
ಪ್ರಾತಿನಿಧಿಕ ಚಿತ್ರ
ಅಮೆರಿಕದ ಆಂತ್ರೊಪಿಕ್ ಕೃತಕ ಬುದ್ಧಿಮತ್ತೆ ಕಂಪನಿಯು ತನ್ನ ಕ್ಲಾಡ್ ಕೋವರ್ಕ್ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಪ್ಲಗ್–ಇನ್‌ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಎಐ ಟೂಲ್ ದಾಖಲೆ, ದತ್ತಾಂಶ, ವಿವಿಧ ರೀತಿಯ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಸಂಕೀರ್ಣ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುವ ಸಾಮರ್ಥ್ಯ ಹೊಂದಿವೆ. ಇದು ಐಟಿ ಕ್ಷೇತ್ರದಲ್ಲಿ, ವಿಶೇಷವಾಗಿ ಐಟಿ ಸೇವೆ ಒದಗಿಸುವ ಕಂಪನಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗಕ್ಕೆ ಕಾರಣವಾಗಲಿದೆ ಎನ್ನಲಾಗುತ್ತಿದೆ. ಅಮೆರಿಕ ಮತ್ತು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಭಾರತದ ಟಿಸಿಎಸ್, ವಿಪ್ರೊ, ಇನ್ಫೊಸಿಸ್‌ನಂಥ ಐಟಿ ಕಂಪನಿಗಳಲ್ಲಿನ ಉದ್ಯೋಗಗಳಿಗೆ ಪೆಟ್ಟು ಬೀಳುವ ಸಂಭವ ಇದೆ ಎಂದು ಹೇಳಲಾಗುತ್ತಿದೆ
ಫೆಬ್ರುವರಿ 4ರಂದು ಅಮೆರಿಕ, ಭಾರತದಲ್ಲಿ ಐಟಿ ಸೇವೆಗಳು, ಕಾನೂನು ಸೇವೆಗಳನ್ನು ಒದಗಿಸುವ ಕೆಲವು ಕಂಪನಿಗಳ ಷೇರುಗಳ ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಒಂದೇ ದಿನ ಷೇರುಪೇಟೆ 28,500 ಕೋಟಿ ಡಾಲರ್‌ಗಳ ನಷ್ಟ ಅನುಭವಿಸಿತ್ತು. ಭಾರತದ ಷೇರುಪೇಟೆಯಲ್ಲಿ ಇನ್ಫೊಸಿಸ್, ವಿಪ್ರೊ, ಟಿಸಿಎಸ್ ಮುಂತಾದ ಐಟಿ ಕಂಪನಿಗಳ ಷೇರುಗಳ ಮೌಲ್ಯ ಶೇ 7ರಷ್ಟು ಕುಸಿತ ಕಂಡರೆ, ಅಮೆರಿಕದ ಕಂಪನಿಗಳ ಷೇರುಗಳು ಶೇ 12ರಷ್ಟು ಕುಸಿತ ದಾಖಲಿಸಿದವು. ‘ಸಾಫ್ಟ್‌ವೇರ್ ಸೇವೆಗಳಲ್ಲಿ ಮಹಾಪ್ರಳಯ’ (SaaSpocalypse) ಎಂದೇ ಅದನ್ನು ಕರೆಯಲಾಯಿತು. ಇಂಥ ಮಹಾಪತನಕ್ಕೆ ಕಾರಣವಾಗಿದ್ದು ಒಂದು ಎಐ ಟೂಲ್.
ಆಂತ್ರೊಪಿಕ್ ಎನ್ನುವ ಕೃತಕ ಬುದ್ಧಿಮತ್ತೆ (ಎಐ) ಕಂಪನಿಯು ಇದೇ ಜನವರಿಯಲ್ಲಿ ಕ್ಲಾಡ್ ಕೋವರ್ಕ್ (Claude Cowork) ಎನ್ನುವ ಎಐ ಏಜೆಂಟ್ ಅನ್ನು ಬಿಡುಗಡೆ ಮಾಡಿತ್ತು. ಆಂತ್ರೊಪಿಕ್‌ನ ಕ್ಲಾಡ್ ಚಾಟ್‌ಬಾಟ್ ಅಲ್ಪ ಅವಧಿಯಲ್ಲೇ ಭಾರಿ ಜನಪ್ರಿಯತೆ ಗಳಿಸಿತ್ತು. ಸಾಫ್ಟ್‌ವೇರ್ ಕೋಡಿಂಗ್ ಮಾಡುವವರಿಗಾಗಿಯೇ ಕ್ಲಾಡ್ ಕೋಡ್ ವಿಶೇಷ ಆವೃತ್ತಿ ಬಿಡುಗಡೆ ಮಾಡಿತ್ತು. ಅದರ ಕ್ಷಿಪ್ರ ಯಶಸ್ಸಿನಿಂದ ಸ್ಫೂರ್ತಿ ಪಡೆದ ಆಂತ್ರೊಪಿಕ್ ಕಂಪನಿಯು, ಕ್ಲಾಡ್ ಗೆ ಹೆಚ್ಚುವರಿ ಜನವರಿ ಅಂತ್ಯದಲ್ಲಿ ಪ್ಲಗ್–ಇನ್‌ಗಳನ್ನು ಬಿಡುಗಡೆ ಮಾಡಿತು. ಸ್ವಯಂಚಾಲಿತವಾಗಿ ಕೆಲಸ ಮಾಡುವ ಇವುಗಳು ವಿಶ್ಲೇಷಣೆ, ಕೋಡಿಂಗ್‌ನಂತಹ ಸಂಕೀರ್ಣ ಕೆಲಸಗಳನ್ನೂ ಮಾಡುತ್ತವೆ. ಫೆಬ್ರುವರಿ ಮೊದಲ ವಾರದಲ್ಲಿ ಅದರ ಕಾರ್ಯನಿರ್ವಹಣೆಯ ವಿವರಗಳು ಬಹಿರಂಗಗೊಂಡಿದ್ದು ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿತು.
ಹೇಗೆ ಕೆಲಸ ಮಾಡುತ್ತದೆ?: ಕ್ಲಾಡ್ ಕೋವರ್ಕ್ ಎಐ ಏಜೆಂಟ್‌ಗೆ ಹೊಸದಾಗಿ 11 ಪ್ಲಗ್ ಇನ್‌ಗಳನ್ನು ಆಂತ್ರೊಪಿಕ್ ಸೇರಿಸಿದ್ದು, ಈ ಹೊಸ ಟೂಲ್ ಕಂಪ್ಯೂಟರ್ ಮೂಲಕ ನಡೆಸುವ ಕಾನೂನು (ಲೀಗಲ್), ಮಾರಾಟ (ಸೇಲ್ಸ್), ಮಾರುಕಟ್ಟೆ (ಮಾರ್ಕೆಟಿಂಗ್) ಮತ್ತು ದತ್ತಾಂಶ ವಿಶ್ಲೇಷಣೆ (ಡೇಟಾ ಅನಾಲಿಸಿಸ್) ವಲಯದ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುತ್ತದೆ. ಸಾಫ್ಟ್‌ವೇರ್ ಕೋಡಿಂಗ್ ಮಾಡುವುದಷ್ಟೇ ಅಲ್ಲದೇ, ವೇತನ ಲೆಕ್ಕಾಚಾರ, ಷೇರುಪೇಟೆಯ ವಿಶ್ಲೇಷಣೆಯಂತಹ ವಿವಿಧ ಕೆಲಸಗಳನ್ನು ನಿರ್ವಹಿಸುತ್ತವೆ. ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್‌ಗಳು ಮತ್ತು ಮನುಷ್ಯರು ಮಾಡುವ ಕೆಲಸಗಳಿಗೆ ಇದು ಪರ್ಯಾಯವಾಗಬಲ್ಲುದು ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರಿ ಪ್ರಮಾಣದಲ್ಲಿರುವ ದಾಖಲೆಗಳ ಪರಿಶೀಲನೆ, ತಿದ್ದುಪಡಿ ಮಾಡುವುದು, ಕರಡು ಸಿದ್ಧಪಡಿಸುವುದು, ಕೋಡಿಂಗ್ ಕೆಲಸಗಳು ಸೇರಿದಂತೆ ಹಲವು ಜನರ ತಂಡವು ದೀರ್ಘ ಸಮಯದವರೆಗೆ ಮಾಡುವ ಪ್ರಾಜೆಕ್ಟ್ (ಕೆಲಸ) ಅನ್ನು ಈ ಟೂಲ್ ಯಾರ ಸಹಾಯವಿಲ್ಲದೇ ಬಹುಬೇಗ ಮಾಡಿ ಕೊಡಬಲ್ಲದು. ಇದಕ್ಕಾಗಿ ಕಂಪ್ಯೂಟರ್ ಬಳಕೆದಾರ ಕೆಲಸ ಮಾಡಲು ಅನುಮತಿ ನೀಡಿದರೆ ಸಾಕು.
ಸರಳವಾಗಿ ಹೇಳುವುದಾದರೆ, ಹೊಸ ಎಐ ಟೂಲ್ ಒಳಗೊಂಡ ಕ್ಲಾಡ್ ಕೋವರ್ಕ್, ಬಳಕೆದಾರನೊಂದಿಗೆ ಕೇವಲ ಸಂವಾದ (ಕಾನ್‌ವರ್ಸೇಷನ್) ಮಾಡುವುದಲ್ಲ. ಕಂಪ್ಯೂಟರ್‌ನಲ್ಲಿರುವ ನಿರ್ದಿಷ್ಟ ಫೋಲ್ಡರ್‌ನ ಪರಿಶೀಲನೆಗೆ ಅನುಮತಿ ಕೊಟ್ಟರೆ (ಆ್ಯಕ್ಸೆಸ್) ನೀಡಿದರೆ ಸಾಕು. ಅದು ಆ ಫೋಲ್ಡರ್‌ನಲ್ಲಿರುವ ಅಂಶಗಳನ್ನು ಓದಿ, ತಿದ್ದುಪಡಿ, ಹೊಸದೊಂದು ಫೋಲ್ಡರ್ ಅನ್ನು ಸೃಷ್ಟಿಸಿ ಎಲ್ಲವನ್ನೂ ವ್ಯವಸ್ಥಿತವಾಗಿ ಜೋಡಿಸಿ ಮಾಡಿಕೊಡುತ್ತದೆ. ಕೇವಲ ಮಾತುಕತೆಗೆ ಸೀಮಿತವಾಗದೆ, ಬಳಕೆದಾರನಿಗೆ ಬೇಕಾದ ಎಲ್ಲ ಕೆಲಸವನ್ನೂ ಹಂತ ಹಂತವಾಗಿ ಮಾಡಿ ಕೊಡುತ್ತದೆ. ಕಂಪನಿಯ ಪ್ರಕಾರ, ಈ ಎಐ ಏಜೆಂಟ್ ಸಹಉದ್ಯೋಗಿಯ (ಕೋವರ್ಕರ್) ರೀತಿ ಕೆಲಸ ಮಾಡುತ್ತದೆ. ಪ್ರಾಜೆಕ್ಟ್‌ಗಳನ್ನು ಮಾಡುವ ತಂಡಗಳಿಗೆ ಮತ್ತು ಉದ್ದಿಮೆಗಳಿಗೆ ಈ ಟೂಲ್ ಹೆಚ್ಚು ಅನುಕೂಲಕಾರಿ.
ಹಲವು ಮಂದಿ, ಹಲವು ತಿಂಗಳು / ವರ್ಷಗಳು ಮಾಡುವ ಕೆಲಸವನ್ನು ಈ ಎಐ ಟೂಲ್‌ನಿಂದ ಅಲ್ಪಕಾಲದಲ್ಲಿ ಮುಗಿಸಬಹುದು ಎನ್ನಲಾಗುತ್ತಿದೆ. ಇದರಿಂದಾಗಿ ಸಾಫ್ಟ್‌ವೇರ್ ಸೇವೆಗಳು, ಹಣಕಾಸು ಸೇವೆ, ಕಾನೂನು ಸೇವೆಯಂಥ ವಲಯಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಉದ್ಯೋಗ ಕಡಿತಕ್ಕೂ ಕಾರಣವಾಗಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ.
ಐಟಿ ಕ್ಷೇತ್ರದ ಮೇಲೆ ಏನು ಪರಿಣಾಮ?
ಕಳೆದ ಬುಧವಾರ ಷೇರುಮಾರುಕಟ್ಟೆಯಲ್ಲಿ ಕಂಡು ಬಂದ ‘ಮಹಾಪತನ’ದ ನಂತರ ಐಟಿ ಕಂಪನಿಗಳ ಷೇರುಗಳಲ್ಲಿ ದೊಡ್ಡ ಮಟ್ಟಿನ ಚೇತರಿಕೆ ಕಂಡು ಬಂದಿಲ್ಲ. ಐಟಿ ಉದ್ಯಮದಲ್ಲಿ ಇದರ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ದೊಡ್ಡ ದೊಡ್ಡ ಕಂಪನಿಗಳು ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಐಟಿ ವಲಯದಲ್ಲಿ, ವಿಶೇಷವಾಗಿ ಉದ್ಯೋಗಿಗಳ ಮಧ್ಯೆ ಈ ಟೂಲ್ ಬೀರಬಹುದಾದ ಪರಿಣಾಮಗಳ ಬಗೆಗಿನ ಚರ್ಚೆ ತೀವ್ರವಾಗಿ ನಡೆಯುತ್ತಿದೆ.
25 ಸಾವಿರ ಕೋಟಿ ಡಾಲರ್ ಮೌಲ್ಯದ (ಅಂದಾಜು ₹22.67 ಲಕ್ಷ ಕೋಟಿ) ಭಾರತದ ಐಟಿ ಕ್ಷೇತ್ರವು ಸೇವೆ ಆಧಾರಿತವಾಗಿದೆ. ಇಲ್ಲಿನ ಕಂಪನಿಗಳು ಸಾಫ್ಟ್‌ವೇರ್ ನಿರ್ವಹಣೆ, ಪರೀಕ್ಷೆ, ದತ್ತಾಂಶಗಳ ಪರಿಶೀಲನೆ, ಒಪ್ಪಂದಗಳ ವಿಶ್ಲೇಷಣೆ, ನಿಯಮಗಳ ಪಾಲನೆ ಮೇಲ್ವಿಚಾರಣೆ, ಗ್ರಾಹಕ ಸೇವೆಗಳು, ವ್ಯವಹಾರ ಪ್ರಕ್ರಿಯೆಯ ನಿರ್ವಹಣೆಯಂತಹ ಹೆಚ್ಚು ಮಾನವ ಸಂಪನ್ಮೂಲ ಬೇಡುವ ಹೊರಗುತ್ತಿಗೆ ಕೆಲಸಗಳನ್ಜು ಮಾಡುತ್ತಾ ಬಂದಿವೆ. ದೇಶದ್ದಲ್ಲದೆ, ಹೊರದೇಶಗಳ ಕಂಪನಿಗಳಿಗೂ ಈ ಸೇವೆಗಳನ್ನು ಒದಗಿಸುತ್ತಿವೆ.
ತಾವು ಪ್ರಾಜೆಕ್ಟ್ ರೂಪದಲ್ಲಿ ಕೈಗೆತ್ತಿಕೊಂಡ ಕೆಲಸಗಳನ್ನು ಮಾಡಿಕೊಡಲು ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಎಂಜಿನಿಯರ್‌ಗಳನ್ನು ನೇಮಕ ಮಾಡುತ್ತವೆ. ಎಂಜಿನಿಯರ್‌ಗಳ ತಂಡಗಳನ್ನು ರಚಿಸಿ, ಅವುಗಳಿಗೆ ಪ್ರಾಜೆಕ್ಟ್‌ಗಳನ್ನು ನೀಡಿ ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸುತ್ತವೆ. ಈ ಪ್ರಾಜೆಕ್ಟ್‌ಗಳನ್ನು ಎಂಜಿನಿಯರ್‌ಗಳ ಬದಲಾಗಿ ಸ್ವಯಂ ಚಾಲಿತವಾಗಿ ಕೆಲಸ ಮಾಡುವ ಎಐ ಟೂಲ್‌ಗೆ ಮಾಡಲು ಸಾಧ್ಯವಾದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಮಾನವ ಸಂಪನ್ಮೂಲವಿಲ್ಲದೇ ಕೆಲಸ ಮುಗಿಸಬಹುದು. ಹಾಗಾದಲ್ಲಿ ವಿದೇಶಗಳ ಕಂಪನಿಗಳು ಸೇರಿದಂತೆ ವಿವಿಧ ಕಂಪನಿಗಳು ಪ್ರಾಜೆಕ್ಟ್‌ಗಳನ್ನು ಭಾರತದ ತಂತ್ರಜ್ಞಾನ ಕಂಪನಿಗಳಿಗೆ ಹೊರಗುತ್ತಿಗೆಗೆ ನೀಡದೇ ಇರಬಹುದು. ಇದು ಆ ಕಂಪನಿಗಳು ಮಾಡುವ ನೇಮಕಾತಿಯ ಮೇಲೆ ನೇರ ಪರಿಣಾಮ ಬೀರಲಿದೆ.
‘ಭಾರತದ ಐಟಿ ಕ್ಷೇತ್ರವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ತೆರೆದುಕೊಂಡಿಲ್ಲ. ಒಂದು ವೇಳೆ ಪ್ರಾಜೆಕ್ಟ್‌ಗಳು ಕಡಿಮೆಯಾದರೆ ಅಥವಾ ಕಂಪನಿಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ಕೆಲವು ವರ್ಷಗಳವರೆಗೆ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆಗೆ ಕಡಿವಾಣ ಬೀಳಬಹುದು. ಆದರೆ, ಆ ನಂತರ ಈ ತಂತ್ರಜ್ಞಾನಕ್ಕೆ ಪೂರಕವಾದ ಪರ್ಯಾಯ ಉದ್ಯೋಗಗಳು ಸೃಷ್ಟಿಯಾಗಬಹುದು’ ಎಂದು ಹೇಳುತ್ತಾರೆ ಐಟಿ ಕ್ಷೇತ್ರದಲ್ಲಿ ತೊಡಗಿರುವವರು.
ಪ್ರಾತಿನಿಧಿಕ ಚಿತ್ರ
ಪ್ರಭಾವ ಬೀರದು: ನಾಸ್ಕಾಂ
‘ಆದರೆ, ಈಗ ಚರ್ಚೆಯಾಗುತ್ತಿರುವಂತೆ ಅತ್ಯಾಧುನಿಕ ಎಐ ಟೂಲ್‌ಗಳಿಂದ ದೇಶದ ಐಟಿ ಸೇವಾ ವಲಯಕ್ಕೆ ಯಾವುದೇ ಪರಿಣಾಮ ಬೀರದು. ಬದಲಿಗೆ ಈ ಟೂಲ್‌ಗಳು ವಲಯದ ಮಹತ್ವವನ್ನು ಮರುವ್ಯಾಖ್ಯಾನಗೊಳಿಸಲಿವೆ ಮತ್ತು ಇನ್ನಷ್ಟು ಹೆಚ್ಚಿಸಲಿವೆ’ ಎಂದು ಐಟಿ ಉದ್ದಿಮೆಯ ಒಕ್ಕೂಟ ನಾಸ್ಕಾಂ ಹೇಳಿದೆ.
‘ಭಾರತದ ತಂತ್ರಜ್ಞಾನ ಸೇವೆಗಳ ಕಂಪನಿಗಳು, ಸಂಕೀರ್ಣವಾದ ತಂತ್ರಜ್ಞಾನದ ವಾತಾವರಣದಲ್ಲಿ ಕಾರ್ಯಾಚರಿಸುತ್ತಿರುವ ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿವೆ. ಎಐ ಆಧಾರಿತವಾದ ಮೌಲ್ಯಯುತ ಉದ್ದಿಮೆ ಸೃಷ್ಟಿಸಲು ಈ ಕ್ಷೇತ್ರದ ಬಗ್ಗೆ ಆಳವಾದ ಜ್ಞಾನ ಹೊಂದಿರುವ, ದೀರ್ಘ ಅನುಭವವುಳ್ಳ ಮತ್ತು ಉದ್ದಿಮೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳನ್ನು ಅರ್ಥೈಸಿಕೊಳ್ಳಬಲ್ಲವರ ನಡುವೆ ಉತ್ತಮ ಸಮನ್ವಯ ಇರಬೇಕು’ ಎಂದು ಹೇಳಿದೆ.
‘ದೊಡ್ಡ ಕಂಪನಿಗಳು ಎಐಯನ್ನು ಲಭ್ಯ ಮಾದರಿಯ ಹೊರತಾದ ಸರಳ ಪರಿಹಾರ ಎಂದುಕೊಂಡು ಅದನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಕಡಿಮೆ’ ಎಂದು ನಾಸ್ಕಾಂ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಮುಖ ಹುದ್ದೆಯಲ್ಲಿ ಕನ್ನಡಿಗ
ಆಂತ್ರೊಪಿಕ್, ಅಮೆರಿಕದ ಎಐ ಸ್ಟಾರ್ಟ್‌ಅಪ್ ಆಗಿದ್ದು, ಎಐ ಭದ್ರತೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ವಿಶ್ವಾಸಾರ್ಹವಾದ ಎಐ ವ್ಯವಸ್ಥೆಯನ್ನು ನಿರ್ಮಿಸುವುದು, ಎಐಗೆ ಸಂಬಂಧಿಸಿದ ಅವಕಾಶಗಳು ಮತ್ತು ಅಪಾಯಗಳ ಬಗ್ಗೆ ಸಂಶೋಧನೆ ಮಾಡುವುದು ತನ್ನ ಗುರಿ ಎಂದು ಕಂಪನಿ ಹೇಳಿಕೊಂಡಿದೆ. ಓಪನ್ ಎಐನಲ್ಲಿದ್ದ ತಂತ್ರಜ್ಞರು ಸೇರಿ 2021ರಲ್ಲಿ ಸ್ಥಾಪಿಸಿದ ಈ ಕಂಪನಿಯು ಕ್ಲಾಡ್ ಕೋಡ್‌ನಿಂದ ಅತ್ಯಲ್ಪ ಅವಧಿಯಲ್ಲೇ ಭಾರಿ ಯಶಸ್ಸು ಗಳಿಸಿದೆ.
ಆಂತ್ರೊಪಿಕ್ ಕಂಪನಿಯಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಗಿರುವುದು (ಸಿಟಿಒ) ಕನ್ನಡಿಗ ರಾಹುಲ್ ಪಾಟೀಲ. ಇವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ನಗರದ ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆ, ಸೇಂಟ್ ಜೋಸೆಫ್ಸ್ ಪದವಿ ಪೂರ್ವ ಕಾಲೇಜು ಮತ್ತು ಪಿಇಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓದಿದ ಇವರು, ಅರಿಝೋನಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದರು. ಮೈಕ್ರೊಸಾಫ್ಟ್, ಅಮೆಜಾನ್ ವೆಬ್ ಸರ್ವೀಸಸ್ ಮತ್ತು ಒರಾಕಲ್ ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ಮುಂತಾದ ಕಂಪನಿಗಳಲ್ಲಿ ದಶಕಕ್ಕೂ ಹೆಚ್ಚು ಕಾಲದ ದುಡಿದ ಇವರು, 2025ರ ಅಕ್ಟೋಬರ್‌ನಲ್ಲಿ ಸಿಟಿಒ ಆಗಿ ಆಂತ್ರೊಪಿಕ್ ಸೇರಿದರು. ಕಂಪನಿಯು ಎಐ ಕ್ಷೇತ್ರದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದು, ರಾಹುಲ್ ಅವರ ಕೌಶಲವೂ ಆಂತ್ರೊಪಿಕ್ ಬೆಳವಣಿಗೆಯ ಹಿಂದಿದೆ. ಅಮೆರಿಕದ ಹೊರಗೆ ಟೋಕಿಯೊದಲ್ಲಿ ಕಾರ್ಪೊರೇಟ್ ಕಚೇರಿ ಹೊಂದಿರುವ ಆಂತ್ರೊಪಿಕ್, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಕಚೇರಿ ಆರಂಭ ಮಾಡಲಿದೆ ಎನ್ನಲಾಗುತ್ತಿದೆ.
ಆಧಾರ: ಆಂತ್ರೊಪಿಕ್.ಕಾಮ್, ಫೋಬ್ಸ್ ಇಂಡಿಯಾ, ರಾಯಿಟರ್ಸ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.