶ್ವದ ಅತ್ಯಂತ ದೊಡ್ಡ ಅಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾ ಸರ್ಕಾರದ ಯೋಜನೆ. ಭಾರತದ ಅರುಣಾಚಲ ಪ್ರದೇಶದ ಗಡಿ ಸಮೀಪ ಇದನ್ನು ನಿರ್ಮಿಸಲಾಗುತ್ತಿದೆ ಎಂದ ಹೇಳಲಾಗುತ್ತಿದೆ.
ಸದ್ಯ ಚೀನಾದ ತ್ರೀ ಜಾರ್ಜಸ್ ಡ್ಯಾಮ್ (ಯಾಂಟ್ಜೆ ನದಿಗೆ ಕಟ್ಟಲಾಗಿದೆ) ವಿಶ್ವದ ಅತಿ ದೊಡ್ಡ ಅಣೆಕಟ್ಟಾಗಿದ್ದು, ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಯಾರ್ಲಂಗ್ ಸಾಂಗ್ಪೊ ನದಿಯ ಕೆಳಭಾಗದಲ್ಲಿ ಕಟ್ಟಲಾಗುವ ಅಣೆಕಟ್ಟಿನಿಂದ ಅದರ ಮೂರು ಪಟ್ಟು ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾದ ಲೆಕ್ಕಾಚಾರ. ಚೀನಾದ ಮಾಧ್ಯಮಗಳು ಇದು ಸುರಕ್ಷಿತ ಯೋಜನೆಯಾಗಿದ್ದು, ಪರಿಸರ ರಕ್ಷಣೆಯನ್ನು ತನ್ನ ಆದ್ಯತೆಯಾಗಿಸಿಕೊಂಡಿದೆ ಎಂದು ವಿವರಿಸಿವೆ. ಈ ಯೋಜನೆಯು ದೇಶದ ಸಮೃದ್ಧಿಯನ್ನು ಹೆಚ್ಚಿಸಲಿದ್ದು, ಬೀಜಿಂಗ್‌ನ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಗೆ ತಕ್ಕಂತಿದೆ ಎಂದಿವೆ.
ಚೀನಾದ ಕಮ್ಯುನಿಸ್ಟ್ ಪಕ್ಷವು 2021ರಲ್ಲಿ ಬಿಡುಗಡೆ ಮಾಡಿರುವ ಐದು ವರ್ಷಗಳ ಆರ್ಥಿಕ ಅಭಿವೃದ್ಧಿ ಯೋಜನೆಯಲ್ಲಿಯೂ ಈ ಅಣೆಕಟ್ಟು ಸ್ಥಾನ ಪಡೆದಿದೆ. ಟಿಬೆಟ್‌ನಲ್ಲಿ ಹಲವು ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದು, ಅವುಗಳಲ್ಲಿ ಇದು ಒಂದು ಯೋಜನೆ ಎನ್ನಲಾಗುತ್ತಿದೆ.
ಆದರೆ, ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣದ ಬಗ್ಗೆ ಚೀನಾದಲ್ಲೇ ಆತಂಕ ವ್ಯಕ್ತವಾಗಿದೆ. ಬ್ರಹ್ಮಪುತ್ರ ನದಿ ಹಿಮಾಲಯದ ಗಿರಿ ಕಂದರಗಳಲ್ಲಿ ಹರಿಯುತ್ತದೆ. ಲಕ್ಷಾಂತರ ಜೀವಪ್ರಭೇದ, ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ ನದಿ. ಇಂಥ ಕಡಿದಾದ, ಆಳದ ಕಣಿವೆ ಇರುವ, ಭೂಕಂಪ ಸಂಭವನೀಯ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕಾಗಿ ಅಗೆಯುವುದು ಭೂಕುಸಿತದಂಥ ಅವಘಡಗಳಿಗೆ ಕಾರಣವಾಗುತ್ತದೆ ಎಂದು ಚೀನಾದ ವಿಜ್ಞಾನಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ, ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್‌ಗಿಂತಲೂ ಮೂರು ಪಟ್ಟು ಆಳವಾದ ಹಿಮಾಲಯದ ಕಣಿವೆಗಳಲ್ಲಿ ಅಣೆಕಟ್ಟು ನಿರ್ಮಾಣವಾಗಲಿದೆ. ಅದಕ್ಕೆ ಬೇಕಾದ ಅಗಾಧ ಎಂಜಿನಿಯರಿಂಗ್ ಕೌಶಲ ಮತ್ತಿತರ ಅಗತ್ಯಗಳನ್ನು ಪೂರೈಸುವುದು ಹೇಗೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಒಂದು ವೇಳೆ, ಭೂಕಂಪವನ್ನು ತಡೆಯುವ ರೀತಿಯಲ್ಲಿ ಅಣೆಕಟ್ಟು ನಿರ್ಮಿಸಿದರೂ ಅದರಿಂದ ಉಂಟಾಗುವ ಗುಡ್ಡಕುಸಿತ, ಮಣ್ಣು–ಕಲ್ಲಿನ ಅನಿಯಂತ್ರಿತ ಹರಿಯುವಿಕೆ ತಡೆಯುವುದು ಸಾಧ್ಯವಾಗುವುದಿಲ್ಲ. ಇದು ಯೋಜನೆಗೆ ಗಂಭೀರ ಸವಾಲೊಡ್ಡಲಿದೆ ಎಂದು ಸಿಚೌನ್ ಪ್ರಾಂತೀಯ ಭೂವಿಜ್ಞಾನ ಬ್ಯೂರೊದ ಎಂಜಿನಿಯರ್ ಒಬ್ಬರು 2022ರಲ್ಲೇ ಎಚ್ಚರಿಕೆ ನೀಡಿದ್ದರು.
ಯಾರ್ಲಂಗ್ ಸಂಗ್ಪೊ ಟಿಬೆಟ್‌ನ ಅತಿ ಉದ್ದದ ನದಿ. ಟಿಬೆಟ್‌ನಲ್ಲಿ ಚೀನಾ ಈಗಾಗಲೇ ಹಲವು ಅಣೆಕಟ್ಟುಗಳನ್ನು ನಿರ್ಮಿಸಿದೆ. 2024ರ ಆರಂಭದಲ್ಲಿ ಅಣೆಕಟ್ಟೊಂದರ ನಿರ್ಮಾಣದಿಂದ ಜನರಿಗೆ ತೊಂದರೆಯಾಗಿದ್ದಲ್ಲದೇ ಹಲವು ಬೌದ್ಧ ವಿಹಾರಗಳು ಮುಳುಗಿಹೋಗಿದ್ದವು. ಅದರ ವಿರುದ್ಧ ಪ್ರತಿಭಟಿಸಿದ್ದ ಟಿಬೆಟ್ ಜನರನ್ನು ಬಂಧಿಸಿದ್ದ ಚೀನಾ ಸರ್ಕಾರ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿತ್ತು. ತ್ರೀ ಜಾರ್ಜಸ್ ಡ್ಯಾಮ್ ನಿರ್ಮಾಣದಿಂದ ಟಿಬೆಟ್‌ನ 14 ಲಕ್ಷ ಮಂದಿ ನಿರ್ವಸಿತರಾಗಿದ್ದರು. ಈಗ ಚೀನಾ ಕಟ್ಟಲು ಹೊರಟಿರುವ ವಿಶ್ವದ ಅತಿ ದೊಡ್ಡ ಅಣೆಕಟ್ಟಿನ ವ್ಯಾಪ್ತಿಯಲ್ಲಿ ಹೆಚ್ಚು ಜನವಸತಿ ಇರುವ ಪ್ರದೇಶಗಳೂ ಸೇರಿವೆ. ಹೀಗಾಗಿ ಅತಿ ಹೆಚ್ಚು ಮಂದಿ ನಿರ್ವಸಿತರಾಗಬೇಕಾಗುತ್ತದೆ ಎನ್ನುವುದು ‘ಟಿಬೆಟ್ ವಾಚ್’ ಎಂಬ ಲಂಡನ್ ಮೂಲದ ಸರ್ಕಾರೇತರ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಬ್ರಹ್ಮಪುತ್ರದ ನೀರಿನಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳಿಗೂ ಪಾಲು ಇದೆ. ಬ್ರಹ್ಮಪುತ್ರ ಸೇರಿದಂತೆ ಈ ಭಾಗದ ನದಿಗಳ ನೀರಿನ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಚೀನಾವು ಭಾರತದ ಆರ್ಥಿಕತೆಯ ಮೇಲೆ ತನ್ನ ಹಿಡಿತ ಬಿಗಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆಸ್ಟ್ರೇಲಿಯಾ ಮೂಲದ ಚಿಂತಕರ ಚಾವಡಿ ‘ಲೊವಿ ಇನ್ಸ್‌ಟಿಟ್ಯೂಟ್’ 2020ರ ತನ್ನ ವರದಿಯಲ್ಲಿ ಅಭಿಪ್ರಾಯ ಪಟ್ಟಿತ್ತು.
ತನ್ನ ಅಣೆಕಷ್ಟು ಯೋಜನೆಯಿಂದ ಭಾರತ, ಬಾಂಗ್ಲಾದೇಶ ಸೇರಿದಂತೆ ಯಾರಿಗೂ ತೊಂದರೆಯಾಗದು ಎಂದು ಚೀನಾ ಹೇಳಿಕೊಂಡಿದೆ. ಆದರೆ, ಈ ಯೋಜನೆ ಭಾರತ ಮತ್ತು ಬಾಂಗ್ಲಾದೇಶದ ಪಾಲಿಗೆ ವಿನಾಶಕಾರಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಯಾರ್ಲಂಗ್ ಸಂಗ್ಪೊ ನದಿಯ ಮೇಲ್ಭಾಗದಲ್ಲಿ ಚೀನಾ ಹಲವು ಅಣೆಕಟ್ಟುಗಳನ್ನು ಈಗಾಗಲೇ ನಿರ್ಮಿಸಿದೆ. ಈಗ ನದಿಯ ಕೆಳಭಾಗದಲ್ಲಿ ಭಾರಿ ಅಣೆಕಟ್ಟು ನಿರ್ಮಿಸಿದರೆ, ಇಡೀ ನದಿ ನೀರಿನ ಮೇಲೆ ಚೀನಾ ಹಿಡಿತ ಸಾಧಿಸಲಿದೆ ಇದರಿಂದ ಭಾರತ ಮತ್ತು ಬಾಂಗ್ಲಾದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಿಗಡಾಯಿಸಿದ ಸಂದರ್ಭಗಳಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಲು ಈ ಅಣೆಕಟ್ಟನ್ನು ಒಂದು ಸಾಧನವನ್ನಾಗಿ ಚೀನಾ ಬಳಸಬಹುದು ಎಂಬ ಅಭಿಪ್ರಾಯವನ್ನು ರಾಜತಾಂತ್ರಿಕ ತಜ್ಞರು ವ್ಯಕ್ತಪಡಿಸಿದ್ದಾರೆ.
ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದ ಪಾಲಿಗೆ ಬ್ರಹ್ಮಪುತ್ರ ಜೀವ ನದಿ. ಭಾರತದ ಸಿಹಿ ನೀರಿನ ಸಂಪನ್ಮೂಲದ ಪೈಕಿ ಶೇ 30ರಷ್ಟು ಬ್ರಹ್ಮಪುತ್ರ ನದಿಯ ಪಾಲಿದೆ. ಭಾರತದ ಗಡಿ ಭಾಗದಲ್ಲಿ ಚೀನಾ ಅಣೆಕಟ್ಟು ನಿರ್ಮಿಸಿದರೆ, ಭಾರತ ಮತ್ತು ಬಾಂಗ್ಲಾದೇಶದತ್ತ ನದಿ ನೀರಿನ ಹರಿವಿಗೆ ಧಕ್ಕೆಯಾಗಲಿದೆ. ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಎರಡೂ ರಾಷ್ಟ್ರಗಳಿಗೂ ನೀರಿನ ಕೊರತೆ ಕಾಡಬಹುದು. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ. ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು. ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಬಹುದು.
ಕೆಲವು ವರ್ಷಗಳಿಂದೀಚೆಗೆ ಪ್ರತಿ ಮಳೆಗಾಲದಲ್ಲಿ ಬ್ರಹ್ಮಪುತ್ರ ನದಿಯು ಉಕ್ಕೇರಿ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯದಂತಹ ನದಿಯ ಅಚ್ಚುಕಟ್ಟು ಪ್ರದೇಶದ ರಾಜ್ಯಗಳು ಪ್ರವಾಹಕ್ಕೆ ಒಳಗಾಗುತ್ತಿವೆ. ಮುಂಗಾರು ಅವಧಿಯಲ್ಲಿ ಚೀನಾವು ಅಣೆಕಟ್ಟೆಯಿಂದ ಏಕಾಏಕಿ ನೀರು ಬಿಟ್ಟರೆ, ಭಾರತದಲ್ಲಿ ಪ್ರವಾಹ ಸ್ಥಿತಿ ಇನ್ನಷ್ಟು ಬಿಗಡಾಯಿಸಿ, ಈಶಾನ್ಯ ರಾಜ್ಯಗಳು ನೆರೆಯಿಂದ ತತ್ತರಿಸಿ ಹೋಗಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಅಣೆಕಟ್ಟು ನಿರ್ಮಿಸಲು ಗುರುತಿಸಿರುವ ಜಾಗ, ಭೂಕಂಪನ ಸಂಭವನೀಯತೆ ಪ್ರದೇಶ (ಭೂಪದರ ತಟ್ಟೆಗಳು (ಟೆಕ್ಟೋನಿಕ್ ಪ್ಲೇಟ್ಸ್) ರೇಖೆಗಳು ಇಲ್ಲಿ ಹಾದುಹೋಗಿವೆ) ಎಂದು ಹೇಳಲಾಗಿದೆ. ಕಡಿದಾದ, ಆಳವಾದ ಕಂದಕಗಳಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕೊರೆಯುವುದು, ನಿರ್ಮಾಣ ಕಾಮಗಾರಿ ನಡೆಸುವುದು ಯಾವತ್ತೂ ಸವಾಲಿನ ಕೆಲಸ. ಇದು ಭೂಕಂಪನ, ಭೂಕುಸಿತದಂತಹ ವಿಪತ್ತಿಗೆ ಕಾರಣವಾಗಬಹುದು ಎಂದು ಚೀನಾ ವಿಜ್ಞಾನಿಗಳೇ ಎಚ್ಚರಿಸಿದ್ದಾರೆ. ಹಿಮಾಲಯದಲ್ಲಿ ಸಂಭವಿಸುವ ಯಾವುದೇ ವಿಪತ್ತು ಭಾರತದ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಿಮಾಲಯದಲ್ಲಿ ಮೇಘಸ್ಫೋಟ, ಭೂಕುಸಿತ ಸಾಮಾನ್ಯವಾಗಿದೆ. ಇದರಿಂದ ದಿಢೀರ್ ಪ್ರವಾಹ ಉಂಟಾದ ನಿದರ್ಶನಗಳೂ ಇವೆ. ಹೀಗಿರುವಾಗ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಅಥವಾ ನಂತರ ಯಾವುದೇ ಅವಘಡ ಜರುಗಿದರೂ ಅರುಣಾಚಲ ಪ್ರದೇಶ, ಅಸ್ಸಾಂ ಮೇಲೆ ಅದರ ಪರಿಣಾಮ ಆಗದೇ ಇರದು.
ಬ್ರಹ್ಮಪುತ್ರ ನದಿಯು ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಮೂಲಕ ಹರಿಯುತ್ತದೆ. ಅರುಣಾಚಲ ಪ್ರದೇಶದ ಹಲವು ಭಾಗಗಳನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಭಾರತದೊಂದಿಗೆ ಹಲವು ಬಾರಿ ವಾಗ್ವಾದವನ್ನೂ ನಡೆಸಿದೆ.
ಚೀನಾ ಬ್ರಹ್ಮಪುತ್ರ ನದಿಯ ಮೇಲೆ ಅತಿ ದೊಡ್ಡ ಅಣೆಕಟ್ಟು ನಿರ್ಮಾಣದ ಬಗ್ಗೆ 2020ರಲ್ಲಿಯೇ ಭಾರತವು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಜತೆಗೆ, ಬ್ರಹ್ಮಪುತ್ರದ ಉಪನದಿಗೆ ದೊಡ್ಡ ಅಣೆಕಟ್ಟು ನಿರ್ಮಾಣ ಆರಂಭಿಸಿತು. ಭಾರತದ ಆಕ್ಷೇಪಣೆಗೆ ಉತ್ತರಿಸಿದ್ದ ಚೀನಾ, ಯಾರ್ಲಂಗ್ ಸಂಗ್ಪೊ ನದಿಗೆ ಅಣೆಕಟ್ಟು ನಿರ್ಮಿಸುವುದಕ್ಕೆ ತನಗೆ ಹಕ್ಕು ಇದ್ದು, ಅದರಿಂದ ಉಂಟಾಗುವ ಪರಿಣಾಮಗಳ ಸಂಪೂರ್ಣ ಅರಿವೂ ಇದೆ ಎಂದು ಸಮರ್ಥಿಸಿಕೊಂಡಿತ್ತು. ಬ್ರಹ್ಮಪುತ್ರ ನದಿಯ ನೀರಿನ ಮಟ್ಟ, ನೀರಿನ ಲಭ್ಯತೆ ಹಾಗೂ ಮಳೆಯ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಸಂಬಂಧ ಎರಡೂ ದೇಶಗಳ ನಡುವೆ 2006ರಲ್ಲಿ ಒಪ್ಪಂದ ಆಗಿದೆ. 2023ಕ್ಕೆ ಅದು ಅಂತ್ಯಗೊಂಡಿದ್ದು, ಡಿ.18ರಂದು ನಡೆದಿದ್ದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಅಣೆಕಟ್ಟೆಯ ನಿರ್ಮಾಣವು ಪ್ರಕೃತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ನದಿಯ ಜೀವವೈವಿಧ್ಯಕ್ಕೆ ಧಕ್ಕೆ ತರುವುದಲ್ಲದೆ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ದೊಡ್ಡ ಅಣೆಕಟ್ಟು ಟಿಬೆಟ್‌ನ ಭೂ ಪ್ರದೇಶದ ಸ್ವರೂಪವನ್ನೇ ಬದಲಾಯಿಸಲಿದೆ
ಭಾರಿ ಸಂಖ್ಯೆಯ ಜನರಿಗೆ ಪುನರ್ಸವತಿ ಕಲ್ಪಿಸಬೇಕಾಗುತ್ತದೆ
ಮಣ್ಣಿನ ಸವಕಳಿಯಾಗುತ್ತದೆ, ಹೂಳಿನ ಸಮಸ್ಯೆ ಕಾಡುತ್ತದೆ
ಅಣೆಕಟ್ಟೆಯ ಕೆಳ ಪ್ರದೇಶಗಳಲ್ಲಿರುವ ವಿವಿಧ ಪ್ರಾಣಿಗಳ ಆವಾಸ ಸ್ಥಾನಗಳ ಮೇಲೆ ದುಷ್ಪರಿಣಾಮ ಬೀರಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.